ADVERTISEMENT

ಕ್ವಾರ್ಟರ್ ಫೈನಲ್‌ಗೆ ಸೆರೆನಾ, ಮರ್ರೆ

ವಿಂಬಲ್ಡನ್: ತಂಗಿಯ ಎದುರು ಸೋತ ಅಕ್ಕ ವೀನಸ್‌, ಹೊರಬಿದ್ದ ಜೆಲೆನಾ ಜಾಂಕೊವಿಚ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 19:30 IST
Last Updated 6 ಜುಲೈ 2015, 19:30 IST

ಲಂಡನ್‌ (ಪಿಟಿಐ/ಐಎಎನ್‌ಎಸ್‌/ ರಾಯಿಟರ್ಸ್‌/ಎಎಫ್‌ಪಿ): ಅಮೆರಿಕದ ಸೆರೆನಾ ವಿಲಿಯಮ್ಸ್ ಮತ್ತು ಬ್ರಿಟನ್‌ನ ಆ್ಯಂಡಿ ಮರ್ರೆ ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

33 ವರ್ಷದ ಸೆರೆನಾ ವಿಲಿಯಮ್ಸ್‌ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 6–4, 6–3ರ ನೇರ ಸೆಟ್‌ಗಳಿಂದ ತಮ್ಮ ಸಹೋದರಿ ವೀನಸ್‌ ವಿಲಿಯಮ್ಸ್ ಅವರನ್ನು ಮಣಿಸಿದರು. ಸೆರೆನಾ ವಿಂಬಲ್ಡನ್‌ ಟೂರ್ನಿಯಲ್ಲಿ ಐದು ಬಾರಿ ಚಾಂಪಿಯನ್‌ ಆಗಿದ್ದಾರೆ. 2012ರಲ್ಲಿ ಅವರು ಇಲ್ಲಿ ಕೊನೆಯ ಸಲ ಪ್ರಶಸ್ತಿ ಜಯಿಸಿದ್ದರು.

ಈ ವರ್ಷದ ಆಸ್ಟ್ರೇಲಿಯಾ ಓಪನ್‌ ಮತ್ತು ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಸೆರೆನಾ ಪ್ರಶಸ್ತಿ ಗೆದ್ದಿದ್ದರು. ಒಂದು ವರ್ಷದಿಂದ  ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆದ್ದರಿಂದ ತಂಗಿಯ ಎದುರು ಅಕ್ಕ ವೀನಸ್‌ ವಿಲಿಯಮ್ಸ್‌ಗೆ ಶ್ರೇಷ್ಠ ಸಾಮರ್ಥ್ಯ ತೋರಲು ಸಾಧ್ಯವಾಗಲಿಲ್ಲ.

35 ವರ್ಷದ ವೀನಸ್ ಇಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಐದು ಸಲ ಪ್ರಶಸ್ತಿ ಜಯಿಸಿದ್ದಾರೆ. ಏಳು ವರ್ಷಗಳ ಹಿಂದೆ ಅವರು ಆಲ್‌ ಇಂಗ್ಲೆಂಡ್‌ ಕೋರ್ಟ್‌ನಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದರು. 2009ರ ವಿಂಬಲ್ಡನ್‌ ಟೂರ್ನಿಯಲ್ಲಿ ಸೆರೆನಾ ಮತ್ತು ವೀನಸ್‌ ಫೈನಲ್‌ ಆಡಿದ್ದರು. ಆಗ ಸೆರೆನಾ ಪ್ರಶಸ್ತಿ ಗೆದ್ದಿದ್ದರು.

‘ನೇರ ಸೆಟ್‌ಗಳಲ್ಲಿ ಗೆಲುವು ಪಡೆದದ್ದರಿಂದ ಖುಷಿಯಾಗಿದೆ. ವೀನಸ್‌ ನನಗಿಂತಲೂ ದೊಡ್ಡವಳು. ಆಕೆಯ ಎದುರು ಒಳ್ಳೆಯ ಪಂದ್ಯವಾಡಲು ಅವಕಾಶ ಸಿಕ್ಕಿತ್ತು’ ಎಂದು ಸೆರೆನಾ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಈ ಆಟಗಾರ್ತಿ ಎಂಟರ ಘಟ್ಟದ ಹಣಾಹಣಿಯಲ್ಲಿ 2012 ಮತ್ತು 2013ರ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಚಾಂಪಿಯನ್‌ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಎದುರು ಪೈಪೋಟಿ ನಡೆಸಲಿದ್ದಾರೆ. ಇನ್ನೊಂದು ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅಜರೆಂಕಾ 6–2, 6–3ರಲ್ಲಿ ಸ್ವಿಟ್ಜರ್‌ಲೆಂಡ್‌ನ ಬೆಲಿಂಡಾ ಬೆನ್ಸಿಕ್‌ ಅವರನ್ನು ಸೋಲಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಹೋರಾಟದಲ್ಲಿ ಆ್ಯಂಡಿ ಮರ್ರೆ 7–6, 6–4, 5–7, 6–4ರಲ್ಲಿ ಕ್ರೊವೇಷ್ಯಾದ ಇವಾ ಕಾರ್ಲೊವಿಕ್‌ ಎದುರು ಗೆಲುವು ಪಡೆದರು. ಮರ್ರೆ ಮುಂದಿನ ಸುತ್ತಿನಲ್ಲಿ ಶ್ರೇಯಾಂಕ ರಹಿತ ಆಟಗಾರ ಕೆನಡಾದ ವಾಸೆಕ್‌ ಪಸ್ಪೊಯಿಸಿಲ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ಮರ್ರೆ 2013ರಲ್ಲಿ ಇಲ್ಲಿ ಒಂದು ಸಲವಷ್ಟೇ ಪ್ರಶಸ್ತಿ ಗೆದ್ದಿದ್ದಾರೆ.

ಶರಪೋವಾ ಜಯದ ಓಟ:  ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರೆನಿಸಿರುವ ರಷ್ಯಾದ ಮರಿಯಾ ಶರಪೋವಾ 6–4, 6–4ರಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಕಜಕಸ್ತಾನದ ಜರಿನಾ ದಯಾಸ್‌ ಎದುರು ಅಲ್ಪ ಹೋರಾಟ ನಡೆಸಿ ಗೆಲುವು ಒಲಿಸಿಕೊಂಡರು.

ಸಿಂಗಲ್ಸ್‌ ವಿಭಾಗದಲ್ಲಿ ಅವರು ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಒಂದೇ ಸಲ ಪ್ರಶಸ್ತಿ ಗೆದ್ದಿದ್ದಾರೆ. ಕಜಕಸ್ತಾನದ ಆಟಗಾರ್ತಿ ಇಲ್ಲಿ ಹೋದ ವರ್ಷವೂ ನಾಲ್ಕನೇ ಸುತ್ತಿನಲ್ಲಿ ಸೋಲು ಕಂಡಿದ್ದರು.

ನಿರಾಸೆ ಕಂಡ ಜಲೆನಾ:   ಹಾಲಿ ಚಾಂಪಿಯನ್‌ ಪೆಟ್ರಾ ಕ್ವಿಟೋವಾ ಅವರನ್ನು ಮೂರನೇ ಸುತ್ತಿನ ಪಂದ್ಯದಲ್ಲಿ ಸೋಲಿಸಿದ್ದ ಜೆಲೆನಾ ಜಾಂಕೊವಿಕ್‌ ನಾಲ್ಕನೇ ಸುತ್ತಿನಲ್ಲಿ ನಿರಾಸೆಗೆ ಒಳಗಾದರು. ಪೋಲೆಂಡ್‌ನ ಅಗ್ನಿಸ್ಕಾ ರಾಡ್ವೆಂಸ್ಕಾ 7–5, 6–4ರಲ್ಲಿ ಜೆಲೆನಾ ಅವರನ್ನು ಮಣಿಸಿ ಗೆಲುವಿನ ಸಂಭ್ರಮ ತಮ್ಮದಾಗಿಸಿಕೊಂಡರು.

ಪೇಸ್‌ ಜೋಡಿಗೆ ಸೋಲು:  ಕೆನಡಾದ ಡೇನಿಯಲ್‌ ನೆಸ್ಟರ್‌ ಜೊತೆ ಸೇರಿ ಡಬಲ್ಸ್‌ ಆಡುತ್ತಿರುವ ಭಾರತದ ಲಿಯಾಂಡರ್‌ ಪೇಸ್‌ ಇಲ್ಲಿ ಹನ್ನೊಂದನೇ ಶ್ರೇಯಾಂಕ ಹೊಂದಿದ್ದಾರೆ.

ಮೂರನೇ ಸುತ್ತಿನ ಪಂದ್ಯದಲ್ಲಿ ಈ ಜೋಡಿ ಮ್ಯಾರಥಾನ್‌ ಹೋರಾಟ ನಡೆಸಿ 3-6 5-7 6-3 6-2 2-6ರಲ್ಲಿ ಅಸ್ಟ್ರಿಯಾದ ಅಲೆಕ್ಸಾಂಡರ್‌ ಪೇಯಾ ಹಾಗೂ ಬ್ರೆಜಿಲ್‌ನ ಬ್ರೂನೊ ಸೊರೆಸ್ ಎದುರು ಸೋಲು ಕಂಡರು. ಇದರಿಂದ ಪೇಸ್‌ ಅವರ ಡಬಲ್ಸ್ ವಿಭಾಗದ ಹೋರಾಟ ಅಂತ್ಯ ಕಂಡಿತು. ಆದರೆ, ಈ ಆಟಗಾರ ಮಿಶ್ರ ಡಬಲ್ಸ್‌ನಲ್ಲಿ ಹಿಂಗಿಸ್‌ ಜೊತೆ ಆಡುತ್ತಿದ್ದು ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಬಾಲಕರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಭಾರತದ ಸುಮಿತ್‌ ನಾಗಲ್‌ 7–5, 2–6, 4–6ರಲ್ಲಿ ಅರ್ಜೆಂಟಿನಾದ ಜುವಾನ್‌ ಪಾಬ್ಲೊ ಫೆಕೊವಿಚ್‌ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.