ADVERTISEMENT

ಅನುಷ್ಕಾಗೆ ಬಾಲಿವುಡ್‌ ಬೆಂಬಲ

ಕೊಹ್ಲಿ ವೈಫಲ್ಯಕ್ಕೆ ಗೆಳತಿ ಕಾರಣ ಅಲ್ಲ, ಟೀಕಾಕಾರರ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 19:39 IST
Last Updated 30 ಮಾರ್ಚ್ 2015, 19:39 IST
ಅನುಷ್ಕಾಗೆ ಬಾಲಿವುಡ್‌ ಬೆಂಬಲ
ಅನುಷ್ಕಾಗೆ ಬಾಲಿವುಡ್‌ ಬೆಂಬಲ   

ಮುಂಬೈ (ಪಿಟಿಐ): ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ಉಪನಾಯಕ ವಿರಾಟ್‌ ಕೊಹ್ಲಿ ಸತತ ವೈಫಲ್ಯ ಅನುಭವಿಸಿದ್ದಕ್ಕೆ ಅವರ ಗೆಳತಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕಾ ಪ್ರಹಾರವೇ ಹರಿದು ಬರುತ್ತಿದೆ. ಇನ್ನೊಂದೆಡೆ ಹಿಂದಿ ಚಿತ್ರರಂಗದ ನಟ, ನಟಿ ಮತ್ತು ನಿರ್ದೇಶಕರಾದಿಯಾಗಿ ಎಲ್ಲರೂ ಅನುಷ್ಕಾ  ಬೆಂಬಲಕ್ಕೆ ನಿಂತಿದ್ದಾರೆ.

‘ತನ್ನ ಪ್ರಿಯಕರನನ್ನು ಹುರಿದುಂಬಿಸುವ ಉದ್ದೇಶದಿಂದ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ತೆರಳಿದ ಆತನ ಪ್ರೇಯಸಿಯ ಬಗ್ಗೆ ಹೀಗೆ ಟೀಕಿಸುತ್ತಿರುವುದನ್ನು ಕಂಡು ತುಂಬಾ ನೋವಾಗಿದೆ. ದಯವಿಟ್ಟು ಈ ರೀತಿಯ  ಕೀಳುಮಟ್ಟದ ವರ್ತನೆಯನ್ನು ನಿಲ್ಲಿಸಿ’ ಎಂದು ನಟಿ ಪ್ರಿಯಾಂಕ ಚೋಪ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಯಾರದ್ದೋ  ವೈಫಲ್ಯಕ್ಕೆ ಅನುಷ್ಕಾ ರಂತಹ ಸಜ್ಜನ ಯುವತಿ ಯನ್ನು  ಬಲಿಪಶುಮಾಡು ವುದು ಖಂಡನೀಯ. ಅವರ ಪ್ರತಿಭೆಯನ್ನು ಎಲ್ಲರೂ ಗೌರವಿಸಬೇಕು’ ಎಂದು ನಿರ್ದೇಶಕ ಸುಭಾಷ್‌ ಘಾಯ್‌ ಟ್ವೀಟ್‌ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್‌ ‘ಪ್ರೀತಿಯ ಅನುಷ್ಕಾ, ನಿನ್ನನ್ನು

ಯಾಕೀ ಟೀಕೆ?
29 ವರ್ಷದ ಅನುಷ್ಕಾ ವಿಶ್ವಕಪ್‌ನಲ್ಲಿ ತಮ್ಮ ಪ್ರಿಯಕರ ವಿರಾಟ್‌ ಕೊಹ್ಲಿಗೆ ಬೆಂಬಲ ಸೂಚಿಸುವ ಸಲುವಾಗಿ ಸಿಡ್ನಿಗೆ ಹೋಗಿದ್ದರು. ಪಾಕಿಸ್ತಾನದ ವಿರುದ್ಧದ ಲೀಗ್‌ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೊಹ್ಲಿ ಆ ಬಳಿಕ ಪರಿಣಾಮಕಾರಿ ಆಟ ಆಡಿರಲಿಲ್ಲ. ಅದರಲ್ಲೂ ಮುಖ್ಯವಾಗಿ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಅವರು ಕೇವಲ ಒಂದು ರನ್‌ಗೆ ಔಟಾಗಿದ್ದರು. ಹೀಗಾಗಿ ಅವರ ಅಭಿಮಾನಿಗಳು ಕೊಹ್ಲಿ ವೈಫಲ್ಯಕ್ಕೆ ಅನುಷ್ಕಾ ಕಾರಣ ಎಂದು ನೇರ ಆರೋಪ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ಕಾ ಮತ್ತು ಕೊಹ್ಲಿ ಕುರಿತ ಲೇವಡಿ ವ್ಯಾಪಕವಾಗಿ ಹರಿದಾಡುತ್ತಿವೆ.

ಟೀಕಿಸುತ್ತಿರುವ ಮೂರ್ಖರ ಕುರಿತು ಕಠಿಣ ನಿಲುವು ತಾಳು’ ಎಂದು ಸಲಹೆ ನೀಡಿದ್ದಾರೆ.

‘ಅನುಷ್ಕಾ ಮತ್ತು ವಿರಾಟ್‌ ಅವರ ಕುರಿತು ಸುಖಾಸುಮ್ಮನೆ ಅರ್ಥ ರಹಿತವಾಗಿ ಟೀಕಿಸುವುದನ್ನು ನಿಲ್ಲಿಸಿ’ ಎಂದು ನಿರ್ದೇಶಕ ರಾಹುಲ್‌ ಡೋಲಾಕಿಯಾ ತಿಳಿಸಿದ್ದಾರೆ. ‘ತನ್ನ ಗೆಳೆಯ ಮತ್ತು ರಾಷ್ಟ್ರ ತಂಡವನ್ನು ಬೆಂಬಲಿಸುವ ಸಲುವಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಅನುಷ್ಕಾ ಶರ್ಮ ಅವರನ್ನು ನೋಡಿ ತುಂಬಾ ಸಂತೋಷವಾಯಿತು. ಕ್ರೀಡಾಂಧರ ಪಾಲಿಗೆ ಇದು ತಪ್ಪಾಗಿ ಕಂಡಿದ್ದಾದರೂ ಹೇಗೆ’ ಎಂದು ಮಾಜಿ ಭುವನ ಸುಂದರಿ ಮತ್ತು ನಟಿ ಸುಶ್ಮಿತಾ ಸೇನ್‌ ಟ್ವೀಟ್‌ ಮಾಡಿದ್ದಾರೆ.

‘ಕೊಹ್ಲಿ ವೈಫಲ್ಯಕ್ಕೆ ಅನುಷ್ಕಾ ಅವರನ್ನು ಟೀಕಿಸುವುದರಲ್ಲಿ ಯಾವ ಅರ್ಥವಿಲ್ಲ’ ಎಂದು ದಿಯಾ ಮಿರ್ಜಾ ಹೇಳಿದ್ದಾರೆ.  ನಟಿಯರಾದ ಸುರ್ವಿನ್‌ ಚಾವ್ಲಾ ಮತ್ತು ಸೋನಾಲ್ ಚೌಹಾಣ್‌  ಕೂಡಾ ಅನುಷ್ಕಾ ಬೆಂಬಲಕ್ಕೆ ನಿಂತಿದ್ದಾರೆ.

ಯುವಿ–ಗಂಗೂಲಿ ಬೆಂಬಲ: ಇವರ ಜತೆಗೆ ಹಾಲಿ ಮತ್ತು ಮಾಜಿ ಕ್ರಿಕೆಟಿಗರೂ  ಅನುಷ್ಕಾ ಮತ್ತು ಕೊಹ್ಲಿ ಅವರ ವೈಯಕ್ತಿಕ ಜೀವನವನ್ನು ಗೌರವಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

‘ಗೆದ್ದಾಗ ಮತ್ತು ಸೋತಾಗ ನಮ್ಮನ್ನು ಸಮಾನ ಮನಸ್ಸಿನಿಂದ ಬೆಂಬಲಿಸಿದ ಭಾರತದ ಎಲ್ಲಾ ಕ್ರಿಕೆಟ್‌ ಅಭಿಮಾನಿಗಳು ಕೊಹ್ಲಿ ಮತ್ತು ಅನುಷ್ಕಾ ಅವರ ವೈಯಕ್ತಿಕ ಬದುಕನ್ನು ಗೌರವಿಸಬೇಕು’ ಎಂದು ಯುವರಾಜ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

‘ಅನುಷ್ಕಾ ಮಾಡಬಾರದ್ದೇನು ಮಾಡಿದ್ದಾರೆ. ಇತರ ಆಟಗಾರರ ಕುಟುಂಬ ಸದಸ್ಯರಂತೆ ಅವರು ಕೂಡಾ ಪಂದ್ಯ ವೀಕ್ಷಿಸಲು ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಅಷ್ಟಕ್ಕೂ ಕೊಹ್ಲಿ ವೈಫಲ್ಯ ಅನುಭವಿಸಿದರೆ ಅವರು ತಾನೆ ಏನು ಮಾಡಲು ಸಾಧ್ಯ. ಅದಕ್ಕೆ ಅವರನ್ನು ಏಕೆ ದೂಷಿಸುತ್ತಿದ್ದೀರಿ. ಇದು ನಿಮ್ಮ ಅಪ್ರಬುದ್ಧತೆಗೆ ಹಿಡಿದ ಕೈಗನ್ನಡಿ’ ಎಂದು ಸೌರವ್‌ ಗಂಗೂಲಿ ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT