ADVERTISEMENT

ಏಕದಿನ ಮಾದರಿಗೆ ವೆಟೋರಿ ವಿದಾಯ

18 ವರ್ಷಗಳ ಕ್ರಿಕೆಟ್‌ ಜೀವನಕ್ಕೆ ತೆರೆ ಎಳೆದ ನ್ಯೂಜಿಲೆಂಡ್‌ನ ಲೆಗ್‌ ಸ್ಪಿನ್ನರ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 6:33 IST
Last Updated 1 ಏಪ್ರಿಲ್ 2015, 6:33 IST
ಏಕದಿನ ಮಾದರಿಗೆ ವೆಟೋರಿ ವಿದಾಯ
ಏಕದಿನ ಮಾದರಿಗೆ ವೆಟೋರಿ ವಿದಾಯ   

ಆಕ್ಲಂಡ್‌ (ಪಿಟಿಐ/ಐಎಎನ್‌ಎಸ್‌): ಹಲವು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದ ನ್ಯೂಜಿಲೆಂಡ್‌ ತಂಡದ ಲೆಗ್‌ಸ್ಪಿನ್ನರ್‌ ಡೇನಿಯಲ್‌ ವೆಟೋರಿ ಮಂಗಳವಾರ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ.

ವೆಟೋರಿ 1997ರಲ್ಲಿ ವೆಲಿಂಗ್ಟನ್‌ನಲ್ಲಿ ನಡೆದ ಇಂಗ್ಲೆಂಡ್‌ ಎದುರಿನ ಪಂದ್ಯ ಆಡುವ ಮೂಲಕ ಟೆಸ್ಟ್‌ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. ಅದರ ಮುಂದಿನ ತಿಂಗಳಲ್ಲಿಯೇ ಶ್ರೀಲಂಕಾ ವಿರುದ್ಧ ಏಕದಿನ ಮಾದರಿಗೂ ಕಾಲಿಟ್ಟಿದ್ದರು. ಎಲ್ಲರಲ್ಲೂ ಸ್ಫೂರ್ತಿ ತುಂಬಬಲ್ಲ ನಾಯಕತ್ವದ ಗುಣ ಹೊಂದಿದ್ದ ವೆಟೋರಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಆತಿಥ್ಯದಲ್ಲಿ ಇತ್ತೀಚಿಗೆ ನಡೆದ ಹನ್ನೊಂದನೇ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರು. ಒಂಬತ್ತು ಪಂದ್ಯಗಳಿಂದ 15 ವಿಕೆಟ್‌ಗಳನ್ನು ಉರುಳಿಸಿದ್ದರು.

ವಿಶ್ವಕಪ್‌ ಬಳಿಕ ನಿವೃತ್ತಿ ಕೈಗೊಳ್ಳುವುದಾಗಿ ವೆಟೋರಿ ಮೊದಲೇ ಹೇಳಿದ್ದರು. ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದರು.  ಈ ಬೌಲರ್‌ ಈಗಾಗಲೇ ಟೆಸ್ಟ್‌ ಮತ್ತು ಟ್ವೆಂಟಿ–20 ಮಾದರಿಗೆ ನಿವೃತ್ತಿ ಹೇಳಿದ್ದಾರೆ. ವಿಶ್ವಕಪ್‌ನಲ್ಲಿ ಆಡಿ ತವರಿಗೆ ತೆರಳಿದ ಬಳಿಕ ಅವರು ನಿವೃತ್ತಿ ಘೋಷಿಸಿದರು. ಆದರೆ, ಅವರ ಕ್ರಿಕೆಟ್ ಬದುಕಿನಲ್ಲಿ ವಿಶ್ವಕಪ್‌ ಗೆಲ್ಲಲು ಆಗದ ಕೊರಗು ಕೊನೆಯವರೆಗೂ ಉಳಿದುಕೊಂಡಿತು. ಏಕೆಂದರೆ, ಕಿವೀಸ್‌ ಪಡೆ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿತ್ತು. ಆದರೆ, ಆಸ್ಟ್ರೇಲಿಯಾ ಎದುರು ಏಳು ವಿಕೆಟ್‌ಗಳ ಸೋಲು ಕಂಡಿತ್ತು.

‘ವಿಶ್ವಕಪ್‌ನ ಫೈನಲ್‌ ಪಂದ್ಯವೇ ಕೊನೆಯದ್ದು. ಬಳಿಕ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳುತ್ತೇನೆ ಎಂದು ಮೊದಲೇ ಹೇಳಿದ್ದೆ. ಆದರೆ,

‘ಇಷ್ಟು ವರ್ಷಗಳ ಕ್ರಿಕೆಟ್ ಜೀವನದಲ್ಲಿ ಹಲವು ಬಾರಿ ಗಾಯದ ಸಮಸ್ಯೆ ಕಾಡಿದೆ. ಆ ವೇಳೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು’
-ಡೇನಿಯಲ್‌ ವೆಟೋರಿ

ಟ್ರೋಫಿ ಜಯಿಸುವ ಆಸೆ ಈಡೇರಲಿಲ್ಲ. ಕಳೆದ ಆರು ವಾರ ತಂಡದ ಆಟಗಾರರ ಜೊತೆ ಕಳೆದ ಮಧುರ ಕ್ಷಣಗಳು ಎಂದಿಗೂ ಮರೆಯಲಾಗದು.  ನನಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ವೆಟೋರಿ ಹೇಳಿದ್ದಾರೆ.

‘ಹಲವು ಸಲ ಗಾಯದ ಸಮಸ್ಯೆಯಿಂದ ಬಳಲಿದ್ದೇನೆ. ಆಗ ಬ್ರೆಂಡನ್‌ ಮೆಕ್ಲಮ್ ಮತ್ತು ಮೈಕ್‌ ಹೆಸನ್‌ ಸೇರಿದಂತೆ ಸಾಕಷ್ಟು ಆಟಗಾರರು ಬೆಂಬಲವಾಗಿ ನಿಂತಿದ್ದರು’ ಎಂದು ಅವರು ಸ್ಮರಿಸಿಕೊಂಡರು. ಒಟ್ಟು 295 ಏಕದಿನ ಪಂದ್ಯಗಳಿಂದ 305 ವಿಕೆಟ್‌ಗಳನ್ನು ಪಡೆದಿದ್ದಾರೆ.

113 ಟೆಸ್ಟ್‌ ಆಡಿರುವ ನ್ಯೂಜಿಲೆಂಡ್‌ನ ಆಟಗಾರ ಒಟ್ಟು 362 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜೊತೆಗೆ ಟೆಸ್ಟ್‌ನಲ್ಲಿ ಹೆಚ್ಚು ವಿಕೆಟ್‌ ಉರುಳಿಸಿದ ಕಿವೀಸ್‌ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್‌ ಮಾದರಿಯಲ್ಲಿ 4000ಕ್ಕಿಂತಲೂ ಹೆಚ್ಚು ರನ್‌ ಮತ್ತು 300ಕ್ಕಿಂತಲೂ ಅಧಿಕ ವಿಕೆಟ್‌ ಪಡೆದ ವಿಶ್ವದ ಮೂರನೇ ಕ್ರಿಕೆಟಿಗ ಎನ್ನುವ ಕೀರ್ತಿಯೂ ವೆಟೋರಿ ಹೆಸರಿನಲ್ಲಿದೆ.

ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ (5248 ರನ್‌, 434 ವಿಕೆಟ್‌) ಮತ್ತು ಇಂಗ್ಲೆಂಡ್‌ನ ಇಯಾನ್‌ ಬಾಥಮ್‌ (5200 ರನ್‌, 383 ವಿಕೆಟ್‌) ಇತರ ಇಬ್ಬರು ಆಟಗಾರರು. 36 ವರ್ಷದ ವೆಟೋರಿ ಇತ್ತೀಚಿನ ಕೆಲ ವರ್ಷಗಳಲ್ಲಿ ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಎರಡು ದಿನಗಳ ಹಿಂದೆ ಐಸಿಸಿ ಪ್ರಕಟಿಸಿದ್ದ ವಿಶ್ವಕಪ್‌ ಇಲೆವೆನ್‌ ತಂಡದಲ್ಲಿ ಸ್ಥಾನ ಗಳಿಸಿದ್ದರು.

ವೆಟೋರಿ 2011ರಿಂದ ಕಿವೀಸ್‌ ತಂಡದ ನಾಯಕರಾಗಿದ್ದರು. 32 ಟೆಸ್ಟ್‌ ಮತ್ತು 82 ಏಕದಿನ ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ್ದಾರೆ. ಜೊತೆಗೆ, 34 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದು 38 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಬೆಂಗಳೂರು ನಂಟು
2011ರ ಐಪಿಎಲ್‌ ಆವೃತ್ತಿಗೆ ವೆಟೋರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕರಾಗಿದ್ದರು. 28 ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ್ದದಾಗ 15 ಗೆಲುವುಗಳು ಲಭಿಸಿವೆ. ಈಗ ಆರ್‌ಸಿಬಿ ತಂಡದ ಕೋಚ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಶ್ರೇಷ್ಠ ಬೌಲಿಂಗ್‌ನ ನೆನಪು
2007ರಲ್ಲಿ ನ್ಯೂಜಿಲೆಂಡ್‌ನ ಕ್ವಿನ್ಸ್‌ಟೌನ್‌ನಲ್ಲಿ ನಡೆದ ಬಾಂಗ್ಲಾದೇಶ ಎದುರಿನ ಪಂದ್ಯ ವೆಟೋರಿಗೆ ಏಕದಿನ ಮಾದರಿಯ ಸ್ಮರಣೀಯ ಪಂದ್ಯವೆನಿಸಿದೆ.

ADVERTISEMENT

ಈ ಪಂದ್ಯದಲ್ಲಿ ಆರು ಓವರ್‌ ಬೌಲಿಂಗ್ ಮಾಡಿ ಏಳು ರನ್‌ ಮಾತ್ರ ನೀಡಿದ್ದರು. ಎರಡು ಮೇಡನ್‌ ಮಾಡಿ ಐದು ವಿಕೆಟ್‌ ಉರುಳಿಸಿದ್ದರು. ಇದರಿಂದ ಬಾಂಗ್ಲಾ ತಂಡ 93 ರನ್‌ಗೆ ಆಲೌಟ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.