ADVERTISEMENT

ಹೌದು, ನೀವ್ಯಾಕೆ ಮಾತಾಡ್ತಿಲ್ಲ?

ಸುಮಲತಾ ಎನ್, ಪದ್ಮನಾಭ ಭಟ್ಟ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಹೌದು, ನೀವ್ಯಾಕೆ ಮಾತಾಡ್ತಿಲ್ಲ?
ಹೌದು, ನೀವ್ಯಾಕೆ ಮಾತಾಡ್ತಿಲ್ಲ?   

ಮೆಟ್ರೊ ರೈಲಿನ ಬಾಗಿಲು ಮುಚ್ಚಿಕೊಳ್ಳಲು ಇನ್ನೇನು ಕೆಲವೇ ಸೆಕೆಂಡುಗಳು... ಓಡೋಡಿ ಬಂದವರೇ ಗುಹೆಯೊಳಗೆ ನುಗ್ಗುವಂತೆ ಒಳಹೊಕ್ಕರು. ನಿಟ್ಟುಸಿರುಬಿಡಲೂ ಪುರುಸೊತ್ತಿಲ್ಲದಂತೆ ಜೇಬೊಳಗಿದ್ದ ಮೊಬೈಲನ್ನು ಚಕಚಕನೆ ತೆರೆದ ವ್ಯಕ್ತಿಯೊಬ್ಬ ಇಯರ್‌ಫೋನ್‌ಗಳನ್ನು ಲಗುಬಗೆಯಿಂದ ಕಿವಿಗೇರಿಸಿ, ಹಣೆಯಿಂದ ಇಳಿಯುತ್ತಿದ್ದ ಬೆವರನ್ನೂ ಲೆಕ್ಕಿಸದೆ ಒಳಗಿನ ಶಬ್ದಕ್ಕೆ ಜೋತುಬಿದ್ದು ಕೂತ. ಅಲ್ಲೇ ಪಕ್ಕದಲ್ಲೇ, ಕತ್ತು ಬಗ್ಗಿಸಿ ತನ್ನಷ್ಟಕ್ಕೆ ತಾನೇ ನಗುತ್ತಿದ್ದವಳನ್ನು ನೋಡಿ, ಇದೇಕೆ ಹೀಗೆ ಎಂದು ಕಿರುಗಣ್ಣಾಗುವಷ್ಟರಲ್ಲೇ ಆಕೆಯ ಮೊಬೈಲ್ ಇಣುಕಿ ಎಲ್ಲದಕ್ಕೂ ಉತ್ತರ ಎಸೆದಿತ್ತು. ಮೊಬೈಲ್‌ನಲ್ಲೇ ಲಗುಬಗೆಯಿಂದ ಇಮೇಲ್ ಮಾಡುತ್ತಿದ್ದವನ ಆತಂಕ ನೋಡಿಯೇ ಸಾಕಾಯ್ತು.

ಹೀಗೆ ಮೊಬೈಲ್‌ನಲ್ಲಿ ಮುಳುಗಿ ಮಾತೇ ಮರೆತುಹೋದವರಂತೆ ಕಣ್ಣಿಗೆ ಬಿದ್ದವರು ಇದೇ ಮೊದಲೇನಾಗಿರಲಿಲ್ಲ. ಆದರೆ ಅದೇಕೋ ಮತ್ತೆ ಮತ್ತೆ ಇವರ ಮೌನ ಕೆದಕುತ್ತಲೇ ಇತ್ತು.

ಹೀಗೆ ಕೆಣಕುವಂತೆ ಮಾಡಿದ್ದು ಇತ್ತೀಚೆಗೆ ಓದಿದ ಸಂಶೋಧನಾ ವರದಿ. ‘ಯುವಜನರು ಈಗೀಗ ಹೆಚ್ಚು ಮೌನಿಗಳಾಗಿದ್ದಾರೆ’ ಎಂದಿತ್ತು ಅದು. ಇನ್ನೊಬ್ಬರೊಂದಿಗೆ ಮಾತನಾಡುವುದರಿಂದ ದೂರವುಳಿಯಲು, ಮಾತಿನಿಂದ ತಪ್ಪಿಸಿ ಕೊಳ್ಳಲು ಹವಣಿಸುತ್ತಾರಂತೆ ಈಗಿನವರು. ಹಾಗಿದ್ದರೆ ಸಂವಹನವಾದರೂ ಹೇಗೆ ಸಾಧ್ಯವಾದೀತು? ಅದಕ್ಕೆ ಚಿಂತೆಯಿಲ್ಲ. ಈಗ ಮಾತು ಮಾಡಬೇಕಾದ ಎಲ್ಲಾ ಕೆಲಸವನ್ನೂ ಮೆಸೇಜ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳೇ ಕೈಗೆತ್ತಿಕೊಂಡಿವೆಯಂತೆ.

ADVERTISEMENT

ಇಷ್ಟೇ ಆಗಿದ್ದರೆ, ಮೊಬೈಲ್ ಕಾಲಿಟ್ಟು ಎಷ್ಟೋ ವರ್ಷಗಳೇ ಕಳೆದುಹೋದವಲ್ಲ, ಇದರಲ್ಲೇನು ಹೊಸತು ಎಂದು ಸುಮ್ಮನಾಗಿಬಿಡಬಹುದಿತ್ತೇನೊ? ಆಧುನಿಕತೆ ರೂಪಿಸಿಕೊಟ್ಟ ಈ ಹೊಸ ದಾರಿಗೆ ಹೆಮ್ಮೆ ಪಡಬಹುದಾಗಿತ್ತೇನೋ. ಆದರೆ ವಿಷಯ ಅದಲ್ಲ.

ಮೊಬೈಲ್‌ನಲ್ಲಿಯೂ ಮಾತನಾಡಲು ಇಷ್ಟಪಡುವುದಿಲ್ಲ ಈ ತಲೆಮಾರಿನ ಯುವಕ ಯುವತಿಯರು ಎಂಬ ಸಂಗತಿ ಯೋಚನೆಗೆ ದೂಡಿದ್ದು. ಮಾತಿಗೆ ಪರ್ಯಾಯವಾಗಿ ದಾರಿಗಳಿರುವಾಗ ಸುಖಾಸುಮ್ಮನೆ ಮಾತನಾಡಿ ಏಕೆ ದಣಿವು ಮಾಡಿಕೊಳ್ಳಬೇಕು ಎಂಬುದು ಅವರು ಮುಂದಿಡುತ್ತಿರುವ ಪ್ರಶ್ನೆ. ಹಾಗಿದ್ದರೆ ಮಾತಿನ ಗತಿಯೇನು?

ಇದೇ ಕುತೂಹಲದೊಂದಿಗೆ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರನ್ನು ಮಾತಿಗೆಳೆದೆ. ಅವರ ಉತ್ತರವೂ ಹತ್ತಿರತ್ತಿರ ಇದೇ ಆಗಿತ್ತು. ‘ನಮಗೆಂದೇ ಸಿಗುವ ಒಂದಿಷ್ಟು ಸಮಯವನ್ನು ಮಾತಿನಿಂದ ಏಕೆ ಕಳೆದುಕೊಳ್ಳಬೇಕು? ಸಮಯ ಇದ್ದಾಗ ನನ್ನ ಸ್ನೇಹಿತರೊಂದಿಗೆ ಚಾಟ್ ಮಾಡುತ್ತೇನೆ. ಅದೂ ಅಕ್ಷರ ರೂಪದ ಮಾತೇ ಅಲ್ಲವೇ? ಫೋನ್ ಮಾಡಿ ಅವರಿಗೂ ತೊಂದರೆ ಕೊಡುವುದು ಏಕೆ’ ಎಂದು ನೇರಾನೇರ ಉತ್ತರಿಸಿದರು. ಈ ಉತ್ತರಕ್ಕೆ ನನ್ನ ದನಿ ಅಡಗಿತು.

ಕಾಲೇಜು ಹುಡುಗ–ಹುಡುಗಿಯರೂ ಈ ವಿಷಯದಲ್ಲಿ ಬೇರೆಯಿಲ್ಲ. ಕ್ಲಾಸುಗಳ ನಡುವೆ ಒಂದಿಷ್ಟು ಬಿಡುವು ಸಿಕ್ಕರೆ ಸಾಕು, ಹರಟೆ ಹೊಡೆಯುತ್ತಾ ಇಡೀ ಕ್ಯಾಂಪಸ್ಸಿಗೇ ಕೇಳಿಸುವಂತೆ ನಗುವ ಸದ್ದೂ ಈಗೀಗ ಕಳೆದುಹೋಗಿದೆಯಲ್ಲ!. ಮೊಬೈಲ್‌ನೊಳಗಿನ ಮಾತೇ ಮಿತಿಮೀರಿದಂತಿದೆ. ಹೀಗೆ ಅಂದುಕೊಳ್ಳುತ್ತಲೇ, ‘ಭಾಳಾ ಮಾತಾಡ್ತೀಯ’ ಎಂದು ಲೆಕ್ಚರರ್‌ಗಳು ಕ್ಲಾಸಿನಿಂದ ಹುಡುಗರನ್ನು ಹೊರಗೆ ಕಳಿಸುತ್ತಿದ್ದ ದಿನಗಳೂ ನೆನಪಾದವು.

ಬ್ರಿಟಿಷ್ ಕಮ್ಯುನಿಕೇಷನ್ ರೆಗ್ಯುಲೇಟರ್ – ಆಫ್‌ಕಾಂನ ಈ ಸಂಶೋಧನೆ, ಮಾತಿನೊಂದಿಗಿನ ಎಷ್ಟೆಲ್ಲಾ ನೆನಪುಗಳನ್ನು ಮರುಕಳಿಸುವಂತೆ ಮಾಡಿತ್ತು. 16ರಿಂದ 24 ವಯಸ್ಸಿನವರಲ್ಲಿ ಶೇ 15ರಷ್ಟು ಮಂದಿ ಫೋನಿನಲ್ಲಿ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಹೇಳಿದ ಈ ವರದಿ ಮತ್ತೂ ಒಂದು ಅಂಶವನ್ನು ಹೊರಗೆಡವಿತು. ನಾಲ್ಕು ಗೋಡೆಗಳ ನಡುವಿನ ಒಂದೇ ರೂಮಿನಲ್ಲಿದ್ದರೂ ಮಾತಾಡಲು ಇಷ್ಟಪಡುವುದಿಲ್ಲವಂತೆ ಈ ವೇಗಿಗಳು. ಅಕ್ಕಪಕ್ಕದ ಹಾಸಿಗೆಗಳಲ್ಲಿ ಕುಳಿತೇ ಮೆಸೇಜ್‌ಗಳು ಮಾತಾಡುತ್ತಾವಂತೆ. ಹೀಗೂ ಇರಬಹುದೇ!

ನಮ್ಮ ಮಾತಷ್ಟೇ ಅಲ್ಲ, ನಮ್ಮ ಶಬ್ದ ಸಂಪತ್ತೂ ಕುಗ್ಗುತ್ತಿದೆ. ಸದಾ ಇಯರ್‌ಫೋನ್‌ಗಳಿಗೆ ಜೋತು ಬಿದ್ದಿರುವ ನಮ್ಮ ಕಿವಿಗಳಿಗೆ ಹೊರಗಿನ ಶಬ್ದಗಳು ದಕ್ಕಲು ಅವಕಾಶವೇ ಇಲ್ಲದಂತಾಗಿದೆ ನೋಡಿ.

ಬಸ್‌ನಲ್ಲೋ, ರೈಲಿನಲ್ಲೋ, ರಸ್ತೆಯಲ್ಲೋ ಅಥವಾ ಸುಮ್ಮನೆ ನಡೆದು ಹೋಗುವಾಗಲೋ, ದಿನಕ್ಕೆ ಅದೆಷ್ಟು ಸಾವಿರ ಶಬ್ದಗಳು ನಮ್ಮ ಕಿವಿ ನುಸುಳುತ್ತಿರಲಿಲ್ಲ? ಬರ್‍ರನೆ ದೂಳೆಬ್ಬಿಸಿಕೊಂಡು ಬರುವ ಲಾರಿ, ಸೆಕೆ ತಾಳಲಾರದೆ ಚಿಟಾರನೆ ಚೀರಿಕೊಂಡ ಪುಟ್ಟ ಮಗುವಿನ ಅಳು, ಸೋಡಾ ಮಾರು ತ್ತಿರುವವನ ಟಿಣ್ ಟಿಣ್ ಸದ್ದು, ಸುತ್ತಿಗೆ ಏಟು ತಾಳುತ್ತಿರುವ ‌ಕಬ್ಬಿಣ, ಮನೆಯ ದುಮ್ಮಾನಗಳನ್ನೆಲ್ಲಾ ಗೆಳತಿಯೊಂದಿಗೆ ಹಂಚಿಕೊಳ್ಳುತ್ತಲೇ ಹಿಂದಿನ ಸೀಟಿನಲ್ಲಿ ಸಣ್ಣಗೆ ಬಿಕ್ಕಿದ ಸದ್ದು... ಇವೆಲ್ಲಾ ಈಗ ಕೇಳಿಸುವುದೇ ಇಲ್ಲ ಏಕೆ? ಇವಕ್ಕೆಲ್ಲಾ ನಾವು ಕಿವುಡಾಗುತ್ತಿದ್ದೇವಾ?

ಇದೇ ಪ್ರಶ್ನೆಯೊಂದಿಗೆ, ಸದಾ ಇಯರ್‌ಫೋನ್‌ ಚುಚ್ಚಿಕೊಂಡೇ ಇರುವ ಗೆಳತಿಯನ್ನು ಕರೆದು ‘ಸ್ವಲ್ಪ ಮಾತಾಡಬೇಕು' ಎಂದೆ. ‘ಅಯ್ಯೋ, ಈಗ ಶಬ್ದಮಾಲಿನ್ಯ ಹೆಚ್ಚಾಗಿದೆಯಂತೆ. ಹೊರಗಿನ ಸದ್ದುಗದ್ದಲ ಕೇಳಿ ನನಗೇನಾಗಬೇಕಿದೆ? ಅದರಿಂದ ಏನಾದರೂ ಪ್ರಯೋಜನವಿದೆಯಾ’ ಎಂದು ಪ್ರಶ್ನೆಯನ್ನು ನನಗೇ ತಿರುಗಿ ಎಸೆದಳು.

‘ಕಿವಿಗಡಚಿಕ್ಕುವ ಗದ್ದಲವಿರಲಿ, ಸಾರ್ವಜನಿಕ ಸ್ಥಳವಿರಲಿ, ನಮ್ಮದೇ ಆಯ್ಕೆಯ ಶಬ್ದವಿರಬೇಕು. ಹೊರಗಿನ ಯಾವುದೇ ಬೇಡದ ಧ್ವನಿ ನನ್ನೊಳಗೆ ಇಳಿಯಬಾರದು’ ಎಂದುಕೊಳ್ಳುವ ಡಿಜಿಟಲ್ ಭೂಮಿಯ ಮಕ್ಕಳು ಈಗ ಶಬ್ದದಲ್ಲೂ ಪ್ರೈವಸಿ ಬಯಸುತ್ತಾರಂತೆ. ಈಗ ನಮ್ಮ ಅನುಮತಿ ಇಲ್ಲದೇ ಯಾವುದೇ ಧ್ವನಿ ನಮ್ಮನ್ನು ಪ್ರವೇಶಿಸಬಾರದು ಎಂದೇ ಇಯರ್‌ಫೋನ್‌ನೊಂದಿಗೆ ನಮ್ಮ ಶಬ್ದತರಂಗಗಳನ್ನೂ ನಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಮೆದುವಾದ ಸಂಗೀತ, ರಾಕ್ ಸಂಗೀತ, ವಾದನ ಸಂಗೀತ... ಎಷ್ಟೆಲ್ಲ ಸಹಾಯಕರು ಇದಕ್ಕಿದ್ದಾರೆ. ‘ಸಂತೆಯೊಳಗಣ ಮನೆಯ ಮಾಡಿ ಶಬ್ದಗಳಿಗಂಜಿದೊಡೆಂತಯ್ಯ’ ಎಂದು ಕೇಳಲು ಸಾಧ್ಯವೇ ಇಲ್ಲವೇನೋ?

ಹಾಗಿದ್ದರೆ, ದಿನವಿಡೀ ಏನೇನು ಆಗುತ್ತಿತ್ತೋ ಎಲ್ಲವನ್ನೂ ಸಂಜೆ ಫೋನ್ ಮೂಲಕ ಪ್ರೀತಿಪಾತ್ರರಿಗೆ ಚಾಚೂ ತಪ್ಪದಂತೆ ಒಪ್ಪಿಸಿ ರಿಲ್ಯಾಕ್ಸ್ ಆಗುತ್ತಿದ್ದ ಆ ಕಾಲ ಮುಗಿದುಹೋಯಿತೇ? ಹೀಗಂದುಕೊಳ್ಳುತ್ತಿದ್ದಂತೆಯೇ, ‘ಇನ್ನೊಬ್ಬರ ಖಾಸಗೀತನಕ್ಕೆ ನಾವ್ಯಾಕೆ ಧಕ್ಕೆ ತರಬೇಕು? ಅವರ ಸಮಯಕ್ಕೆ ನಾವೇಕೆ ಕಲ್ಲುಹಾಕಬೇಕು‌’ ಎಂದು ಯಾರದೋ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು ಮೊಬೈಲ್ ಕೈಗೆತ್ತಿಕೊಂಡು ಫೋನ್ ಮಾಡಲು ಹಿಂಜರಿದು ಮೆಸೇಜ್‌ನಷ್ಟೇ ತಳ್ಳಿ ಸುಮ್ಮನಾದ ಗೆಳತಿಯ ಮಾತು ನಿಜವೆನ್ನಿಸಿತ್ತು.

ಹುಟ್ಟುಹಬ್ಬ, ಹಬ್ಬ ಹರಿದಿನಗಳಂದು, ಹೊಸ ವರ್ಷದಂದು ರಾತ್ರಿ 12ರವರೆಗೂ ಕಾದು, ಫೋನ್ ಮಾಡಿ ಕೇಕೆ ಹಾಕುತ್ತಾ ನಗುತ್ತಿದ್ದ ಆ ಧ್ವನಿಗಳು ಎಲ್ಲಿ ಅಡಗಿಹೋದವು? ಆ ಹುಮ್ಮಸ್ಸು ನಿಶ್ಶಬ್ದವಾದದ್ದೇಕೆ? ಮಾತಿಗೊಂದು ಸೆಲ್ಫೀ ಕ್ಲಿಕ್ಕಿಸಿಕೊಂಡು ಕಳುಹಿಸಿದರೂ ಮಾತು ಸ್ಫುರಿಸುತ್ತಿದ್ದ ಆ ಭಾವ ಮಿಸ್ಸಿಂಗ್ ಅನ್ನಿಸುತ್ತಿಲ್ಲವೇ?

ಬೇಡವೆಂದರೂ ಹರಿಯುತ್ತಾ ಬರುವ ನಿರ್ಭಾವುಕ ಫಾರ್ವರ್ಡೆಡ್ ಸಂದೇಶಗಳು ಕಿರಿಕಿರಿ ಅನ್ನಿಸುವ ಕಾಲವೂ ದೂರವಿಲ್ಲವೆನ್ನಿ!
ಹಾ, ಅಂದಹಾಗೆ ಈ ಸಂದೇಶಗಳಲ್ಲಿ ಒಂದು ಬಹುಮುಖ್ಯ ಉಪಯೋಗವೂ ಇದೆ ನೋಡಿ! ಏನೇನೋ ಮಾತನಾಡಿ ಗೊಂದಲ ಸೃಷ್ಟಿಸಿಕೊಳ್ಳುವ ಬದಲು, ಹೇಳಬೇಕಾದ್ದನ್ನು ಸ್ಪಷ್ಟವಾಗಿ, ತಾಳ್ಮೆಯಿಂದ ಯೋಚಿಸಿ ಮಾತನಾಡಿಸುವ ಶಕ್ತಿ ಈ ಸಂದೇಶಗಳಿಗಿದೆ. ಭಾವೋದ್ರೇಕಕ್ಕೆ ಇಲ್ಲಿ ಅವಕಾಶ ಕಡಿಮೆ. ‘ಭಾವನೆಗಳ ಎಡಿಟಿಂಗ್’ ಎಷ್ಟು ಸುಲಭವಲ್ಲವೇ ಇಲ್ಲಿ? ಇದಕ್ಕೆ ನೆರವಾಗಲು ಈಗ ಈಮೋಜಿಗಳು, ಡಿಕ್ಷನರಿಗಳು, ಒಂದು ಅಕ್ಷರ ಟೈಪಿಸುತ್ತಿದ್ದಂತೆಯೇ ಪೂರ್ತಿಪದವೇ ಪ್ರತ್ಯಕ್ಷವಾಗುವ ಸೌಲಭ್ಯಗಳು... ‘ಇಷ್ಟೆಲ್ಲಾ ಇರುವಾಗ ತಪ್ಪಿಗಿನ್ನು ಜಾಗವೆಲ್ಲಿ? ಇದೆಲ್ಲಾ ನಿಮ್ಮ ‘ಬಾಯಿ ಮಾತಿ’ನಲ್ಲಿ ಸಾಧ್ಯವಿದೆಯೇ’ ಎಂದು ಕೇಳುವವರನ್ನು ನೋಡಿ, ಅರೆ ಹೌದಲ್ಲವೇ ಅನ್ನಿಸಿತು.

ಈಗ ದಿನದ ಇಪ್ಪತ್ತನಾಲ್ಕು ಗಂಟೆಯೂ ಸಾಲದು ಎನ್ನುವ ಜನರ ಸರದಿ. ಆತಂಕ, ಒತ್ತಡಗಳನ್ನೇ ಮೈಮೇಲೆ ಎಳೆದುಕೊಂಡವರೇ ಹೆಚ್ಚಿನ ಮಂದಿ. ಈ ಸಮಯದಲ್ಲಿ ಫೋನ್‌ನಲ್ಲಿ ಮಾತನಾಡುವುದು ಒಂದು ರೀತಿ ಕಿರಿಕಿರಿಯೇ ಅಲ್ಲವೇ? ಆಯ್ಕೆಗಳ ಅಳತೆ ಹೆಚ್ಚುತ್ತಿದ್ದಂತೆ ಅವುಗಳ ಬಳಕೆಯಲ್ಲೂ ನಮ್ಮ ನಡವಳಿಕೆಯಲ್ಲೂ ವ್ಯತ್ಯಾಸವಾಗುವುದು ಸಹಜವೇ ತಾನೇ? ದಿನವಿಡೀ ನೌಕರಿಯ ಜಂಜಡ, ಟ್ರಾಫಿಕ್ ಕಿರಿಕಿರಿ, ಒತ್ತಡ ಇವೆಲ್ಲವೂ ರೇಜಿಗೆ ಹುಟ್ಟಿಸಿ, ಮೌನವನ್ನು ತಬ್ಬುವುದರಲ್ಲಿ ಅಸಹಜವೇನಿದೆ ಎಂದೂ ಒಮ್ಮೆ ಅನ್ನಿಸಿ ಸುಮ್ಮನಾದೆ. ಆದರೂ ಮಾರ್ಕೆಟ್‌ನಲ್ಲಿ ಅಚಾನಕ್ಕಾಗಿ ಸಿಕ್ಕ ಗೆಳೆಯನನ್ನು ನೋಡಿ, ನನ್ನ ಮುಖವರಳಿಸುವಷ್ಟರಲ್ಲೇ, ಇಯರ್‌ಫೋನ್‌ಗೆ ಇಳಿಬಿಟ್ಟ ಮುಖದಲ್ಲಿ ತುಟಿ ಅಲುಗದೇ ಗಡಿಬಿಡಿಯಿಂದ ಮರೆಯಾದ ಅವನನ್ನು ನೋಡಿ ಬೇಸರವೂ ಆಯ್ತು. ಮಾರನೇ ದಿನ, ‘ನಿನ್ನ ನೋಡಿದ ಹಾಗಾಯ್ತಲ್ಲ’ ಎಂಬ ಅವನ ಸಂದೇಶ ನೋಡಿ, ನಕ್ಕು ಉತ್ತರಿಸಿದ್ದೆ.

‘ಅದ್ಯಾಕೆ ತಂತ್ರಜ್ಞಾನವನ್ನು ಋಣಾತ್ಮಕವಾಗಿಯೇ ನೋಡಬೇಕು? ಉಪಯೋಗಗಳು ನೂರಿರುವಾಗ, ಅದನ್ನು ಸುಮ್ಮನೆ ಜರಿಯುವುದರಲ್ಲಿ ಏನು ಸಿಗುತ್ತದೆ, ವರ್ತಮಾನಕ್ಕೆ ತಕ್ಕಂತೆ ಬದಲಾಗಬೇಕು’ ಎಂದ ತಮ್ಮನ ಮಾತುಗಳು ಪದೇ ಪದೇ ಅನುರಣಿಸುತ್ತಿದ್ದವು.

ಹೀಗೆ, ಬಸ್ಸಿನ ಕಿಟಕಿಗಾನಿಸಿ ಕೂತು ಸುಮ್ಮನೆ ಹೊರಗೆ ನೋಡುತ್ತಾ ಕುಳಿತಿದ್ದೆ. ಇದ್ದಕ್ಕಿದ್ದಂತೆ ಜೋರು ಉದ್ಗಾರ ಕೇಳಿದಂತಾಯ್ತು. ಎಷ್ಟೋ ವರ್ಷದ ನಂತರ ಸಿಕ್ಕ ಇಬ್ಬರು ಹಳೆಯ ಗೆಳತಿಯರು, ‘ಅಬ್ಬ ಎಷ್ಟು ವರ್ಷಗಳಾಯ್ತಲ್ಲ, ಬಾ ತುಂಬಾ ಮಾತಾಡುವುದಿದೆ’ ಎಂದು ಆಶ್ಚರ್ಯ ಬೆರೆತ ಸಂತಸದಲ್ಲಿ ಕೈಕೈ ಹಿಡಿದು ಕೂತು ಲೋಕದ ಪರಿವೆಯೇ ಇಲ್ಲದಂತೆ ಕಳೆದುಹೋದರು.

ಅವರ ಆ ಮಾತು ಅದೆಷ್ಟು ಸಹಜ ಸುಂದರವಲ್ಲವೇ ಎಂಬ ಭಾವವೂ, ಭರವಸೆಯೂ ಸುಳಿದು ಹೋಯ್ತು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.