ADVERTISEMENT

ಟೂರ್ನಿಯಿಂದ ಹೊರಬಿದ್ದ ಪ್ಲೆಸಿಸ್‌

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST

ನವದೆಹಲಿ (ಪಿಟಿಐ): ನೀರಸ ಪ್ರದರ್ಶನದಿಂದ ಪರದಾಡುತ್ತಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ.
ಪುಣೆ ತಂಡ ಪ್ರಮುಖ ಆಟಗಾರ ಫಾಫ್ ಡು ಪ್ಲೆಸಿಸ್‌ ಬೆರಳಿಗೆ   ಗಾಯಮಾಡಿಕೊಂಡಿದ್ದು ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪುಣೆ ತಂಡಕ್ಕೆ ಒಂದು ವಾರದ ಅಂತರದಲ್ಲಿ ಎದುರಾದ ಎರಡನೇ ಆಘಾತವಿದು. ಗಾಯದ ಸಮಸ್ಯೆ ಎದುರಿಸುತ್ತಿದ್ದ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ ಕೆವಿನ್ ಪೀಟರ್ಸನ್‌ ಕೂಡ  ಟೂರ್ನಿಯಿಂದ ಹೊರಗುಳಿದಿದ್ದಾರೆ.

‘ಬೆರಳಿಗೆ ಗಾಯವಾಗಿರುವ ಕಾರಣ ಆರು ವಾರ ವಿಶ್ರಾಂತಿ ಪಡೆಯಬೇಕಿದೆ. ಆದ್ದರಿಂದ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಆಡುವುದಿಲ್ಲ. ಪುಣೆ ತಂಡಕ್ಕೆ ಮತ್ತು ಭಾರತಕ್ಕೆ ಧನ್ಯವಾದಗಳು’ ಎಂದು ಪ್ಲೆಸಿಸ್‌ ಟ್ವಿಟರ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ಪ್ಲೆಸಿಸ್‌ ಈ ಬಾರಿಯ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ಪುಣೆ ತಂಡದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ. ಆರು ಪಂದ್ಯಗಳಿಂದ 34.33ರ ಸರಾಸರಿಯಲ್ಲಿ ಒಟ್ಟು 206 ರನ್ ಕಲೆ ಹಾಕಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಮುಂದಿನ ದಿನಗಳಲ್ಲಿ ತ್ರಿಕೋನ ಏಕದಿನ ಸರಣಿ ಆಡಲಿದೆ. ಈ ಸರಣಿಯಲ್ಲಿ ವೆಸ್ಟ್‌ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡಗಳು ಪಾಲ್ಗೊಳ್ಳಲಿವೆ. ತ್ರಿಕೋನ ಸರಣಿಯಲ್ಲೂ ಪ್ಲೆಸಿಸ್ ಆಡುವುದು ಅನುಮಾನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.