ADVERTISEMENT

ಟೆನಿಸ್‌:ಬರ್ಟೆನ್ಸ್‌ಗೆ ಪ್ರಶಸ್ತಿ

ಏಜೆನ್ಸೀಸ್
Published 27 ಮೇ 2017, 19:30 IST
Last Updated 27 ಮೇ 2017, 19:30 IST
ನೆದರ್ಲೆಂಡ್ಸ್‌ ತಂಡದ ಕಿಕಿ ಬರ್ಟೆನ್ಸ್‌ ಆಟದ ವೈಖರಿ
ನೆದರ್ಲೆಂಡ್ಸ್‌ ತಂಡದ ಕಿಕಿ ಬರ್ಟೆನ್ಸ್‌ ಆಟದ ವೈಖರಿ   

ಬರ್ಲಿನ್‌: ಅಮೋಘ ಆಟ ಆಡಿದ ನೆದರ್ಲೆಂಡ್ಸ್‌ನ ಕಿಕಿ ಬರ್ಟೆನ್ಸ್‌ ಅವರು ಡಬ್ಲ್ಯುಟಿಎ ನ್ಯೂರೆಮ್‌ಬರ್ಗ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಬರ್ಟೆನ್ಸ್‌ 6–2, 6–1ರ ನೇರ ಸೆಟ್‌ ಗಳಿಂದ ಜೆಕ್‌ ಗಣರಾಜ್ಯದ ಬಾರ್ಬೊರ ಕ್ರೆಜಸಿಕೋವಾ ಅವರನ್ನು ಪರಾಭವ ಗೊಳಿಸಿದರು.

ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಹಿರಿಮೆ ತಮ್ಮದಾಗಿಸಿಕೊಂಡರು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ 19ನೇ ಸ್ಥಾನ ಹೊಂದಿರುವ 25 ವರ್ಷದ ಬರ್ಟೆನ್ಸ್‌ 56 ನಿಮಿಷಗಳ ಹೋರಾಟ ದಲ್ಲಿ ಯಾವ ಹಂತದಲ್ಲೂ ಎದುರಾಳಿಗೆ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.

ಮೊದಲ ಸೆಟ್‌ನ ಆರಂಭದಿಂದಲೇ ಚುರುಕಾಗಿ ಆಡಿದ ಬರ್ಟೆನ್ಸ್‌, ಐದನೇ ಗೇಮ್‌ನಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 254ನೇ ಸ್ಥಾನ ಹೊಂದಿರುವ ಬಾರ್ಬೊರ ಅವರ ಸರ್ವ್‌ ಮುರಿದರು. ಆ ನಂತರ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿದ ಅವರು ಸತತವಾಗಿ ಮೂರು ಗೇಮ್‌ ಗಳನ್ನು ಗೆದ್ದು 35ನೇ ನಿಮಿಷದಲ್ಲಿ ಸೆಟ್‌ ವಶಪಡಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ಏಳು ಏಸ್‌ಗಳನ್ನು ಸಿಡಿಸಿದ ಬರ್ಟೆನ್ಸ್‌ 3–1ರ ಮುನ್ನಡೆ ಪಡೆದರು. ಆ ನಂತರವೂ ಬಲಿಷ್ಠ ಸ್ಮ್ಯಾಷ್‌ ಮತ್ತು ಆಕರ್ಷಕ ರಿಟರ್ನ್‌ ಗಳಿಂದ ಎದುರಾಳಿಯನ್ನು ತಬ್ಬಿಬ್ಬು ಗೊಳಿಸಿ ಸುಲಭವಾಗಿ ಜಯದ ತೋರಣ ಕಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.