ADVERTISEMENT

ಐಪಿಎಲ್‌ ಬೆಟ್ಟಿಂಗ್‌: ಇನ್ನಷ್ಟು ತನಿಖೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 20:08 IST
Last Updated 22 ಏಪ್ರಿಲ್ 2014, 20:08 IST

ನವದೆಹಲಿ (ಪಿಟಿಐ): ‘ಐಪಿಎಲ್‌ ಬೆಟ್ಟಿಂಗ್‌ ಮತ್ತು ಕಳ್ಳಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸನ್‌ ಹಾಗೂ ಪ್ರಮುಖ ಆಟಗಾರರು ಸೇರಿ­ದಂತೆ 12 ಮಂದಿಯ ವಿರುದ್ಧ  ತನಿಖೆ ಮುಂದುವರಿಸಲು ಸಿದ್ದ’ ಎಂದು ಮುಕುಲ್‌ ಮುದ್ಗಲ್‌ ತಿಳಿಸಿದ್ದಾರೆ.

ತನಿಖೆ ಮುಂದುವರಿಸುವ ಕುರಿತು ಸುಪ್ರೀಂ ಕೋರ್ಟ್‌ ಮಂಗಳವಾರ ಸಮಿತಿಯ ಅಭಿಪ್ರಾಯ ಕೇಳಿದ ಬೆನ್ನಲ್ಲೇ ಅವರು  ತಮ್ಮ ಈ ನಿರ್ಧಾರ  ಪ್ರಕಟಿಸಿದ್ದಾರೆ.

‘ನಾವು ನಮ್ಮ ನಿರ್ಧಾರವನ್ನು ತಿಳಿಸಿದ್ದೇವೆ. ಏಪ್ರಿಲ್‌ 29 ರಂದು ನಡೆಯುವ  ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌  ನಿರ್ಧಾರ ಕೈಗೊಳ್ಳಲಿದೆ’ ಎಂದು  ಮುದ್ಗಲ್‌ ತಿಳಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ ಈ ಸಮಿತಿ­ಯನ್ನು ಮುಂದುವರಿಸಲು ಒಪ್ಪಿದರೆ,  ಸಮಿತಿಯ ಸದಸ್ಯರೆಲ್ಲಾ ಒಂದೆಡೆ ಸೇರಿ ಮುಂದಿನ ನಡೆಗಳ ಬಗ್ಗೆ  ಯೋಜನೆ ರೂಪಿಸುತ್ತೇವೆ.  ಜೊತೆಗೆ  ಸಮಿತಿ­ಯಲ್ಲಿ ಹೊಸದಾಗಿ ಯಾರನ್ನಾದರೂ  ಸೇರಿಸಿ­ಕೊಳ್ಳಬೇಕೆ, ಬೇಡವೇ ಎಂಬು­ದನ್ನೂ ನಿರ್ಧರಿಸಲಿದ್ದೇವೆ’ ಎಂದು  ಮುದ್ಗಲ್‌ ಹೇಳಿದ್ದಾರೆ.

ಐಪಿಎಲ್‌ ಕಳ್ಳಾಟ ಪ್ರಕರಣಕ್ಕೆ ಸಂಬಂಧಿ­ಸಿದಂತೆ ಮಂಗಳವಾರ ವಿಚಾರಣೆ ನಡೆಯಿತು. ಈ ವೇಳೆ ಶ್ರೀನಿವಾಸನ್‌ ಸೇರಿದಂತೆ ಇತರ 12 ಮಂದಿಯ ಕುರಿತು  ಹೆಚ್ಚಿನ  ತನಿಖೆ ನಡೆಸಲು ಮುದ್ಗಲ್‌ ಸಮಿತಿ ಸಿದ್ಧವಿದ್ದರೆ,  ತನಿಖಾ ಸಂಸ್ಥೆಗಳ ಸಹಕಾರ ಒದಗಿಸಲಾಗುವುದು ಎಂದು ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್‌  ಅವರಿದ್ದ ಏಕಸದಸ್ಯ ಪೀಠ ಹೇಳಿತು.

ಈ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲು  ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ, ಕೋಲ್ಕತ್ತ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎನ್‌.ಪಟೇಲ್‌ ಹಾಗೂ ಮಾಜಿ ಸಿಬಿಐ  ನಿರ್ದೇಶಕ ಆರ್‌.ಕೆ.ರಾಘವನ್‌  ಅವರನ್ನೊಳಗೊಂಡ  ತ್ರಿಸದಸ್ಯ ಸಮಿತಿಯನ್ನು ರಚಿಸಿರುವುದಾಗಿ  ಬಿಸಿಸಿಐ ವಿಚಾರಣೆ ವೇಳೆ   ಸುಪ್ರೀಂ ಕೋರ್ಟ್‌ಗೆ ತಿಳಿಸಿತು. 

ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರ ವಾದವನ್ನು ಆಲಿಸಲಿದ್ದು,   ಈ ಸಂಬಂಧ ಮುದ್ಗಲ್‌ ಸಮಿತಿ ನೀಡುವ ಪ್ರತಿಕ್ರಿಯೆಯನ್ನು ಆಧರಿಸಿ ಮುಂದಿನ  ಆದೇಶ ಹೊರಡಿಸುವುದಾಗಿ  ಹೇಳಿತು.

ಜೊತೆಗೆ ಮುದ್ಗಲ್‌ ಸಮಿತಿಯು  ಪ್ರಾಥಮಿಕ ತನಿಖೆಯ ವೇಳೆ ಶ್ರೀನಿವಾಸನ್‌, ದೋನಿ ಮತ್ತು  ಐಪಿಎಲ್‌ ಏಳನೇ ಆವೃತ್ತಿಯ  ಸಿಒಒ ಸುಂದರ ರಾಮನ್‌ ಜೊತೆ ನಡೆಸಿದ್ದ ಮಾತುಕತೆಯ  ವಿವರವನ್ನು   ಒಳಗೊಂಡ  ಧ್ವನಿ ಮುದ್ರಿಕೆಗಳನ್ನು  ಆಲಿಸಲು    ಬಿಸಿಸಿಐ ಹಾಗೂ ಶ್ರೀನಿವಾಸನ್‌ಗೆ ಅವಕಾಶ ನೀಡಲು ಪೀಠ ಒಪ್ಪಿಗೆ ಸೂಚಿಸಿತು.

ಸುಪ್ರೀಂ ಕೋರ್ಟ್‌ನ ಮಹಾ ಕಾರ್ಯದರ್ಶಿ ಬಿಸಿಸಿಐ ಹಾಗೂ  ಎನ್‌.ಶ್ರೀನಿವಾಸನ್‌  ಅವರ ವಕೀಲರಿಗೆ  ಧ್ವನಿ ಮುದ್ರಿಕೆ   ಆಲಿಸುವ ವ್ಯವಸ್ಥೆ ಮಾಡಲಿ­ದ್ದಾರೆ.   ಕಾರ್ಯದರ್ಶಿ­ಯವರಿಗೆ  ತನಿಖಾ ಸಮಿತಿ, ಧ್ವನಿ ಮುದ್ರಿಕೆಯನ್ನು  ಒದಗಿಸಬೇಕು ಎಂದೂ ಪೀಠ ಆದೇಶಿಸಿತು.

ಧ್ವನಿ ಮುದ್ರಿಕೆ ಆಲಿಸುವ ವೇಳೆ ಮಹಾ ಕಾರ್ಯದರ್ಶಿಯವರು ಉಪಸ್ಥಿತರಿ­ರಲಿದ್ದು, ಶ್ರೀನಿವಾಸನ್‌ ಪರವಾಗಿ  ವಕೀಲ ಅಮಿತ್‌ ಸಿಬಲ್‌ ಹಾಗೂ ಬಿಸಿಸಿಐ ಪರವಾಗಿ ವಕೀಲೆ ರೋಹಿಣಿ ಮುಸಾ ಭಾಗವಹಿಸಲಿದ್ದಾರೆ.
‘ಧ್ವನಿ ಮುದ್ರಿಕೆಯಲ್ಲಿರುವ ವಿವರಗಳ  ಗೌಪ್ಯತೆ  ಕಾಪಾಡಿಕೊಳ್ಳಬೇಕು. ಜೊತೆಗೆ ಇದರಲ್ಲಿರುವ ಅಂಶಗಳನ್ನು  ಯಾವುದೇ ಕಾರಣಕ್ಕೂ   ಸೋರಿಕೆ ಮಾಡಕೂಡದು’ ಎಂದು ಬಿಸಿಸಿಐ ಹಾಗೂ ಶ್ರೀನಿವಾಸನ್‌ಗೆ  ಸುಪ್ರೀಂ ಕೋರ್ಟ್‌  ಕಟ್ಟು ನಿಟ್ಟಾಗಿ ಸೂಚಿಸಿದೆ.

‘ಧ್ವನಿ ಮುದ್ರಿಕೆಯಲ್ಲಿರುವ  ಯಾವು­ದಾದರೂ ವಿವರ ಸೋರಿಕೆಯಾದರೆ, ಅದು ದೇಶದಲ್ಲಿ  ಕ್ರಿಕೆಟ್‌ಗೆ ಕಳಂಕ  ಉಂಟುಮಾಡಿದಂತೆ’ ಎಂದು ಪೀಠ ಹೇಳಿದೆ.

ಪ್ರಕರಣದ ಸಂಬಂಧ ಈ ಹಿಂದೆ ಸುದೀರ್ಘ ಕಾಲ ಪ್ರಾಥಮಿಕ ತನಿಖೆ ನಡೆಸಿದ್ದ ಮುಕುಲ್‌ ಮುದ್ಗಲ್‌ ಸಮಿತಿ, ಮುಚ್ಚಿದ ಲಕೋಟೆಯಲ್ಲಿ  ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. 

ಏ.16 ರಂದು ನಡೆದ ವಿಚಾರಣೆ ವೇಳೆ ಸಮಿತಿ ನೀಡಿದ್ದ ಲಕೋಟೆಯನ್ನು ತೆರೆದಿದ್ದ  ಸುಪ್ರೀಂ ಕೋರ್ಟ್‌, ಅದರಲ್ಲಿ ಎನ್‌.ಶ್ರೀನಿವಾಸನ್‌ ಹಾಗೂ ಪ್ರಮುಖ ಆಟಗಾರರು ಸೇರಿದಂತೆ ಒಟ್ಟು   12 ಮಂದಿಯ ಹೆಸರಿರುವುದಾಗಿ  ತಿಳಿಸಿತ್ತು. ಆದರೆ ಲಕೋಟೆಯಲ್ಲಿರುವ ಪ್ರಮುಖ ಆಟಗಾರರ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿತ್ತು.

ಲಲಿತ್‌ ಮೋದಿ ಸ್ವಾಗತ
‘ಸುಪ್ರೀಂ ಕೋರ್ಟ್‌ ಮುದ್ಗಲ್‌ ಸಮಿತಿಗೆ ವಿಚಾರಣೆ  ಮುಂದುವರಿಸುವ ಅವಕಾಶ ನೀಡಿ ರುವುದು ಸ್ವಾಗತಾರ್ಹ ಬೆಳವಣಿಗೆ’ ಎಂದು  ಲಲಿತ್‌ ಮೋದಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT