ADVERTISEMENT

ಟ್ವಿಟರ್‌ನಲ್ಲಿ ಆರ್‌ಸಿಬಿಗೆ ಮಂಗಳಾರತಿ!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ಶೇನ್ ವಾಟ್ಸನ್‌
ಶೇನ್ ವಾಟ್ಸನ್‌   

ಬೆಂಗಳೂರು: ‘ಈ ಸಲದ ಐಪಿಎಲ್‌ನಲ್ಲಿ ಕೆ.ಎಲ್.ರಾಹುಲ್ ಅತಿ ವೇಗದ ಆರ್ಧಶತಕ ದಾಖಲಿಸಿದರು. ಕ್ರಿಸ್‌ ಗೇಲ್ ಟೂರ್ನಿಯ ಮೊದಲ ಶತಕ  ಗಳಿಸಿದರು. ಶೇನ್ ವಾಟ್ಸನ್‌ ಕೂಡ ಶತಕ ಗಳಿಸಿದರು. ಆದರೆ ಆರ್‌ಸಿಬಿ..’ ಈ ಮೂವರು ಆಟಗಾರರನ್ನು ಈ ಸಲದ ಬಿಡ್‌ನಲ್ಲಿ ತನ್ನಲ್ಲಿ ಉಳಿಸಿಕೊಳ್ಳದ ಆರ್‌ಸಿಬಿ ತಂಡವನ್ನು ಟ್ವಿಟರ್‌ನಲ್ಲಿ ಅಭಿಮಾನಿಗಳು ಈ ರೀತಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಮೂವರು ಆಟಗಾರರೂ ಹೋದ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದರು. ಈ ಬಾರಿಯ ಟೂರ್ನಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಕ್ರಿಸ್‌ ಗೇಲ್, ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದಲ್ಲಿ ಆಡುತ್ತಿದ್ದಾರೆ. ಶೇನ್ ವಾಟ್ಸನ್, ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿದ್ದಾರೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ರಾಹುಲ್ ವೇಗದ ಅರ್ಧಶತಕ ದಾಖಲಿಸಿದ್ದರು. ಹೋದ ಗುರುವಾರ ಗೇಲ್ ಮತ್ತು ಶುಕ್ರವಾರ ವಾಟ್ಸನ್‌ ಶತಕ ಹೊಡೆದಿದ್ದರು. ಆದರೆ ಆರ್‌ಸಿಬಿ ತಂಡವು ಕಳೆದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತಿದೆ. ಬ್ರೆಂಡನ್ ಮೆಕ್ಲಮ್, ಸರ್ಫರಾಜ್ ಖಾನ್ ಅವರು ವೈಫಲ್ಯ ಅನುಭವಿಸುತ್ತಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅದಕ್ಕಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿಯನ್ನು ಟೀಕಿಸುವ ಸಂದೇಶಗಳು ಸಾಲುಗಟ್ಟಿವೆ.

ADVERTISEMENT

ಆರ್‌ಸಿಬಿಯ ಸಹಮಾಲೀಕ ವಿಜಯ ಮಲ್ಯ ತಮ್ಮ ಎರಡೂ ಕೈಗಳಿಂದ ಪತ್ರ ಬರೆಯುವ ಚಿತ್ರವೊಂದನ್ನು ಹಾಕಿರುವ ಅತೀಸ್ಟ್ ಕೃಷ್ಣ ಎಂಬುವವರು, ‘ಮಲ್ಯ ಅವರು ಗೇಲ್ ಮತ್ತು ವಾಟ್ಸನ್‌ ಅವರಿಂದ ಕ್ಷಮೆ ಕೋರಿ ಪತ್ರ ಬರೆಯುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

‘ಆರ್‌ಸಿಬಿಯ ಇಬ್ಬರು ಹಳೆ ವಿದ್ಯಾರ್ಥಿಗಳಿಂದ ಸೊಗಸಾದ ಶತಕಗಳು ದಾಖಲಾದವು’  ಎಂದು ರಮೇಶ್ ಶ್ರಿವಾಸ್ತವ ಬರೆದಿದ್ದಾರೆ.

ಅರ್ಫಾನ್ ಎಂಬುವವರು ವಾಟ್ಸನ್ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ. ‘ವಾಟ್ಸನ್ ಅವರು ಆರ್‌ಸಿಬಿ ಪರ  ಆಡಿದ್ದ 24 ಪಂದ್ಯಗಳಲ್ಲಿ ಒಂದೂ ಅರ್ಧಶತಕ ಗಳಿಸಿರಲಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.