ADVERTISEMENT

ಹಿಟ್ಟು ಕೊಳ್ಳಿರೋ ನೀವೆಲ್ಲರೂ...

ಸುಮಲತಾ ಎನ್
Published 6 ಮೇ 2015, 19:30 IST
Last Updated 6 ಮೇ 2015, 19:30 IST

ಐಷಾರಾಮಿ ಬದುಕು ನೀಡಿದ್ದ ಐಟಿ ಉದ್ಯೋಗ ಬಿಟ್ಟುಬಂದ ಮುಸ್ತಫಾ ತಮ್ಮನ್ನು ತೊಡಗಿಸಿಕೊಂಡಿದ್ದು ಇಡ್ಲಿ, ದೋಸೆ ಹಿಟ್ಟು ಮಾಡಿ ಮಾರುವ ಕೆಲಸದಲ್ಲಿ. ನಗರಗಳ ಧಾವಂತದ ಬದುಕಿನಲ್ಲಿ ಸಿದ್ಧ ಉಪಾಹಾರದ ಚಿಕ್ಕ ಅವಶ್ಯಕತೆಯನ್ನೇ ಬಂಡವಾಳ ಮಾಡಿಕೊಂಡು ಈ ಕೆಲಸಕ್ಕೆ ಕೈ ಹಾಕಿದ ಅವರು ಇಂದು ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ.

‘ದುಬೈನಲ್ಲಿ ಒಳ್ಳೆಯ ಕೆಲಸದೊಂದಿಗೆ ಬದುಕು ಚೆನ್ನಾಗಿಯೇ ನಡೀತಿತ್ತು. ಆದರೆ, ಎದೆಯೊಳಗೆ ಸ್ವಂತ ಉದ್ಯಮದ ಕನಸು ತುಡಿಯುತ್ತಿತ್ತಲ್ಲ! ‘ಸ್ವಂತವಾಗಿ ಏನನ್ನಾದರೂ ಮಾಡಬೇಕು; ಅದರಿಂದ ಒಂದಿಷ್ಟು ಜನರಿಗೆ ಉಪಯೋಗ ಆಗಬೇಕು, ರಿಸ್ಕ್‌ ಆದರೂ ಪರವಾಗಿಲ್ಲ, ಪ್ರಯತ್ನಿಸಿ ನೋಡಿಬಿಡಬೇಕು’ ಎನ್ನುವ ತುಡಿತ ಅದು. ಆ ಹಂಬಲವೇ ಮುಸ್ತಫಾ ಅವರನ್ನು ಬೆಂಗಳೂರಿಗೆ ಕರೆತಂದಿದೆ; ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ತಲೆ ಎತ್ತಿರುವ ‘ಐಡಿ ಫ್ರೆಶ್’ ಕಂಪೆನಿಯ ಮೂಲಕ ಅವರ ಕನಸು ನನಸಾಗಿದೆ.

ಮುಸ್ತಫಾ ಮೂಲತಃ ಕೇರಳದವರು. ಆದರೆ, ಬೆಳೆದಿದ್ದು ಬೆಂಗಳೂರಿನಲ್ಲೇ. ‘ಐಐಎಂಬಿ’ನಲ್ಲಿ ಎಂಬಿಎ ಪದವಿ ಪಡೆದುಕೊಂಡರು. ನಂತರ ಸಾಫ್ಟ್‌ವೇರ್ ಕೆಲಸದ ರೆಕ್ಕೆ ಕಟ್ಟಿಕೊಂಡು ಹಾರಿದ್ದು ವಿದೇಶಕ್ಕೆ. ಕೈತುಂಬ ಸಂಬಳ ತರುವ ಕೆಲಸ ಸಿಕ್ಕಿದ ತೃಪ್ತಿಯೊಂದಿಗೆ ಒಂದಿಷ್ಟು ವರ್ಷಗಳನ್ನು ಅಲ್ಲಿಯೇ ಕಳೆದದ್ದೂ ಆಯಿತು. ಆದರೆ ತಾಯಿನೆಲಕ್ಕೆ ಮರಳುವ, ತಂದೆ ತಾಯಿಯೊಂದಿಗೆ ಇರುವ ಇಚ್ಛೆ ಅವರನ್ನು ಹಣದ ಮೋಹದಲ್ಲಿ ಮುಳುಗಲು ಬಿಡಲಿಲ್ಲ. ಅವರೊಳಗೆ ಮೊದಲಿನಿಂದಲೂ ಇದ್ದ ಸ್ವಯಂ ಉದ್ಯೋಗದ ಆಸೆ ತಾಯ್ನಾಡಿನ ಸೆಳೆತಕ್ಕೆ ಇಂಬು ನೀಡಿತು.

ಅಕ್ಕಿ ಮೇಲಿನ ಆಸೆ!
ವಿದೇಶಕ್ಕೆ ಹೋಗುವ ಮುನ್ನ ಇಲ್ಲಿ ವಾರಾಂತ್ಯದಲ್ಲಿ ತಮ್ಮ ಸೋದರ ಸಂಬಂಧಿ ನಾಸಿರ್ ಅವರ ದಿನಸಿ ಅಂಗಡಿಯಲ್ಲಿ ಮುಸ್ತಫಾ ಕಾಲ ಕಳೆಯುತ್ತಿದ್ದರು. ಆಗ ಅವರು ಪ್ಲಾಸ್ಟಿಕ್ ಚೀಲಗಳಲ್ಲಿ ದೋಸೆ, ಇಡ್ಲಿ ಹಿಟ್ಟನ್ನು ಮಾರುವ ವ್ಯಕ್ತಿಯೊಬ್ಬರನ್ನು ನೋಡಿದ್ದರು. ಅದನ್ನು ತುಂಬಾ ಜನ ಕೊಂಡುಕೊಳ್ಳುವುದನ್ನೂ ಗಮನಿಸಿದ್ದರು.

ಜನರ ಸಿದ್ಧ ಆಹಾರದ ಅವಶ್ಯಕತೆಯನ್ನೇ ಒಂದು ಉದ್ಯಮದ ದಾರಿಯನ್ನಾಗಿ ರೂಪಿಸಿಕೊಳ್ಳ ಬಹುದಲ್ಲವೇ ಎಂಬ ಆಲೋಚನೆ ಆಗಲೇ ಅವರಲ್ಲಿ ಸುಳಿದಿತು. ವಿದೇಶಕ್ಕೆ ಹೋದ ಕಾರಣ ಆ ಆಲೋಚನೆ ಹಿನ್ನೆಲೆಗೆ ಸರಿದಿತ್ತು. ಆದರೆ ಕೆಲವು ದಿನಗಳ ರಜೆಯಲ್ಲಿ ಭಾರತಕ್ಕೆ ಬಂದಾಗ ಮತ್ತೆ ಹಳೆಯ ಆಲೋಚನೆ ಕಾಡತೊಡಗಿತು. ಈ ಸಲ ಯೋಚಿಸಿಯಷ್ಟೇ ಸುಮ್ಮನಾಗದೇ ಕಾರ್ಯೋನ್ಮುಖರಾದರು.

ಐಟಿಯಿಂದ ಹಿಟ್ಟು ಮಾರಾಟಕ್ಕೆ...
ಬೆಂಗಳೂರಿನ ತಿಪ್ಪಸಂದ್ರದಲ್ಲಿ ಮುಸ್ತಫಾ ಸೋದರ ಸಂಬಂಧಿ ನಡೆಸುತ್ತಿದ್ದ ದಿನಸಿ ಅಂಗಡಿ ಸಮೀಪದಲ್ಲಿ ತಮ್ಮ ವ್ಯಾಪಾರಕ್ಕೆ ಓಂಕಾರ ಹಾಕಲು ನಿರ್ಧರಿಸಿದರು.

ಆದರೆ ಇವರ ತೀರ್ಮಾನಕ್ಕೆ ಯಾರೂ ಬೆಂಬಲ ನೀಡಲಿಲ್ಲ. ‘ಅಷ್ಟು ಒಳ್ಳೆ ಕೆಲಸ ಬಿಟ್ಟು ಇಡ್ಲಿ, ದೋಸೆ ಹಿಟ್ಟು ಮಾರುವ ಉಸಾಬರಿ ನಿನಗ್ಯಾಕೆ’ ಎಂದು ಬೈಯ್ದವರೇ ಹೆಚ್ಚು. ಆದರೆ ಮುಸ್ತಫಾ ಟೀಕೆಗಳಿಂದ ಕುಗ್ಗಲಿಲ್ಲ. ‘ಗೆದ್ದೇ ತೀರುತ್ತೇನೆ’ ಎಂಬ ಛಲ ಮತ್ತು ನಂಬಿಕೆಯಿಂದ 50 ಅಡಿ ಜಾಗದಲ್ಲಿ ಒಂದು ಸಾಮಾನ್ಯ ಗ್ರೈಂಡರ್‌ನಲ್ಲಿ ಹಿಟ್ಟು ಮಾಡುವ ಕಾಯಕಕ್ಕೆ ಕೈ ಹಾಕಿದರು. ತಮ್ಮ ಮೊದಲಿನ ಕೆಲಸದಲ್ಲಿ ಉಳಿಸಿದ್ದ ಆರು ಲಕ್ಷವನ್ನೇ ಇದಕ್ಕೆ ಬಂಡವಾಳವಾಗಿ ಹಾಕಿದ್ದಾಯಿತು.

ಹಿಟ್ಟು ಮಾಡಿ ಮಾರಲು ಹೊರಟ ಮುಸ್ತಫಾ ಅವರಿಗೆ ಆಹಾರ ಉದ್ಯಮದ ರೀತಿ ರಿವಾಜುಗಳು ತಿಳಿದಿರಲಿಲ್ಲ. ಇದಕ್ಕಾಗಿ ಸಣ್ಣ ಸಮೀಕ್ಷೆಯೊಂದನ್ನು ಅವರು ನಡೆಸಿದರು. ಈ ಅಧ್ಯಯನದಿಂದ ಬೆಂಗಳೂರಿಗೆ ದಿನಕ್ಕೆ 5000 ಕೆ.ಜಿ ಹಿಟ್ಟಿನ ಅವಶ್ಯಕತೆ ಇದೆ ಎಂಬುದು ತಿಳಿದುಬಂತು. ಇದೇ ಅಂಶ ಅವರಿಗೆ ಕಂಪೆನಿ ಆರಂಭಿಸುವ ದೃಢ ವಿಶ್ವಾಸ ಮೂಡಿಸಿದ್ದು.

‘ವ್ಯಾಪಾರಕ್ಕಿಂತ ನಂಬಿಕೆ ಮುಖ್ಯ’ ಎನ್ನುವ ಅವರು ಮೊದಲ ಒಂಬತ್ತು ತಿಂಗಳು ಲಾಭದ ನಿರೀಕ್ಷೆಯಿಲ್ಲದೇ ವಿವಿಧ ಪ್ರಯೋಗಗಳನ್ನು ಮಾಡಿದರು. ರಸ್ತೆ ಬದಿ ಇಡ್ಲಿ ಮಾಡುವ ವ್ಯಾಪಾರಿಗಳು, ಗೃಹಿಣಿಯರು, ಅಂಗಡಿ ಮಾಲೀಕರು, ಹೋಟೆಲ್‌ ಮಾಲೀಕರು– ಹೀಗೆ ಅನೇಕ ವರ್ಗದವರ ಬಳಿ ಈ ಕುರಿತು ಪ್ರಸ್ತಾಪ ಮಾಡಿ ಉಚಿತ ಸ್ಯಾಂಪಲ್‌ಗಳನ್ನು ಕೊಡಲು ಆರಂಭಿಸಿದರು. ಗುಣಮಟ್ಟದ ಬಗ್ಗೆ ಅತೀ ಹೆಚ್ಚು ಒತ್ತು ಕೊಟ್ಟರು. ಅತ್ಯುತ್ತಮ ಗುಣಮಟ್ಟದ ಅಕ್ಕಿ, ಉದ್ದಿನ ಬೇಳೆಗಳನ್ನು ಬೇರೆ ರಾಜ್ಯಗಳಿಂದ ತರಿಸಿಕೊಂಡರು. ದಿನಕ್ಕೆ ಐದು ಕೆ.ಜಿ ಅಕ್ಕಿ ಹಿಟ್ಟನ್ನು ಪ್ರಯೋಗಕ್ಕೆ ಬಳಸಿಕೊಂಡು ಉಚಿತವಾಗಿ ಹಂಚಿದರು. ಒಳ್ಳೆ ಗುಣಮಟ್ಟದ ಮಿಶ್ರಣ ರೆಡಿ ಮಾಡಲು ಒಂಬತ್ತು ತಿಂಗಳು ಹಿಡಿಯಿತು. ನಂತರ ಆರಂಭವಾಗಿದ್ದು ದಿಟದ ವ್ಯಾಪಾರ!

ಆಡುಮಾತಿನ ಪ್ರಚಾರ
‘ಗ್ರಾಹಕರನ್ನು ಸೆಳೆಯುವ ತಂತ್ರವೆಂದರೆ ಅವರನ್ನು ಈ ಉತ್ಪನ್ನವನ್ನು ಪ್ರಯತ್ನಿಸಿ ನೋಡುವಂತೆ ಮಾಡುವುದು’ ಎನ್ನುತ್ತಾರೆ ಮುಸ್ತಫಾ. ಇವರ ವ್ಯಾಪಾರಕ್ಕೆ ಗ್ರಾಹಕರ ಬಾಯಿಂದ ಬಾಯಿಯ ಪ್ರಚಾರವೇ ಮಾಧ್ಯಮವಂತೆ. ಇದರಿಂದ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಪ್ರತಿಕ್ರಿಯೆ ಸಿಕ್ಕಿದೆ ಎನ್ನುವ ಸಂತಸ ಅವರದು.

ವ್ಯಾಪಾರ ಕೊಂಚ ಬೆಳೆದ ನಂತರ ಮುಸ್ತಫಾ ಕಗ್ಗದಾಸಪುರದಲ್ಲಿ ಹೊಸ ಫ್ಯಾಕ್ಟರಿ ತೆರೆದರು. ಅಷ್ಟೇ ಅಲ್ಲ, ‘ಕೆಎಸ್ಐಡಿಸಿ’ ಸಹಾಯದೊಂದಿಗೆ ಹೊಸಕೋಟೆಯಲ್ಲಿ ದೊಡ್ಡ ಕಂಪೆನಿ ತೆರೆದು ದೊಡ್ಡ ದೊಡ್ಡ  ಗ್ರೈಂಡರ್‌ಗಳನ್ನೂ ತರಿಸಿಕೊಂಡರು. ಬಡತನದ ಕಹಿ ಉಂಡ ಮುಸ್ತಫಾ ಅವರಿಗೆ ಹಳ್ಳಿ ಹುಡುಗರಿಗೆ ಕೆಲಸ ನೀಡುವ ಮನಸ್ಸಾಯಿತು. ತಮ್ಮ ಫ್ಯಾಕ್ಟರಿಗಳಿಗೆ ಹಳ್ಳಿ ಹುಡುಗರನ್ನೇ ಆರಿಸಿಕೊಂಡು ಕೆಲಸ ನೀಡಿದ್ದಾರೆ. ಇಂದು ಅವರ ಬಳಿ ಸುಮಾರು 650 ಮಂದಿ ಕೆಲಸ ಮಾಡುತ್ತಿದ್ದಾರೆ.

ಒಗ್ಗಟ್ಟಿನಲ್ಲಿ ಬಲವಿದೆ...
ತಮ್ಮ ಸಂಸ್ಥೆ ಮುಂದುವರೆಯಲು ಟೀಮ್ ವರ್ಕ್ ಕಾರಣ ಎನ್ನುತ್ತಾರೆ ಮುಸ್ತಫಾ. ಎಲ್ಲರೂ  ಒಟ್ಟಿಗೆ ಸೇರಿ ವಿವಿಧ ಆಲೋಚನೆಗಳನ್ನು ಒಟ್ಟುಗೂಡಿಸಿ ಕೆಲಸ ಆರಂಭಿಸಿದರು. ಮುಸ್ತಫಾ ಅವರೊಂದಿಗೆ ಕೈ ಜೋಡಿಸಿದ್ದು ಸ್ನೇಹಿತರಾದ ಜಾಫರ್, ಶಾಮ್‌ಸುದೀನ್, ನಾಸಿರ್, ನೌಶದ್. ಬೆಂಗಳೂರಿನ ಕೆಲವೇ ಅಂಗಡಿಗಳಿಂದ ಆರಂಭಗೊಂಡ ವ್ಯಾಪಾರ ಇಂದು ಮೈಸೂರು, ಮಂಗಳೂರು, ಪುಣೆ, ಮುಂಬೈ, ಹೈದರಾಬಾದ್, ಚೆನ್ನೈ, ದುಬೈನಲ್ಲೂ ವಿಸ್ತಾರಗೊಳ್ಳಲು ಒಗ್ಗಟ್ಟೇ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

‘ಒಂದೊಂದು ಕಡೆ ಒಂದೊಂದು ರೀತಿ ವ್ಯಾಪಾರವಾಗುತ್ತದೆ. ಬೆಂಗಳೂರಿನಲ್ಲಿ ತಾಜಾ ಹಿಟ್ಟು ಕೇಳಿದರೆ, ಚೆನ್ನೈನಲ್ಲಿ ಸ್ವಲ್ಪ ಹುಳಿ ಬಂದ ಹಿಟ್ಟನ್ನು ಬಯಸುತ್ತಾರೆ. ಅದೂ ಅಲ್ಲದೆ, ಚೆನ್ನೈನಲ್ಲಿ ಜನ ದಿನಕ್ಕೆ ಐದು ಬಾರಿ ಬೇಕಾದರೂ ಇಡ್ಲಿ–ದೋಸೆ ತಿನ್ನಲು ರೆಡಿ ಇದ್ದಾರೆ. ಆ ಕಾರಣಕ್ಕೇ ಅಲ್ಲಿ ಹೆಚ್ಚು ವ್ಯಾಪಾರವಾಗುತ್ತಿದೆ. ದಿನದ ಕೊನೆಗೆ, ಶೇಕಡಾ ತೊಂಬತ್ತರಷ್ಟು ಹಿಟ್ಟು ಮಾರಾಟವಾಗಿ ಒಂದಿಷ್ಟು ಉಳಿದರೆ, ಅದು ಮಾರನೇ ದಿನ ಹುಳಿ ಹಿಟ್ಟು ಬಯಸುವವರಿಗೆ ಬಳಕೆಯಾಗುತ್ತದೆ. ಆದ್ದರಿಂದ ಅಷ್ಟೊಂದು ನಷ್ಟ ಅನುಭವಕ್ಕೆ ಬಂದಿಲ್ಲ’ ಎನ್ನುತ್ತಾರೆ.

ಅಮ್ಮ ಮಾಡಿದ ಇಡ್ಲಿ
‘ನಮ್ಮ ಉತ್ಪನ್ನಗಳು ‘ರೆಡಿ ಟು ಈಟ್ ಅಲ್ಲ, ರೆಡಿ ಟು ಕುಕ್ ಅಷ್ಟೆ’ ಎನ್ನುತ್ತಾರೆ ಮುಸ್ತಫಾ. ‘ನಮ್ಮ ಉತ್ಪನ್ನ ಅಡುಗೆ ಮಾಡುವವರಿಗೆ ಸಹಾಯಕನಂತಿರುತ್ತದೆ. ನೈಸರ್ಗಿಕವಾಗಿ ಮಾಡಿದ ಉತ್ಪನ್ನವಿದು. ಅಡುಗೆ ಚೆನ್ನಾಗಿದ್ದರೆ ಅದರ ಪ್ರಶಂಸೆ ನೀವು ತೆಗೆದುಕೊಳ್ಳಿ, ಅದು ಕೆಟ್ಟರೆ ಬೇಕಾದರೆ  ಐಡಿಯನ್ನು ಟೀಕಿಸಿ’ ಎಂಬ ಭರವಸೆಯನ್ನೂ ನೀಡುತ್ತಾರೆ.

2008ರಲ್ಲಿ ಆರಂಭವಾದ ‘ಐಡಿ’ ಪ್ರಸ್ತುತ ಬೆಂಗಳೂರು ಒಂದರಲ್ಲೇ ದಿನಕ್ಕೆ 25,000 ಕೆ.ಜಿ ಹಿಟ್ಟನ್ನು ಮಾರಾಟ ಮಾಡುತ್ತಿದೆ. ಅದರ ಒಟ್ಟಾರೆ ಉತ್ಪನ್ನ ದಿನಕ್ಕೆ 40,000 ಕೆ.ಜಿ ಹಿಟ್ಟಿಗೆ ಮುಟ್ಟಿದೆ. ಆರು ಉತ್ಪನ್ನಗಳನ್ನು ಎಂಟು ನಗರಗಳಲ್ಲಿ ಪರಿಚಯಿಸಿದ್ದು, ವಾರ್ಷಿಕ 70 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. 7000 ಔಟ್‌ಲೆಟ್‌ಗಳಿಗೆ ಇದನ್ನು ಮಾರುತ್ತಿದೆ. ಇವರಿಗೆ ‘ನ್ಯಾಷನಲ್ ಅಚೀವರ್ಸ್‌ ಪ್ರಶಸ್ತಿ’ ಹಾಗೂ ‘ಬಿಗ್ ಬ್ಯಾಂಗ್’ ಪ್ರಶಸ್ತಿಯೂ ಬಂದಿದೆ.

ಹೊಸ ಮೆನುವಿದು...
ಬೆಂಗಳೂರಿನಲ್ಲಿ ದಿನಕ್ಕೆ ಹತ್ತು ಲಕ್ಷ ಇಡ್ಲಿಗಳು ತಯಾರಾಗುತ್ತವೆ.  ಆದರೆ, ಮುಸ್ತಫಾ ಅವರ ವ್ಯಾಪಾರ ಇಡ್ಲಿ, ದೋಸೆಗಷ್ಟೇ ಸೀಮಿತವಾಗಿಲ್ಲ. ಪರೋಟ, ಚಪಾತಿ, ಬಗೆ ಬಗೆ ಚಟ್ನಿಗೂ ವಿಸ್ತರಿಸಿದೆ.   ಜೂನಿಯರ್ ಕಿಡ್ ಪರೋಟ ಇವರ ಮೆನುವಿನಲ್ಲಿ ಹೊಸತು. ಮಕ್ಕಳಿಗೆ ಜಂಕ್ ಆಹಾರದ ಬದಲಿಯಾಗಿ ಟಿಫಿನ್ ಗಾತ್ರದ ಪರೋಟ ಪರಿಚಯಿಸ ಲಾಗಿದೆ. ಮುಂದಿನ ಆರು ವರ್ಷಗಳಲ್ಲಿ 30 ಉತ್ಪನ್ನಗಳನ್ನು 30 ನಗರಗಳಲ್ಲಿ ವಿಸ್ತರಿಸುವ ನಿಟ್ಟಿನಲ್ಲಿ ಅವರ ತಂಡ ಕೆಲಸ ಮಾಡುತ್ತಿದೆ. 

ಗುಣಮಟ್ಟ ತುಂಬಾ ಮುಖ್ಯ
ಹಿಟ್ಟಿನ ಗುಣಮಟ್ಟದಲ್ಲಿ ಕಟ್ಟುನಿಟ್ಟು ನಿಯಮಗಳನ್ನು ಪಾಲಿಸುತ್ತೇವೆ ಎಂದು ಖಾತ್ರಿ ಪಡಿಸುತ್ತಾರೆ ಅವರು. ಅಕ್ಕಿಯನ್ನು ನೆನೆಹಾಕಲೂ ಶುದ್ಧೀಕರಿಸಿದ ನೀರನ್ನೇ ಬಳಸುತ್ತಾರಂತೆ. ಮನೆಗಿಂತಲೂ ಒಂದು ಕೈ ಹೆಚ್ಚಿಗೆ ಶುದ್ಧತೆ ಕಾಯ್ದುಕೊಳ್ಳುವುದು ಸ್ಪರ್ಧೆ ಮತ್ತು ಗ್ರಾಹಕರ ವಿಶ್ವಾಸಾರ್ಹತೆ ಎರಡಕ್ಕೂ ತುಂಬಾ ಮುಖ್ಯ ಎನ್ನುತ್ತಾರೆ ಮುಸ್ತಫಾ.

‘ಯಾವುದೇ ರಾಸಾಯನಿಕ ಅಥವಾ ಪ್ರಿಸರ್ವೇಟಿವ್ ಬಳಸುವುದಿಲ್ಲ. ಜೊತೆಗೆ ಪೋಷಕಾಂಶ, ವಿಟಮಿನ್‌ಗಳು ಇರುವಂತೆ ನೋಡಿಕೊಳ್ಳಬೇಕಿತ್ತು. ದಿನವೂ ಯಂತ್ರಗಳನ್ನು ಶುದ್ಧಗೊಳಿಸುತ್ತೇವೆ’ ಎನ್ನುತ್ತಾರೆ. ಜೊತೆಗೆ ಅಂದಂದಿನ ಉತ್ಪನ್ನಗಳು ಅಂದಿಗೇ ವ್ಯಾಪಾರವಾಗಬೇಕು ಎನ್ನುವ ಎಚ್ಚರವೂ ಅವರಿಗಿದೆ.

ವ್ಯಾಪಾರ ಜಗತ್ತಿನ ಸವಾಲುಗಳು
‘ಇಂಥ ಉದ್ಯಮಗಳ ಯಾವುದೇ ಯಶಸ್ವಿ ನಿದರ್ಶನಗಳು ನಮ್ಮೆದುರು ಇಲ್ಲದಿರುವುದು ದೊಡ್ಡ ಸವಾಲಾಗಿತ್ತು. ಅದರ ಮೇಲೆ ಅನುಭವದ ಕೊರತೆ. ಲೈಸೆನ್ಸ್‌ ಪಡೆಯುವ ಬಗ್ಗೆಯೂ ಗೊತ್ತಿರಲಿಲ್ಲ. ಮೊದಮೊದಲು ಕೆಲವು ತಪ್ಪುಗಳಾದವು. ತಪ್ಪುಗಳಿಂದ ಕಲಿತಿದ್ದೇ ಹೆಚ್ಚು. ದೊಡ್ಡ ಯಂತ್ರಗಳಿಲ್ಲದ ಕಾರಣ ಎಷ್ಟೋ ಬಾರಿ ಬೇಡಿಕೆ ಪೂರೈಸಲು ಕಷ್ಟವಾಗಿತ್ತು’ ಎಂದು ಆರಂಭದ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಮುಸ್ತಫಾ.

ವ್ಯಾಪಾರದ ಮೊದಲ ಭಾಗವಾಗಿ ಇಂದಿರಾನಗರದ ಸುತ್ತಮುತ್ತಲಿನ 10 ಅಂಗಡಿಗಳಿಗೆ ಮಾರಾಟ ಮಾಡುವುದನ್ನು ಆರಂಭಿಸಿದರು. ‘ಐಡಿ ಫ್ರೆಶ್ ಫುಡ್ಸ್’ ಎಂಬ ಬ್ರ್ಯಾಂಡ್‌ನೊಂದಿಗೆ ಒಳ್ಳೆ ಪ್ಯಾಕಿಂಗ್ ಮಾಡಿ ದ್ವಿಚಕ್ರವಾಹನ ಇಟ್ಟುಕೊಂಡು ತಿರುಗಾಟ ಆರಂಭಿಸಿದರು. ಒಂದು ಅಂಗಡಿಯಲ್ಲಿ ದಿನಕ್ಕೆ ಕನಿಷ್ಠ 5 ಕೆ.ಜಿ ಮಾರಾಟವಾಗಬೇಕು ಎಂದು ಯೋಜನೆ ಹಾಕಿಕೊಂಡರು. ಕನಿಷ್ಠ 500 ಅಂಗಡಿ ಎಂದು ಲೆಕ್ಕ ಹಾಕಿಕೊಂಡರೂ ದಿನಕ್ಕೆ 2 ರಿಂದ ಮೂರು ಟನ್ ಉತ್ಪಾದನೆ ಮಾಡಲು ಸಾಧ್ಯ ಎಂಬ ಲೆಕ್ಕಾಚಾರವನ್ನೂ ಹಾಕಿಕೊಂಡರು. ಒಂದು ವರ್ಷ ಪ್ರತಿ ದಿನ ನೂರು ಪ್ಯಾಕೆಟ್ ಹಿಟ್ಟನ್ನು ಮಾರುವ ಮಟ್ಟಕ್ಕೆ ತಮ್ಮ ಉದ್ಯಮ ಬೆಳೆಸಿದರು. 

‘ಹಿಟ್ಟನ್ನು ಹೇಗೆ ಮಾಡುತ್ತೀರಿ... ಮನೆಯಲ್ಲೂ ಇಷ್ಟು ಚೆನ್ನಾಗಿ ಬರುತ್ತಿಲ್ಲವಲ್ಲ’ ಎಂದು ಗ್ರಾಹಕರು ಕೇಳಲು ಆರಂಭಿಸಿದರು’– ಆಗ ಅವರ ವ್ಯಾಪಾರಕ್ಕೆ ಹೊಸ ತಿರುವು ಸಿಕ್ಕಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT