ADVERTISEMENT

ಡಿಸ್ಕಸ್‌ ಎಸೆತದಲ್ಲಿ ಸೀಮಾಗೆ ಬೆಳ್ಳಿ

ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಎರಡು ಪದಕ ಖಚಿತ: ಕಂಚು ಗೆದ್ದ ಪಿಂಕಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2014, 20:26 IST
Last Updated 1 ಆಗಸ್ಟ್ 2014, 20:26 IST

ಗ್ಲಾಸ್ಗೊ (ಐಎಎನ್ಎಸ್‌): ಭಾರತದ ಸೀಮಾ ಪೂನಿಯಾ ಮಹಿಳೆಯರ ಡಿಸ್ಕಸ್‌ ಎಸೆತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ  ಗೆದ್ದುಕೊಂಡರು. ಆದರೆ, ಹಾಲಿ ಚಾಂಪಿಯನ್‌ ಕೃಷ್ಣಾ ಪೂನಿಯಾ ನಿರಾಸೆ ಅನುಭವಿಸಿದರು.

ಹ್ಯಾಂಪ್‌ಡನ್‌  ಪಾರ್ಕ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಪೈಪೋಟಿಯಲ್ಲಿ ಸೀಮಾ 61.61ಮೀ. ದೂರ ಡಿಸ್ಕ್‌ ಎಸೆದು ರಜತ ಪದಕದ ಒಡೆಯರಾದರು. ಆಸ್ಟ್ರೇಲಿಯದ ಡ್ಯಾನಿ ಸ್ಯಾಮುಯೆಲ್ಸ್‌ (64.88ಮೀ.) ಸ್ವರ್ಣ ಸಾಧನೆ ಮಾಡಿದರು.

ಹೋದ ಸಲದ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಜಯಿಸಿದ್ದ ಕೃಷ್ಣಾ ಪೂನಿಯಾ ಇಲ್ಲಿ 57.84ಮೀ. ದೂರವಷ್ಟೇ ಎಸೆಯಲು ಶಕ್ತರಾದರು. 64.76ಮೀ. ದೂರ ಎಸೆದಿದ್ದು ಕೃಷ್ಣಾ ಅವರ ಹಿಂದಿನ ವೈಯಕ್ತಿಕ ಉತ್ತಮ ಸಾಧನೆ  ಎನಿಸಿದೆ.

ಕಂಚು ಗೆದ್ದ ಪಿಂಕಿ: ಭಾರತದ ಪಿಂಕಿ ರಾಣಿ ಜಾಂಗ್ರಾ ಈ ಸಲದ ಕಾಮನ್‌ವೆಲ್ತ್‌ ಕೂಟದ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು.

48-51 ಕೆ.ಜಿ. ವಿಭಾಗದ ಸ್ಪರ್ಧೆಯ ಸೆಮಿಫೈನಲ್‌ ಬೌಟ್‌ನಲ್ಲಿ ಹರಿಯಾಣದ ಬಾಕ್ಸರ್‌ ಪಿಂಕಿ ಉತ್ತರ ಐರ್ಲೆಂಡ್‌ನ ಮೈಕೆಲಾ ವಾಲ್ಶ್‌್ ಎದುರು ನಿರಾಸೆ ಅನುಭವಿಸಿದರು.

ಪಿಂಕಿ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ‘ಬೈ’ ಪಡೆದಿದ್ದರು. ಕ್ವಾರ್ಟರ್ ಫೈನಲ್ ಸೆಣಸಾಟದಲ್ಲಿ ಜಾಕ್ವೆಲಿನ್‌ ವಾಂಗಿ ಎದುರು ಜಯ ಪಡೆದು ಪದಕ ಖಚಿತಪಡಿಸಿಕೊಂಡಿದ್ದರು. ಬಾಕ್ಸಿಂಗ್‌ನ ಸೆಮಿಫೈನಲ್‌ನಲ್ಲಿ ಸೋಲು ಕಂಡವರಿಗೂ ಪದಕ ಲಭಿಸುತ್ತದೆ.

‘ಎ’ ಸುತ್ತಿನ ಜಿದ್ದಾಜಿದ್ದಿಯಲ್ಲಿ ಪಿಂಕಿ ಮತ್ತು ವಾಲ್ಶ್‌್ ತಲಾ 38 ಪಾಯಿಂಟ್ಸ್‌ ಕಲೆ ಹಾಕಿ ಸಮಬಲದ ಪೈಪೋಟಿ ತೋರಿದರು. ‘ಬಿ’ ಸುತ್ತಿನಲ್ಲಿ ವಾಲ್ಶ್‌್ ಪೂರ್ಣ 40 ಪಾಯಿಂಟ್‌ಗಳನ್ನು ಪಡೆದು ಮೇಲುಗೈ ಸಾಧಿಸಿದರು. ಕೊನೆಯ ಸುತ್ತಿನಲ್ಲೂ 39 ಪಾಯಿಂಟ್ಸ್‌ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟರು. ಕೊನೆಯಲ್ಲಿ ಪಿಂಕಿ ಗಳಿಸಿದ್ದು 37 ಪಾಯಿಂಟ್ ಮಾತ್ರ.

ಮನ್‌ದೀಪ್‌ ಜಾಂಗ್ರಾ ಮತ್ತು ವಿಜೇಂದರ್‌ ಸಿಂಗ್‌ ಸೆಮಿಫೈನಲ್‌ ಪ್ರವೇಶಿಸಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.

ಫೈನಲ್‌ಗೆ ಸರಿತಾ: ಪದಕ ಖಚಿತ
ಮಾಜಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ ಎಲ್‌. ಸರಿತಾ ದೇವಿ ಮಹಿಳೆಯರ 57–60 ಕೆ.ಜಿ.ಯ ಲೈಟ್‌ ವೇಟ್ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದು ಪದಕ ಖಚಿತಪಡಿಸಿಕೊಂಡಿದ್ದಾರೆ.

ಸೆಮಿಫೈನಲ್‌ ಸೆಣಸಾಟದಲ್ಲಿ ಮಣಿಪುರದ ಸರಿತಾ ನಾಲ್ಕೂ ಸುತ್ತುಗಳಲ್ಲಿಯೂ ಪ್ರಾಬಲ್ಯ ಮೆರೆದು ಮಾರಿಯಾ ಮಾಚಂಗುವಾ ಅವರನ್ನು ಮಣಿಸಿದರು.

ಸರಿತಾ ಮೊದಲ ಸುತ್ತಿನಲ್ಲಿಯೇ ಪೂರ್ಣ 40 ಪಾಯಿಂಟ್‌ಗಳನ್ನು ಕಲೆ ಹಾಕಿ ಉತ್ತಮ ಆರಂಭ ಪಡೆದರು. ನಂತರದ ಸುತ್ತಿನಲ್ಲೂ 40 ಪಾಯಿಂಟ್‌ ಗಳಿಸಿ ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.

ಭಾರತದ ಇನ್ನೊಬ್ಬ ಬಾಕ್ಸರ್‌ ಲೈಶ್‌ರಾಮ್‌ ದೇವೇಂದ್ರೂ ಪುರುಷರ 49 ಕೆ.ಜಿ. ವಿಭಾಗದ ಲೈಟ್‌ ವಿಭಾಗದಲ್ಲಿ   ಫೈನಲ್‌ ತಲುಪಿದ್ದು, ಬೆಳ್ಳಿಯ ಪದಕ ಖಚಿತವಾಗಿದೆ.

ಸಹನಾ ಕುಮಾರಿಗೆ ಎಂಟನೇ ಸ್ಥಾನ
ಕರ್ನಾಟಕ ಸಹನಾ ಕುಮಾರಿ ಹೈಜಂಪ್‌ ಸ್ಪರ್ಧೆಯಲ್ಲಿ ಎಂಟನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದರು.ಒಟ್ಟು 12 ಸ್ಪರ್ಧಿಗಳ ನಡುವೆ

ನಡೆದ ಪೈಪೋಟಿಯಲ್ಲಿ ಸಹನಾ ಮೂರನೇ ಎಸೆತದಲ್ಲಿ 1.86 ಮೀ. ಎತ್ತರ ಜಿಗಿದರು. ಆಸ್ಟ್ರೇಲಿಯ ದ ಎಲೆನೊರ್‌ ಪ್ಯಾಟರ್‌ಸನ್‌ 1.94ಮೀ. ಎತ್ತರ ಜಿಗಿದು ಚಿನ್ನ ತಮ್ಮ ದಾಗಿಸಿಕೊಂಡರು. ಎರಡು ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ 1.92ಮೀ. ಎತ್ತರ ಜಿಗಿದು ರಾಷ್ಟ್ರೀಯ ದಾ ಖಲೆ ನಿರ್ಮಿಸಿದ್ದ ಸಹನಾಗೆ ಇಲ್ಲಿ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT