ADVERTISEMENT

ಕೊಹ್ಲಿ ಪ್ರಮುಖ ಆಕರ್ಷಣೆ

ಕ್ರಿಕೆಟ್‌: ಆಸ್ಟ್ರೇಲಿಯಾ ‘ಎ’ ಎದುರು ಇಂದಿನಿಂದ ಪಂದ್ಯ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಚೆನ್ನೈ (ಪಿಟಿಐ): ಇಲ್ಲಿಯ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿಯೇ ಪ್ರಮುಖ ಆಕರ್ಷಣೆ.

ಬುಧವಾರ ಇಲ್ಲಿ ಆರಂಭವಾಗ ಲಿರುವ ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ‘ಎ’ ನಡುವಣ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ.  ಅವರಿಗಾಗಿ ಯಾರು ಜಾಗ ತೆರವು ಮಾಡಲಿದ್ದಾರೆಂ ಬುದು ಬುಧವಾರ ಬೆಳಿಗ್ಗೆ ತಿಳಿಯಲಿದೆ.

ಆಗಸ್ಟ್ 12ರಿಂದ ಶ್ರೀಲಂಕಾದಲ್ಲಿ ಮೂರು ಟೆಸ್ಟ್‌ಗಳ ಸರಣಿಯನ್ನು ಭಾರತ ಆಡಲಿದೆ.  ಅದರ ಪೂರ್ವಸಿದ್ದತೆಗಾಗಿ ವಿರಾಟ್ ಈ ಪಂದ್ಯದಲ್ಲಿ ಆಡುತ್ತಿದ್ದಾರೆ.

ಎರಡು ‍ಪಂದ್ಯಗಳ ಸರಣಿಯಲ್ಲಿ ಮೊದಲನೆಯ ಪಂದ್ಯ ಡ್ರಾ ಆಗಿದೆ. ಎರಡನೆಯ ಪಂದ್ಯವನ್ನು ಗೆದ್ದು 1–0 ಯಿಂದ ಸರಣಿ ಕೈವಶ ಮಾಡಿಕೊಳ್ಳುವ ಯತ್ನದಲ್ಲಿರುವ ಭಾರತಕ್ಕೆ ವಿರಾಟ್ ಕೊಹ್ಲಿ ಬಲ ತುಂಬುವ ನಿರೀಕ್ಷೆ ಇದೆ.

ಮೊದಲ ಪಂದ್ಯದಲ್ಲಿ ಚಿದಂಬರಂ ಮೈದಾನದ ಪಿಚ್ ವೇಗದ ಬೌಲರ್‌ ಗಳಿಗೆ ಹೆಚ್ಚು ಸಾಥ್ ನೀಡಿರಲಿಲ್ಲ.  ಕೊನೆಯ  ಮೂರು ದಿನಗಳಲ್ಲಿ ಸ್ಪಿನ್ನರ್‌ಸ್ನೇಹಿ ಪಿಚ್‌ನಲ್ಲಿ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಮತ್ತು ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಮಿಂಚಿದ್ದರು.  ಆದರೆ ಇದರಲ್ಲಿ ಮಿಂಚಿದ್ದ ಸ್ಪಿನ್ನರ್‌ಗಳಾದ ಪ್ರಗ್ಯಾನ್ ಓಜಾ (6 ವಿಕೆಟ್) ಮತ್ತು ಅಮಿತ್ ಮಿಶ್ರಾ (5 ವಿಕೆಟ್) ಭರ್ಜರಿ ವಿಕೆಟ್ ಬೇಟೆ ಆಡಿದ್ದರು.

ಆರಂಭಿಕ ಬ್ಯಾಟ್ಸ್‌ಮನ್, ಕರ್ನಾಟಕದ ಕೆ.ಎಲ್. ರಾಹುಲ್ (96 ರನ್) ಕೇವಲ  ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡಿದ್ದರು. ನಾಯಕ ಚೇತೇಶ್ವರ್ ಪೂಜಾರ, ವಿಜಯ್ ಶಂಕರ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಮಿಂಚಿದ್ದರು.   ಈ ಪಂದ್ಯದಲ್ಲಿಯೂ ಪೂಜಾರ ಮತ್ತು ರಾಹುಲ್ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಮಂಗಳವಾರ ತಂಡದ ಕೋಚ್ ರಾಹುಲ್ ದ್ರಾವಿಡ್ ಎಲ್ಲ ಆಟಗಾರರಿಗೂ ಕಠಿಣ ಅಭ್ಯಾಸ ಮಾಡಿಸಿದ್ದಾರೆ. ಎರಡೂ ತಂಡಗಳ ಬಲಾಬಲವನ್ನು ನೋಡಿದರೆ ಆತಿಥೇ ಯರೇ ಬಲಾಢ್ಯರಾಗಿ ಕಾಣುತ್ತಾರೆ.

ಉಸ್ಮಾನ್ ಕ್ವಾಜಾ ನೇತೃತ್ವದ ಪ್ರವಾಸಿ ತಂಡವು ತನ್ನ ವೇಗದ ಬೌಲರ್‌ಗಳ ಮೇಲೆ ಹೆಚ್ಚು ಅವಲಂಬನೆ ಹೊಂದಿದೆ. ಆದರೆ, ಕಳೆದ ಪಂದ್ಯದಲ್ಲಿ ಅವರ ತಂಡದ ಎಡಗೈ ಸ್ಪಿನ್ನರ್ ಸ್ಟೀಫನ್ ಒಕೀಫ್ ಯಶಸ್ವಿ ಬೌಲರ್ ಆಗಿದ್ದರು. ಎರಡೂ ಇನಿಂಗ್ಸ್‌ ಸೇರಿ ಒಟ್ಟು ಎಂಟು ವಿಕೆಟ್‌ ಗಳಿಸಿದ್ದರು.  ಭಾರತೀಯ ಮೂಲದ ಬೌಲರ್ ಗುರೀಂದರ್ ಸಿಂಗ್ ಸಂಧು ಗಮನ ಸೆಳೆಯುವ ಬೌಲಿಂಗ್ ಮಾಡಿದ್ದರು. ಇದರಿಂದಾಗಿ ಪಿಚ್‌ ಅವಲೋಕಿಸಿದ ನಂತರ ಉಸ್ಮಾನ್ ಕ್ವಾಜಾ ತಮ್ಮ ತಂಡದಲ್ಲಿ ಮತ್ತೊಬ್ಬ ಸ್ಪಿನ್ನರ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಆಷ್ಟನ್ ಆಗರ್ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಬ್ಯಾಟಿಂಗ್ ಶಕ್ತಿ ಕೂಡ ಕಳೆದ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಆಡಿ ರಲಿಲ್ಲ. ನಾಯಕ ಉಸ್ಮಾನ್ ಸೇರಿದಂತೆ ಆರಂಭಿಕ ಬ್ಯಾಟ್ಸ್‌ಮನ್‌ಗಳು  ಉತ್ತಮ ಆರಂಭ ನೀಡುವಲ್ಲಿ ವಿಫಲರಾಗಿದ್ದರು.  ಈ ಎಲ್ಲ ಲೋಪಗಳನ್ನು ಸರಿಪಡಿಸಿ ಕೊಂಡು ಆತಿಥೇಯರನ್ನು ಎದುರಿಸುವ ಸವಾಲು ಆಸ್ಟ್ರೇಲಿಯಾ ‘ಎ’ ತಂಡದ ಮುಂದೆ ಇದೆ.

ಮುಖ್ಯವಾಗಿ ಭಾರತದ ಬ್ಯಾಟಿಂಗ್ ಬಲವನ್ನು ಕಟ್ಟಿಹಾಕುವ ಕಠಿಣ ಸವಾಲನ್ನು ಎದುರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.