ADVERTISEMENT

ದೋನಿ ರ್‍ಯಾಂಕಿಂಗ್‌ ಕುಸಿತ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಬ್ರಿಸ್ಬೇನ್‌ (ಪಿಟಿಐ): ಭಾರತ ಕ್ರಿಕೆಟ್ ತಂಡದ ಉಪನಾಯಕ ವಿರಾಟ್‌ ಕೊಹ್ಲಿ ಹಾಗೂ ಮಹೇಂದ್ರಸಿಂಗ್‌ ದೋನಿ ಇತ್ತೀಚೆಗೆ ಐಸಿಸಿ ಬಿಡುಗಡೆ ಮಾಡಿರುವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿತ ಕಂಡಿದ್ದಾರೆ. ಬ್ಯಾಟ್ಸ್‌ಮನ್‌ಗಳ ರ್‍ಯಾಂಕಿಂಗ್‌ನಲ್ಲಿ ಕೊಹ್ಲಿ ನಾಲ್ಕನೇ ಸ್ಥಾನ ಪಡೆದಿದ್ದರೆ, ದೋನಿ 10ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕೊಹ್ಲಿ ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡರೂ ಭಾರತದ ಅಗ್ರಗಣ್ಯ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ರೋಹಿತ್ ಶರ್ಮ ಹಾಗೂ ಸುರೇಶ್‌ ರೈನಾ ಅಗ್ರ 20ರೊಳಗೆ ಸ್ಥಾನ ಪಡೆದಿದ್ದಾರೆ. 3 ಸ್ಥಾನ ಕುಸಿತಗೊಂಡಿರುವ ರೋಹಿತ್‌ 16ನೇ ಸ್ಥಾನದಲ್ಲಿದ್ದಾರೆ. 4 ಸ್ಥಾನ ಮೇಲೇರಿದ ರೈನಾ 20ನೇ ಸ್ಥಾನ ಗಳಿಸಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ಭಾರತದ ಮೊಹಮ್ಮದ್‌ ಶಮಿ 14 ಸ್ಥಾನ ಏರಿಕೆ ಕಂಡು 11ನೇ ಸ್ಥಾನದಲ್ಲಿದ್ದಾರೆ.  ವಿಶ್ವಕಪ್‌ನಲ್ಲಿ ಎಂಟು ವಿಕೆಟ್ ಪಡೆದಿರುವ ರವಿಚಂದ್ರನ್‌ ಅಶ್ವಿನ್‌ 6 ಸ್ಥಾನ ಮೇಲೇರಿ 16ನೇ ರ್‍ಯಾಂಕಿಂಗ್ ಪಡೆದುಕೊಂಡಿದ್ದಾರೆ.ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಭಾರತದ ಜಡೇಜ 7ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿಶ್ವಕಪ್‌ನಲ್ಲಿ ಉತ್ತಮ ಆಟ ಆಡಿದ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್‌ ಮೊದಲ ಸ್ಥಾನಕ್ಕೆ ಏರಿದ್ದಾರೆ.

ತಂಡಗಳ ರ್‍ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 120 ರೇಟಿಂಗ್‌ ಪಾಯಿಂಟ್ಸ್ ಹೊಂದಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, 116 ಪಾಯಿಂಟ್ಸ್‌ಗಳಿಂದ ಹಾಲಿ ಚಾಂಪಿಯನ್‌ ಭಾರತ ದ್ವಿತೀಯ ಸ್ಥಾನದಲ್ಲಿದೆ. ದ. ಆಫ್ರಿಕಾ ಮತ್ತು ಶ್ರೀಲಂಕಾ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ನ್ಯೂಜಿಲೆಂಡ್‌ ಐದನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.