ADVERTISEMENT

ಐತಿಹಾಸಿಕ ಕ್ಷಣಕ್ಕೆ ಭಾರತ ಕಾತರ

ಮಹಿಳೆಯರ ವಿಶ್ವಕಪ್‌ ಕ್ರಿಕೆಟ್‌: ಪ್ರಶಸ್ತಿ ಸುತ್ತಿನ ಪಂದ್ಯ ಇಂದು

ಪಿಟಿಐ
Published 22 ಜುಲೈ 2017, 20:07 IST
Last Updated 22 ಜುಲೈ 2017, 20:07 IST
ಹೀದರ್ ನೈಟ್‌, ಮಿಥಾಲಿ ರಾಜ್‌
ಹೀದರ್ ನೈಟ್‌, ಮಿಥಾಲಿ ರಾಜ್‌   

ಲಂಡನ್‌: ಆರು ಬಾರಿಯ ವಿಶ್ವ ಚಾಂಪಿಯನ್‌ ಮತ್ತು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿದ ಭಾರತ ತಂಡಕ್ಕೆ ಈಗ ಮಹಿಳೆಯರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಇತಿಹಾಸ ರಚನೆಯ ಕಾತರ.

ಭಾನುವಾರ ಇಲ್ಲಿ ನಡೆಯಲಿರುವ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿ ಮೊದಲ ಬಾರಿ ವಿಶ್ವಕಪ್‌ ಎತ್ತಿ ಹಿಡಿಯುವ ಕಾತರದಲ್ಲಿದೆ ಮಿಥಾಲಿ ರಾಜ್ ನೇತೃತ್ವದ ತಂಡ. ಇನ್ನೊಂದೆಡೆ ತಲಾ ಮೂರು ಬಾರಿ ಚಾಂಪಿಯನ್ ಪಟ್ಟ ಮತ್ತು ರನ್ನರ್ ಅಪ್‌ ಸ್ಥಾನ ಅಲಂಕರಿಸಿರುವ ಇಂಗ್ಲೆಂಡ್‌ ತಂಡಕ್ಕೆ ಮತ್ತೊಮ್ಮೆ ಪ್ರಶಸ್ತಿಗೆ ಮುತ್ತು ನೀಡುವ ತವಕ.

ಆರಂಭದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದರೂ ನಂತರ ಎರಡು ಪಂದ್ಯ ಸೋತು ನಿರಾಸೆ ಅನುಭವಿಸಿದ್ದ ಭಾರತ ತಂಡದವರು ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯವನ್ನು ಗೆದ್ದು ಸೆಮಿಫೈನಲ್‌ ಪ್ರವೇಶಿಸಿದ್ದರು. ಚಾಂಪಿಯನ್ನರನ್ನು 36 ರನ್‌ಗಳಿಂದ ಮಣಿಸಿ ಫೈನಲ್‌ ಪ್ರವೇಶಿಸಿದ್ದರು.

ADVERTISEMENT

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಆತಿಥೇಯರೇ ಎದುರಾಳಿಗಳು. ಆದ್ದರಿಂದ ಆಸ್ಟ್ರೇಲಿಯಾ ವಿರುದ್ಧ ತೋರಿದ ಪ್ರದರ್ಶನವನ್ನು ಪುನರಾವರ್ತಿಸುವ ಲೆಕ್ಕಾಚಾರದೊಂದಿಗೆ ತಂಡ ಕಣಕ್ಕೆ ಇಳಿಯಲಿದೆ. ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 35 ರನ್‌ಗಳಿಂದ ಗೆದ್ದು ಭಾರತ ಅಭಿಯಾನ ಆರಂಭಿಸಿತ್ತು. ಅದೇ ತಂಡ ಅಂತಿಮ ಪಂದ್ಯದಲ್ಲೂ ಸವಾಲಿಗೆ ಸಜ್ಜಾಗಿದೆ.

ಕಪ್‌ ಗೆದ್ದರೆ ಭಾರತದಲ್ಲಿ ಮಹಿಳಾ ಕ್ರಿಕೆಟ್ ಹೊಸ ದಿಶೆಯಲ್ಲಿ ಹೆಜ್ಜೆ ಹಾಕಲು ನೆರವಾಗಲಿದೆ ಎಂಬುದು ಕ್ರಿಕೆಟ್ ತಜ್ಞರ ಲೆಕ್ಕಾಚಾರ. ಭಾರತ ಪುರುಷರ ತಂಡ ಇದೇ ಅಂಗಳದಲ್ಲಿ 1983ರಲ್ಲಿ ಮೊತ್ತಮೊದಲ ಬಾರಿ ವಿಶ್ವಕಪ್ ಎತ್ತಿ ಹಿಡಿದಿತ್ತು. ನಂತರ ವಿಶ್ವ ಕ್ರಿಕೆಟ್‌ನಲ್ಲಿ ಭಾರತ ತನ್ನದೇ ಛಾಪು ಮೂಡಿಸಿದೆ. ಮಹಿಳಾ ಕ್ರಿಕೆಟ್‌ನಲ್ಲೂ ಇಂಥ ಬದಲಾವಣೆಗೆ ಈ ಪಂದ್ಯ ನಾಂದಿಯಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.

ಭಾರತ ಮಹಿಳಾ ತಂಡ ಎರಡನೇ ಬಾರಿ ವಿಶ್ವಕಪ್ ಕ್ರಿಕೆಟ್‌ನ ಫೈನಲ್‌ ಪ್ರವೇಶಿಸಿದೆ. 2005ರಲ್ಲಿ ಅಂತಿಮ ಹಣಾಹಣಿಯಲ್ಲಿ ಈ ತಂಡ ಆಸ್ಟ್ರೇಲಿಯಾ ವಿರುದ್ಧ 98 ರನ್‌ಗಳಿಂದ ಸೋತಿತ್ತು. ಆಗ ತಂಡದಲ್ಲಿದ್ದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಈ ಬಾರಿಯೂ ಆಡುತ್ತಿದ್ದಾರೆ.

‘ನನಗೂ ಜೂಲನ್‌ಗೂ ಈ ಪಂದ್ಯ ಅತ್ಯಂತ ಮಹತ್ವದ್ದು. 2005ರ ಫೈನಲ್‌ ನಂತರ ಇಲ್ಲಿಯ ವರೆಗೂ ನಾವು ತಂಡದಲ್ಲಿದ್ದೇವೆ. ಈಗ ನಮ್ಮ ನೆನಪು ಹಿಂದಿನ ಬಾರಿಯ ಫೈನಲ್‌ನತ್ತ ಜಾರುತ್ತಿದೆ. ವಿಶ್ವಕಪ್‌ ಫೈನಲ್ ಆಡುತ್ತಿರುವ ತಂಡದಲ್ಲಿರುವುದರಿಂದ ಇತರ ಆಟಗಾರರು ಕೂಡ ರೋಮಾಂಚನಗೊಂಡಿದ್ದಾರೆ’ ಎಂದು ಮಿಥಾಲಿ ರಾಜ್ ಹೇಳಿದರು.

ಸಂಘಟಿತ ಪ್ರಯತ್ನ ಅಗತ್ಯ
ಫೈನಲ್‌ನಲ್ಲಿ ಗೆಲ್ಲಬೇಕಾದರೆ ಭಾರತ ತಂಡದ ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ. ಈ ಶ್ರಮಕ್ಕೆ ಬೆನ್ನೆಲುಬಾಗಿ ಮಿಥಾಲಿ ರಾಜ್‌ ಮುಂದೆ ನಿಲ್ಲಲಿದ್ದಾರೆ. ಟೂರ್ನಿಯಲ್ಲಿ ಒಟ್ಟು 392 ರನ್ ಗಳಿಸಿರುವ ಮಿಥಾಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆರಂಭದ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ವುಮನ್ ಸ್ಮೃತಿ ಮಂದಾನ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.

ಸೆಮಿಫೈನಲ್‌ನಲ್ಲಿ ಔಟಾಗದೆ 171 ರನ್ ಗಳಿಸಿದ ಹರ್ಮನ್‌ಪ್ರೀತ್ ಕೌರ್ ಮಿಂಚು ಹರಿಸಿದ್ದರು. ಸ್ಮೃತಿ ಮಂದಾನ ಫೈನಲ್‌ನಲ್ಲಿ ಮತ್ತೆ ಲಯ ಕಂಡುಕೊಳ್ಳಬೇಕಾಗಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 90 ರನ್ ಗಳಿಸಿದ್ದ ಮಂದಾನ ಅವರಿಗೆ ಎದುರಾಳಿ ಬೌಲರ್‌ಗಳ ದೌರ್ಬಲ್ಯದ ಅರಿವು ಇದೆ. ಮಿಥಾಲಿ ರಾಜ್‌ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬು. ಅವರಿಗೆ ಉತ್ತಮ ಸಹಕಾರ ನೀಡಲು ಹರ್ಮನ್‌ಪ್ರೀತ್ ಕೌರ್‌ ಇದ್ದಾರೆ.

ಬೌಲಿಂಗ್ ವಿಭಾಗದಲ್ಲಿ ವೇಗಿ ಜೂಲನ್ ಗೋಸ್ವಾಮಿ ಮತ್ತು ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್‌ ಎದುರಾಳಿ ಬ್ಯಾಟಿಂಗ್ ಪಡೆಯಲ್ಲಿ ನಡುಕ ಹುಟ್ಟಿಸಬಲ್ಲರು. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮಧ್ಯಮ ವೇಗಿ ದೀಪ್ತಿ ಶರ್ಮಾ ಕೂಡ ಇಂಗ್ಲೆಂಡ್‌ ತಂಡಕ್ಕೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದ್ದಾರೆ.

ಎದುರಾಳಿಗಳು ದುರ್ಬಲರಲ್ಲ: ಎದುರಾಳಿ ಇಂಗ್ಲೆಂಡ್ ತಂಡವನ್ನು ಕಡೆಗಣಿಸಿದರೆ ಭಾರತ ನಿರಾಸೆ ಅನುಭವಿಬೇಕಾದೀತು. ಮೊದಲ ಪಂದ್ಯದಲ್ಲಿ ಸೋತರೂ ನಂತರ ಸಾಮರ್ಥ್ಯ ಹೆಚ್ಚಿಸಿಕೊಂಡ ಆತಿಥೇಯರು ನಂತರದ ಎಲ್ಲ ಪಂದ್ಯಗಳನ್ನೂ ಗೆದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ ಸಾಧಿಸಿ ಈ ತಂಡ ಫೈನಲ್‌ ಪ್ರವೇಶಿಸಿದೆ. ಈ ಪಂದ್ಯದಲ್ಲಿ ತಂಡ ಕೊನೆಯ ವರೆಗೂ ಹೋರಾಡಿದ ರೀತಿ ಅಪೂರ್ವವಾದದ್ದು. ಫೈನಲ್‌ನಲ್ಲೂ ತಂಡ ಛಲ ಬಿಡದೆ ಹೋರಾಡುವ ಉದ್ದೇಶದಿಂದ ಅಂಗಳಕ್ಕೆ ಇಳಿಯಲಿದೆ.

ತಂಡಗಳು: ಭಾರತ: ಮಿಥಾಲಿ ರಾಜ್‌ (ನಾಯಕಿ), ಹರ್ಮನ್‌ಪ್ರೀತ್‌ ಕೌರ್‌, ವೇದಾ ಕೃಷ್ಣಮೂರ್ತಿ, ಮೋನಾ ಮೇಶ್ರಮ್‌, ಪೂನಮ್‌ ರಾವತ್‌, ದೀಪ್ತಿ ಶರ್ಮಾ, ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ, ಏಕ್ತಾ ಬಿಷ್ಠ್‌, ಸುಶ್ಮಾ ವರ್ಮಾ, ಮಾನಸಿ ಜೋಶಿ, ರಾಜೇಶ್ವರಿ ಗಾಯಕವಾಡ್‌, ಪೂನಮ್‌ ಯಾದವ್‌, ನುಶತ್ ಪರ್ವೀನ್‌, ಸ್ಮೃತಿ ಮಂದಾನ.

ಇಂಗ್ಲೆಂಡ್‌: ಹೀದರ್ ನೈಟ್‌ (ನಾಯಕಿ), ಟಾಮಿ ಬ್ಯೂಮೌಂಟ್‌, ಕ್ಯಾಥರಿನ್‌ ಬ್ರೂಂಟ್‌, ಜಾರ್ಜಿಯ ಎಲ್ವಿಸ್‌, ಜೆನಿ ಗೂನ್‌, ಅಲೆಕ್ಸ್ ಹಾರ್ಟ್ಲಿ, ಡ್ಯಾನಿಯೆಲ್ ಹಜೆಲ್‌, ಬೇತ್‌ ಲ್ಯಾಂಗ್‌ಸ್ಟನ್‌, ಲಾರಾ ಮಾರ್ಷ್‌, ಅನ್ಯಾ ಶ್ರುಬ್‌ಸೋಲೆ, ನಥಾಲಿ ಶಿವರ್‌, ಸಾರಾ ಟೇಲರ್‌, ಫ್ರಾನ್‌ ವಿಲ್ಸನ್‌, ಡ್ಯಾನಿಯೆಲ್‌ ವಿಟ್‌, ಲಾರೆನ್‌ ವಿನ್‌ಫೀಲ್ಡ್‌.
ಪಂದ್ಯ ಆರಂಭ: ಮಧ್ಯಾಹ್ನ 3 (ಭಾರತೀಯ ಕಾಲಮಾನ)

ಆಟಗಾರರಿಗೆ ತಲಾ ₹ 50 ಲಕ್ಷ ಬಹುಮಾನ
ನವದೆಹಲಿ: ಫೈನಲ್‌ ಪ್ರವೇಶಿಸಿರುವ ಮಹಿಳಾ ತಂಡದ ಆಟಗಾರ್ತಿಯರಿಗೆ ತಲಾ ₹ 50 ಲಕ್ಷ ಬಹುಮಾನ ನೀಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ. ತಂಡದ ನೆರವು ಸಿಬ್ಬಂದಿಗೆ ತಲಾ ₹ 25 ಲಕ್ಷ ನೀಡುವುದಕ್ಕೂ ಮಂಡಳಿ ಮುಂದಾಗಿದೆ.

‘ತಂಡದ ಅಪೂರ್ವ ಸಾಧನೆಗೆ ಅಭಿನಂದನೆಗಳು ಸಲ್ಲಲೇಬೇಕು. ಮಿಥಾಲಿ ರಾಜ್ ಅವರ ನೇತೃತ್ವದಲ್ಲಿ ತಂಡ ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ಆಟ ಆಡಿದೆ. ತಂಡದ ಛಲವನ್ನು ಪ್ರಪಂಚದಾದ್ಯಂತ ಎಲ್ಲರೂ ಕೊಂಡಾಡಿದ್ದಾರೆ’ ಎಂದು ಆಡಳಿತಾಧಿಕಾರಿಗಳ ಸಮಿತಿ ಅಧ್ಯಕ್ಷ ವಿನೋದ್‌ ರಾಯ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.