ADVERTISEMENT

ಹೊಸ ಫಾರ್ಚುನರ್ ಆಫ್‌ರೋಡ್ ಸಾಹಸ

ಟೆಸ್ಟ್‌ ಡ್ರೈವ್

ಜಯಸಿಂಹ ಆರ್.
Published 30 ನವೆಂಬರ್ 2016, 19:30 IST
Last Updated 30 ನವೆಂಬರ್ 2016, 19:30 IST
ಚಿತ್ರಗಳು: ಶರತ್ ಶೆಟ್ಟಿ, ಟಿಬಿಎಚ್‌ಪಿ
ಚಿತ್ರಗಳು: ಶರತ್ ಶೆಟ್ಟಿ, ಟಿಬಿಎಚ್‌ಪಿ   

ಟೊಯೊಟಾ ಆಟೊ ಕಂಪೆನಿ ಈಚೆಗಷ್ಟೇ ನೂತನ ಫಾರ್ಚುನರ್‌ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಹೊಸ ವಾಹನದ ಪ್ರಮೋಷನ್‌ಗಾಗಿ ಈಚೆಗೆ ಬೆಂಗಳೂರಿನ ಹೊರವಲಯದಲ್ಲಿ ಕಚ್ಚಾ ರಸ್ತೆ ಸಾಹಸ ಆಯೋಜಿಸಿತ್ತು. ಕೃತಕವಾಗಿ ನಿರ್ಮಿಸಿದ್ದ ಹಳ್ಳ, ದಿಣ್ಣೆ, ದಿಬ್ಬಗಳನ್ನು ಏರಿ ಇಳಿಸುವ ಮತ್ತು ಇಳಿದು ಏರಿಸುವ ಸಾಹಸವಿದು. ಜತೆಗೆ ಸಣ್ಣ ಹೊಂಡದೊಳಗೆ, ಕೆಸರು ತುಂಬಿದ ಮಡುವಿನೊಳಗೆ ಎಸ್‌ಯುವಿ ಇಳಿಸಬೇಕಿತ್ತು. ಕಂಪೆನಿ ಆಹ್ವಾನದ ಮೇರೆಗೆ ಈ ಸಾಹಸದಲ್ಲಿ ಪಾಲ್ಗೊಂಡಿದ್ದೆ.

ಮೊದಲಿಗೆ ಕೃತಕ ಕಚ್ಚಾ ರಸ್ತೆಯ ಬಗ್ಗೆ ವಿಡಿಯೊ ವಿವರಣೆ ನೀಡಲಾಯಿತು. ನಂತರ ಆಯ್ದ ಮೂವರು ಪತ್ರಕರ್ತರನ್ನು ಒಂದೊಂದು ಎಸ್‌ಯುವಿಯಲ್ಲಿ ಕೂರಿಸಲಾಯಿತು.ನಂತರ ಇನ್‌ಸ್ಟ್ರಕ್ಟರ್‌, ಕಚ್ಚಾ ರಸ್ತೆಯ ಪ್ರತೀ ಹಂತದಲ್ಲೂ ಎಸ್‌ಯುವಿಯನ್ನು ಚಲಾಯಿಸಿ, ಯಾವ ಹಂತದಲ್ಲಿ ವಾಹನ ಹೇಗೆ ವರ್ತಿಸುತ್ತದೆ ಹಾಗೂ ವಾಹನದಲ್ಲಿರುವ ಸವಲತ್ತುಗಳು ಹೇಗೆ ನೆರವಿಗೆ ಬರುತ್ತವೆ ಎಂದು ವಿವರಿಸಿದರು. ನಂತರ ಪ್ರತೀ ಪತ್ರಕರ್ತರೂ ಎಲ್ಲಾ ಹಂತದಲ್ಲಿ ಎಸ್‌ಯುವಿಯನ್ನು ಚಲಾಯಿಸಿದರು. ಕಚ್ಚಾ ರಸ್ತೆ ಚಾಲನೆಯ ವಿವಿಧ ಹಂತಗಳ ಅನುಭವ ಈ ರೀತಿ ಇದೆ.

ಲಾಂಚಿಂಗ್
ಇದು ಸುಮಾರು 100 ಮೀಟರ್ ಉದ್ದದ, ನೇರವಾದ ಹಾದಿ. ಹಾದಿಯ ಆರಂಭದಲ್ಲಿ ವಾಹನವನ್ನು ನಿಲ್ಲಿಸಿ ಚಲಾಯಿಸಬೇಕು. ನಿಂತಲ್ಲಿಂದ ನೂರು ಮೀಟರ್‌ ಒಳಗೆ ವಾಹನ ಎಷ್ಟು ವೇಗ ಮುಟ್ಟುತ್ತದೆ ಎಂಬುದರ ಪರೀಕ್ಷೆ ಇದು. ನಾನು ಮ್ಯಾನುಯಲ್ ಟ್ರಾನ್ಸ್‌ಮಿಷನ್ ಅವತರಣಿಕೆ ಆಯ್ಕೆ ಮಾಡಿಕೊಂಡಿದ್ದೆ. ಆಫ್‌ರೋಡ್‌ನಲ್ಲಿ ಆಟೊ (ಸ್ವಯಂಚಾಲಿತ) ಅವತರಣಿಕೆಗಿಂತ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಚಾಲಕ ಹೇಳಿದಂತೆ ಕೇಳುತ್ತವೆ.

ಹೊಸ ಫಾರ್ಚುನರ್‌ನಲ್ಲಿರುವುದು ಬರೋಬ್ಬರಿ 420 ಎನ್‌ಎಂ ಟಾರ್ಕ್‌ನ ಡೀಸೆಲ್ ಎಂಜಿನ್. ಕ್ಲಚ್‌ನಿಂದ ಕಾಲ್ತೆಗೆದು, ಥ್ರೋಟಲ್ ಒತ್ತಿದೊಡನೆ ನಿಂತಲ್ಲೇ ಚಕ್ರ ತಿರುಗುತ್ತಿದ್ದರೂ ಎಸ್‌ಯುವಿ ಚಿಮ್ಮಿದಂತೆ ಮುಂದೆ ಹೋಯಿತು.

ಎರಡನೇ ಗಿಯರ್‌ಗೆ ಬದಲಿಸಿದ ನಂತರ ಮತ್ತಷ್ಟು ವೇಗದಲ್ಲಿ ಮುನ್ನುಗ್ಗಿತು. ಅಷ್ಟರಲ್ಲೇ ಸುಮಾರು 90 ಮೀಟರ್‌ ಕ್ರಮಿಸಿಯಾಗಿತ್ತು. ಇನ್ನು 10 ಮೀಟರ್‌ನಲ್ಲಿ ವಾಹನ ನಿಲ್ಲಿಸಬೇಕು. ಆ ಮಿತಿ ದಾಟಿದರೆ ಮುಂದಿರುವ ಗೋಡೆಗೆ ಗುದಿಯಬೇಕಷ್ಟೆ. ಹೊಸ ಫಾರ್ಚುನರ್‌ನಲ್ಲಿರುವುದು ಒಂಬತ್ತನೇ ತಲೆಮಾರಿನ ಎಬಿಎಸ್‌. ದೂಳು ಮತ್ತು ಮರಳು ತುಂಬಿದ ರಸ್ತೆಯಲ್ಲಿ ಭಾರಿ ವೇಗದಲ್ಲಿ ಬ್ರೇಕ್ ಒತ್ತಿದಾಗಲೂ ಒಂದಿನಿತೂ ಅತ್ತಿತ್ತ ಸರಿಯದೆ ನಿಂತುಕೊಂಡಿತು.

ಡೌನ್‌ಹಿಲ್ ಅಸಿಸ್ಟ್ ಕಂಟ್ರೋಲ್‌–ಹಿಲ್‌ ಸ್ಟಾರ್ಟ್ ಅಸಿಸ್ಟ್
ಇದು ನಾಲ್ಕು ಹಂತದ ಗುಡ್ಡ ಏರಿಳಿಯುವ ಹಂತ. ಮೊದಲಿಗೆ ಸುಮಾರು 40 ಡಿಗ್ರಿಯಷ್ಟು ಕಡಿದಾದ ಹಳ್ಳಕ್ಕೆ ಇಳಿಯಬೇಕು. ಇದಕ್ಕೂ ಮುನ್ನ ಎಸ್‌ಯುವಿಯನ್ನು 4ಎಲ್‌ ಮೋಡ್‌ಗೆ ಬದಲಿಸಬೇಕು. ಹಳೆಯ ಫಾರ್ಚುನರ್‌ ಫುಲ್‌ಟೈಮ್‌ ಫೋರ್‌ವ್ಹೀಲ್‌ ಡ್ರೈವ್‌ ಸವಲತ್ತು ಇದ್ದ ವಾಹನ.

ಆದರೆ ಹೊಸತರಲ್ಲಿರುವುದು ಪಾರ್ಟ್‌ ಟೈಂ ಫೋರ್‌ವ್ಹೀಲ್ ಡ್ರೈವ್ ವ್ಯವಸ್ಥೆ. ಅಗತ್ಯವಿದ್ದಾಗಷ್ಟೇ ಫೋರ್‌ವ್ಹೀಲ್‌ ಡ್ರೈವ್ ಸವಲತ್ತು ಬಳಸಬೇಕು. ಜತೆಗೆ ಇಳಿಜಾರು ಇಳಿಯುವ ಮುನ್ನ ಡೌನ್‌ಹಿಲ್ ಅಸಿಸ್ಟ್ ಕಂಟ್ರೋಲ್‌ (ಡಿಎಸಿ) ಆಯ್ಕೆ ಮಾಡಿಕೊಳ್ಳಬೇಕು. ಆಗ ಬ್ರೇಕ್‌ ತುಳಿಯುವ ಅವಶ್ಯಕತೆಯೇ ಇಲ್ಲ. ಡಿಎಸಿಯೇ ವಾಹನವನ್ನು ನಿಯಮಿತ ವೇಗದಲ್ಲಿ ಇಳಿಜಾರನ್ನು ಇಳಿಸುತ್ತದೆ. ನಂತರ ಅಷ್ಟೇ ಕಡಿದಾದ ಏರನ್ನು ಏರಬೇಕು. ಇಲ್ಲಿ ಮಧ್ಯದಲ್ಲಿ ವಾಹನ ನಿಲ್ಲಿಸಿ ಮತ್ತೆ ಚಲಾಯಿಸಬೇಕು. ಈ ಹಂತದಲ್ಲಿ ಹಿಲ್‌ ಸ್ಟಾರ್ಟ್ ಅಸಿಸ್ಟ್ ನೆರವಿಗೆ ಬರುತ್ತದೆ. ವಾಹನ ಹಿಂದಕ್ಕೆ ಹೋಗದಂತೆ ಇದು ತಡೆಯುತ್ತದೆ.

ಈ ಹಂತದಲ್ಲಿ ಬ್ರೇಕ್‌ ಬಿಟ್ಟು, ಕ್ಲಚ್‌ ಒತ್ತಿದಾಗಲೂ ಫಾರ್ಚುನರ್‌ ಹಿಂದಕ್ಕೆ ಹೋಗಲಿಲ್ಲ. ಇದರ ನಂತರ ಮತ್ತೆ ಸುಮಾರು 40 ಡಿಗ್ರಿಯಷ್ಟು ಕಡಿದಾದ ಕೃತಕ ದಿಬ್ಬವನ್ನು ಏರಬೇಕಿತ್ತು. 4ಎಲ್‌ (ಲೋ ಗಿಯರ್) ನಲ್ಲಿ ಇದ್ದುದ್ದರಿಂದ ಸ್ವಲ್ಪವೇ ಥ್ರೋಟಲ್‌ನಲ್ಲಿ ಸಲೀಸಾಗಿ ದಿಬ್ಬ ಏರಿತು. ಈಗ ಅಷ್ಟೇ ಕಡಿದಾದ ದಿಬ್ಬವನ್ನು ಇಳಿಯಬೇಕು. ಆಗ ಡಿಎಸಿ ಆಯ್ಕೆ ಮಾಡಿಕೊಳ್ಳಲಾಯಿತು. ಕೇವಲ ಸ್ಟೀರಿಂಗ್ ಹಿಡಿದು, ಎಲ್ಲಾ ಪೆಡಲ್‌ನಿಂದ ಕಾಲ್ತೆಗೆದರೂ ಫಾರ್ಚುನರ್‌ ಕೇವಲ 10 ಕಿ.ಮೀ ವೇಗದಲ್ಲಿ ದಿಬ್ಬವನ್ನು ಇಳಿಯಿತು.

ವಾಟರ್‌ ವೇಡಿಂಗ್‌
ಇದು ನೀರಿನ ಹೊಂಡಕ್ಕೆ ಎಸ್‌ಯುವಿಯನ್ನು ಇಳಿಸಿ ಮತ್ತೆ ಏರಿಸುವ ಆಟ. ಹೊಸ ಫಾರ್ಚುನರ್‌ 700 ಎಂಎಂ ಎತ್ತರದವರೆಗೆ ಇರುವ ನೀರಿನಲ್ಲಿ ಆರಾಮವಾಗಿ ಹೋಗುತ್ತದೆ. ಇಲ್ಲಿ 700 ಎಂಎಂ ನೀರಿದ್ದ ಹೊಂಡಕ್ಕೆ ಅದನ್ನು ಇಳಿಸಿ ಮತ್ತೆ ಮೇಲಕ್ಕೆ ಚಲಾಯಿಸಿದ್ದಾಯಿತು. ಅಷ್ಟು ನೀರಿದ್ದರೂ ಒಂದು ಹನಿ ನೀರೂ ಒಳಗೆ ಬರದಂತೆ ವಾಹನದ ದೇಹವನ್ನು ವಿನ್ಯಾಸ ಮಾಡಲಾಗಿದೆ.

ಆಕ್ಸಲ್‌ ಟ್ವಿಸ್ಟರ್‌ಗಳು: ಇದು ವಾಹನದ ಎರಡು ಚಕ್ರಗಳು ಗಾಳಿಯಲ್ಲಿದ್ದಾಗಲೇ ಕೇವಲ ಉಳಿದ ಚಕ್ರಗಳಲ್ಲಿ ಸಣ್ಣ ಬದುಗಳನ್ನು ಏರಿಳಿಸುವ ಸಾಹಸ. ಇಲ್ಲಿ ವಾಹನದ ಟ್ರಾಕ್ಷನ್ ಕಂಟ್ರೋಲ್‌ ವ್ಯವಸ್ಥೆ ಗಾಳಿಯಲ್ಲಿದ್ದ ಚಕ್ರಗಳು ತಿರುಗದಂತೆ ತಡೆಯುತ್ತವೆ. ನಂತರ ನೆಲದಲ್ಲಿರುವ ಉಳಿದೆರಡು ಚಕ್ರಗಳಿಗೆ ಸಂಪೂರ್ಣ ಶಕ್ತಿಯನ್ನು ರವಾನಿಸುತ್ತದೆ. ಈ ಹಂತವನ್ನೂ ಫಾರ್ಚುನರ್‌ ಸುಲಭವಾಗಿ ಪೂರೈಸಿತು.

40 ಡಿಗ್ರಿ ಸೈಡ್ ಇನ್‌ಕ್ಲೈನ್: 40 ಡಿಗ್ರಿ ಓರೆಯಾಗಿರುವ ಮತ್ತೊಂದು ದಿಬ್ಬವನ್ನು ಹಾದುಹೋಗುವ ಸಾಹಸವಿದು. ಅಂದರೆ ಬಲಗಡೆಯಿಂದ ಹಾದುಹೋಗುವಾಗ, ಚಾಲಕ ಇರುವ ಭಾಗ ಸಂಪೂರ್ಣ ಮೇಲಿರುತ್ತದೆ. ಪ್ರಯಾಣಿಕನಿರುವ ಭಾಗ ನೆಲದತ್ತ ಬಾಗಿಕೊಂಡಿರುತ್ತವೆ. ಕಾರ್‌ಗಳು ಈ ಸಾಹಸವನ್ನು ಸುಲಭವಾಗಿ ಮಾಡುತ್ತವಾದರೂ, ಎತ್ತರವಿರುವ ಎಸ್‌ಯುವಿಗಳು ಈ ಹಂತದಲ್ಲಿ ಪಕ್ಕಕ್ಕೆ ಉರುಳುತ್ತವೆ.

ಜತೆಗೆ ದಿಬ್ಬವನ್ನು ಏರುವಾಗ ಎರಡು ಚಕ್ರಗಳು ಗಾಳಿಯಲ್ಲಿರುತ್ತವೆ. ಟ್ರಾಕ್ಷನ್ ಕಂಟ್ರೋಲ್ ನೆರವಿನಿಂದ ಈ ಹಂತವನ್ನು ಯಶಸ್ವಿಯಾಗಿ ಪೂರೈಸಲಾಯಿತು. ಜತೆಗೆ ಎಡಭಾಗದಿಂದ ಮತ್ತೊಮ್ಮೆ ಹತ್ತಿಳಿಯುವ ಸಾಹಸ ನಡೆಸಲಾಯಿತು. ಇಲ್ಲೆಲ್ಲಾ ಸ್ಟೀರಿಂಗ್‌ ಮತ್ತು ಥ್ರೋಟಲ್‌ ಕಂಟ್ರೋಲ್‌ ಹೊರತುಪಡಿಸಿದರೆ ಉಳಿದ ಕೆಲಸವನ್ನೆಲ್ಲಾ ವಾಹನದಲ್ಲಿರುವ ಎಲೆಕ್ಟ್ರಾನಿಕ್ ಕಂಟ್ರೋಲ್‌ ಮಾಡ್ಯೂಲ್‌ಗಳೇ ಮಾಡುತ್ತವೆ.

ಕೆಸರಿನ ಮಡು: ಕಾಲು ಹುದುಗಿಹೋಗುವಂತಹ ಕೆಸರಿನಲ್ಲಿ ಎಸ್‌ಯುವಿಯನ್ನು ಚಲಾಯಿಸುವ ಹಂತವಿದು. ಇಲ್ಲಿ ಲೋ2 (ಲೋ ಸೆಕೆಂಡ್‌ ಗಿಯರ್) ಆಯ್ಕೆ ಮಾಡಿಕೊಂಡು ಮಡುವಿಗೆ ಇಳಿದದ್ದಾಯಿತು. ಇಲ್ಲಿ ಟ್ರಾಕ್ಷನ್ ಕಂಟ್ರೋಲ್‌ ಸಂಪೂರ್ಣ ಕೆಲಸಕ್ಕೆ ಬರುತ್ತದೆ.

ಅನಗತ್ಯವಾಗಿ ಚಕ್ರ ತಿರುಗದಂತೆ ಹಾಗೂ ಕೆಸರಿನಲ್ಲಿ ಸಿಲುಕಿಕೊಳ್ಳದಂತೆ ಅದು ನೋಡಿಕೊಳ್ಳುತ್ತದೆ. ಸ್ಟೀರಿಂಗ್ ಮೂಲಕ ದಿಕ್ಕನ್ನು ನಿಯಂತ್ರಿಸಿದಷ್ಟೆ ಫಾರ್ಚುನರ್‌ ದೋಣಿ ತೊಯ್ದಾಡಿದಂತೆ ತೊಯ್ದಾಡುತ್ತ ಮಡುವಿನಿಂದ ಹೊರಬಂತು. ಈ ಎಲ್ಲಾ ಹಂತಗಳ ನಡುವೆ ಗುಂಡಿಗಳಿರುವ ರಸ್ತೆಯಲ್ಲಿ ವೇಗವಾಗಿ ಚಲಾಯಿಸಲಾಯಿತು.ಅದೇನು ಅಷ್ಟು ತೃಪ್ತಿದಾಯಕವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.