ADVERTISEMENT

ಜಯದ ನಿರೀಕ್ಷೆಯಲ್ಲಿ ಭಾರತ

16 ವರ್ಷದೊಳಗಿನವರ ಬಾಲಕಿಯರ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್‌ ‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:45 IST
Last Updated 21 ಅಕ್ಟೋಬರ್ 2017, 19:45 IST
ಜಯದ ನಿರೀಕ್ಷೆಯಲ್ಲಿ ಭಾರತ
ಜಯದ ನಿರೀಕ್ಷೆಯಲ್ಲಿ ಭಾರತ   

ಬೆಂಗಳೂರು: ಎರಡು ತಿಂಗಳ ನಂತರ ಮತ್ತೊಮ್ಮೆ ಬ್ಯಾಸ್ಕೆಟ್‌ಬಾಲ್ ಟೂರ್ನಿಗೆ ನಗರ ಸಜ್ಜಾಗಿದೆ. ಭಾನು ವಾರ ಆರಂಭವಾಗಲಿರುವ 16 ವರ್ಷದೊಳಗಿನ ಬಾಲಕಿಯರ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡದವರು ಜಯದ ನಿರೀಕ್ಷೆಯಲ್ಲಿದ್ದಾರೆ. ಜುಲೈ ತಿಂಗಳಲ್ಲಿ ಮಹಿಳೆಯರ ಏಷ್ಯಾ ಕಪ್‌ ಚಾಂಪಿಯನ್‌ಷಿಪ್‌ಗೂ ನಗರ ಆತಿಥ್ಯ ವಹಿಸಿತ್ತು.

‘ಬಿ’ ವಿಭಾಗದ ’ಎ’ ಗುಂಪಿನಲ್ಲಿ ಸ್ಥಾನ ಗಳಿಸಿರುವ ಭಾರತ ತಂಡ ಇಲ್ಲಿ ಉತ್ತಮ ಆಟ ಆಡಿದರೆ 17 ವರ್ಷದೊಳಗಿನವರ ವಿಶ್ವಕಪ್‌ ಚಾಂಪಿಯನ್‌ಷಿಪ್‌ಗೆ ಮೊದಲ ಬಾರಿ ಪ್ರವೇಶ ಗಿಟ್ಟಿಸಲು ಅವಕಾಶ ಒದಗಲಿದೆ. ಇದೇ ಉದ್ದೇಶದಿಂದ ತಂಡ ಕಣಕ್ಕೆ ಇಳಿಯಲಿದೆ.

ಭಾನುವಾರ ರಾತ್ರಿ ಎಂಟು ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯರು ನೇಪಾಳವನ್ನು ಎದುರಿಸಲಿದ್ದಾರೆ. ಚಾಂಪಿಯನ್‌ಷಿಪ್‌ನ  ಬೆಳಿಗ್ಗೆ 11 ಗಂಟೆಗೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೆಣಸಲಿವೆ.

ADVERTISEMENT

ಮೊದಲ ದಿನ ಒಟ್ಟು ಏಳು ಪಂದ್ಯಗಳು ಇದ್ದು ಕೊರಿಯಾವನ್ನು ಚೀನಾ ಥೈಪೆ, ಥಾಯ್ಲೆಂಡ್‌ ಅನ್ನು ಜಪಾನ್, ಚೀನಾವನ್ನು ಹಾಂಕಾಂಗ್, ಮಲೇಷ್ಯಾವನ್ನು ಮಾಲ್ಡಿವ್ಸ್‌ ಮತ್ತು ಶ್ರೀಲಂಕಾವನ್ನು ಇರಾನ್ ಎದುರಿಸಲಿದೆ.

ಏಷ್ಯಾಕಪ್ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡದವರು ಈ ಬಾರಿ ಅಮೋಘ ಸಾಧನೆ ಮಾಡಿದ್ದಾರೆ. ‘ಬಿ’ ಗುಂಪಿನಲ್ಲಿದ್ದ ತಂಡ ’ಎ’ ಗುಂಪಿಗೆ ಪ್ರವೇಶ ಪಡೆದಿದೆ. ಇದರಿಂದ ಹುರುಪುಗೊಂಡಿರುವ ಕಿರಿಯ ಆಟಗಾರ್ತಿಯರು ಸಾಧನೆ ಮೆರೆಯಲು ಸಜ್ಜಾಗಿದ್ದಾರೆ.

16 ವರ್ಷದೊಳಗಿನವರ ಏಷ್ಯಾಕಪ್‌ನಲ್ಲಿ ಭಾರತ ತಂಡ ನಾಲ್ಕು ಬಾರಿ ಆಡಿದೆ. ಆದರೆ ಒಮ್ಮೆಯೂ ವಿಶ್ವಕಪ್‌ಗೆ ಪ್ರವೇಶ ಪಡೆಯುವ ಕನಸು ನನಸಾಗಲಿಲ್ಲ. ಬೆಂಗಳೂರಿನಲ್ಲಿ ಈ ಅಪರೂಪದ ಸಾಧನೆ ಮಾಡುವ ಗುರಿ ಹೊಂದಿರುವ ತಂಡ ಮೊದಲ ಪಂದ್ಯವನ್ನು ಗೆದ್ದು ಭರವಸೆ ಹೆಚ್ಚಿಸಿಕೊಳ್ಳಲು ಮುಂದಾ ಗಲಿದೆ.

2009ರಲ್ಲಿ ಏಷ್ಯಾ ಚಾಂಪಿಯನ್‌ಷಿಪ್‌ ಆರಂಭಗೊಡಿದ್ದು ಭಾರತ ಆರನೇ ಸ್ಥಾನ ಗಳಿಸಿತ್ತು. ನಂತರ ಎರಡು ಬಾರಿ ಐದನೇ ಸ್ಥಾನ ಗಳಿಸಿತ್ತು. ನಾಲ್ಕನೇ ಬಾರಿ ಆರನೇ ಸ್ಥಾನ ಗಳಿಸಿತ್ತು. ಈ ಬಾರಿ ಭಾರತ ಗುಂಪು ಹಂತದ ಪಂದ್ಯಗಳಲ್ಲಿ ನೇಪಾಳ, ಇರಾನ್ ಮತ್ತು ಶ್ರೀಲಂಕಾವನ್ನು ಎದುರಿಸಬೇಕಾಗಿದೆ. ಮೂರು ದಿನ ಗುಂಪು ಹಂತದ ಪಂದ್ಯಗಳು ನಡೆಯಲಿದ್ದು ಪ್ರತಿ ರಾತ್ರಿ ಎಂಟು ಗಂಟೆಗೆ ಭಾರತದ ಪಂದ್ಯ ಇರುತ್ತದೆ. 25ರಂದು ಚಾಂಪಿ ಯನ್‌ಷಿಪ್‌ಗೆ ವಿರಾಮ. 26ರಿಂದ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ. 28ರಂದು ಫೈನಲ್‌ ಪಂದ್ಯ ನಡೆಯಲಿದೆ.

‘ಎ’ ವಿಭಾಗದಲ್ಲಿ ಬಲಿಷ್ಠ ತಂಡಗಳು
’ಎ’ ವಿಭಾಗದ ’ಎ’ ಗುಂಪಿನಲ್ಲಿ ಆಸ್ಟ್ರೇಲಿಯಾ, ಕೊರಿಯಾ, ಚೀನಾ ಥೈಪೆ ಮತ್ತು ನ್ಯೂಜಿಲೆಂಡ್ ತಂಡಗಳು ಇದ್ದು ‘ಬಿ’ ಗುಂಪಿನಲ್ಲಿ ಚೀನಾ, ಜಪಾನ್‌, ಥಾಯ್ಲೆಂಡ್‌ ಮತ್ತು ಹಾಂಕಾಂಗ್ ಇವೆ. ‘ಬಿ’ ವಿಭಾಗದ ‘ಬಿ’ ಗುಂಪಿನಲ್ಲಿ ಮಲೇಷ್ಯಾ, ಕಜಕಸ್ತಾನ ಮತ್ತು ಮಾಲ್ಡಿವ್ಸ್ ತಂಡಗಳು ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.