ADVERTISEMENT

ತ್ರಿಕೋನ ಟ್ವೆಂಟಿ–20: ಇಂಗ್ಲೆಂಡ್‌ ಜಯಭೇರಿ

ಪಿಟಿಐ
Published 23 ಮಾರ್ಚ್ 2018, 19:30 IST
Last Updated 23 ಮಾರ್ಚ್ 2018, 19:30 IST
ನತಾಲಿ ಸೀವರ್ ಬೌಲಿಂಗ್ ವೈಖರಿ ಪಿಟಿಐ ಚಿತ್ರ
ನತಾಲಿ ಸೀವರ್ ಬೌಲಿಂಗ್ ವೈಖರಿ ಪಿಟಿಐ ಚಿತ್ರ   

ಮುಂಬೈ: ನಥಾಲಿ ಸೀವರ್‌ (68, 29ಕ್ಕೆ2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಇಂಗ್ಲೆಂಡ್ ಮಹಿಳೆ ಯರ ತಂಡ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಪಂದ್ಯದಲ್ಲಿ ಶುಕ್ರ ವಾರ ಆಸ್ಟ್ರೇಲಿಯಾ ಎದುರು 8 ವಿಕೆಟ್‌ಗಳ ಜಯಿಸಿತು.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ವನಿತೆಯರ ಬಳಗ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 149 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ 17 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಸೀವರ್ ಅರ್ಧಶತಕ: ಆರಂಭಿಕ ಆಟಗಾರ್ತಿಯರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಟಾಮಿ ಬೆಮಂಟ್‌ (ಅಜೇಯ 58, 44ಎ, 8ಬೌಂ) ಆಸರೆಯಾದರು. ಬಳಿಕ ಜೊತೆಯಾದ ನತಾಲಿ ಸೀವರ್ (ಅಜೇಯ 68, 43ಎ, 10ಬೌಂ, 2 ಸಿ) ಉತ್ತಮ ಇನಿಂಗ್ಸ್ ಕಟ್ಟಿದರು. ಈ ಜೋಡಿ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿತು.

ADVERTISEMENT

ರಚೆಲ್‌ ಹೋರಾಟ ವ್ಯರ್ಥ: ಆರಂಭಿಕ ಆಟಗಾರ್ತಿಯರು ಬೇಗನೆ ಕುಸಿತ ಅನುಭವಿಸಿದ ಬಳಿಕ ಆಸ್ಟ್ರೇಲಿಯಾ ತಂಡದ ಮಧ್ಯಮಕ್ರಮಾಂಕದ ಆಟಗಾರ್ತಿ ರಚೆಲ್ ಹೇನಸ್‌ (65, 45ಎ, 8ಬೌಂ, 1ಸಿ) ಉತ್ತಮ ಇನಿಂಗ್ಸ್ ಕಟ್ಟಿದರು.

ಆದರೆ ಕೆಳಕ್ರಮಾಂಕದ ಆಟಗಾರ್ತಿಯರು ನೆರವು ನೀಡಲಿಲ್ಲ. ಆ್ಯಷ್ಲೆ ಗಾರ್ಡನರ್ (28) ಅವರು ವಿಕೆಟ್ ಒಪ್ಪಿಸಿದ ನಂತರ ಕ್ರೀಸ್‌ಗೆ ಬಂದ ಬ್ಯಾಟ್ಸ್‌ವುಮನ್‌ಗಳು ಎರಡಂಕಿ ಗಡಿ ದಾಟಲಿಲ್ಲ.

ಸೀವರ್‌ ಆಸ್ಟ್ರೇಲಿಯಾ ಬ್ಯಾಟ್ಸ್‌ವುಮನ್‌ಗಳಿಗೆ ಸಿಂಹಸ್ವಪ್ನರಾದರು. 29 ರನ್‌ ನೀಡಿದ ಅವರು ಎರಡು ವಿಕೆಟ್ ಕಬಳಿಸಿದರು. ಜೆನ್ನಿ ಗನ್‌ ಮೂರು ವಿಕೆಟ್‌ಗಳಿಂದ ಎದುರಾಳಿ ತಂಡವನ್ನು ಕಟ್ಟಿಹಾಕಿದರು.

ಸಂಕ್ಷಿಪ್ತ ಸ್ಕೋರು

ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 149 (ಅಲಿಸ್ಸಾ ಹೆಲಿ 31, ‌ಆ್ಯಷ್ಲೆ ಗಾರ್ಡನರ್‌ 28, ರಚೆಲ್ ಹೇನಸ್‌ 65; ನಥಾಲಿ ಸೀವರ್‌ 29ಕ್ಕೆ2, ಜೆನ್ನಿಗನ್‌ 26ಕ್ಕೆ3).

ಇಂಗ್ಲೆಂಡ್‌: 17 ಓವರ್‌ಗಳಲ್ಲಿ 2 ವಿಕೆಟ್‌ಗೆ 150 (ಟಾಮಿ ಬೆಮಂಟ್‌ 58, ನಥಾಲಿ ಸೀವರ್‌ 68).

ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 8 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.