ADVERTISEMENT

ನಾಲ್ಕನೇ ಸುತ್ತಿಗೆ ಸೆರೆನಾ ವಿಲಿಯಮ್ಸ್‌

ಫ್ರೆಂಚ್‌ ಓಪನ್‌ ಟೆನಿಸ್‌: ಮೂರನೇ ಸುತ್ತಿನಲ್ಲಿ ಮುಗ್ಗರಿಸಿದ 2008ರ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 28 ಮೇ 2016, 20:03 IST
Last Updated 28 ಮೇ 2016, 20:03 IST
ಅಮೆರಿಕದ ಸೆರೆನಾ ವಿಲಿಯಮ್ಸ್‌ ಆಟದ ವೈಖರಿ  ಎಎಫ್‌ಪಿ ಚಿತ್ರ
ಅಮೆರಿಕದ ಸೆರೆನಾ ವಿಲಿಯಮ್ಸ್‌ ಆಟದ ವೈಖರಿ ಎಎಫ್‌ಪಿ ಚಿತ್ರ   

ಪ್ಯಾರಿಸ್‌ (ಎಎಫ್‌ಪಿ/ರಾಯಿಟರ್ಸ್‌): ಪ್ರಬಲ ಪೈಪೋಟಿ ಕಂಡು ಬಂದ ಪಂದ್ಯದಲ್ಲಿ ಚುರುಕಿನ ಹೋರಾಟ ಮಾಡಿದ ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತಿನ  ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ನೀಡಿದ್ದಾರೆ.

ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿರುವ ಅಮೆರಿಕದ ಸೆರೆನಾ ವಿಲಿ ಯಮ್ಸ್‌ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.

ಇಲ್ಲಿನ ರೋಲಂಡ್ ಗ್ಯಾರೊಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಶನಿವಾರ  ಸೆರೆನಾ  6–4, 7–6ರಲ್ಲಿ ಫ್ರಾನ್ಸ್‌ನ ಕ್ರಿಸ್ಟಿಯಾನಾ ಮ್ಲಾಡೆನೊವಿಕ್‌ ಎದುರು ಜಯ ಸಾಧಿಸಿದರು.

ಸೆರೆನಾ ಇಲ್ಲಿನ ಅಂಗಳದಲ್ಲಿ ಒಟ್ಟು ಮೂರು ಸಲ ಚಾಂಪಿಯನ್‌ ಆಗಿದ್ದಾರೆ. 2002ರ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಜಯಿಸಿದ್ದ ಅಮೆರಿಕದ ಆಟಗಾರ್ತಿ  2013ರಲ್ಲಿಯೂ ಟ್ರೋಫಿ ಮುಡಿಗೇರಿಸಿಕೊಂಡಿದ್ದರು. ಸೆರೆನಾ ಒಟ್ಟು   21 ಗ್ರ್ಯಾಂಡ್ ಸ್ಲಾಮ್‌ ಟೂರ್ನಿಗ ಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಆಟಗಾರ್ತಿ ಈಗ ಸ್ಟೆಫಿ ಗ್ರಾಫ್‌ ಅವರ ದಾಖಲೆಯನ್ನು ಸರಿಗಟ್ಟುವ ಹುಮ್ಮಸ್ಸಿನಲ್ಲಿದ್ದಾರೆ.  ಸ್ಟೆಫಿ ಗ್ರಾಫ್‌ 22 ಸಲ ಗ್ರ್ಯಾಂಡ್‌ ಸ್ಲಾಮ್‌ನಲ್ಲಿ ಚಾಂಪಿಯನ್‌ ಆಗಿದ್ದಾರೆ.

ಸೆರೆನಾ ಮತ್ತು ಮ್ಲಾಡೆನೊವಿಕ್‌ ನಡುವೆ ಕಠಿಣ ಹೋರಾಟ ಕಂಡು ಬಂದಿತು. ಈ ಪಂದ್ಯ ಒಟ್ಟು ಎರಡೂವರೆ ಗಂಟೆ ನಡೆಯಿತು. ಎರಡನೇ ಸೆಟ್‌ನಲ್ಲಿ ಪಂದ್ಯ ಟೈ ಬ್ರೇಕರ್‌ ಆದಾಗ ಇಬ್ಬರೂ ಆಟಗಾರ್ತಿಯರು ಭಾರಿ ಹಣಾಹಣಿ ನಡೆಸಿದರು. ಸೆರೆನಾ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಎಲಿನಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಮಹಿಳಾ ವಿಭಾಗದ ಡಬಲ್ಸ್‌ನ ಮೂರನೇ ಸುತ್ತಿನ ಇತರ ಪಂದ್ಯಗಳಲ್ಲಿ ಸ್ಪೇನ್‌ನ ಕಾರ್ಲಾ ಸೂರೆಜ್‌ ನಾವೆರೊ 6–4, 3–6, 6–1ರಲ್ಲಿ ಸ್ಲೋವಾಕಿಯಾದ ಡೊಮಿನಿಕಾ ಸಿಬುಲ್ಕೊವಾ ಮೇಲೂ, ಕಜಕಸ್ತಾನದ ಯೂಲಿಯಾ 6–1,6–1ರಲ್ಲಿ ಇಟಲಿಯ ಕಾರಿನ್ ನ್ಯಾಪ್‌ ವಿರುದ್ಧವೂ ಜಯ ಸಾಧಿಸಿದರು.

ಆಘಾತ: ಎಲಿನಾ ಸ್ವಿಟೊಲಿನಾ 6–4,6–4 ರಲ್ಲಿ ಮಾಜಿ ಚಾಂಪಿಯನ್‌ ಅನಾ ಇವಾನೊವಿಕ್‌ ವಿರುದ್ಧ ಭರ್ಜರಿ ಗೆಲುವು ಪಡೆದರು.

28 ವರ್ಷದ ಇವಾನೊವಿಕ್‌ 2008ರ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದಿದ್ದರು. 2007ರ ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ ತಲುಪಿ 2008ರ ಫ್ರೆಂಚ್‌ ಓಪನ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದರು.

ಇಲ್ಲಿ 18ನೇ ಶ್ರೇಯಾಂಕ ಹೊಂದಿ ರುವ ಇವಾನೊವಿಕ್‌ ತಮಗಿಂತಲೂ ಹೆಚ್ಚು ಶ್ರೇಯಾಂಕ ಹೊಂದಿರುವ ಆಟಗಾರ್ತಿಯ ಎದುರು ಜಯ ಪಡೆದು ವಿಶ್ವಾಸ ಹೆಚ್ಚಿಸಿಕೊಂಡರು.

ಪಂದ್ಯದ ಬಳಿಕ ಮಾತನಾಡಿದ ಇವಾನೊವಿಕ್‌ ‘ಟೂರ್ನಿಯ ಆರಂಭದ ಲ್ಲಿಯೇ ಸೋಲು ಕಂಡಿದ್ದರಿಂದ ತುಂಬಾ ಬೇಸರವಾಗಿದೆ. 29 ಬಾರಿ  ತಪ್ಪುಗಳನ್ನು ಮಾಡಿದ್ದರಿಂದ  ಭಾರಿ ಬೆಲೆ ಕಟ್ಟಬೇಕಾ ಯಿತು. ಸಾಕಷ್ಟು ತಪ್ಪುಗಳು ಮಾಡಿದ್ದೇ ಸೋಲಿಗೆ ಕಾರಣವಾಯಿತು’ ಎಂದರು.

ಎರಡನೇ ಸೆಟ್‌ನ ಒಂದು ಹಂತದಲ್ಲಿ ಇವಾನೊವಿಕ್‌  1–4ರಲ್ಲಿ ಹಿನ್ನಡೆ ಹೊಂದಿದ್ದರು. ನಂತರ ಚುರುಕಿನ ಸರ್ವ್‌ ಮತ್ತು ಕರಾರುವಾಕ್ಕಾದ ರಿಟರ್ನ್‌ಗಳ ಮೂಲಕ ತಿರುಗೇಟು ನೀಡಿದರು. ಇದರಿಂದ ಅವರಿಗೆ 4–4ರಲ್ಲಿ ಸಮಬಲ ಸಾಧಿಸಲು ಸಾಧ್ಯವಾಯಿತು.

‘ಎರಡನೇ ಸೆಟ್‌ನ ಆರಂಭದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಆಡಿದೆ. ಆದರೆ ನಂತರವೂ ಸ್ವಯಂಕೃತ ತಪ್ಪು ಮುಂದುವರಿಸಿದ ಕಾರಣ ನಿರಾಸೆ ಎದುರಾಯಿತು’ ಎಂದೂ ಅವರು ಹೇಳಿದರು.

ಖುಷಿ: ‘ಇವಾನೊವಿಕ್‌ ವಿರುದ್ಧ ವೃತ್ತಿ ಜೀವನದಲ್ಲಿ ಪಡೆದ ಮೊದಲ ಗೆಲುವು ಇದಾದ ಕಾರಣ ತುಂಬಾ ಖುಷಿಯಾ ಗಿದೆ. ಮುಂದಿನ ಸುತ್ತಿನ ಕಠಿಣ ಎದು ರಾಳಿ ಸೆರೆನಾ ಅವರ ಸವಾಲು ಎದುರಿ ಸಲು ಇದರಿಂದ ವಿಶ್ವಾಸ ಬಂದಿದೆ’ ಎಂದು ಸ್ವಿಟೊಲಿನಾ ಸಂತೋಷ ಹಂಚಿಕೊಂಡರು.

ಥೀಮ್‌ಗೆ ಗೆಲುವು: ಆಸ್ಟ್ರೇಲಿಯಾದ ಡೊಮಿನಿಕ್‌ ಥೀಮ್‌ ಮೂರನೇ ಸುತ್ತಿನ ಪಂದ್ಯದಲ್ಲಿ 6–7, 6–3ರಲ್ಲಿ ಜರ್ಮನಿಯ  ಅಲೆಕ್ಸಾಂಡರ್‌ ಜ್ವಾರೆವ್‌ ಎದುರು ಜಯ ಸಾಧಿಸಿದರು.

ಶನಿವಾರದ ದಿನದಾಟದಲ್ಲಿ ಟೆನಿಸ್‌ ಪ್ರೇಮಿಗಳ ಪ್ರಮುಖ ಆಕರ್ಷಣೆ ಎನಿ ಸಿದ್ದು  ಸ್ಪೇನ್‌ ಆಟಗಾರರರಾದ ಡೇವಿಡ್‌ ಫೆರರ್‌ ಮತ್ತು ಫಿಲಿಸಿಯಾನೊ ಲೊಪೆಜ್‌ ನಡುವಣ ಪಂದ್ಯ.

ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನಲ್ಲಿ ಫೆರರ್‌ 6–4, 7–6, 6–1ರಲ್ಲಿ ಲೊಪೆಜ್‌ ಅವರನ್ನು ಮಣಿಸಿದರು.

ಫೆರರ್‌ ಒಮ್ಮೆಯೂ ಗ್ರ್ಯಾಂಡ್ ಸ್ಲಾಮ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿಲ್ಲ. 2013ರ ಫ್ರೆಂಚ್‌ ಓಪನ್‌ನಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದಿದ್ದರು. 2011 ಮತ್ತು 2013ರಲ್ಲಿ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರು. ಅಮೆರಿಕ ಓಪನ್‌ನ ಲ್ಲಿಯೂ ಎರಡು ಬಾರಿ ನಾಲ್ಕರ ಘಟ್ಟ ತಲುಪಿ ನಿರಾಸೆ ಕಂಡಿದ್ದರು. ಆದ್ದರಿಂದ ಫೆರರ್ ಈ ಬಾರಿಯ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣು ಇಟ್ಟಿದ್ದಾರೆ.

ಲೊಪೆಜ್‌ ಕೂಡ ಒಮ್ಮೆಯ ಗ್ರ್ಯಾಂಡ್‌ ಸ್ಲಾಮ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿಲ್ಲ. 2005, 2008 ಮತ್ತು 2011ರ ವಿಂಬಲ್ಡನ್‌ ಟೂರ್ನಿಗಳಲ್ಲಿ ಕ್ವಾರ್ಟರ್ ಫೈನಲ್‌ ತಲುಪಿದ್ದರು. ಹೋದ ವರ್ಷದ ಅಮೆರಿಕ ಓಪನ್‌ ಟೂರ್ನಿಯಲ್ಲಿ ಕೂಡ ಎಂಟರ ಘಟ್ಟ ತಲುಪಿದ್ದು ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿನ ಉತ್ತಮ ಸಾಧನೆ ಎನಿಸಿದೆ.

ಕ್ವಾರ್ಟರ್‌ ಫೈನಲ್‌ಗೆ ಪೇಸ್ ಜೋಡಿ:  ಭಾರತದ ಲಿಯಾಂಡರ್ ಪೇಸ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌  ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಎರಡನೇ ಸುತ್ತಿನ ಪೈಪೋಟಿಯಲ್ಲಿ ಶ್ರೇಯಾಂಕ ರಹಿತ ಪೇಸ್‌ ಮತ್ತು ಹಿಂಗಿಸ್‌ ಅವರು 2–6, 7–5, 10–6ರಲ್ಲಿ ನಾಲ್ಕನೇ ಶ್ರೇಯಾಂ ಕದ ಯರಸ್ಲೋವಾ ಶ್ವೆಡೋವಾ ಹಾಗೂ ಫ್ಲೋರಿನ್‌ ಮಾರ್ಗಿಯಾ ಅವರಿಗೆ ಆಘಾತ ನೀಡಿದರು. ಇದರ ಮೂಲಕ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT