ADVERTISEMENT

ಕಂಪ್ಯೂಟರ್ ಒಳಗೆ ಪರಕಾಯ ಪ್ರವೇಶ

ಸಂದೀಪ್ ಕೆ.ಎಂ.
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST
ಕಂಪ್ಯೂಟರ್ ಒಳಗೆ    ಪರಕಾಯ ಪ್ರವೇಶ
ಕಂಪ್ಯೂಟರ್ ಒಳಗೆ ಪರಕಾಯ ಪ್ರವೇಶ   

‘ಏನಪ್ಪ ಮಾಡೋದು, ಇವತ್ತು ಆಫೀಸ್‌ಗೆ ಹೋಗಲು ಕಷ್ಟ. ಮನೆಯಿಂದ ಆಫೀಸ್‌ ಕಂಪ್ಯೂಟರ್‌ ಬಳಕೆ ಮಾಡುವ ಹಾಗಿದ್ರೆ ಚೆನ್ನಾಗಿತ್ತು. ಅಯ್ಯೋ... ನನ್ನ ಮಗುವಿಗೆ ಸ್ಕೂಲ್‌ನಲ್ಲಿ ಪ್ರಾಜೆಕ್ಟ್ ವರ್ಕ್ ನೀಡಿದ್ದಾರೆ. ನಮ್ಮ ಮನೆಯಲ್ಲಿ ಯಾರಿಗೂ ಅಷ್ಟು ಸರಿಯಾಗಿ ಕಂಪ್ಯೂಟರ್ ಬಳಸಲು ಬರುವುದಿಲ್ಲ, ಆಫೀಸ್ ಕೆಲಸ ಬೇರೆ ಸಾಕಷ್ಟಿದೆ. ಇಲ್ಲಿಂದಲೇ ಮನೆಯ ಕಂಪ್ಯೂಟರ್ ಬಳಸುವ ಹಾಗಿದ್ರೆ ಚೆನ್ನಾಗಿತ್ತು’ ಹೀಗೆ ಹಲಬುವವರಿಗೆ ಹೊಸ ತಂತ್ರಾಂಶವೊಂದು ನೆರವಿಗೆ ಬಂದಿದೆ.

ಗೂಗಲ್ ಸಂಸ್ಥೆ ತನ್ನ ಅಧಿಕೃತ ವೆಬ್ ಬ್ರೌಸರ್ ಗೂಗಲ್ ಕ್ರೋಮ್‌ಗೆ ಹೊಸ ಕ್ರೋಮ್‌ ರಿಮೋಟ್‌ ಡೆಸ್ಕ್‌ಟಾಪ್‌ ಎಂಬ ಎಕ್ಸ್‌ಟೆನ್ಷನ್‌ ಬಿಡುಗಡೆಗೊಳಿಸಿದೆ. ಇದರಿಂದ ನೀವು ಇರುವ ಸ್ಥಳದಿಂದಲೇ ನಿಮ್ಮ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ನಿಂದ ಇತರ ಯಾವುದೇ ಕಂಪ್ಯೂಟರ್ ಒಳಹೊಕ್ಕು ನೇರವಾಗಿ ಪರಕಾಯ ಪ್ರವೇಶ ಮಾಡಿ ಕೆಲಸ ಮಾಡಬಹುದಾಗಿದೆ. ನೀವು ಭೌತಿಕವಾಗಿ ಆ ಕಂಪ್ಯೂಟರ್‌ನ ಮುಂದೆ ಇಲ್ಲವಾದರೂ ‘ಕ್ರೋಮ್‌ ರಿಮೋಟ್‌ ಡೆಸ್ಕ್‌ಟಾಪ್‌ ಎಕ್ಸ್‌ಟೆನ್ಷನ್‌ ಮೂಲಕ ನಿಯಂತ್ರಿಸಬಹುದು.

ಹೇಗೆ ಕೆಲಸ ಮಾಡುತ್ತದೆ?

ADVERTISEMENT

ನೀವು ಕೆಲಸ ಮಾಡುವ ಕಂಪ್ಯೂಟರ್/ಮೊಬೈಲ್‌ನಲ್ಲಿ ಕ್ರೋಮ್ ವೆಬ್ ಬ್ರೌಸರ್ ಇದ್ದರೆ ಸಾಕು. ಡೆಸ್ಕ್‌ಟಾಪ್‌ ಎಕ್ಸ್‌ಟೆನ್ಷನ್ ಇನ್‌ಸ್ಟಾಲ್ ಮಾಡಬೇಕು. ನೀವು ಮೊಬೈಲ್‌ ಮೂಲಕ ಕಂಪ್ಯೂಟರ್‌ ನಿಯಂತ್ರಿಸಬೇಕಿದ್ದರೆ ಮೊಬೈಲ್‌ನಲ್ಲಿರುವ ರಿಮೋಟ್ ಎಕ್ಸ್‌ಟೆನ್ಷನ್‌ನಲ್ಲಿ ಕೋಡ್ ಜನರೇಟ್ ಮಾಡಬೇಕು. ಆ ಕೋಡ್ ಅನ್ನು ಕಂಪ್ಯೂಟರ್‌ನ ರಿಮೋಟ್ ಎಕ್ಸ್‌ಟೆನ್ಷನ್‌ನಲ್ಲಿ ನಮೂದಿಸಿದರೆ ಎರಡೂ ಗ್ಯಾಜೆಟ್‌ಗಳ ನಡುವೆ ಇಂಟರ್‌ನೆಟ್ ಸಹಾಯದಿಂದ ಸಂಪರ್ಕ ಸಾಧ್ಯವಾಗುತ್ತದೆ. ನಿಮ್ಮ ಮೊಬೈಲ್ ಪರದೆ ಮೇಲೆ ಕಂಪ್ಯೂಟರ್‌ನ ಪರದೆ ಮೂಡುತ್ತದೆ. ಆಗ ನೀವು ನಿಮ್ಮ ಮೊಬೈಲ್ ಪರದೆಯಿಂದ ಕಂಪ್ಯೂಟರ್ ನಿಯಂತ್ರಿಸಬಹು ದಾಗಿದೆ.

ಕ್ರೋಮ್ ರಿಮೋಟ್ ಡೆಸ್ಕ್‌ಟಾಪ್ ಎಕ್ಸ್‌ಟೆನ್ಷನ್‌ ಸಂಪೂರ್ಣ ಉಚಿತವಾಗಿದ್ದು, ನೀವು ಯಾವುದೇ ಓಎಸ್ ಹೊಂದಿರುವ, ಅಂದರೆ ವಿಂಡೋಸ್, ಮ್ಯಾಕ್, ಲೂನಿಕ್ಸ್ ಓಎಸ್ ಹೊಂದಿರುವ ಸಿಸ್ಟಮ್‌ಗಳ ನಡುವೆ ಪರಸ್ಪರ ಸಂಪರ್ಕ ಸಾಧಿಸಬಹುದಾಗಿದೆ. ಇದಕ್ಕೆ ಇನ್ಯಾವುದೇ ಸಾಫ್ಟ್‌ವೇರ್‌ಗಳ ಸಹಾಯ ಬೇಕಿಲ್ಲ.

ಆಲ್ವೇಸ್ ಕನೆಕ್ಟೆಡ್

‘ಆಲ್ವೇಸ್ ಕನೆಕ್ಟಡ್’ ಎಂಬ ನೂತನ ಮಾದರಿಯ ಲ್ಯಾಪ್‌ಟಾಪ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಕಂಪ್ಯೂಟರ್ ತಂತ್ರಾಂಶ ದೈತ್ಯ ಮೈಕ್ರೋಸಾಫ್ಟ್ ಮತ್ತು ಮೊಬೈಲ್ ಪ್ರೊಸೆಸರ್ ನಿರ್ಮಾಣ ಕಂಪನಿ ಕ್ವಾಲ್ಕಂ ಸ್ನ್ಯಾಪ್‌ ಡ್ರ್ಯಾಗನ್ ಸಂಸ್ಥೆ ಜತೆಯಾಗಿ ಈ ಲ್ಯಾಪ್‌ಟಾಪ್ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿವೆ.

ಇಂಟರ್‌ನೆಟ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ನಿರ್ಮಿಸಿರುವ ‘ಆಲ್ವೇಸ್ ಕನೆಕ್ಟೆಡ್’ ಲ್ಯಾಪ್‌ಟಾಪ್‌ಗಳು ದೀರ್ಘಾವಧಿಯ ಬ್ಯಾಟರಿ, ಅಂದರೆ ಕನಿಷ್ಠ 10 ಗಂಟೆಯವರೆಗೂ ಬ್ಯಾಟರಿ ಬ್ಯಾಕ್‍ಅಪ್, ಹೊಂದಿರುತ್ತವೆ.

ಈ ಹಿಂದೆ ಇಂಟರ್‌ನೆಟ್ ಬಳಕೆ ಮಾಡಲು ಹೆಚ್ಚುವರಿಯಾಗಿ ಇಂಟರ್‌ನೆಟ್ ಡಾಂಗಲ್, ವೈಫೈ ಸಂಪರ್ಕ ಅವಶ್ಯವಿತ್ತು. ಇತರ ಮೂಲಗಳ ಮೇಲೆ ಅವಲಂಬಿತವಾಗದೆ ಈ ಲ್ಯಾಪ್‌ಟಾಪ್‌ನಲ್ಲಿ ಮೊಬೈಲ್ ಡೇಟಾ ಮಾದರಿಯಲ್ಲಿ ಸಿಮ್ ಕಾರ್ಡ್ ಅಳವಡಿಸಿಕೊಂಡು ಎಲ್‍ಟಿಇ ಮಾದರಿಯ ಇಂಟರ್‌ನೆಟ್ ಪಡೆಯಬಹುದಾಗಿದೆ.

ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬಳಸಲು, ಬ್ಲೂಟೂತ್, ವೈಫೈಗಳ ತೊಂದರೆ ಇಲ್ಲದೆ ನಿರಂತರವಾಗಿ ಮೊಬೈಲ್ ಡೇಟಾದ ರೀತಿ ಇಂಟರ್‌ನೆಟ್‌ನಲ್ಲಿ ಜೋತು ಬೀಳುವವರಿಗೆ ‘ಆಲ್ವೇಸ್ ಕನೆಕ್ಟೆಡ್’ ವರದಾನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.