ADVERTISEMENT

‘ಹೆದರುವವಳು ನಾನಲ್ಲ’

ನಿಸರ್ಗ ಎಚ್.ಮಲ್ಲಿಗೆರೆ
Published 27 ಜುಲೈ 2016, 19:30 IST
Last Updated 27 ಜುಲೈ 2016, 19:30 IST
‘ಹೆದರುವವಳು  ನಾನಲ್ಲ’
‘ಹೆದರುವವಳು ನಾನಲ್ಲ’   

‘ರಂಗಿತರಂಗ’ ಸಿನಿಮಾದಲ್ಲಿ ಹೆದರುವ, ‘ಯು ಟರ್ನ್‌’ನಲ್ಲಿ ಹೆದರಿಸುವ ಪಾತ್ರದಲ್ಲಿ ಕಾಣಿಸಿಕೊಂಡು ನೋಡುಗರ ಮನಗೆದ್ದ ಹುಡುಗಿ ರಾಧಿಕಾ ಚೇತನ್. ಸದ್ಯಕ್ಕೆ ವಿದ್ಯಾರ್ಥಿ ಪಾತ್ರಕ್ಕೂ ತಮ್ಮನ್ನು ಅಣಿಗೊಳಿಸಿಕೊಳ್ಳುತ್ತಿದ್ದಾರೆ. ಭಿನ್ನ ಪಾತ್ರಗಳ ಮೂಲಕ ಎಲ್ಲರ ಮನಗೆಲ್ಲುವ ಇಂಗಿತ ಹೊತ್ತಿರುವ ರಾಧಿಕಾ ಹೀಗೆ ಮಾತಿಗೆ ಸಿಕ್ಕಾಗ...

* ಬಾಲ್ಯ ಎಂದಾಕ್ಷಣ ಕಣ್ಣೆದುರು ಬರುವ ನೆನಪುಗಳು...
ನಮ್ಮೂರು ಉಡುಪಿ. ನಾನು ಬೆಳೆದದ್ದು ಮೈಸೂರಿನಲ್ಲಿ. ಓದಿದ್ದು ಮೈಸೂರಿನ ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್‌ನಲ್ಲಿ. ಬಾಲ್ಯ ಎಂದರೆ ಶಾಲೆ, ಅಜ್ಜಿ ಊರಾದ ಕೊಳ್ಳೇಗಾಲ ನೆನಪಾಗುತ್ತದೆ. ಶಾಲೆಯಲ್ಲಿ ಮೊದಲ ಬೆಂಚ್ ಹುಡುಗಿ ನಾನು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದೆ.  

ನಾಟಕ, ನೃತ್ಯ ಎಲ್ಲದರಲ್ಲೂ ಭಾಗವಹಿಸುತ್ತಿದ್ದೆ. ಬೇಸಿಗೆ ರಜೆ ಬಂದರೆ ಸಾಕು ಕೊಳ್ಳೇಗಾಲಕ್ಕೆ ಹೋಗುತ್ತಿದ್ದೆ. ಅಲ್ಲಿ ಅಣ್ಣ, ಚಿಕ್ಕಮ್ಮ, ದೊಡ್ಡಮ್ಮ, ಮಾವ, ಅತ್ತೆ ಮಕ್ಕಳೆಲ್ಲ ಸೇರಿ ಆಟ ಆಡುತ್ತಿದ್ದೆವು.

ಕೊಳ್ಳೇಗಾಲದ ತಾತನ ಹೋಟೆಲ್‌ನಲ್ಲಿ ಮಾಡುವ ಮಸಾಲ ದೋಸೆ ಎಂದರೆ ಪಂಚಪ್ರಾಣ. ಅಣ್ಣನ ಜೊತೆ ಜಗಳವಾಡುತ್ತಿದ್ದೆ. ಜೋರು ದನಿಯಲ್ಲಿ ಶುರುವಾಗುವ ಜಗಳ, ಹೊಡೆದಾಟದಲ್ಲಿ ಕೊನೆಗೊಳ್ಳುತ್ತಿತ್ತು. ಅವನಿಗೆ ಹೊಡೆಯುವಷ್ಟು ಶಕ್ತಿ ಇರಲಿಲ್ಲ. ಕಿತಾಪತಿ ಮಾಡಿ ಓಡಿಬಿಡುತ್ತಿದ್ದೆ.

* ಕಾಲೇಜು ದಿನಗಳೆಲ್ಲಾ ರಂಗಾಗಿ ಇದ್ದವಂತೆ?
ಮೈಸೂರಿ ಎಸ್‌ಡಿಎಂ, ವಿದ್ಯಾವಿಕಾಸ ಕಾಲೇಜುಗಳಲ್ಲಿ ನನ್ನ ಓದು ಇದ್ದಿದ್ದು. ಕಾಲೇಜಿನಲ್ಲಿ ನೆನಪಿನಲ್ಲುಳಿಯುವಂಥದ್ದು ನನ್ನ ರಂಗಭೂಮಿಯ ನಂಟು. ಅಲ್ಲಿ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಿದ್ದೆ. ರಂಗಾಯಣದಲ್ಲಿ ನಾಟಕ ಪ್ರದರ್ಶನ ನೀಡುತ್ತಿದ್ದೆ. ಪರೀಕ್ಷೆ ಬಂದಾಗ ಮಾತ್ರ ಓದುತ್ತಿದ್ದೆ.

* ಕಾಲೇಜಿನಲ್ಲಿ ಯಾರೂ ಲವ್ ಲೆಟರ್ ಕೊಟ್ಟಿಲ್ಲವೇ?
ಅಂಥದೆಲ್ಲ ಬಹಳ ಕಡಿಮೆ. ಆದರೆ, ‘ರೋಡಿಗಿಳೀ ರಾಧಿಕಾ’, ‘ಜಿಂಕೆಮರಿ ಓಡ್ತಾಯ್ತೆ ನೋಡ್ಲಾ ಮಗ’ ಅಂಥೆಲ್ಲ ಹುಡುಗರು ರೇಗಿಸುತ್ತಿದ್ದರು.

* ಮರೆಯಲಾಗದ, ಎಂದಿಗೂ ಖುಷಿ ಕೊಡುವ ನೆನಪು?
ನನ್ನ ಮೊದಲ ಸಿನಿಮಾ ‘ರಂಗಿತರಂಗ’ದ ಮೊದಲ ಶೂಟ್ ತೆಗೆದದ್ದು. ಎಳವೆಯಿಂದಲೂ ನಟನೆ ಎಂದರೆ ನನಗೆ ಹುಚ್ಚು. ರಂಗಿತರಂಗದ ಕೊನೆಯ ದೃಶ್ಯಗಳನ್ನು ಮೊದಲೇ ತೆಗೆದೆವು. ಆಸ್ಪತ್ರೆಯ ದೃಶ್ಯ, ಅಳುತ್ತ ಗೆಳತಿಯನ್ನು ಅಪ್ಪುವ ದೃಶ್ಯ. ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಟಿಸಿದಾಗ ಎಂಥದೋ ಸಂತೋಷ. ಹೇಳಲಾರದಷ್ಟು ಖುಷಿ ಆಯ್ತು.ಅದನ್ನು ಯಾವತ್ತೂ ಮರೆಯಲಾರೆ.

* ದೆವ್ವಕ್ಕೂ ನಿಮಗೆ ಏನಾದರೂ ನಂಟಿದೆಯಾ?
ಇರಬಹುದು. ಯಾಕೆಂದರೆ ಚಿಕ್ಕವಳಿದ್ದಾಗಿನಿಂದಲೂ ದೆವ್ವ ಎಂದರೆ ಎಂಥದೋ ಕುತೂಹಲ. ನಾವೆಲ್ಲ ಸೇರಿ ದೆವ್ವ ಕರೆಯುವ ಆಟ ಆಡಬೇಕೆಂದುಕೊಳ್ಳುತ್ತಿದ್ದೆವು. ಆದರೆ ಭಯವಾಗಿ ಸುಮ್ಮನಾಗುತ್ತಿದ್ದೆವು. ಆದರೆ ಕಾಲೇಜಿನಲ್ಲಿ ಇರುವಾಗ ಒಂದು ರಾತ್ರಿ ನಾನು ನನ್ನ ಸ್ನೇಹಿತೆ ಕತ್ತಲೆ ಕೋಣೆಯಲ್ಲಿ ಕುಳಿತು ನಾಣ್ಯ, ಲೋಟ ಹಿಡಿದು ಆಟವಾಡಿದ್ದೆವು. ಸುಮಾರು ಒಂದು ಗಂಟೆಯವರೆಗೆ ಕಾದೆವು. ಯಾವು ದೆವ್ವವೂ ಬರಲಿಲ್ಲ.

* ದೆವ್ವ ಎಂಬುದರ ಬಗ್ಗೆ ಅಷ್ಟು ನಂಬಿಕೆ ಉಂಟೆ?
ನಾನು ನಂಬುತ್ತೇನೆ. ದೇವರಲ್ಲಿ ನಂಬಿಕೆ ಇದೆ. ಒಳ್ಳೆಯದು ಇದ್ದ ಮೇಲೆ ಕೆಟ್ಟದ್ದು ಇರಲೇಬೇಕು. ಕಾಕತಾಳೀಯವೆಂಬಂತೆ ನನ್ನ ಎರಡೂ ಚಿತ್ರಗಳಲ್ಲಿ ದೆವ್ವ ಇತ್ತು.

* ‘ರಂಗಿತರಂಗ’ದಲ್ಲಿ ಹೆದರುವ ಪಾತ್ರ, ‘ಯು ಟರ್ನ್‌’ನಲ್ಲಿ ಹೆದರಿಸುವ ಪಾತ್ರ. ನಿಜ ಜೀವನದಲ್ಲಿ ನೀವು ಹೇಗೆ?
ಇಲ್ಲ. ನಾನು ಯಾರಿಗೂ ಹೆದರಿಸುವುದೂ ಇಲ್ಲ, ಹೆದರುವುದೂ ಇಲ್ಲ. ಸಕಾರಾತ್ಮಕ ಚಿಂತನೆಗೆ ಹೆಚ್ಚು ಒತ್ತು ಕೊಡುತ್ತೇನೆ. ಅದೇ ನನ್ನ ನಂಬಿಕೆ.

* ನೃತ್ಯ, ಯೋಗ ಎಂದರೆ ಬಲು ಪ್ರೀತಿಯಂತೆ?
ಹೌದು. ಮೊದಲಿನಿಂದಲೂ ಯೋಗಾಭ್ಯಾಸ ಮಾಡುತ್ತಿದ್ದೇನೆ. ಯೋಗ ತರಗತಿ ಸಹ ನಡೆಸುತ್ತಿದ್ದೆ. ಎಷ್ಟೇ ಕೆಲಸವಿದ್ದರು ದಿನಕ್ಕೆ ಅರ್ಧ ಗಂಟೆಯಾದರೂ ಯೋಗಾಭ್ಯಾಸಕ್ಕೆ ಸಮಯ ಮಾಡಿಕೊಳ್ಳುತ್ತೇನೆ. ಇನ್ನು ನೃತ್ಯ. ನಿರುಪಮಾ ರಾಜೇಂದ್ರ ಅವರಿಂದ ಕಥಕ್ ಕಲಿತಿದ್ದೇನೆ. ಶಾಸ್ತ್ರೀಯವಾಗಿ ನೃತ್ಯ ಕಲಿಯುವುದರಿಂದ ನೃತ್ಯ ಮತ್ತು ಅಭಿನಯ ಎರಡನ್ನೂ ಮೈಗೂಡಿಸಿಕೊಳ್ಳುವುದು ಸಾಧ್ಯವಾಗುತ್ತದೆ. ವೇದಿಕೆ ಮೇಲೆ ಹೇಗಿರಬೇಕು, ನಟನೆಯ ಇತರ ಅಭಿವ್ಯಕ್ತಿಗಳನ್ನು ಕಲಿಯಲು ಇದು ಸಹಾಯವಾಗುತ್ತದೆ. ‘ವಿ ಮೂವ್ ಥಿಯೇಟರ್‌’ನಲ್ಲಿಯೂ ಒಂದಷ್ಟು ದಿನ ತೊಡಗಿಸಿಕೊಂಡಿದ್ದೆ.

* ಸಿನಿಮಾಗೆ ಬರದಿದ್ದರೆ ಏನಾಗುತ್ತಿದ್ದಿರಿ?
ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಯೋಗ ತರಗತಿ ನಡೆಸುತ್ತಿದ್ದೆ. ಈಗಲೂ ಯೋಗ ತರಗತಿ ನಡೆಸುವ ಆಲೋಚನೆ ಇದೆ. ಆದರೆ ಸಮಯ ಇಲ್ಲ.

* ಯಾವ ತರಹದ ಪಾತ್ರಗಳು ನಿಮಗಿಷ್ಟ?
ಪಾತ್ರದಲ್ಲಿ ಹೊಸತನವಿರಬೇಕು. ವಿಭಿನ್ನ, ವಿಶಿಷ್ಟ ಅನ್ನಿಸಬೇಕು.

* ಮುಂದಿನ ಸಿನಿಮಾ ಯಾವುದು?
ಬಿಬಿ5. ಈ ಸಿನಿಮಾದಲ್ಲಿ ನನ್ನದು ವಿದ್ಯಾರ್ಥಿ ಪಾತ್ರ.

* ಸಿನಿಮಾದೊಂದಿಗೆ ಬೇರೆ ‘ಇಷ್ಟಗಳು’?
ಸಿನಿಮಾನೇ ನನ್ನಿಷ್ಟ. ಲಕ್ಷ್ಮಿ, ಮಾಧುರಿ ದೀಕ್ಷಿತ್ ಅವರೆಂದರೆ ಅಚ್ಚು-ಮೆಚ್ಚು. ಯಾವುದೇ ಹೊಸ ಸಿನಿಮಾ ಬಂದರೂ ನಟನೆಯ ಇತರ ಅಂಶಗಳನ್ನು ಗಮನಿಸುತ್ತೇನೆ.ಚೇತನ್ ಭಗತ್, ದೀಪಕ್ ಚೋಪ್ರಾ ಇತರರ ಪುಸ್ತಕ, ನಟನೆ ಕುರಿತಾದ ಪುಸ್ತಕಗಳನ್ನು ಓದುತ್ತೇನೆ. ಸುತ್ತಾಡುವುದೂ ನನಗೆ ಬಹಳ ಇಷ್ಟ. ಮಡಿಕೇರಿಯಂಥ ನಿಸರ್ಗಕ್ಕೆ ಹತ್ತಿರವಿರುವ ತಾಣಗಳಿಗೆ ಹೋಗುತ್ತಿರುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT