ADVERTISEMENT

ಕ್ರಿಕೆಟ್‌: ದಕ್ಷಿಣ, ಪಶ್ಚಿಮ ವಲಯಗಳಿಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 28 ಮೇ 2016, 19:30 IST
Last Updated 28 ಮೇ 2016, 19:30 IST

ಶಿವಮೊಗ್ಗ: ಮಧ್ಯಮ ವೇಗದ ಬೌಲರ್‌ ಮಹಮದ್‌ ರಫಿ ಅವರ ಅಮೋಘ ಬೌಲಿಂಗ್‌ (38ಕ್ಕೆ6), ಎನ್‌ಸಿಎ ಅಂತರ ವಲಯ ಕ್ರಿಕೆಟ್‌ (19 ವರ್ಷದೊಳಗಿನವರ) ಟೂರ್ನಿಯ ಲೀಗ್‌ ಪಂದ್ಯದಲ್ಲಿ ಆಕರ್ಷಣೆಯ ಅಂಶ ಎನಿಸಿತು. ದಕ್ಷಿಣ ವಲಯ ಶನಿವಾರ ನಿರೀಕ್ಷೆಯಂತೆ ‘ಡ್ರಾ’ ಆದ ಈ ಎರಡು ದಿನಗಳ ಪಂದ್ಯದಲ್ಲಿ 102 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಿತು.

ನಗರದ ನವುಲೆಯ ಕೆಎಸ್‌ಸಿಎ (2) ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ವಲಯದ 304 ರನ್‌ಗಳಿಗೆ ಉತ್ತರವಾಗಿ ಉತ್ತರ ವಲಯದ (ಶುಕ್ರವಾರ: 3 ವಿಕೆಟ್‌ಗೆ 19) ಮೊದಲ ಇನಿಂಗ್ಸ್‌ 202 ರನ್‌ಗಳಿಗೆ ಕೊನೆಗೊಂಡಿತು.

ಪ್ರದೀಪ್ ಯಾದವ್ (3ಸಿಕ್ಸರ್‌,7 ಬೌಂಡರಿಗಳಿದ್ದ 57) ಮತ್ತು ವಿಶ್ವಾಸ್ ಮಲಿಕ್ (32) ನಡುವಣ 9ನೇ ವಿಕೆಟ್‌ಗೆ 70 ರನ್‌ ಸೇರಿಸಿದ್ದರಿಂದ ಉತ್ತರ ವಲಯ ಶೋಚನೀಯ ಸ್ಥಿತಿಯಿಂದ ಕೊಂಚ ಚೇತರಿಸಿತು. ಮೊದಲ ದಿನದ ಕೊನೆಗೆ 3 ವಿಕೆಟ್‌ ಪಡೆದಿದ್ದ ಮಹಮದ್‌ ರಫಿ ಎರಡನೇ ದಿನ ಮತ್ತೆ ಮೂರು ವಿಕೆಟ್‌ ಕಬಳಿಸಿ ಗಮನ ಸೆಳೆದರು.

ದಕ್ಷಿಣ ವಲಯ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 57 ರನ್‌ ಗಳಿಸಿ ಪಂದ್ಯ ಪೂರೈಸಿತು.

ಸ್ಕೋರುಗಳು: ದಕ್ಷಿಣ ವಲಯ:  304 ಮತ್ತು 13 ಓವರುಗಳಲ್ಲಿ ವಿಕೆಟ್‌ ನಷ್ಟ ವಿಲ್ಲದೇ 57 (ರೋಹನ್‌ ಕೆ. ಔಟಾಗದೇ 34, ಮಹೀಪ್‌ ಕುಮಾರ್‌ ಔಟಾಗದೇ 22); ಉತ್ತರ ವಲಯ: 48.2 ಓವರುಗ ಳಲ್ಲಿ 202 (ಅಕುಲ್ ಪಾಂಡೋವ್ 38, ಶಿವಂ ಚೌಹಾಣ್‌ 34, ಪ್ರದೀಪ್‌ ಯಾದವ್‌ 57, ವಿಶ್ವಾಸ್‌ ಮಲಿಕ್‌ 32; ಮಹಮದ್‌ ರಫಿ 38ಕ್ಕೆ6).

ಪಶ್ಚಿಮಕ್ಕೆ ಮುನ್ನಡೆ: ಸಮೀಪದ ಕೆಎಸ್‌ಸಿಎ (1) ಕ್ರೀಡಾಂಗಣದಲ್ಲಿ ಪಶ್ಚಿಮ ವಲಯ ಮತ್ತು ಪೂರ್ವ ವಲಯ ನಡುವಣ ನಡೆದ ಇನ್ನೊಂದು ಲೀಗ್‌ ಪಂದ್ಯವೂ ಡ್ರಾ ಆಯಿತು. ಪಶ್ಚಿಮ ವಲಯ ಏಳು ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಸಂಪಾದಿಸಿತು.

ಪೂರ್ವ ವಲಯದ 245 ರನ್‌ಗಳಿಗೆ ಉತ್ತರವಾಗಿ ಪಶ್ಚಿಮ ವಲಯ ಚಹ ವಿರಾಮದ ವೇಳೆಗೆ 8 ವಿಕೆಟ್‌ಗೆ 252 ರನ್‌ ಗಳಿಸಿ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿತ್ತು. ನಿರ್ಣಾಯಕ ಫಲಿತಾಂಶ ಬರುವ ಸಾಧ್ಯತೆ ದೂರವಾಗಿದ್ದ ಕಾರಣ ಎರಡೂ ತಂಡಗಳು ಟೀ ನಂತರ ಆಡಲು ಹೋಗದೇ ಡ್ರಾಕ್ಕೆ ಸಮ್ಮತಿಸಿದವು.

ಸ್ಕೋರುಗಳು: ಪೂರ್ವ ವಲಯ: 76.4 ಓವರುಗಳಲ್ಲಿ 245; ಪಶ್ಚಿಮ ವಲಯ: 79 ಓವರುಗಳಲ್ಲಿ 8 ವಿಕೆಟ್‌ಗೆ 252 (ಪ್ರಥ್ವಿ ಶಾ 64, ಅದೀಬ್‌ ಉಸ್ಮಾನಿ 66, ನಿನಾದ್‌ ರತ್ವಾ 30).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.