ADVERTISEMENT

ಬಸವನಗುಡಿ ಈಜು ಕೇಂದ್ರಕ್ಕೆ ಸಮಗ್ರ ಪ್ರಶಸ್ತಿ

ರಾಜ್ಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌: ಸಲೋನಿ ದಲಾಲ್‌ ಉತ್ತಮ ಈಜುಪಟು;

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2017, 19:52 IST
Last Updated 18 ಆಗಸ್ಟ್ 2017, 19:52 IST
ಸಮಗ್ರ ಪ್ರಶಸ್ತಿಯೊಂದಿಗೆ ಬಸವನಗುಡಿ ಈಜು ಕೇಂದ್ರದ ಸ್ಪರ್ಧಿಗಳು
ಸಮಗ್ರ ಪ್ರಶಸ್ತಿಯೊಂದಿಗೆ ಬಸವನಗುಡಿ ಈಜು ಕೇಂದ್ರದ ಸ್ಪರ್ಧಿಗಳು   

ಬೆಂಗಳೂರು: ಬಸವನಗುಡಿ ಈಜು ಕೇಂದ್ರದ (ಬಿಎಸಿ) ತಂಡವು ಶುಕ್ರವಾರ ಮುಕ್ತಾಯವಾದ ರಾಜ್ಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.

ಡಾಲ್ಫಿನ್ ಈಜುಕೇಂದ್ರದ ಆಶ್ರಯ ದಲ್ಲಿ ನಡೆದ ಸ್ಪರ್ಧೆಯಲ್ಲಿ ಬಸವನಗುಡಿ ಕೇಂದ್ರದ ಸ್ಪರ್ಧಿಗಳು 25 ಚಿನ್ನ, 27 ಬೆಳ್ಳಿ ಹಾಗೂ 24 ಕಂಚಿನೊಂದಿಗೆ ಒಟ್ಟು 76 ಪದಕಗಳನ್ನು ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಅಲ್ಲದೇ ಈ ತಂಡ 463 ಪಾಯಿಂಟ್ಸ್ ತನ್ನದಾಗಿಸಿಕೊಂಡಿದೆ. ಗ್ಲೋಬಲ್ ಈಜು ಕೇಂದ್ರ ಒಟ್ಟು 23 ಪದಕಗಳಿಂದ 193 ಪಾಯಿಂಟ್ಸ್‌ ಗಿಟ್ಟಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ.

ಮಹಿಳೆಯರ ವಿಭಾಗದಲ್ಲಿ ಉತ್ತಮ ಈಜುಪಟು ಪ್ರಶಸ್ತಿಯನ್ನು ಬಿಎಸಿಯ ಸಲೋನಿ ದಲಾಲ್‌ ಪಡೆದರೆ, ಪುರುಷರ ವಿಭಾಗದ ಪ್ರಶಸ್ತಿ ಗ್ಲೋಬಲ್ ಕೇಂದ್ರದ ಶ್ರೀಹರಿ ನಟರಾಜ್‌ ಅವರ ಪಾಲಾಯಿತು.

ADVERTISEMENT

ಮಾಳವಿಕಾಗೆ ಚಿನ್ನ: ಬಿಎಸಿಯ ವಿ.ಮಾಳವಿಕಾ ಅಂತಿಮ ದಿನದ ಮಹಿಳೆಯರ 400ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಚಿನ್ನ ಗೆದ್ದರು. 4ನಿಮಿಷ 32.60ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು. ಇದೇ ಈಜು ಕೇಂದ್ರದ ಖುಷಿ ದಿನೇಶ್ (4:41.94) ಬೆಳ್ಳಿ ಗೆದ್ದರೆ, ಎಸ್‌.ವಿ ನಿಕಿತಾ (4:55.87) ಕಂಚಿಗೆ ಕೊರಳೊಡ್ಡಿದರು.

ಪುರುಷರ 400ಮೀ ಫ್ರೀಸ್ಟೈಲ್ ವಿಭಾಗದಲ್ಲಿ ಡಾಲ್ಫಿನ್‌ ಈಜು ಕೇಂದ್ರದ ಸಿ.ಜೆ ಸಂಜಯ್‌ (4:15.87) ಚಿನ್ನ ಗೆದ್ದರೆ, ಬಿಎಸಿಯ ಅವಿನಾಶ್ ಮಣಿ (4:18.82) ಬೆಳ್ಳಿ ಹಾಗೂ ಇದೇ ಈಜು ಕೇಂದ್ರದ ಎಚ್‌.ಎಮ್‌. ಅನಿವೃದ್ಧ್‌ (4:26.09) ಕಂಚು ಜಯಿಸಿದರು.

ಪುರುಷರ 50ಮೀ ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಗ್ಲೋಬಲ್ ಈಜು ಕೇಂದ್ರ ಶ್ರೀಹರಿ ನಟರಾಜ್‌ 27.25ಸೆಕಂಡು ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ಬಿಎಸಿಯ ರಕ್ಷಿತ್.ಯು.ಶೆಟ್ಟಿ (27.68) ಬೆಳ್ಳಿ ಹಾಗೂ ಗ್ಲೋಬಲ್ ಕೇಂದ್ರದ ನಿಶಾಂತ್ ಕುಮಾರ್ (29.64) ಕಂಚು ಗೆದ್ದರು.

ಮಹಿಳೆಯರ 50ಮೀ ಬ್ಯಾಕ್‌ ಸ್ಟ್ರೋಕ್ ವಿಭಾಗದಲ್ಲಿ ಡಾಲ್ಫಿನ್‌ ಕೇಂದ್ರದ ಸುವನಾ ಸಿ. ಭಾಸ್ಕರ್‌ (32.37) ಚಿನ್ನ ಗೆದ್ದರೆ, ಇದೇ ಈಜು ಕೇಂದ್ರದ ನೀನಾ ವೆಂಕಟೇಶ್‌ (34:34) ಬೆಳ್ಳಿ ಹಾಗೂ ಪೂಜಾ ಈಜು ಕೇಂದ್ರದ ಎಮ್‌.ಜೆ ಸ್ಫೂರ್ತಿ (34.70) ಕಂಚು ಗೆದ್ದರು.

ಪುರುಷರ 200ಮೀ ಫ್ಲೈ ವಿಭಾಗದಲ್ಲಿ ಮೊದಲ ಎರಡು ಸ್ಥಾನಗಳನ್ನು ಬಿಎಸಿಯ ಸ್ಪರ್ಧಿಗಳು ಗೆದ್ದುಕೊಂಡರು. ಅವಿನಾಶ್ ಮನಿ (2:10.90) ಚಿನ್ನ, ಎಮ್‌. ರಾಹುಲ್ (2:11.83) ಬೆಳ್ಳಿ, ಗ್ಲೋಬಲ್ ಕೇಂದ್ರದ ಪಿ.ಎ. ಪ್ರಸಿದ್ಧ ಕೃಷ್ಣ (2:12.12) ಕಂಚಿಗೆ ಕೊರಳೊಡ್ಡಿದರು.

ಮಹಿಳೆಯರ 200ಮೀ ಫ್ಲೈ ವಿಭಾ ಗದ ಮೊದಲ ಮೂರೂ ಸ್ಥಾನಗಳನ್ನು ಬಿಎಸಿ ಗೆದ್ದುಕೊಂಡಿದೆ. ದಾಮಿನಿ ಕೆ.ಗೌಡ (2:27.96) ಚಿನ್ನ, ಮಯೂರಿ ಲಿಂಗರಾಜು (2:37.57) ಬೆಳ್ಳಿ, ಎಸ್‌.ವಿ ನಿಖಿತಾ (2:37.84) ಕಂಚು ಗೆದ್ದರು.

ಪುರುಷರ 100ಮೀ ಫ್ರೀಸ್ಟೈಲ್ ವಿಭಾಗದಲ್ಲಿ ಬಸವನಗುಡಿ ಕೇಂದ್ರದ ಅವಿನಾಶ್ ಮನಿ (54.20) ಚಿನ್ನ ಗೆದ್ದರು. ಗ್ಲೋಬಲ್ ಕೇಂದ್ರ ಶ್ರೀಹರಿ ನಟರಾಜ್‌ (54.40) ಬೆಳ್ಳಿ ಹಾಗೂ ಬಸವನ ಗುಡಿ ಕೇಂದ್ರದ ಎಮ್‌. ಪೃಥ್ವಿ (54.56) ಕಂಚು ಜಯಿಸಿದರು.

ಮಹಿಳೆಯರ 100ಮೀ ಫ್ರೀಸ್ಟೈಲ್ ವಿಭಾಗದಲ್ಲಿ ಬಿಎಸಿ ಸ್ಪರ್ಧಿಗಳು ಮೊದಲ ಮೂರೂ ಸ್ಥಾನ ಪಡೆದರು. ವಿ. ಮಾಳವಿಕಾ (1.00.92) ಚಿನ್ನ, ಟಿ. ಸ್ನೇಹಾ (1.02.25) ಬೆಳ್ಳಿ, ಖುಷಿ ದಿನೇಶ್‌ (1:02.95) ಕಂಚು ಗೆದ್ದರು.

ಮಹಿಳೆಯರ 50ಮೀ ಫ್ಲೈ ವಿಭಾಗದಲ್ಲಿ ಬಿಎಸಿ ದಾಮಿನಿ ಕೆ.ಗೌಡ (29.76) ಚಿನ್ನಕ್ಕೆ ಕೊರಳೊಡ್ಡಿದರು. ಈ ವಿಭಾಗದ ಬೆಳ್ಳಿ ಪದಕವನ್ನು ಇದೇ ಕೇಂದ್ರದ ಮಯೂರಿ ಲಿಂಗರಾಜು (30.34) ಗೆದ್ದುಕೊಂಡರು.

ನೂತನ ಕೂಟ ದಾಖಲೆ: ಪುರುಷರ 4X100ಮೀ ಮೆಡ್ಲೆ ವಿಭಾಗದಲ್ಲಿ ಗ್ಲೋಬಲ್ ಈಜು ಕೇಂದ್ರ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿದೆ. ಶ್ರೀಹರಿ ನಟರಾಜ್ ಹಾಗೂ ದಿಲೀಪ್ ಈ ತಂಡದಲ್ಲಿ ಇದ್ದರು. ನಿಗದಿತ ದೂರವನ್ನು ಈ ತಂಡ 4ನಿ.01.51ಸೆಕೆಂಡುಗಳಲ್ಲಿ ಕ್ರಮಿಸಿತು. 2008ರಲ್ಲಿ ಬಿಎಸಿ (4:03.16) ನಿರ್ಮಿಸಿದ್ದ ದಾಖಲೆಯನ್ನು ಮುರಿದು ಹಾಕಿತು.

ಈ ವಿಭಾಗದ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಕ್ರಮವಾಗಿ ಬಸವನಗುಡಿ ಈಜು ಕೇಂದ್ರದ ‘ಎ’ ಮತ್ತು ‘ಬಿ’ ತಂಡಗಳು ಗೆದ್ದುಕೊಂಡವು.

ಮಹಿಳೆಯರ 4X100ಮೀ ಮೆಡ್ಲೆ ವಿಭಾಗದಲ್ಲಿ ಮೊದಲ ಎರಡು ಸ್ಥಾನಗಳು ಬಿಎಸಿ ಪಾಲಾಯಿತು. ಶ್ರಿಯಾ ಆರ್‌.ಭಟ್‌, ಸಲೋನಿ ದಲಾಲ್ ಅವರನ್ನು ಒಳಗೊಂಡ ‘ಎ’ ತಂಡ 4:47.26ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನ ಗೆದ್ದಿತು. ‘ಬಿ’ ತಂಡ (4:55.95) ಬೆಳ್ಳಿ ಗೆದ್ದರೆ, ಡಾಲ್ಫಿನ್ ಕೇಂದ್ರ ಕಂಚು ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.