ADVERTISEMENT

‘ಕೊಹ್ಲಿ ಕ್ರೀಡಾ ಲೋಕದ ಟ್ರಂಪ್‌’ ಎಂದು ಆಸ್ಟ್ರೇಲಿಯಾ ಮಾಧ್ಯಮಗಳ ಬಣ್ಣನೆ: ಅಮಿತಾಬ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 14:35 IST
Last Updated 22 ಮಾರ್ಚ್ 2017, 14:35 IST
ಅಮಿತಾಬ್
ಅಮಿತಾಬ್   

ನವದೆಹಲಿ: ಆಸ್ಟ್ರೇಲಿಯಾ ದಿನಪತ್ರಿಕೆಯಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರೊಂದಿಗೆ ಹೋಲಿಸಿ ಸುದ್ದಿ ಪ್ರಕಟಿಸಿದ್ದನ್ನು ವಿರೋಧಿಸಿ ಬಾಲಿವುಡ್‌ ಹಿರಿಯ ನಟ ಅಮಿತಾಬ್‌ ಬಚ್ಚನ್‌ ತಿರುಗೇಟು ನೀಡಿದ್ದಾರೆ.

‘ವಿರಾಟ್‌ ಕೊಹ್ಲಿ ಕ್ರಿಕೆಟ್‌ ಲೋಕದಲ್ಲಿ ತಮ್ಮಿಚ್ಛೆಯಂತೆ ನೀತಿ ನಿಯಮಗಳನ್ನು ರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ’ ಎಂದು ಆರೋಪಿಸಿ ಸುದ್ದಿ ಪ್ರಕಟಿಸಿದ್ದ ಅಸ್ಟ್ರೇಲಿಯಾ ದಿನಪತ್ರಿಕೆಯೊಂದು, ‘ವಿರಾಟ್‌ ಕೊಹ್ಲಿ ಕ್ರೀಡಾಲೋಕದ ಡೊನಾಲ್ಡ್‌ ಟ್ರಂಪ್‌ ಆಗುತ್ತಿದ್ದಾರೆ’ ಎಂದು ಟೀಕಿಸಿತ್ತು.

ಟೀಕೆಯನ್ನು ಸ್ವಾಗತಿಸಿರುವ ಅಮಿತಾಬ್‌ ‘ಹೌದು ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದೇನೆ. ವಿರಾಟ್‌ ಹಾಗೂ ಡೊನಾಲ್ಡ್‌ ಟ್ರಂಪ್‌ ಇಬ್ಬರೂ ವಿಜಯಿಗಳು’ ಎಂದು ತಮ್ಮದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ.

ADVERTISEMENT

ವಿರಾಟ್ ಕೊಹ್ಲಿ ರಾಂಚಿ ಟೆಸ್ಟ್‌(ಮೂರನೇ ಟೆಸ್ಟ್‌) ವೇಳೆ ಕೆಲವು ಆಸ್ಟ್ರೇಲಿಯಾ ಆಟಗಾರರು ನಮ್ಮ ತಂಡದ ಫಿಸಿಯೊ (ದೈಹಿಕ ತರಬೇತುದಾರ) ಪ್ಯಾಟ್ರಿಕ್‌ ಪರ್ಹಾತ್‌ ಅವರೊಂದಿಗೆ ಅಗೌರವದಿಂದ ನಡೆದುಕೊಂಡಿದ್ದರು ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ಮಾಧ್ಯಮಗಳು ವಿರಾಟ್‌ ವಿರುದ್ಧ ಸರಣಿ ಟೀಕೆ ಮಾಡಿದ್ದವು.

ಆರಂಭದಿಂದಲೂ ವಿವಾದಗಳಿಂದಲೇ ಸುದ್ಧಿ ಮಾಡುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಉಭಯ ತಂಡಗಳು ಮೊದಲೆರಡು ಪಂದ್ಯಗಳಲ್ಲಿ ತಲಾ ಒಂದೊಂದು ಜಯ ಗಳಿಸಿ ಸಮಬಲ ಸಾಧಿಸಿವೆ. ಮೂರನೇ ಟೆಸ್ಟ್‌ ಡ್ರಾ ನಲ್ಲಿ ಅಂತ್ಯವಾಗಿತ್ತು.

ಧರ್ಮಶಾಲಾದಲ್ಲಿ ನಡೆಯಲಿರುವ ನಾಲ್ಕನೇ ಹಾಗೂ ಕೊನೆಯ ಪಂದ್ಯ ಸಾಕಷ್ಟು ಕುತೂಹಲ ಉಂಟುಮಾಡಿದ್ದು ಸರಣಿ ಜಯಿಸಲು ಉಭಯ ತಂಡಗಳು ಕಠಿಣ ಪ್ರಯತ್ನ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.