ADVERTISEMENT

ಈಜು: ಅರವಿಂದ್‌ಗೆ ದಾಖಲೆಯ ಚಿನ್ನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ಎಂ. ಅರವಿಂದ್‌
ಎಂ. ಅರವಿಂದ್‌   

ರಾಂಚಿ: ಶರವೇಗದಲ್ಲಿ ಈಜಿದ ಕರ್ನಾಟಕದ ಅರವಿಂದ್‌ ಮಣಿ ಅವರು 70ನೇ ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಇದರೊಂದಿಗೆ ಕರ್ನಾಟಕ ತಂಡ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ. ಸದ್ಯ ತಂಡದ ಖಾತೆಯಲ್ಲಿ 19 ಪದಕಗಳಿವೆ. ಇದರಲ್ಲಿ 3 ಚಿನ್ನ, 7ಬೆಳ್ಳಿ ಮತ್ತು 9 ಕಂಚು ಸೇರಿದೆ. 9 ಚಿನ್ನ ಸೇರಿದಂತೆ 15 ಪದಕ ಗೆದ್ದಿರುವ ರೈಲ್ವೇಸ್‌ ತಂಡ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ.

ವೀರ್‌ ಭಗತ್‌ ಈಜು ಕೇಂದ್ರದಲ್ಲಿ ಸೋಮವಾರ ನಡೆದ  ಪುರುಷರ 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌  ಸ್ಪರ್ಧೆಯಲ್ಲಿ  ಅರವಿಂದ್‌ 2 ನಿಮಿಷ 05.46 ಸೆಕೆಂಡುಗಳಲ್ಲಿ  ಗುರಿ ಮುಟ್ಟಿದರು. ಇದರೊಂದಿಗೆ ಮಹಾರಾಷ್ಟ್ರದ ರೋಹಿತ್‌ ಹವಾಲ್ದಾರ್‌ ಅವರ ಹೆಸರಿನಲ್ಲಿದ್ದ ಮೂರು ವರ್ಷಗಳ ಹಿಂದಿನ ದಾಖಲೆ ಅಳಿಸಿ ಹಾಕಿದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ರಾಜ್ಯದ ಎನ್‌. ಶ್ರೀಹರಿ (2ನಿ.07.13ಸೆ.) ಕಂಚು ಜಯಿಸಿದರು.

ದಾಮಿನಿಗೆ ಚಿನ್ನ: ಮಹಿಳೆಯರ 100 ಮೀ. ಬಟರ್‌ಫ್ಲೈನಲ್ಲಿ ದಾಮಿನಿ ಕೆ. ಗೌಡ ಚಿನ್ನ ತಮ್ಮದಾಗಿಸಿಕೊಂಡರು. ದಾಮಿನಿ ನಿಗದಿತ ದೂರ ಕ್ರಮಿಸಲು 1 ನಿಮಿಷ 04.31 ಸೆಕೆಂಡು ತೆಗೆದುಕೊಂಡರು. ರಾಜ್ಯದವರೇ ಆದ ಮಯೂರಿ ಲಿಂಗರಾಜ್‌ (1ನಿ.05.18ಸೆ.) ಬೆಳ್ಳಿ ತಮ್ಮದಾಗಿಸಿಕೊಂಡರು. 200 ಮೀ. ಫ್ರೀಸ್ಟೈಲ್‌ನಲ್ಲಿ ದಾಮಿನಿ (2ನಿ.09.94ಸೆ.) ಕಂಚಿಗೆ ತೃಪ್ತಿಪಟ್ಟರೆ, ಹರಿಯಾಣದ ಶಿವಾನಿ ಕತಾರಿಯ (2ನಿ.06.97ಸೆ.) ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಜಯಿಸಿದರು.

ಮಹಿಳೆಯರ 4X50 ಮೀ. ಮಿಶ್ರ ರಿಲೆಯಲ್ಲಿ ಕರ್ನಾಟಕ (1ನಿ. 53.45ಸೆ.) ಬೆಳ್ಳಿಯ ಸಾಧನೆ ಮಾಡಿತು. ಗುಜರಾತ್‌ (1ನಿ.53.42ಸೆ.) ದಾಖಲೆಯೊಂದಿಗೆ ಚಿನ್ನ ಗೆದ್ದಿತು.

ಪುರುಷರ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಒಲಿಂಪಿಯನ್‌ ಈಜುಪಟು ಸಾಜನ್‌ ಪ್ರಕಾಶ್‌ (54.43ಸೆ.)ಚಿನ್ನಕ್ಕೆ ಕೊರಳೊಡ್ಡಿದರಲ್ಲದೆ,  ನೂತನ ರಾಷ್ಟ್ರೀಯ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡರು. ಮಹಿಳೆಯರ ವಾಟರ್‌ಪೊಲೊ ಸ್ಪರ್ಧೆಯಲ್ಲಿ ಕರ್ನಾಟಕ 12–0ರಿಂದ ಮಣಿಪುರ ಎದುರು ಗೆದ್ದರೆ, ಪುರುಷರ ತಂಡ 0–10ರಲ್ಲಿ ಮಹಾರಾಷ್ಟ್ರಕ್ಕೆ ಮಣಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.