ADVERTISEMENT

ಗಡಿಬಿಡಿ, ನೆರವಿಗೆ ಬಂದ ಓದು, ಎಡವಿದರೂ ಖುಷಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2015, 19:47 IST
Last Updated 16 ಜನವರಿ 2015, 19:47 IST

ಚಾಂಪಿಯನ್‌ ಆಗುವ ಅಚಲ ವಿಶ್ವಾಸ ಇತ್ತು. ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಿಂದ ಬಂದಿದ್ದೆವು. ಸುಲಭ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಗಡಿಬಿಡಿ ಮಾಡಿದ್ದರಿಂದ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ನಾವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದೇವೆ. ಇದರಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿಯ ಮಹಾಪೂರವೇ ದೊರಕುತ್ತದೆ.
–ಪ್ರಜ್ಞಾ ಎನ್‌.ಹೆಬ್ಬಾರ್‌, ಜೆ.ರಕ್ಷಿತ್‌ ಕುಮಾರ್‌, ಶಾರದಾ ವಿದ್ಯಾಲಯ
* * *


ಸ್ಪರ್ಧೆಗಾಗಿ ವಿಶೇಷ ಸಿದ್ಧತೆ ನಡೆಸಿರಲಿಲ್ಲ.  ಪ್ರತಿನಿತ್ಯ ‘ಪ್ರಜಾವಾಣಿ’ ಪತ್ರಿಕೆ ಓದುತ್ತಿ­ದ್ದೆವು. ಓದುವ ಹವ್ಯಾಸ ಈಗ ನೆರವಿಗೆ ಬಂತು. ಭವಿಷ್ಯದಲ್ಲಿ ಇಂತಹ ಸ್ಪರ್ಧೆಗಳನ್ನು ನಿರಂತರ­ವಾಗಿ ಆಯೋಜಿ­ಸಿದರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ.
–ಭರತ್‌ ಎಚ್.ಎನ್‌, ಕಿಶೋರ್ ಭಟ್, ಶಿವಮೊಗ್ಗ ಆದಿಚುಂಚನಗಿರಿ ಶಾಲೆಯ ‘ಬಿ’ ತಂಡ
* * *

ಇದೊಂದು ವಿಶಿಷ್ಟ ಅನು­ಭವ. ಈ ಸ್ಪರ್ಧೆ ಭವಿಷ್ಯದ ಸಾಧ­ನೆಗೆ ಪೂರಕ ಆಗಿದೆ. ದಿನಪತ್ರಿಕೆ­ಗಳನ್ನು ಓದುವ ಹವ್ಯಾಸ ನೆರ­ವಿಗೆ ಬಂದಿದೆ. ಇಲ್ಲಿನ ಪ್ರಶ್ನೆಗಳು ವೈಶಿಷ್ಟ್ಯಪೂರ್ಣ ಆಗಿವೆ.
–ಆಕಾಶ್ ವಿ, ದಿಶಾ ಎಸ್.ಹೆಗ್ಡೆ, ಧಾರವಾಡ ಶಾಂತಿಸದನ ಪ್ರೌಢಶಾಲೆ

* * *

ಸ್ಪರ್ಧೆಯಲ್ಲಿ ಪಾಲ್ಗೊಂ­ಡಿದ್ದು ತುಂಬಾ ಖುಷಿ ತಂದಿದೆ. ಈ ಸಲ ಬಹುಮಾನ ಸಿಕ್ಕಿಲ್ಲ. ಅಂದ ಮಾತ್ರಕ್ಕೆ ನಾವು ಹತಾಶ­ರಾ­ಗಿಲ್ಲ. ನಮ್ಮ

ADVERTISEMENT

ವಿಜಯ ಮುಂದೂಡಿಕೆ ಆಗಿದೆ ಅಷ್ಟೇ. ಇನ್ನಷ್ಟು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸ್ಫೂರ್ತಿ ಸಿಕ್ಕಿದೆ.
–ಹೇಮಂತ್‌ ಕೆ.ಎ, ಕೌಸ್ತುಭ್‌ ಆರ್‌. ಉಡುಪ, ಶಿವಮೊಗ್ಗ ಆದಿಚುಂಚನಗಿರಿ ಶಾಲೆಯ ಎ ತಂಡ
* * *

ಫೈನಲ್‌ನಲ್ಲಿ ಎಡವಿದೆವು.  ಆದರೆ, ಸಾವಿರಾರು ವಿದ್ಯಾ­ರ್ಥಿ­ಗ­ಳೊಂದಿಗೆ ಸ್ಪರ್ಧಿಸಿ ಅಂತಿಮ ಹಂತ ತಲುಪಿದ ಖುಷಿ ಇದೆ. ಇದೊಂದು ಸ್ಫೂರ್ತಿ­ದಾಯಕ  ಕಾರ್ಯ­ಕ್ರಮ. ಹೊಸ ದಾರಿ ತೋರಿಸಿದೆ. ಮುಂದೆ ಎಲ್ಲಾ ಕ್ವಿಜ್‌ಗಳಲ್ಲಿ ಪಾಲ್ಗೊಳ್ಳುತ್ತೇವೆ.
–ಮಿಹಿರ್ ಪ್ರಭು ಮತ್ತು ಯಶಸ್‌ ಎ.ಬಿ, ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ರಾಜಾಜಿನಗರ





ಕೆಲ ಪ್ರಶ್ನೆ, ಉತ್ತರಗಳ ಝಲಕ್‌...
* ಇಂದಿರಾ ಗಾಂಧಿ, ಛತ್ರಪತಿ ಶಿವಾಜಿ, ಸುಭಾಷ್‌ಚಂದ್ರ ಬೋಸ್‌ ಹಾಗೂ ಕೆಂಪೇಗೌಡ ಅವರ ಚಿತ್ರಗಳನ್ನು ತೋರಿಸಿ ಕನೆಕ್ಟ್‌ ಮಾಡಿ ಎಂದಾಗ ಚಕ್ಕನೇ ಬಜರ್‌ ಒತ್ತಿದ್ದು ಶಾರದಾ ವಿದ್ಯಾಲಯ ವಿದ್ಯಾರ್ಥಿಗಳು. ಇವೆಲ್ಲಾ ವಿಮಾನ ನಿಲ್ದಾಣದ ಹೆಸರು ಎಂದು ಹೇಳಲು ಅವರು ತಡ ಮಾಡಲಿಲ್ಲ.

* ಕರ್ನಾಟಕದ ಮತ್ತೂರು ಗ್ರಾಮದ ವೈಶಿಷ್ಟ್ಯವೇನು? ಯಾವ ಕಾರಣದಿಂದ ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ’ ಎಂಬ ಪ್ರಶ್ನೆಗೆ ವಿಭಿನ್ನ ಉತ್ತರ ಬಂತು. ಒಂದು ತಂಡದವರು ‘ಮದ್ದೂರು ವಡೆ’ ಎಂದರು. ಮತ್ತೊಂದು ತಂಡದವರು ‘ಸಂಸ್ಕೃತವು ಆಡುಭಾಷೆಯಾಗಿರುವ ಭಾರತದ ಕೇವಲ ಎರಡು ಗ್ರಾಮಗಳಲ್ಲಿ ಮತ್ತೂರು ಕೂಡ ಒಂದು’ ಎಂದು ಹೇಳಿ ಜಾಣ್ಮೆ ಮೆರೆದರು.

* ಷಿಕಾಗೋದ ಉದ್ಯಮಿ ಜಾರ್ಜ್‌ ಹರ್ಟ್ಸ್‌ ಅವರು ‘ಅತ್ಯಂತ ದೂರದಿಂದಲೂ ಗುರುತಿಸಲಾಗುವ ಬಣ್ಣ ಯಾವುದು’ ಎಂದು ವಿಶ್ವವಿದ್ಯಾಲಯದ ಸ್ನೇಹಿತರಲ್ಲಿ ಪ್ರಶ್ನೆ ಕೇಳಿದರು. ಅದಕ್ಕೆ ಹಳದಿ ಬಣ್ಣ ಎಂದರು. ಇದರಿಂದ ಉದ್ಭವಿಸಿದ ಫಲಿತಾಂಶವೇನು? ಎಂಬ ಪ್ರಶ್ನೆಗೆ ಸ್ಪರ್ಧಿಗಳಿಂದ ಸರಿಯಾದ ಉತ್ತರ ಬರಲಿಲ್ಲ. ಆದರೆ, ಪ್ರೇಕ್ಷಕರು ನಿರಾಸೆಗೊಳಿಸಲಿಲ್ಲ. ‘ಹಳದಿ ಬಣ್ಣದ ಟ್ಯಾಕ್ಸಿಗಳು ಚಾಲ್ತಿಗೆ ಬಂದವು’ ಎಂದು ಉತ್ತರಿಸಿದರು. ಅವರಿಗೆ ಉಡುಗೊರೆಯೂ ಲಭಿಸಿತು.

* ಟೋಕಿಯೊದ ರೆಂಕೋಜಿ ದೇಗುಲಕ್ಕೆ ಏಕೆ ಹೆಚ್ಚು ಭಾರತೀಯರು ಭೇಟಿ ನೀಡುತ್ತಾರೆ ಎಂಬ ಪ್ರಶ್ನೆಗೆ ‘ಸುಭಾಷ್‌ಚಂದ್ರ ಬೋಸ್‌ ಅವರ ಅಸ್ತಿ ಇಡಲಾಗಿದೆ ಎಂಬ ನಂಬಿಕೆ’ ಎಂಬ ಸರಿಯಾದ ಉತ್ತರ ಬಂತು.

* ಕತ್ರಿನಾ ಕೈಫ್‌, ನೀಲಂ ಸಂಜೀವ ರೆಡ್ಡಿ, ಡಯಾನಾ, ಹೆಲೆನ್‌ ಕೆಲ್ಲರ್‌ ಚಿತ್ರ ತೋರಿಸಿ ಕನೆಕ್ಟ್‌  ಮಾಡಿ ಎಂದಾಗ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳು ಥಟ್ಟನೆ ‘ಸೈಕ್ಲೋನ್‌ಗಳಿಗೆ ಇಟ್ಟಿರುವ ಹೆಸರು’ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.

* ಇವರು ಅಮೆರಿಕದಲ್ಲಿ ವ್ಯಾಸಂಗ ಮಾಡಿದ ವಕೀಲ. ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಅಮೆರಿಕ ರಾಜಕಾರಣದಲ್ಲಿ ಭಾಗಿಯಾಗಿದ್ದರು. ಅದು ಜಾನ್‌ ಎಫ್‌.ಕೆನಡಿ ಅವರ ಚುನಾವಣಾ ಪ್ರಚಾರದ ಸಮಯದಲ್ಲಿ. ಇವರು ಯಾರು ಎಂದಾಗ ‘ಎಸ್‌.ಎಂ.ಕೃಷ್ಣ’ ಎಂಬ ಸರಿ ಉತ್ತರ ಸಿದ್ಧವಿತ್ತು.

* ‘ಜಾಹೀರಾತು ಬೇಡ! ಆಟವೂ ಬೇಡ! ಗಿಮ್ಮಿಕ್‌ ಬೇಡವೇಬೇಡ!’ ಎಂದು ಕಂಪೆನಿಯ ಸಹ ಸಂಸ್ಥಾಪಕರೊಬ್ಬರು ತನ್ನ ಸಿಬ್ಬಂದಿ ವರ್ಗಕ್ಕೆ ಪತ್ರ ಬರೆದಿದ್ದರು. ಅದು ಅವರ ವ್ಯಾಪಾರದ ಮಾದರಿಯಾಗಿತ್ತು. ಆ ಸಂಸ್ಥೆ ಯಾವುದು? ಎಂಬ ಪ್ರಶ್ನೆಗೆ ಪ್ರೇಕ್ಷಕರಿಂದ ಬಂದ ಸರಿ ಉತ್ತರ ‘ವಾಟ್ಸ್‌ಆ್ಯಪ್‌’.

ಸಾಮರ್ಥ್ಯ ಅದ್ಭುತ
‘ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಷ್ಟದ ಪ್ರಶ್ನೆಗಳಿಗೂ ಉತ್ತರ ನೀಡಿ ಜಾಣ್ಮೆ ಮೆರೆದಿದ್ದಾರೆ. ವಿದ್ಯಾರ್ಥಿಗಳ ವಿಶ್ಲೇಷಣಾ ಸಾಮರ್ಥ್ಯ ಅದ್ಭುತ. ನಾವು ಕೂಡ ಹೊಸ ವಿಚಾರ ತಿಳಿದುಕೊಂಡೆವು’
–ಸಚಿನ್‌ ರವಿ,  ಕ್ವಿಜ್‌ ಮಾಸ್ಟರ್‌




ಜ್ಞಾನದ ಉತ್ಸವ....

‘ಸಾಕಷ್ಟು ಕ್ವಿಜ್‌ ಕಾರ್ಯ­ಕ್ರಮ ನಡೆಸಿಕೊಟ್ಟಿ­ದ್ದೇವೆ. ಈ ಸ್ಪರ್ಧೆ ವಿಶೇಷ ಅನುಭವ ನೀಡಿತು. ಆರು ವಲಯಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲು ಸುಮಾರು 3,200 ಕಿ.ಮೀ. ಪ್ರಯಾಣ ಬೆಳೆಸಿದೆವು. ವಿದ್ಯಾರ್ಥಿಗಳು ಕೂಡ ದೂರ­ದೂರಿನಿಂದ ರಾತ್ರಿಯಿಡೀ ನಿದ್ದೆಗೆಟ್ಟು ಪ್ರಯಾಣ ಬೆಳೆಸಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಇದೊಂದು ಜ್ಞಾನದ ಉತ್ಸವ ಎಂದು ಹೇಳಲು ಇಷ್ಟಪಡುತ್ತೇನೆ. ವಿದ್ಯಾರ್ಥಿಗಳ ಸಾಮರ್ಥ್ಯ ಅದ್ಭುತ’
–ರಾಘವ ಚಕ್ರವರ್ತಿ, ಕ್ವಿಜ್‌ ಮಾಸ್ಟರ್‌


ಚಾಂಪಿಯನ್ನರ ಬಲ, ಸೋತವರ ಛಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.