ADVERTISEMENT

ಫುಟ್‌ಬಾಲ್‌: ಭಾರತ ತಂಡ ಪ್ರಕಟ

ಪಿಟಿಐ
Published 31 ಆಗಸ್ಟ್ 2017, 19:30 IST
Last Updated 31 ಆಗಸ್ಟ್ 2017, 19:30 IST
ಫುಟ್‌ಬಾಲ್‌: ಭಾರತ ತಂಡ ಪ್ರಕಟ
ಫುಟ್‌ಬಾಲ್‌: ಭಾರತ ತಂಡ ಪ್ರಕಟ   

ನವದೆಹಲಿ: ಮಕಾವ್ ವಿರುದ್ಧದ ಎಎಫ್‌ಸಿ ಏಷ್ಯನ್ ಕಪ್ ಫುಟ್‌ಬಾಲ್‌ ಅರ್ಹತಾ ಟೂರ್ನಿಗೆ ಗುರುವಾರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.

ತಂಡದಲ್ಲಿ ಸ್ಥಾನ ಪಡೆದಿರುವ 24 ಆಟಗಾರರಲ್ಲಿ ಜುಲೈ ತಿಂಗಳಿನಲ್ಲಿ ದೋಹಾದಲ್ಲಿ ನಡೆದ ಎಎಫ್‌ಸಿ 23 ವರ್ಷದೊಳಗಿನ ಆಟಗಾರರ ಶಿಬಿರದಿಂದ ಆರು ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಸೆಪ್ಟೆಂಬರ್ 5 ರಂದು ಭಾರತ ತಂಡ ಮಕಾವ್ ಎದುರು ಪಂದ್ಯ ಆಡಲಿದೆ. ಶುಕ್ರವಾರ ಭಾರತ ತಂಡದ ಆಟಗಾರರು ಮುಂಬೈನಿಂದ ಬ್ಯಾಂಕಾಕ್‌ಗೆ ಪ್ರಯಾಣಿಸಲಿದ್ದಾರೆ.

ADVERTISEMENT

ಎಎಫ್‌ಸಿ ಕಪ್‌ ‘ಎ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನ ಕಾಯ್ದುಕೊಂಡಿದೆ. ಮ್ಯಾನ್ಮಾರ್ ಹಾಗೂ ಕರ್ಗಿಸ್ ರಿಪಬ್ಲಿಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸತತ ಗೆಲುವು ದಾಖಲಿಸಿತ್ತು.

‘ಮಕಾವ್ ತಂಡವನ್ನು ಹಗುರವಾಗಿ ಪರಿಗಣಿಸಿಲ್ಲ. ಈ ತಂಡ ತವರಿನ ಅಭಿಮಾನಿಗಳ ಎದುರು ಆಡಲಿದೆ. ನಮ್ಮ ಆಟಗಾರರು ಅವರ ಅಂಗಳದಲ್ಲಿ ಆಡಲಿರುವುದರಿಂದ ಉತ್ತಮ ಸಿದ್ಧತೆಯೊಂದಿಗೆ ಕಣಕ್ಕಿಳಿಯಲಿದ್ದೇವೆ’ ಎಂದು ರಾಷ್ಟ್ರೀಯ ಕೋಚ್ ಸ್ಟೀಫನ್ ಕಾನ್ಸ್‌ಟಂಟೈನ್ ಹೇಳಿದ್ದಾರೆ.

ಆಗಸ್ಟ್‌ 12ರಿಂದ ಭಾರತ ತಂಡ ಮುಂಬೈನಲ್ಲಿ ಅಭ್ಯಾಸ ಶಿಬಿರ ನಡೆಸಿದೆ. ತ್ರಿಕೋನ ಸರಣಿಯಲ್ಲಿ ಮಾರಿಷಸ್, ಸೇಂಟ್ ಕಿಟ್ಟೀಸ್ ಮತ್ತು ನೆವಿಸ್ ವಿರುದ್ಧ ಎರಡು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ.

‘ಈ ಪಂದ್ಯಗಳನ್ನು ಭಾರತ ತಂಡ ಮಕಾವ್ ವಿರುದ್ಧದ ಪಂದ್ಯದ ಅಭ್ಯಾಸದ ದೃಷ್ಟಿಯಿಂದ ಆಡಿತ್ತು. ಇಲ್ಲಿ ಆಟಗಾರರು ಸಾಕಷ್ಟು ಹೊಸ ಸಂಗತಿಗಳನ್ನು ಕಲಿತಿದ್ದಾರೆ’ ಎಂದು ಕೋಚ್ ಹೇಳಿದ್ದಾರೆ.

ಭಾರತ ಫುಟ್‌ಬಾಲ್ ತಂಡದ ಮಾಜಿ ಆಟಗಾರ ಐ.ಎಮ್.ವಿಜಯನ್‌ ಕೂಡ ಮಕಾವ್‌ಗೆ ಪ್ರಯಾಣ ಮಾಡಲಿದ್ದಾರೆ. ಭಾರತ ತಂಡದ ಸಲಹೆಗಾರರಾಗಿ ಅವರು ತಂಡಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ.

ತಂಡ ಇಂತಿದೆ: ಗೋಲ್‌ಕೀಪರ್‌: ಗುರುಪ್ರೀತ್ ಸಿಂಗ್ ಸಂಧು, ಸುಬ್ರತಾ ಪಾಲ್‌, ಅಲ್ಬಿನೊ ಗೋಮ್ಸ್‌.

ಡಿಫೆಂಡರ್‌: ಪ್ರೀತಮ್ ಕೊತಾಲ್‌, ಲಾಲ್‌ರುತ್‌ಹರಾ, ಸಂದೇಶ್‌ ಜಿಂಗನ್‌, ಅನಾಸ್ ಎಡತೊಡಿಕಾ, ಅರ್ನಬ್‌ ಮೊಂಡಲ್‌, ಸಲಾಮ್‌ ರಂಜನ್ ಸಿಂಗ್‌, ನರಾಯಣ ದಾಸ್‌, ಜೆರಿ ಲಾಲ್‌ರಿಂಜುಲಾ. 

ಮಿಡ್‌ಫೀಲ್ಡರ್ಸ್‌: ಉದಾಂತ ಸಿಂಗ್‌, ಜಾಕಿಚಾಂದ್ ಸಿಂಗ್‌, ನಿಖಿಲ್ ಪೂಜಾರಿ, ಎಗೆನ್‌ಸನ್ ಲಿಂಗ್ಡೊ, ರೊವ್ಲಿನ್ ಬೋರ್ಗಸ್‌, ಮೊಹಮ್ಮದ್ ರಫೀಕ್‌, ಜರ್ಮನ್‌ಪ್ರೀತ್ ಸಿಂಗ್‌, ಅನಿವೃದ್‌ ಥಾಪ, ಹಾಲಿಚರಣ್‌ ನರ್ಜರಿ.

ಫಾರ್ವರ್ಡ್‌: ಜೆಲೆ ಲಾಲ್‌ಪೆಕುಲಾ, ಸುನಿಲ್ ಚೆಟ್ರಿ, ರಾಬಿನ್ ಸಿಂಗ್‌, ಬಲವಂತ್ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.