ADVERTISEMENT

ಕ್ರಿಕೆಟ್‌ಗೆ ಟೈಟ್‌ ವಿದಾಯ

ಏಜೆನ್ಸೀಸ್
Published 27 ಮಾರ್ಚ್ 2017, 19:20 IST
Last Updated 27 ಮಾರ್ಚ್ 2017, 19:20 IST
ಆಸ್ಟ್ರೇಲಿಯಾದ ವೇಗದ ಬೌಲರ್‌ ಶಾನ್‌ ಟೈಟ್
ಆಸ್ಟ್ರೇಲಿಯಾದ ವೇಗದ ಬೌಲರ್‌ ಶಾನ್‌ ಟೈಟ್   

ಮೆಲ್ಬರ್ನ್‌: ಸುದೀರ್ಘ ಕಾಲದಿಂದ ಮೊಣಕೈ ನೋವಿನಿಂದ ಬಳಲಿದ್ದ ವಿಶ್ವದ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಶಾನ್‌ ಟೈಟ್‌ ಅವರು ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಅಡಿಲೇಡ್‌ನವರಾದ 34 ವರ್ಷದ ಶಾನ್‌ ಟೈಟ್‌ 2005ರಲ್ಲಿ ನಾಟಿಂಗ್ ಹ್ಯಾಮ್‌ನಲ್ಲಿ ನಡೆದ ಇಂಗ್ಲೆಂಡ್‌ ಎದುರಿನ ಪಂದ್ಯ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2008ರಲ್ಲಿ ಪರ್ತ್‌ನಲ್ಲಿ ಭಾರತ ವಿರುದ್ಧ ತಮ್ಮ ಕೊನೆಯ ಟೆಸ್ಟ್‌ ಆಡಿದ್ದರು. 2010ರಲ್ಲಿ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಗಂಟೆಗೆ 161.1 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು.

ಟೈಟ್‌ ಐದು ವರ್ಷ ರಾಷ್ಟ್ರೀಯ ಏಕದಿನ ತಂಡದಲ್ಲಿದ್ದರು. 2007ರಲ್ಲಿ ಇಂಗ್ಲೆಂಡ್‌ ಎದುರು ಮೊದಲ ಪಂದ್ಯವಾಡಿದ್ದ ಅವರು 2011ರಲ್ಲಿ ಅಹಮದಾಬಾದ್‌ನಲ್ಲಿ ಭಾರತ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವಾಡಿದ್ದರು.

ADVERTISEMENT

ಹೋದ ವರ್ಷ ಭಾರತ ವಿರುದ್ಧ ನಡೆದ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ ಆಡಿದ್ದರು. ಇದು ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದೆ.  ಇದಕ್ಕೂ ಐದು ವರ್ಷಗಳ ಹಿಂದೆ ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. 2016–17ರ ಬಿಗ್ ಬ್ಯಾಷ್‌ ಲೀಗ್‌ನಲ್ಲಿ  ಹೋಬರ್ಟ್‌ ಹರಿಕೇನ್ಸ್ ತಂಡದಲ್ಲಿ ಆಡಿದ್ದರು. ಇದು ಟೈಟ್ ಅವರ ಕೊನೆಯ ಸ್ಪರ್ಧಾತ್ಮಕ ಪಂದ್ಯವಾಗಿತ್ತು.

‘ಪ್ರಾಮಾಣಿಕವಾಗಿ ಹೇಳುವುದಾದರೆ  ಇನ್ನಷ್ಟು ವರ್ಷ ಆಡುವ ಆಸೆಯಿತ್ತು. ಆದರೆ ಪದೇ ಪದೇ ಗಾಯದ ಸಮಸ್ಯೆ  ಕಾಡಿತು. ಮೈದಾನದಲ್ಲಿದ್ದಾಗ ಉತ್ತಮವಾಗಿ ಸಾಮರ್ಥ್ಯ ತೋರಿಸಲು ಸಾಧ್ಯವಾಗದೇ ಇದ್ದರೆ ಬೇಸರ ಕಾಡುತ್ತದೆ. ಆದ್ದರಿಂದ ನಿವೃತ್ತಿ ನಿರ್ಧಾರಕ್ಕೆ ಬಂದೆ’ ಎಂದು ಟೈಟ್ ಹೇಳಿದ್ದಾರೆ.

ಕಾಂಗರೂಗಳ ನಾಡಿನ ದೇಶಿ ಟೂರ್ನಿಯಲ್ಲಿ ಅಡಿಲೇಡ್‌ ಸ್ಟ್ರೈಕರ್ಸ್‌, ಹೋಬರ್ಟ್‌ ಹರಿಕೇನ್ಸ್‌, ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಚಿತ್ತಗಾಂಗ್ ಕಿಂಗ್ಸ್‌, ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ಹೀಗೆ ವಿವಿಧ ಟೂರ್ನಿಗಳಲ್ಲಿ ಟೈಟ್‌ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.