ADVERTISEMENT

ಇಂಗ್ಲೆಂಡ್‌ಗೆ ಮೆಲಾನ್‌ ಶತಕದ ಆಸರೆ

ಪಿಟಿಐ
Published 14 ಡಿಸೆಂಬರ್ 2017, 19:30 IST
Last Updated 14 ಡಿಸೆಂಬರ್ 2017, 19:30 IST
ಶತಕ ದಾಖಲಿಸಿದ ಬಳಿಕ ಸಂಭ್ರಮಿಸಿದ ಡೇವಿಡ್ ಮಲಾನ್‌
ಶತಕ ದಾಖಲಿಸಿದ ಬಳಿಕ ಸಂಭ್ರಮಿಸಿದ ಡೇವಿಡ್ ಮಲಾನ್‌   

ಪರ್ತ್‌: ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಡೇವಿಡ್ ಮೆಲಾನ್ ಚೊಚ್ಚಲ ಶತಕದ ಬಲದಿಂದ ಇಂಗ್ಲೆಂಡ್ ತಂಡವು ಗುರುವಾರ ಆರಂಭವಾದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನಿಂಗ್ಸ್ ನಲ್ಲಿ ಚೇತರಿಸಿಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. 131 ರನ್ ಗಳಿಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡ ತಂಡಕ್ಕೆ ಮೆಲಾನ್ (ಬ್ಯಾಟಿಂಗ್ 110; 174ಎ, 15ಬೌಂ, 1ಸಿ) ಅವರು ಆಸರೆಯಾದರು. ಆದರಿಂದಾಗಿ ದಿನದಾಟದ ಕೊನೆಗೆ ಇಂಗ್ಲೆಂಡ್ ತಂಡವು 89 ಓವರ್ ಗಳಲ್ಲಿ 4 ವಿಕೆಟ್ ಗಳಿಗೆ 305 ರನ್ ಗಳಿಸಿದೆ. ಮೆಲಾನ್ ಅವರೊಂದಿಗೆ ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 174 ರನ್ ಗಳಿಸಿರುವ ಜಾನಿ ಬೆಸ್ಟೊ (ಬ್ಯಾಟಿಂಗ್ 75, 149ಎ, 10ಬೌಂ) ಕ್ರೀಸ್ ನಲ್ಲಿದ್ದಾರೆ.

ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿಯೂ ಗೆದ್ದಿದೆ. ಆದ್ದರಿಂದ ಇಂಗ್ಲೆಂಡ್ ತಂಡವು ತನ್ನ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗುಳಿಸಿಕೊಳ್ಳಬೇಕಾದರೆ  ಈ ಪಂದ್ಯವನ್ನು ಜಯಿಸಲೇಬೇಕು.

ADVERTISEMENT

ಆರಂಭಿಕ ಆಘಾತ
ಇಂಗ್ಲೆಂಡ್ ಆಟಗಾರರು ಆರಂಭದಲ್ಲಿಯೇ ಆಘಾತ ಅನುಭವಿಸಿದರು. 150ನೇ ಪಂದ್ಯ ಆಡುತ್ತಿರುವ ಅಲಸ್ಟೇರ್ ಕುಕ್‌ (7, 16ಎ)   ಮಿಷೆಲ್ ಸ್ಟಾರ್ಕ್‌ ಅವರ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದರು.

ಮಾರ್ಕ್‌ ಸ್ಟೋನ್‌ಮ್ಯಾನ್‌ (56; 110ಎ, 10ಬೌಂ) ಹಾಗೂ ಜೇಮ್ಸ್ ವಿನ್ಸ್‌ (25; 63ಎ, 4ಬೌಂ) ಇಂಗ್ಲೆಂಡ್ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. ಈ ಜೋಡಿ 63 ರನ್‌ಗಳನ್ನು ಕಲೆಹಾಕಿತು. ಸ್ಟೋನ್‌ಮ್ಯಾನ್‌ 110 ಎಸೆತಗಳನ್ನು ಎದುರಿಸಿ 10 ಬೌಂಡರಿಗಳನ್ನು ದಾಖಲಿಸಿದರು.

ಆದರೆ 25ನೇ ಓವರ್‌ನಲ್ಲಿ ವಿನ್ಸ್‌ ಅವರು ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿದರು.  ಐದು ಓವರ್‌ಗಳ ಅಂತರದಲ್ಲಿ ವಿನ್ಸ್ ಕೂಡ ಜೋಶ್‌ ಹ್ಯಾಜಲ್‌ವುಡ್ ಅವರ ಎಸೆತದಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಮಧ್ಯಮಕ್ರಮಾಂಕದಲ್ಲಿ ತಂಡದ ಬಲ ಎನಿಸಿದ್ದ ನಾಯಕ ಜೋ ರೂಟ್‌ (20 ರನ್) ಅವರ ವಿಕೆಟ್‌ ಕಳೆದುಕೊಂಡಾಗ ಇಂಗ್ಲೆಂಡ್  ಆಘಾತಕ್ಕೆ ಒಳಗಾಯಿತು.

ಮೆಲಾನ್ ಆಕರ್ಷಕ ಇನಿಂಗ್ಸ್‌
131 ರನ್‌ಗಳಿಗೆ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಈ ವೇಳೆ ಕಣಕ್ಕಿಳಿದ ಮೆಲಾನ್  ಇನಿಂಗ್ಸ್ ಕಟ್ಟಿದರು. ಸೊಗಸಾದ ಡ್ರೈವ್‌ಗಳ ಮೂಲಕ ಆಸ್ಟ್ರೇಲಿಯಾದ ಬೌಲರ್‌ಗಳನ್ನು ಕಾಡಿದರು. ಸರಣಿಯಲ್ಲಿ ಪ್ರವಾಸಿ ತಂಡದ ಪರ ದಾಖಲಾದ ಮೊದಲ ಶತಕವೂ ಇದಾಗಿದೆ.

ಮಿಷೆಲ್‌ ಸ್ಟಾರ್ಕ್ (79ಕ್ಕೆ2), ಜೋಶ್‌ ಹ್ಯಾಜಲ್‌ವುಡ್‌ (62ಕ್ಕೆ1), ಪ್ಯಾಟ್ ಕಮಿನ್ಸ್‌ (60ಕ್ಕೆ1) ಉತ್ತಮ ದಾಳಿ ನಡೆಸಿದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: ಮೊದಲ ಇನಿಂಗ್ಸ್‌: 89 ಓವರ್‌ಗಳಲ್ಲಿ 4 ವಿಕೆಟ್‌ಗೆ 305 (ಮಾರ್ಕ್‌ ಸ್ಟೋನ್‌ಮ್ಯಾನ್‌ 56, ಜೇಮ್ಸ್ ವಿನ್ಸ್‌ 25, ಜೋ ರೂಟ್ 20, ಡೇವಿಡ್ ಮೆಲಾನ್‌ ಔಟಾಗದೆ 110, ಜಾನಿ ಬೇಸ್ಟೊ ಔಟಾಗದೆ 75; ಮಿಷೆಲ್‌ ಸ್ಟಾರ್ಕ್‌ 79ಕ್ಕೆ2, ಜೋಶ್‌ ಹ್ಯಾಜಲ್‌ವುಡ್‌ 62ಕ್ಕೆ1).

ಕುಕ್ 150ರ ಮೈಲುಗಲ್ಲು
ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ ಅಲಸ್ಟೇರ್ ಕುಕ್‌ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 150ನೇ ಪಂದ್ಯ ಆಡಿದ ಮೈಲುಗಲ್ಲು ಸ್ಥಾಪಿಸಿದ್ದಾರೆ. ಒಟ್ಟು 11, 698ರನ್‌ ದಾಖಲಿಸಿದ್ದಾರೆ. ಇದರಲ್ಲಿ 55 ಅರ್ಧಶತಕ ಹಾಗೂ 31 ಶತಕಗಳು ಸೇರಿವೆ. ಆಸ್ಟ್ರೇಲಿಯಾ ಎದುರಿನ ಆ್ಯಷಸ್‌ ಸರಣಿಯಲ್ಲಿ ಕುಕ್ ಕೇವಲ 69ರನ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.