ADVERTISEMENT

ಧ್ವಜ ಹಿಡಿಯಲಿರುವ ಸಿಂಧು

ಪಿಟಿಐ
Published 24 ಮಾರ್ಚ್ 2018, 19:30 IST
Last Updated 24 ಮಾರ್ಚ್ 2018, 19:30 IST
ಪಿ.ವಿ ಸಿಂಧು
ಪಿ.ವಿ ಸಿಂಧು   

ನವದೆಹಲಿ: ಅಗ್ರರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಅಟಗಾರ್ತಿ ಪಿ.ವಿ ಸಿಂಧು ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನೆ ವೇಳೆ ಭಾರತ ತಂಡದ ಪರ ಧ್ವಜ ಹಿಡಿಯಲಿದ್ದಾರೆ.

‘ಏಪ್ರಿಲ್‌ 4ರಂದು ನಡೆಯುವ ಸಮಾರಂಭದಲ್ಲಿ ಸಿಂಧು ಧ್ವಜ ಹಿಡಿದು ಸಾಗಲಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ಆಟಗಾರ್ತಿಗೆ ಈ ಗೌರವ ಒಲಿದಿದೆ’ ಎಂದು ಭಾರತ ಒಲಿಂಪಿಕ್‌ ಸಮಿತಿ ಹೇಳಿದೆ.

ಬಿಡಬ್ಲ್ಯುಎಫ್‌ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ಆಟಗಾರ್ತಿ ಸಿಂಧು ಗೋಲ್ಡ್‌ಕೋಸ್ಟ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರು.

ADVERTISEMENT

ಹಿಂದಿನ ಮೂರು ಕಾಮನ್‌ವೆಲ್ತ್‌ ಕೂಟಗಳಲ್ಲಿ ಭಾರತದ ಶೂಟರ್‌ಗಳಿಗೆ ಈ ಗೌರವ ಒಲಿದಿತ್ತು. 2014ರಲ್ಲಿ ವಿಜಯ್ ಕುಮಾರ್ ಧ್ವಜ ಹಿಡಿದಿದ್ದರು. 2010ರಲ್ಲಿ ಭಾರತದಲ್ಲಿ ನಡೆದ ಕೂಟದಲ್ಲಿ ಅಭಿನವ್ ಬಿಂದ್ರಾ ಹಾಗೂ 2006ರ ಮೆಲ್ಬರ್ನ್‌ ಕ್ರೀಡಾಕೂಟದಲ್ಲಿ ಶೂಟರ್‌ ರಾಜ್ಯವರ್ಧನ್‌ ಸಿಂಗ್ ರಾಥೋಡ್‌ ಅವರಿಗೆ ಅವಕಾಶ ಸಿಕ್ಕಿತ್ತು.

*

ಚಿನ್ನ ಗೆಲ್ಲುವ ಅವಕಾಶ ಇದೆ: ಅಮಲರಾಜ್‌
ಚೆನ್ನೈ:
‘ಶ್ರದ್ಧೆಯಿಂದ ಆಡಿದರೆ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಗೆಲ್ಲಬಹುದು’ ಎಂದು ಟೇಬಲ್ ಟೆನಿಸ್ ಆಟಗಾರ ಅಂಥೋಣಿ ಅಮಲರಾಜ್‌ ಹೇಳಿದ್ದಾರೆ.

2012ರ ಸೀನಿಯರ್ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಅಚಂತ ಶರತ್ ಕಮಲ್ ಅವರನ್ನು ಮಣಿಸಿದ ಬಳಿಕ ಅಮಲರಾಜ್ ಈ ಕ್ರೀಡೆಯಲ್ಲಿ ಮುಂಚೂಣಿ ಸಾದಿಸಿದರು.

ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಕೂಟದಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ನವದೆಹಲಿಯಲ್ಲಿ ನಡೆದ ಕೂಟದಲ್ಲಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕಂಚು ಜಯಿಸಿದ್ದರು.

‘ಈ ಬಾರಿ ಚಿನ್ನಕ್ಕೆ ಗುರಿಯಿಟ್ಟಿದ್ದೇವೆ. ಇದಕ್ಕಾಗಿ ವಿಶೇಷ ತಯಾರಿ ನಡೆಸಿ ಸಜ್ಜುಗೊಂಡಿದ್ದೇವೆ’ ಎಂದು ಚೆನ್ನೈ ಆಟಗಾರ ಹೇಳಿದ್ದಾರೆ.

ಭಾರತ ಟೇಬಲ್ ಟೆನಿಸ್ ತಂಡದಲ್ಲಿ ಅಮಲರಾಜ್ ಸೇರಿದಂತೆ ಜಿ.ಸತ್ಯನ್‌, ಹರ್ಮಿತ್ ದೇಸಾಯಿ ಹಾಗೂ ಸನಿಲ್ ಶೆಟ್ಟಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.