ADVERTISEMENT

ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಭಾರತ ತಂಡಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಢಾಕಾ (ಪಿಟಿಐ/ಐಎಎನ್‌ಎಸ್‌): ಕೊನೆಯ ಅವಧಿಯಲ್ಲಿ ಸತತ ಎರಡು ಗೋಲುಗಳನ್ನು ಬಿಟ್ಟುಕೊಟ್ಟ ಭಾರತ ತಂಡದವರು ಎಎಫ್‌ಸಿ 23 ವರ್ಷದೊಳಗಿನವರ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.

ಬಂಗಬಂಧು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 0–2 ಗೋಲುಗಳಿಂದ ಉಜ್ಬೇಕಿಸ್ತಾನದ ಎದುರು ಶರಣಾಯಿತು.
ಆರಂಭದಿಂದಲೇ ಉಭಯ ತಂಡಗಳ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಇದರಿಂದಾಗಿ ಮೊದಲ 30 ನಿಮಿಷಗಳ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.

ಹೀಗಾಗಿ ಎರಡೂ ತಂಡಗಳ ಆಟಗಾರರು ಗೋಲು ರಹಿತವಾಗಿ ವಿರಾಮಕ್ಕೆ ತೆರಳಬೇಕಾಗಿ ಬಂತು. ವಿರಾಮದ ಬಳಿಕ ಭಾರತ ತಂಡದ ಆಟಗಾರರು  ವೇಗದ ಆಟಕ್ಕೆ ಮುಂದಾದರಲ್ಲದೇ ಮುನ್ನಡೆ ಗೋಲಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಎದುರಾಳಿ ತಂಡದ ಭದ್ರ ರಕ್ಷಣಾ ಕೋಟೆಯನ್ನು ಭೇದಿಸಿ ಚೆಂಡನ್ನು ಗುರಿ ಸೇರಿಸುವುದು ಮಾತ್ರ ಸಾಧ್ಯವಾಗಲಿಲ್ಲ.

ಪಂದ್ಯದುದ್ದಕ್ಕೂ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿದ್ದರಿಂದ ಪಂದ್ಯ ಬಹುತೇಕ ಡ್ರಾದಲ್ಲಿ ಅಂತ್ಯಕಾಣಬಹುದು ಎಂಬುದು ಬಹುತೇಕರ ಭಾವನೆಯಾಗಿತ್ತು. ಆದರೆ ಕೊನೆಯ ಐದು ನಿಮಿಷಗಳ ಅವಧಿಯಲ್ಲಿ ಉಜ್ಬೇಕಿಸ್ತಾನದ ಆಟಗಾರರು ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು.

87ನೇ ನಿಮಿಷದಲ್ಲಿ ಭಾರತ ತಂಡದ ನಾಯಕ ಅಮರಿಂದರ್‌ ಸಿಂಗ್‌ ಮಾಡಿದ ಎಡವಟ್ಟಿಗೆ ತಂಡ ಬೆಲೆ ತೆರಬೇಕಾಯಿತು. ಎದುರಾಳಿ ತಂಡದ ಇಗೊರ್‌ ಸರ್ಜೀವ್‌ ಹೆಡ್‌ ಮಾಡಿದ ಚೆಂಡನ್ನು  ತಡೆಯುವಲ್ಲಿ ಅವರು ವಿಫಲರಾಗಿದ್ದರಿಂದ ತಂಡ 0–1ರ ಹಿನ್ನಡೆ ಅನುಭವಿಸಿತು.

ಆ ಬಳಿಕ ಉಜ್ಬೇಕಿಸ್ತಾನ ತಂಡದ ಆಟಗಾರರು ಮತ್ತೆ ಪಾರಮ್ಯ ಮೆರೆದರು. ‘ಇಂಜುರಿ’ ಅವಧಿಯಲ್ಲಿ (90+2) ಈ ತಂಡದ ನಾಯಕ ವ್ಲಾದಿಮಿರ್‌ ಕೊಜಾಕ್‌ ಚೆಂಡನ್ನು ಗುರಿ ಸೇರಿಸಿ ಭಾರತದ ಆಟಗಾರರನ್ನು ನಿರಾಸೆಯ ಕಡಲಿಗೆ ನೂಕಿದರು. ಭಾರತ ತಂಡ ಮಾರ್ಚ್‌ 29ರಂದು ನಡೆಯುವ ಪಂದ್ಯದಲ್ಲಿ ಸಿರಿಯಾ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.