ADVERTISEMENT

ದಾಲ್ಮಿಯಗೆ ಮತ್ತೆ ಬಿಸಿಸಿಐ ಚುಕ್ಕಾಣಿ

ಅನುರಾಗ್‌ ಠಾಕೂರ್‌ ನೂತನ ಕಾರ್ಯದರ್ಶಿ; ಸಂಜಯ್‌ ಪಟೇಲ್‌ಗೆ ಸೋಲು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಚೆನ್ನೈ (ಪಿಟಿಐ): ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿಯ ಚುಕ್ಕಾಣಿ ಮತ್ತೆ ಜಗಮೋಹನ್‌ ದಾಲ್ಮಿಯ ಕೈಗೆ ಬಂದಿದೆ. ಹಿರಿಯ ಆಡಳಿತಗಾರ ದಾಲ್ಮಿಯ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಚೆನ್ನೈನಲ್ಲಿ ಸೋಮವಾರ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಅವರ ಆಯ್ಕೆ ನಡೆದಿದೆ. ಅನುರಾಗ್‌ ಠಾಕೂರ್‌ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದರೆ, ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆಯ ಅಮಿತಾಭ್‌ ಚೌಧರಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.

74ರ ಹರೆಯದ ದಾಲ್ಮಿಯ ಒಂದು ದಶಕದ ಬಿಡುವಿನ ಬಳಿಕ  ಈ ಮಹತ್ವದ ಹುದ್ದೆಯನ್ನು ಅಲಂಕರಿಸಿದ್ದಾರೆ. ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರೂ ಆಗಿರುವ ದಾಲ್ಮಿಯ 2001ರಿಂದ ಮೂರು ವರ್ಷದ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು. 2013ರಲ್ಲಿ ಅವರು ಹಂಗಾಮಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಪದಚ್ಯುತ ಅಧ್ಯಕ್ಷ ಎನ್‌. ಶ್ರೀನಿವಾಸನ್‌ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿತ್ತು.  ಬಿಸಿಸಿಐ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯ ಹೆಸರನ್ನು ಸೂಚಿಸುವ ಅವಕಾಶ ಈ ಬಾರಿ ಪೂರ್ವ ವಲಯಕ್ಕೆ ಇತ್ತು. ಈ ವಲಯ ದಾಲ್ಮಿಯ ಹೆಸರನ್ನು ಮಾತ್ರ ಸೂಚಿಸಿದ್ದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಶರದ್‌ ಪವಾರ್‌ ಹೆಸರನ್ನು ಪೂರ್ವ ವಲಯದ ಯಾರೂ ಸೂಚಿಸಿರಲಿಲ್ಲ. ಈ ಕಾರಣ ಅವರು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು.

ಉಪಾಧ್ಯಕ್ಷರ ಎಲ್ಲ ಸ್ಥಾನಗಳು ಶ್ರೀನಿವಾಸನ್‌ ಬಣಕ್ಕೆ
ಮಂಡಳಿಯ ಐದೂ ಉಪಾಧ್ಯಕ್ಷರ ಸ್ಥಾನಗಳು ಶ್ರೀನಿವಾಸನ್‌ ಬಣದ ಪಾಲಾಗಿವೆ. ಆಂಧ್ರದ ಜಿ. ಗಂಗರಾಜು, ಅಸ್ಸಾಂನ ಗೌತಮ್‌ ರಾಯ್‌ ಹಾಗೂ ಜಮ್ಮು ಮತ್ತು ಕಾಶ್ಮೀರದ ಎಂ.ಎಲ್‌. ನೆಹರು ಅವಿರೋಧವಾಗಿ ಆಯ್ಕೆಯಾದರು.

ಇತರ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಿತು. ಟಿ.ಸಿ. ಮ್ಯಾಥ್ಯೂ ಅವರು ರವಿ ಸಾವಂತ್‌ ವಿರುದ್ಧ ಗೆದ್ದರೆ, ಸಿ.ಕೆ. ಖನ್ನಾ ಅವರು ಜ್ಯೋತಿರಾದಿತ್ಯ ಸಿಂಧ್ಯಾ ವಿರುದ್ಧ ಜಯ ಪಡೆದರು. ಸಾವಂತ್‌ ಮತ್ತು ಸಿಂಧ್ಯಾ ಅವರು ಪವಾರ್‌ ಬಣದಲ್ಲಿ ಗುರುತಿಸಿಕೊಂಡಿದ್ದರು.

ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಅಮಿತಾಭ್‌ ಚೌಧರಿ ಮತ್ತು ಗೋವಾದ ಚೇತನ್‌ ದೇಸಾಯಿ ನಡುವೆ ಸ್ಪರ್ಧೆ ಇತ್ತು. ಒಟ್ಟು 30 ಮತಗಳಲ್ಲಿ ಇಬ್ಬರೂ ತಲಾ 15 ಮತಗಳನ್ನು ಪಡೆದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಹಂಗಾಮಿ ಅಧ್ಯಕ್ಷ ಶಿವಲಾಲ್‌ ಯಾದವ್‌ ಅವರು ಚೌಧರಿ ಪರವಾಗಿ ಮತ ಹಾಕಿದ ಕಾರಣ ದೇಸಾಯಿಗೆ ಸೋಲು ಎದುರಾಯಿತು.

ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅನಿರುದ್ಧ್‌ ಚೌಧರಿ 16–13 ಮತಗಳಿಂದ ರಾಜೀವ್‌ ಶುಕ್ಲಾ ಅವರನ್ನು ಸೋಲಿಸಿದರು.

ಅಚ್ಚರಿಗೆ ಕಾರಣವಾದ ಠಾಕೂರ್‌ ಆಯ್ಕೆ
ಶರದ್ ಪವಾರ್‌ ಬಣದ ಅನುರಾಗ್‌ ಠಾಕೂರ್‌ ಕಾರ್ಯದರ್ಶಿಯಾಗಿ ಆಯ್ಕೆಯಾದದ್ದು ವಾರ್ಷಿಕ ಮಹಾಸಭೆಯಲ್ಲಿ ಕಂಡುಬಂದ ಅಚ್ಚರಿಯ ಬೆಳವಣಿಗೆ. ಇತರ ಎಲ್ಲ ಸ್ಥಾನಗಳನ್ನು ಶ್ರೀನಿವಾಸನ್‌ ಬಣ ಗೆದ್ದಿದೆ.  ಆದರೆ ಕಾರ್ಯದರ್ಶಿ ಸ್ಥಾನವನ್ನು ತನ್ನದಾಗಿಸಿಕೊಳ್ಳಲು ವಿಫಲವಾಗಿದೆ.

ಶರದ್‌ ಪವಾರ್‌ ಬಣದಲ್ಲಿ ಗುರುತಿಸಿಕೊಂಡಿರುವ ಬಿಜೆಪಿಯ ನಾಯಕ ಠಾಕೂರ್‌ ಅವರು ಶ್ರೀನಿವಾಸನ್‌ ಬಣದ ಅಭ್ಯರ್ಥಿ ಸಂಜಯ್‌ ಪಟೇಲ್‌ ವಿರುದ್ಧ ಗೆದ್ದರು.

ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿರುವ ಠಾಕೂರ್ ಕೇವಲ ಒಂದು ಮತದ ಅಂತರದ ಗೆಲುವು ಪಡೆದರು. ಆದ್ದರಿಂದ ಇಲ್ಲಿ ಅಡ್ಡ ಮತದಾನ ನಡೆದಿರುವುದು ಸ್ಪಷ್ಟ.  ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಪ್ರತಿನಿಧಿಯಾಗಿ ವಾರ್ಷಿಕ ಮಹಾಸಭೆಗೆ ಬಂದಿದ್ದ ಶ್ರೀನಿವಾಸನ್‌ ಕೇವಲ ಮತದಾನದಲ್ಲಿ ಮಾತ್ರ ಪಾಲ್ಗೊಂಡರು. ಮಂಡಳಿಯ ಯಾವುದೇ ಸ್ಥಾನಕ್ಕೆ ಸ್ಪರ್ಧಿಸದಂತೆ ಮತ್ತು ಸಭೆಯ ಅಧ್ಯಕ್ಷತೆ ವಹಿಸದಂತೆ ಸುಪ್ರೀಂ ಕೋರ್ಟ್‌ ಅವರಿಗೆ ಸೂಚಿಸಿತ್ತು.

ಮಹಾಸಭೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಪದಾಧಿಕಾರಿಗಳ ಪಟ್ಟಿಯನ್ನು ಮಾತ್ರ ನೀಡಿದೆ. ಯಾರು ಎಷ್ಟು ಮತಗಳನ್ನು ಪಡೆದಿದ್ದಾರೆ ಎಂಬುದರ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. 

2013–14ರ ಸಾಲಿನ ವಾರ್ಷಿಕ ಲೆಕ್ಕಪತ್ರಗಳಿಗೆ ಸಭೆಯಲ್ಲಿ ಒಪ್ಪಿಗೆ ಲಭಿಸಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಶ್ರೀನಿವಾಸನ್‌ ಐಸಿಸಿ ಮುಖ್ಯಸ್ಥರ ಹುದ್ದೆಯಲ್ಲಿ ಮುಂದುವರಿಯುವುದಕ್ಕೆ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಇನ್ನು ಮುಂದೆ ಐಸಿಸಿ ಸಭೆಗಳಲ್ಲಿ ಠಾಕೂರ್‌ ಅವರು ಬಿಸಿಸಿಐ ಪ್ರತಿನಿಧಿಯಾಗಿ ಪಾಲ್ಗೊಳ್ಳುವರು ಎಂಬ ನಿರ್ಧಾರವನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು. ಅದೇ ರೀತಿ, ಈಗ ಇರುವ ರಾಷ್ಟ್ರೀಯ ಆಯ್ಕೆ ಸಮಿತಿಯ ಅವಧಿಯನ್ನು ಆರು ತಿಂಗಳುಗಳವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ.

‘ಬಿಸಿಸಿಐ ಶ್ರೀನಿವಾಸನ್ ನಿಯಂತ್ರಣದಲ್ಲಿಲ್ಲ’
ಚೆನ್ನೈ (ಪಿಟಿಐ): ‘ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಶ್ರೀನಿವಾಸನ್‌ ಅವರ ಹಿಡಿದಲ್ಲಿಲ್ಲ ಎಂಬುದು ಚುನಾವಣೆಯಲ್ಲಿ ಸಾಬೀತಾಗಿದೆ’ ಎಂದು ಶರದ್‌ ಪವಾರ್‌ ಹೇಳಿದ್ದಾರೆ.

ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪವಾರ್‌ ಬಣದ ಅನುರಾಗ್‌ ಠಾಕೂರ್‌ ಜಯ ಪಡೆದಿದ್ದರು.
‘ಇಡೀ ಮಂಡಳಿಯನ್ನು ಶ್ರೀನಿವಾಸನ್‌ ಅವರೇ ನಿಯಂತ್ರಿಸುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಂತಹ ಪರಿಸ್ಥಿತಿ ಇಲ್ಲ ಎಂಬುದನ್ನು ಚುನಾವಣೆ ಸಾಬೀತುಪಡಿಸಿದೆ’ ಎಂದಿದ್ದಾರೆ.

ನೀವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿರಲಿಲ್ಲವೇ ಎಂಬ ಪ್ರಶ್ನೆಗೆ, ‘ಇಲ್ಲ. ನಾನು ಸ್ಪರ್ಧಿಸಲು ಬಯಸಿರಲಿಲ್ಲ. ಬಿಸಿಸಿಐ ನಿಯಮದಂತೆ ಈ ಬಾರಿ ಪೂರ್ವ ವಲಯದ ಯಾರಾದರೊಬ್ಬರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಿತ್ತು’ ಎಂದು ಪವಾರ್‌ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT