ADVERTISEMENT

ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟ ಸೈನಾ

ಮಕಾವ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ; ಪರುಪಳ್ಳಿ ಕಶ್ಯಪ್‌ಗೆ ಕಾಡಿದ ನಿರಾಸೆ

ಪಿಟಿಐ
Published 1 ಡಿಸೆಂಬರ್ 2016, 19:30 IST
Last Updated 1 ಡಿಸೆಂಬರ್ 2016, 19:30 IST
ಮಕಾವ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತದ ಸೈನಾ ನೆಹ್ವಾಲ್‌ ಆಟದ ವೈಖರಿ.
ಮಕಾವ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತದ ಸೈನಾ ನೆಹ್ವಾಲ್‌ ಆಟದ ವೈಖರಿ.   

ಮಕಾವ್:  ಭಾರತದ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಮಕಾವ್ ಓಪನ್ ಗ್ರ್ಯಾನ್‌ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದಾರೆ. ಆದರೆ, ಪರಪಳ್ಳಿ ಕಶ್ಯಪ್ ಪ್ರಿಕ್ವಾರ್ಟರ್‌ಫೈನಲ್ ಹಂತದಲ್ಲಿ ಸೋತು ನಿರ್ಗಮಿಸಿದ್ದಾರೆ.

ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಸೈನಾ ನೆಹ್ವಾಲ್ 17–21, 21–18, 21–12ರಿಂದ ಇಂಡೋ ನೆಷ್ಯಾದ ದಿನಾರ ದಿಯಾ ಆಯುಸ್ಟಿನ್ ವಿರುದ್ಧ ಜಯ ಗಳಿಸಿದರು.

ವಿಶ್ವದ ಮಾಜಿ ಅಗ್ರಶ್ರೇಯಾಂಕದ ಆಟಗಾರ್ತಿಯೂ ಆಗಿರುವ ಸೈನಾ ಅವರು ಒಂದು ಗಂಟೆ ನಡೆದ ಪಂದ್ಯದಲ್ಲಿ ಎದುರಾಳಿ ಆಟಗಾರ್ತಿಯನ್ನು ಮಣಿಸಿದರು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ, ರಿಯೊ ಒಲಿಂಪಿಕ್ಸ್‌ ಸಂದರ್ಭದಲ್ಲಿ ಗಾಯಗೊಂಡಿದ್ದರು. ವಿಶ್ರಾಂತಿಯ ನಂತರ ಅವರು ಇತ್ತೀಚೆಗೆ ಚೀನಾ ಓಪನ್ ಮತ್ತು ಹಾಂಗ್‌ಕಾಂಗ್ ಓಪನ್ ಟೂರ್ನಿಗಳಲ್ಲಿ  ಫೈನಲ್ ತಲುಪಿರಲಿಲ್ಲ. ಈ ಟೂರ್ನಿಯಲ್ಲಿ ಅವರು ಇಂಡೋನೆಷ್ಯಾ ಆಟಗಾರ್ತಿಯ ಕಠಿಣ ಪೈಪೋಟಿ ಎದುರಿಸಿ ಗೆದ್ದಿದ್ದಾರೆ.

ಮೊದಲ ಗೇಮ್‌ನಲ್ಲಿ ಅವರು 11–6ರಿಂದ ಮುನ್ನಡೆಯಲ್ಲಿದ್ದ ಸೈನಾ ಅವರನ್ನು ದಿನಾರ ಹಿಂದಿಕ್ಕಿದರು. ಕೇವಲ ನಾಲ್ಕು ಅಂಕಗಳ ಅಂತರದಿಂದ ಸೋಲನುಭವಿಸಿದ ಸೈನಾ ಒತ್ತಡಕ್ಕೆ ಒಳಗಾಗಿದ್ದರು. ನಂತರ ಪುಟಿದೆದ್ದ ಅವರು ಎರಡನೇ ಗೇಮ್‌ನಲ್ಲಿ ಎದುರಾಳಿ ಆಟಗಾರ್ತಿಯ ಸವಾಲನ್ನು ದಿಟ್ಟತನದಿಂದ ಮೆಟ್ಟಿ ನಿಂತರು.

ಇದರಿಂದಾಗಿ ಮೂರನೇ ಗೇಮ್ ತೀವ್ರ ಹಣಾಹಣಿ ನಡೆಯುವ ನಿರೀಕ್ಷೆ ಮೂಡಿತ್ತು. ಆದರೆ, ಸೈನಾ ಅದಕ್ಕೆ ಅವಕಾಸ ನೀಡಲಿಲ್ಲ. ಆರಂಭದ  ಸ್ವಲ್ಪ ಹೊತ್ತು ಬಿಟ್ಟರೆ ಉಳಿದಂತೆ ಪೂರ್ಣ ಗೇಮ್‌ನಲ್ಲಿ ತಮ್ಮ ಪ್ರಾಬಲ್ಯ ಮೆರೆದರು. ಇದರಿಂದಾಗಿ ಅವರು ಒಂಬತ್ತು ಪಾಯಿಂಟ್‌ಗಳ  ಅಂತರದಿಂದ ದಿನಾ ರಗೆ ಸೋಲಿನ ರುಚಿ ತೋರಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ ಅವರು ಚೀನಾದ ಝಾಂಗ್ ವೈಮನ್ ಅವರನ್ನು ಎದುರಿಸುವರು.

ಕಶ್ಯಪ್‌ಗೆ ನಿರಾಸೆ: ಪುರುಷರ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಪರುಪಳ್ಳಿ ಕಶ್ಯಪ್ ಅವರು 13–21, 20–22ರಿಂದ  ಚೈನಿಸ್ ತೈಪೆಯ ಲಿನ್ ಯು ಸೀನ್ ವಿರುದ್ಧ ಪರಾಭವಗೊಂಡರು. 45 ನಿಮಿಷಗಳವರೆಗೆ ನಡೆದ ಪಂದ್ಯದ ಮೊದಲ ಗೇಮ್‌ನಲ್ಲಿ ಕಶ್ಯಪ್ ಎಂಟು ಪಾಯಿಂಟ್‌ಗಳ ಅಂತರದಿಂದ ಸೋಲನುಭವಿಸಿದರು.

ಆದರೆ, ಎರಡನೇ ಗೇಮ್‌ನಲ್ಲಿ ನಿಕಟ ಪೈಪೋಟಿ ಒಡ್ಡಿದರು. ಆದರೆ. ಕೇವಲ ಎರಡು ಪಾಯಿಂಟ್‌ಗಳ ಅಂತರ ದಿಂದ ಕಶ್ಯಪ್ ಸೋಲನುಭವಿಸಿದರು.   ಲಿನ್ ಯು ಅವರ ಚುರುಕಾದ ಸ್ಮ್ಯಾಷ್ ಮತ್ತು ನೆಟ್‌ ಬಳಿಯ ಕರಾರುವಾಕ್ ಆಟ ದಿಂದಾಗಿ ಕಶ್ಯಪ್ ಹಿನ್ನಡೆ ಅನುಭವಿಸಿದರು.

ಡಬಲ್ಸ್‌ನಲ್ಲಿಯೂ ನಿರಾಸೆ :  ಡಬಲ್ಸ್  ವಿಭಾಗದ ಪಂದ್ಯದಲ್ಲಿ ಮನು ಅತ್ರಿ ಮತ್ತು ಸುಮಿತ್ ರೆಡ್ಡಿ ಅವರು ಸೋಲನುಭವಿಸಿದರು. ಸಿಂಗಪುರದ ಬಾವಾ ಕ್ರಿಸಾಂಟಾ ಮತ್ತು ಹೆಂದ್ರಾ ವಿಜಾಯ 22–20, 21–19ರಿಂದ  ಭಾರತದ ಜೋಡಿಯನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.