ADVERTISEMENT

ಟಿ–20 ತಂಡಕ್ಕೆ ರಾಬಿನ್‌ ಕೋಚ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 20:02 IST
Last Updated 23 ಆಗಸ್ಟ್ 2017, 20:02 IST
ಟಿ–20 ತಂಡಕ್ಕೆ ರಾಬಿನ್‌ ಕೋಚ್‌
ಟಿ–20 ತಂಡಕ್ಕೆ ರಾಬಿನ್‌ ಕೋಚ್‌   

ಜೊಹಾನ್ಸ್‌ಬರ್ಗ್‌: ಭಾರತದ ರಾಬಿನ್‌ ಸಿಂಗ್‌ ಮತ್ತು ಶ್ರೀರಾಮ್‌ ಶ್ರೀಧರನ್‌ ಅವರು ಮುಂಬರುವ ಚೊಚ್ಚಲ ಟಿ–20 ಗ್ಲೋಬಲ್‌ ಕ್ರಿಕೆಟ್‌ ಲೀಗ್‌ನಲ್ಲಿ ಕ್ರಮವಾಗಿ ಬ್ಲೊಯೆಮ್‌ ಸಿಟಿ ಬ್ಲೇಜರ್ಸ್‌ ಮತ್ತು ಜೊಹಾನ್ಸ್‌ಬರ್ಗ್‌ ಜೈಂಟ್ಸ್‌ ತಂಡಗಳಿಗೆ ತರಬೇತಿ ನೀಡಲಿದ್ದಾರೆ.

ಬ್ಲೊಯೆಮ್‌ ಮತ್ತು ಜೈಂಟ್ಸ್‌, ಫ್ರಾಂಚೈಸ್‌ಗಳು ಬುಧವಾರ ರಾಬಿನ್‌ ಮತ್ತು ಶ್ರೀಧರನ್‌ ಅವರನ್ನು ಕೋಚ್‌ಗಳನ್ನಾಗಿ ನೇಮಕ ಮಾಡಿಕೊಂಡಿವೆ.

ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಗ್ರೇಮ್‌ ಸ್ಮಿತ್‌ ಅವರು ಬೆನೊನಿ ಜಲ್ಮಿ ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಮಾಡಲಿದ್ದಾರೆ.

ADVERTISEMENT

ದಕ್ಷಿಣ ಆಫ್ರಿಕಾದ ಜಾಕ್‌ ಕಾಲಿಸ್‌, ನ್ಯೂಜಿಲೆಂಡ್‌ನ ಸ್ಟೀಫನ್‌ ಫ್ಲೆಮಿಂಗ್‌, ಪ್ಯಾಡಿ ಆಪ್ಟನ್‌, ಮಾರ್ಕ್‌ ಬೌಷರ್‌ ಮತ್ತು ರಷೆಲ್‌ ಡೊಮಿಂಗೊ ಅವರೂ ಲೀಗ್‌ನಲ್ಲಿ ಆಡುವ ಇತರ ತಂಡಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಸ್ಮಿತ್‌ ಅವರು 2014ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.  ಸೀನಿಯರ್‌ ತಂಡದ ಮಾರ್ಗದರ್ಶಕರಾಗಿ ಅವರು ಮೊದಲ ಬಾರಿಗೆ ಕೆಲಸ ಮಾಡಲಿದ್ದಾರೆ. ಜಿಯೊಫ್ರೆ ಟೊಯಾನ ಅವರು ಬೆನೊನಿ ತಂಡದ ಸಹಾಯಕ ಕೋಚ್‌ ಆಗಿದ್ದಾರೆ.

117 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಸ್ಮಿತ್‌, 197 ಏಕದಿನ ಮತ್ತು 33 ಟ್ವೆಂಟಿ–20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದರು. ಭಾರತದ ಪರ 136 ಏಕದಿನ ಪಂದ್ಯಗಳನ್ನು ಆಡಿರುವ ರಾಬಿನ್‌ ಅವರು ಭಾರತ ತಂಡದ ಫೀಲ್ಡಿಂಗ್‌ ಕೋಚ್‌ ಮತ್ತು ಐಪಿಎಲ್‌ನಲ್ಲಿ ಆಡುವ ಮುಂಬೈ ಇಂಡಿಯನ್ಸ್‌ ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಶ್ರೀಧರನ್‌ ಅವರು ದೇಶಿ ಟೂರ್ನಿಯಲ್ಲಿ 15,000ಕ್ಕೂ ಅಧಿಕ ರನ್‌ ಗಳಿಸಿದ್ದು, 200ಕ್ಕೂ ಹೆಚ್ಚು ವಿಕೆಟ್‌ ಕಬಳಿಸಿದ್ದಾರೆ. ಅವರು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಮಾಡಿದ್ದರು. ಜೊತೆಗೆ ಆಸ್ಟ್ರೇಲಿಯಾ ತಂಡದ ಸ್ಪಿನ್‌ ಬೌಲಿಂಗ್‌ ವಿಭಾಗದ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.