ADVERTISEMENT

ಎಎಫ್‌ಸಿ ಫೈನಲ್ಸ್‌ಗೆ ಭಾರತ ಆತಿಥ್ಯ

ಫ್ರಾನ್ಸ್ ಜೊತೆ ಭಾರತ ಒ‍ಪ್ಪಂದ

​ಪ್ರಜಾವಾಣಿ ವಾರ್ತೆ
Published 2 ಜೂನ್ 2015, 19:30 IST
Last Updated 2 ಜೂನ್ 2015, 19:30 IST

ನವದೆಹಲಿ (ಪಿಟಿಐ): ಮುಂದಿನ ವರ್ಷ ನಿಗದಿಯಾಗಿರುವ 16ವರ್ಷದ ಒಳಗಿನ ವರ ಎಎಫ್‌ಸಿ ಫುಟ್‌ಬಾಲ್‌ ಫೈನಲ್ಸ್‌ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. ಮಂಗಳವಾರ ಏಷ್ಯಾ ಫುಟ್‌ಬಾಲ್‌ ಕಾನ್‌ಫೆಡರೇಷನ್‌ (ಎಎಫ್‌ಸಿ) ಅಧಿಕೃತವಾಗಿ ಈ ವಿಷಯವನ್ನು ಪ್ರಕಟಿಸಿದೆ. ಈ ಸಂಬಂಧ ಎಎಫ್‌ಸಿ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಪತ್ರ ಬರೆದಿದೆ.

2014ರ ಮೇ ತಿಂಗಳಿನಲ್ಲಿ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌)  ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸುವುದಕ್ಕೆ ಒಲವು ವ್ಯಕ್ತಪಡಿಸಿತ್ತು.  2017ರಲ್ಲಿ ನಡೆಯುವ 17 ವರ್ಷದ ಒಳಗಿನವರ ಫಿಫಾ ವಿಶ್ವಕಪ್‌ ಕೂಡಾ ಭಾರತದಲ್ಲೇ  ಆಯೋಜನೆ ಆಗಿರುವುದರಿಂದ ಚಾಂಪಿಯನ್‌ಷಿಪ್‌ನ ಆತಿಥ್ಯವನ್ನು ಭಾರತಕ್ಕೆ ನೀಡಲು ಎಎಫ್‌ಸಿ ಒಪ್ಪಿಗೆ ನೀಡಿದೆ.

‘17 ವರ್ಷದ ಒಳಗಿನವರ ಫಿಫಾ ವಿಶ್ವಕಪ್‌ಗೂ ಮುನ್ನ ಭಾರತದಲ್ಲಿ ಎಎಫ್‌ಸಿ ಚಾಂಪಿಯನ್‌ಷಿಪ್‌ ಆಯೋ ಜನೆಗೊಂಡಿರುವುದು ಉತ್ತಮ ಬೆಳವಣಿಗೆ. ಇದರಿಂದ ನಮ್ಮ ತಂಡದ ಆಟಗಾರರಿಗೆ ಸಾಕಷ್ಟು ಅನುಭವ ದೊರೆಯಲಿದೆ. ಜತೆಗೆ ತಮ್ಮ ಪ್ರತಿಭೆ ಯನ್ನು ಹೊರಹಾಕಲು ಇದು ಉತ್ತಮ ವೇದಿಕೆಯಾಗಲಿದೆ’ ಎಂದು ಎಐಎಫ್‌ಎಫ್‌ ಮಹಾ ಕಾರ್ಯದರ್ಶಿ ಕುಶಲ್‌ ದಾಸ್‌ ತಿಳಿಸಿದ್ದಾರೆ.

2016ರಲ್ಲಿ  ನಡೆಯುವ 19 ವರ್ಷದ ಒಳಗಿನವರ ಎಎಫ್‌ಸಿ ಚಾಂಪಿಯನ್‌ಷಿಪ್‌ ಬಹರೇನ್‌ನಲ್ಲಿ ಜರುಗಲಿದೆ.

ಫ್ರಾನ್ಸ್‌ ಜತೆ ಒಪ್ಪಂದ: ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಮಂಗಳವಾರ ಮ್ಯೂನಿಕ್‌ನಲ್ಲಿ ಫ್ರಾನ್ಸ್‌ ಫುಟ್‌ಬಾಲ್‌ ಫೆಡರೇಷನ್‌ ಜತೆ ಒಪ್ಪಂದ ಮಾಡಿಕೊಂಡಿದೆ. ಎಐಎಫ್‌ಎಫ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಎಫ್‌ಎಫ್‌ಎಫ್‌ ಜತೆಗಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

‘ಎಫ್‌ಎಫ್‌ಎಫ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದು ಖುಷಿ ನೀಡಿದೆ. ಇದರಿಂದ ಎರಡೂ ಸಂಸ್ಥೆಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗಲಿದೆ. ಜತೆಗೆ ತಾಂತ್ರಿಕವಾಗಿಯೂ ಕೆಲ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು  ಸಹಕಾರಿ ಯಾಗಲಿದೆ’ ಎಂದು ಪಟೇಲ್‌ ಹೇಳಿದ್ದಾರೆ.

ಈ ಒಪ್ಪಂದದ ಪ್ರಕಾರ ಎರಡೂ ಸಂಸ್ಥೆಗಳು ಆಡಳಿತಾತ್ಮಕ ಹಾಗೂ ಕೋಚ್‌, ರೆಫರಿಗಳ ತರಬೇತಿ ಸೇರಿದಂತೆ ಕೆಲ ಮಹತ್ವದ ವಿಚಾರಗಳಲ್ಲಿ ಪರಸ್ಪರ ಸಹಕಾರ ನೀಡಲಿವೆ.
*************
ಎಫ್‌ಎಫ್‌ಎಫ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದು ಖುಷಿ ನೀಡಿದೆ. ಇದರಿಂದ ಎರಡೂ ಸಂಸ್ಥೆಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗಲಿದೆ
-ಫ್ರಫುಲ್‌ ಪಟೇಲ್‌, ಎಐಎಫ್ಎಫ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.