ADVERTISEMENT

ಜಯದ ಲಯಕ್ಕೆ ಮರಳುವ ವಿಶ್ವಾಸದಲ್ಲಿ ಚೆನ್ನೈಯಿನ್‌

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಚೆನ್ನೈಯಿನ್ ಎಫ್‌ಸಿ ತಂಡದ ಆಟಗಾರ (ನೀಲಿ ಪೋಷಾಕು) ಚೆಂಡನ್ನು ಕಸಿಯಲು ಪ್ರಯತ್ನಿಸಿದರು –ಪಿಟಿಐ ಚಿತ್ರ
ಚೆನ್ನೈಯಿನ್ ಎಫ್‌ಸಿ ತಂಡದ ಆಟಗಾರ (ನೀಲಿ ಪೋಷಾಕು) ಚೆಂಡನ್ನು ಕಸಿಯಲು ಪ್ರಯತ್ನಿಸಿದರು –ಪಿಟಿಐ ಚಿತ್ರ   

ಚೆನ್ನೈ: 2015ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಚೆನ್ನೈಯಿನ್ ಎಫ್‌ಸಿ ತಂಡ ಗುರುವಾರದ ಎರಡನೇ ಪಂದ್ಯದಲ್ಲಿ ಜಯದ ಹಾದಿಗೆ ಮರಳುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ಜವಾಹರ್‌ಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಟೂರ್ನಿಯಲ್ಲಿ ಚೆನ್ನೈಯಿನ್ ತಂಡ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಆಡಲಿದೆ.

ಭಾನುವಾರದ ಮೊದಲ ಪಂದ್ಯದಲ್ಲಿ ಚೆನ್ನೈಯಿನ್  2–3 ಗೋಲುಗಳಲ್ಲಿ ಎಫ್‌ಸಿ ಗೋವಾ ತಂಡದ ಎದುರು ಆಘಾತ ಅನುಭವಿಸಿತ್ತು. ಮೂರು ದಿನಗಳ ವಿರಾಮದ ಬಳಿಕ ಎರಡನೇ ಪಂದ್ಯ ಆಡುತ್ತಿರುವ ಚೆನ್ನೈಯಿನ್ ತಂಡ ಸಂಪೂರ್ಣ ಸಿದ್ಧತೆಯೊಂದಿಗೆ ಕಣಕ್ಕಿಳಿಯಲಿದೆ.

ADVERTISEMENT

ಹಿಂದಿನ ಮೂರು ಆವೃತ್ತಿಗಳಲ್ಲಿ ಚೆನ್ನೈಯಿನ್ ತಂಡ ನಾರ್ತ್ ಈಸ್ಟ್ ವಿರುದ್ಧ ಒಂದೂ ಪಂದ್ಯ ಸೋತಿಲ್ಲ.

‘ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಆಡುತ್ತೇವೆ. ಆರಂಭದಲ್ಲೇ ಗೋಲು ಗಳಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ತಂಡದ ಮೇಲಿನ ಒತ್ತಡ ಹೆಚ್ಚುತ್ತದೆ. ಭಾನುವಾರದ ಸೋಲು ಮರೆತು ಆಡುತ್ತೇವೆ’ ಎಂದು ಚೆನ್ನೈಯಿನ್ ತಂಡದ ಕೋಚ್‌ ಜಾನ್‌ ಗ್ರೆಗೋರಿ ಹೇಳಿದ್ದಾರೆ.

‘ನಾರ್ತ್ ಈಸ್ಟ್ ತಂಡ ಇಲ್ಲಿಯವರೆಗೂ ಚೆನ್ನೈನಲ್ಲಿ ಒಂದೂ ಪಂದ್ಯ ಸೋತಿಲ್ಲ. ಹಿಂದಿನ ದಾಖಲೆಗಳು ಈ ಆವೃತ್ತಿಯಲ್ಲಿಯೂ ಮುಂದುವರಿಯಬೇಕು ಎಂದೇನೂ ಇಲ್ಲ. ಅಂಕಿ ಅಂಶಗಳ ಬಗ್ಗೆ ಚಿಂತಿಸದೆ ಉತ್ತಮ ಪೈಪೋಟಿ ನೀಡುವುದಷ್ಟೇ ನಮ್ಮ ಗುರಿ. ಹಿಂದಿನ ಪಂದ್ಯದಲ್ಲಿ ನಮ್ಮ ತಂಡದ ರಕ್ಷಣಾ ವಿಭಾಗ ವಿಫಲವಾಗಿತ್ತು. ಮುಂದಿನ ಪಂದ್ಯಗಳಲ್ಲಿ ಈ ತಪ್ಪು ಮರುಕಳಿಸುವುದಿಲ್ಲ’ ಎಂದು ಹೇಳಿದ್ದಾರೆ.

ಗೋವಾ ವಿರುದ್ಧದ ಪಂದ್ಯದಲ್ಲಿ ತಂಡದ ಜೆಲೆ ಲಾಲ್‌ಪೆಕ್ಲುವಾ ಮತ್ತು ಬಾವೊರಿಂಗ್‌ದಲ್‌ ಬೋಡೊ ಗೋಲು ಗಳಿಸುವ ಹಂತದಲ್ಲಿ ಎಡವಿದ್ದರು.

ನಾರ್ತ್‌ಈಸ್ಟ್ ತಂಡದ ಸವಾಲು: ಮೊದಲ ಪಂದ್ಯದಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್‌ ತಂಡ ಜೆಮ್‌ಶೆಡ್‌ಪುರ ಎಫ್‌ಸಿ ಎದುರು ಡ್ರಾ ಮಾಡಿಕೊಂಡಿದೆ.

‘ಹಿಂದಿನ ಪಂದ್ಯದಲ್ಲಿ ನಮಗೆ ಗೋಲು ದಾಖಲಿಸಲು ಸಾಕಷ್ಟು ಅವಕಾಶ ಇತ್ತು. ಆದರೆ ಚೆಂಡನ್ನು ಗುರಿ ತಲುಪಿಸುವ ವೇಳೆ ಎಡವಿದ್ದೇವೆ. ಮೊದಲ ಪಂದ್ಯದಲ್ಲಿ ಗೋಲು ದಾಖಲಿಸದಿರುವುದು ನಮ್ಮ ತಂಡದ ಮೇಲಿನ ಒತ್ತಡ ಹೆಚ್ಚಿಸಲಿದೆ ಎಂಬುದು ಸುಳ್ಳು. ಲೀಗ್‌ನ ಕೊನೆಯ ಹಂತದಲ್ಲಿ ನಮ್ಮ ತಂಡ ಹೆಚ್ಚು ಗೋಲು ಗಳಿಸಿದ ತಂಡ ಎನಿಸಿಕೊಳ್ಳುವುದರಲ್ಲಿ ಅನುಮಾನ ಇಲ್ಲ’ ಎಂದು ನಾರ್ತ್ ಈಸ್ಟ್ ತಂಡದ ಕೋಚ್‌ ಜಾವೊ ಡೆ ದಿಯಾಸ್ ಹೇಳಿದ್ದಾರೆ.‌

ಒಮ್ಮೆಯೂ ಪ್ಲೇ ಆಫ್‌ ತಲುಪದ ನಾರ್ತ್ ಈಸ್ಟ್ ತಂಡ ಈ ಬಾರಿ ಕಠಿಣ ಸಿದ್ದತೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಸಜ್ಜುಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.