ADVERTISEMENT

ಡ್ರಾನಲ್ಲಿ ಮುಗಿದ ಮೊದಲ ಟೆಸ್ಟ್‌

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 17:29 IST
Last Updated 20 ನವೆಂಬರ್ 2017, 17:29 IST
ಡ್ರಾನಲ್ಲಿ ಮುಗಿದ ಮೊದಲ ಟೆಸ್ಟ್‌
ಡ್ರಾನಲ್ಲಿ ಮುಗಿದ ಮೊದಲ ಟೆಸ್ಟ್‌   

ಕೊಲ್ಕತ್ತಾ: ಮೊದಲೆರಡು ದಿನಗಳ ಕಾಲ ಮಳೆ ಅಡ್ಡಿ ಪಡಿಸಿದ್ದ ಭಾರತ– ಶ್ರೀಲಂಕಾ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿದ್ದ ಶ್ರೀಲಂಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ ವಿರಾಟ್‌ ಪಡೆಯನ್ನು ಕೇವಲ 172ರನ್‌ ಗಳಿಗೆ ಕಟ್ಟಿ ಹಾಕಿತ್ತು. ಬಳಿಕ ಬ್ಯಾಟಿಂಗ್‌ ಆರಂಭಿಸಿದ ಲಂಕನ್ನರು 294ರನ್‌ ಕಲೆ ಹಾಕಿದರು. ಇದರೊಂದಿಗೆ ಪ್ರವಾಸಿ ತಂಡ 122ರನ್‌ಗಳ ಮುನ್ನಡೆ ಸಾಧಿಸಿತ್ತು.

ಇದಕ್ಕುತ್ತರವಾಗಿ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಆರಂಭಿಕರಾದ ಕನ್ನಡಿಗ ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌ ಅವರ ಅರ್ಧಶತಕ ಹಾಗೂ ನಾಯಕ ವಿರಾಟ್‌ ಕೊಹ್ಲಿ(104) ಗಳಿಸಿದ ಶತಕದ ಬಲದಿಂದ 8ವಿಕೆಟ್‌ ನಷ್ಟಕ್ಕೆ 352ರನ್‌ ಗಳಿಸಿ, ಲಂಕಾ ಪಡೆಗೆ 231ರನ್‌ಗಳ ಗೆಲುವಿನ ಗುರಿ ನೀಡಿತ್ತು.

ADVERTISEMENT

ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸದೀರ ಸಮರವಿಕ್ರಮ(0), ದಿಮುತ್‌ ಕರುಣರತ್ನೆ(1) ಬೇಗನೆ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಅನುಭವಿ ಲಾಹಿರು ತಿರುಮನ್ನೆ(7), ಎಂಜೊಲೋ ಮ್ಯಾಥ್ಯೂಸ್‌(13) ಕೂಡ ಹೆಚ್ಚುಹೊತ್ತು ನಿಲ್ಲಲಿಲ್ಲ.

ಒಂದು ಹಂತದಲ್ಲಿ ಕೇವಲ 22ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದ್ದ ಪ್ರವಾಸಿ ತಂಡಕ್ಕೆ ನಾಯಕ ದಿನೇಶ್‌ ಚಾಂಡಿಮಲ್‌(20) ಹಾಗೂ ನಿರೋಶಾನ್‌ ಡಿಕ್ವೆಲ್ಲಾ(27) ಅಲ್ಪ ಚೇತರಿಕೆ ನೀಡಿದರು. ಈ ಜೋಡಿ ಐದನೇ ವಿಕೆಟ್‌ಗೆ 47ರನ್‌ ಸೇರಿಸಿತು.

ಅಂತಿಮವಾಗಿ ಕೊನೆಯ ದಿನದಾಟದ ಅಂತ್ಯಕ್ಕೆ ಚಾಂಡಿಮಲ್‌ ಪಡೆ 7ವಿಕೆಟ್‌ ಕಳೆದುಕೊಂಡು 75ರನ್‌ಗಳಿಸಿ, ಪಂದ್ಯವನ್ನು ಡ್ರಾ ಮಾಡಿಕೊಂಡಿತು.

ಭಾರತ ಪರ ಉತ್ತಮ ದಾಳಿ ಸಂಘಟಿಸಿದ ಮಧ್ಯಮ ವೇಗಿ ಭುವನೇಶ್ವರ್‌ ಕುಮಾರ್‌ ಎರಡು ಇನಿಂಗ್ಸ್‌ಗಲ್ಲೂ ತಲಾ 4ವಿಕೆಟ್‌ ಪಡೆದು ಮಿಂಚಿದರು.

**

ಸ್ಕೋರ್‌ ವಿವರ

ಭಾರತ ಮೊದಲ ಇನಿಂಗ್ಸ್‌: 172ಕ್ಕೆ ಆಲೌಟ್‌ –ಚೇತೇಶ್ವರ ಪೂಜಾರ 52ರನ್‌. ಸುರಂಗ ಲಕ್ಮಲ್‌ 4ವಿಕೆಟ್‌, ಲಹಿರು ಗಾಮಗೆ 2ವಿಕೆಟ್‌, ಧಶುನ್‌ ಶನಕ 2 ವಿಕೆಟ್‌

ಶ್ರೀಲಂಕಾ ಮೊದಲ ಇನಿಂಗ್ಸ್‌: 294ಕ್ಕೆ ಆಲೌಟ್‌ –ಲಾಹಿರು ತಿರುಮನ್ನೆ 51, ಎಂಜೆಲೋ ಮ್ಯಾಥ್ಯೂಸ್‌ 52, ರಂಗಾನ ಹೆರಾತ್‌ 67. ಭುವನೇಶ್ವರ್‌ ಕುಮಾರ್‌ 4ವಿಕೆಟ್‌, ಮೊಹಮದ್‌ ಶಮಿ 4ವಿಕೆಟ್‌, ಉಮೇಶ್‌ ಯಾದವ್‌ 2ವಿಕೆಟ್‌

ಭಾರತ ಎರಡನೇ ಇನಿಂಗ್ಸ್‌: 8ವಿಕೆಟ್‌ ನಷ್ಟಕ್ಕೆ 352 –ವಿರಾಟ್‌ ಕೊಹ್ಲಿ 104, ಕೆ.ಎಲ್‌.ರಾಹುಲ್‌ 79, ಶಿಖರ್‌ ಧವನ್‌ 94. ಸುರಂಗ ಲಕ್ಮಲ್‌ 3

ಶ್ರೀಲಂಕಾ ಎರಡನೇ ಇನಿಂಗ್ಸ್‌: 7 ವಿಕೆಟ್‌ 75 –ದಿನೇಶ್‌ ಚಾಂಡಿಮಲ್‌ 20, ನಿರೋಶಾನ್‌ ಡಿಕ್ವೆಲ್ಲಾ 27. ಭುವನೇಶ್ವರ್‌ ಕುಮಾರ್‌ 4ವಿಕೆಟ್‌, ಮೊಹಮದ್‌ ಶಮಿ 4ವಿಕೆಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.