ADVERTISEMENT

ಜಮ್ತಾದಲ್ಲಿ ವೇಗದ ಬೌಲರ್‌ಗಳಿಗೆ ಮಣೆ

ಕೆ.ಎಲ್. ರಾಹುಲ್‌–ಮುರಳಿ ವಿಜಯ್‌ಗೆ ಇನಿಂಗ್ಸ್‌ ಆರಂಭದ ಹೊಣೆ; ನಾಗಪುರದಲ್ಲಿಯೂ ಹಸಿರು ಅಂಗಳ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 20:24 IST
Last Updated 23 ನವೆಂಬರ್ 2017, 20:24 IST
ಕೆ.ಎಲ್‌. ರಾಹುಲ್‌
ಕೆ.ಎಲ್‌. ರಾಹುಲ್‌   

ನಾಗಪುರ: ‘ಹಸಿರು ಗರಿಕೆಗಳು ಇರುವ ಪಿಚ್ ವೇಗದ ಬೌಲರ್‌ಗಳಿಗೆ ನೆರವು ನೀಡಲಿದೆ. ಎರಡು ದಿನಗಳ ನಂತರ ಸ್ಪಿನ್ನರ್‌ಗಳೂ ತಮ್ಮ ಕೈಚಳಕ ತೋರಲು ಅವಕಾಶ ಇದೆ. ಒಟ್ಟಿನಲ್ಲಿ ಸ್ಪರ್ಧಾತ್ಮಕ ಅಂಗಣ ಇಲ್ಲಿದೆ’– ಶುಕ್ರವಾರ ಜಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯಕ್ಕೆ ಸಿದ್ಧಪಡಿಸಲಾಗಿರುವ ಪಿಚ್‌ ಬಗ್ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ನುಡಿಗಳಿವು.

ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿರುವ ಕೊಹ್ಲಿ ಬಳಗವು ಶ್ರೀಲಂಕಾ ಎದುರಿನ ಸರಣಿಯಲ್ಲಿ ಪೂರ್ವಭಾವಿ ಸಿದ್ಧತೆಗಾಗಿ ಹಸಿರು ಪಿಚ್‌ಗಳಿಗೆ ಆದ್ಯತೆ ನೀಡಿದೆ. ಕೋಲ್ಕತ್ತದಲ್ಲಿಯೂ ಅಂತಹದೇ ಪ್ರಯೋಗ ಮಾಡಿತ್ತು. ಅದರಿಂದಾಗಿ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾದ ವೇಗಿಗಳು ಆತಿಥೇಯರ ಬಳಗವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಕೊಹ್ಲಿ ಬಳಗವು ತಿರುಗೇಟು ನೀಡಿತ್ತು. ಪಂದ್ಯ ಡ್ರಾ ಆಗಿತ್ತು.

ಆ ಪಂದ್ಯದಲ್ಲಿ ಭಾರತದ ಮೂವರು ಮಧ್ಯಮವೇಗಿಗಳು ಒಟ್ಟು 17 ವಿಕೆಟ್‌ಗಳನ್ನು (ಎರಡೂ ಇನಿಂಗ್ಸ್‌ ಸೇರಿ) ಗಳಿಸಿದ್ದರು. ಆದರೆ ಇಬ್ಬರು ಸ್ಪಿನ್ನರ್‌ಗಳು ಒಂದೂ ವಿಕೆಟ್ ಪಡೆದಿರಲಿಲ್ಲ.

ADVERTISEMENT

ನಾಗಪುರದಲ್ಲಿಯೂ ಇಧೇ ಪರಿಸ್ಥಿತಿ ಮುಂದುವರೆಯಬಹುದು. ನಾಲ್ವರು ವೇಗಿಗಳನ್ನು ಆಡಿಸುವ ಸಾಧ್ಯತೆಯೂ ಇದೆ. ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಇಶಾಂತ್ ಶರ್ಮಾ ಅವರು ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿಯ ಜೊತೆಗೂಡಲಿದ್ದಾರೆ.

ಮಧ್ಯಮವೇಗಿ ವಿಜಯಶಂಕರ್ ಅವರಿಗೂ ಪದಾರ್ಪಣೆಯ ಅವಕಾಶ ಸಿಕ್ಕಬಹುದು. ಆಗ ಆಫ್‌ಸ್ಪಿನ್ನರ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರಲ್ಲಿ ಒಬ್ಬರಿಗೆ ವಿಶ್ರಾಂತಿ ಸಿಗಬಹುದು. ಅವರಿಬ್ಬರಿಗೂ ಅವಕಾಶ ಸಿಕ್ಕರೆ ಐವರು ಬ್ಯಾಟ್ಸ್‌ಮನ್‌ಗಳು ಕಣಕ್ಕಿಳಿಯುವುದು ಖಚಿತ.

ಎರಡು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ಎದುರು ಇಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಸ್ಪಿನ್ನರ್‌ಗಳು ಮಿಂಚಿದ್ದರು. ಕೇವಲ ಮೂರು ದಿನಗಳಲ್ಲಿ ಪಂದ್ಯ ಮುಗಿದು ಹೋಗಿತ್ತು. ಅದರಿಂದಾಗಿ ಪಿಚ್‌ ಬಗ್ಗೆ ಐಸಿಸಿ ಕೆಂಗಣ್ಣು ಬೀರಿತ್ತು. ವಿಚಾರಣೆಯ ನಂತರ ‘ಕಳಪೆ ಪಿಚ್’ ಎಂಬ ಅಪಖ್ಯಾತಿ ವಿಸಿಎಗೆ ಅಂಟಿಕೊಂಡಿತ್ತು.  ಇದೀಗ ಅದಕ್ಕೆ ತದ್ವಿರುದ್ಧವಾದ ಅಂಗಳ ಸಿದ್ಧವಾಗಿದೆ.

ಲಕ್ಮಲ್, ಲಾಹೀರು ಮೇಲೆ ನಿರೀಕ್ಷೆ
ಕೋಲ್ಕತ್ತ ಪಂದ್ಯದಲ್ಲಿ ಮಿಂಚಿದ್ದ ಮಧ್ಯಮವೇಗಿಗಳಾದ ಸುರಂಗಾ ಲಕ್ಮಲ್ ಮತ್ತು ಲಾಹೀರು ಗಮಗೆ ಅವರ ಮೇಲೆ ಶ್ರೀಲಂಕಾ ತಂಡವು ಹೆಚ್ಚು ಅವಲಂಬಿತವಾಗಿದೆ. ಅವರ ಮುಂದೆ ರಾಹುಲ್, ವಿರಾಟ್ ಮತ್ತು ಪೂಜಾರ ಅವರನ್ನು ಬೇಗನೆ ಕಟ್ಟಿಹಾಕುವ ಸವಾಲು ಇದೆ. ಒಂದೊಮ್ಮೆ ಈ ಮೂವರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿದರೆ ಲಂಕಾ ತಂಡವು ತೊಂದರೆಗೆ ಸಿಲುಕುವುದು ಖಚಿತ.

ಹೋದ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ರಾಹುಲ್ ಮತ್ತು ವಿರಾಟ್ ಎರಡನೇ ಇನಿಂಗ್ಸ್‌ನಲ್ಲಿ ಕೊಟ್ಟಿದ್ದ ತಿರುಗೇಟನ್ನು ಲಂಕಾ ಮರೆತಿಲ್ಲ. ನಾಯಕ ಚಾಂಡಿಮಲ್, ಸಮರವಿಕ್ರಂ ಮತ್ತು ಕರುಣಾರತ್ನೆ ಅವರ ಮೇಲೆ ಬ್ಯಾಟಿಂಗ್ ವಿಭಾಗದ ಹೊಣೆ ಇದೆ. ಭಾರತ ತಂಡದ ಅನುಭವಿ ಬೌಲರ್‌ಗಳನ್ನು ಎದುರಿಸಿ ನಿಲ್ಲುವ ಸವಾಲು ಅವರಿಗೆ ಇದೆ.

*
ನಾವು ಇಲ್ಲಿ ಗೆಲ್ಲಲು ಬಂದಿದ್ದೇವೆ. ಬಲಿಷ್ಠ ತಂಡವನ್ನು ಸೋಲಿಸುವುದೇ ನಿಜವಾದ ಸಾಧನೆ.
–ದಿನೇಶ್‌ ಚಾಂಡಿಮಲ್‌,
ಶ್ರೀಲಂಕಾ ತಂಡದ ನಾಯಕ

*


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.