ADVERTISEMENT

ಭಾರತಕ್ಕೆ ಪದಕದ ವಿಶ್ವಾಸದಲ್ಲಿ ಖನ್ನಾ

​ಪ್ರಜಾವಾಣಿ ವಾರ್ತೆ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST

ನವದೆಹಲಿ/ಮಾಸ್ಕೊ  (ಪಿಟಿಐ/ಎಎಫ್‌ಪಿ): ಡೇವಿಸ್‌ ಕಪ್‌ ಏಷ್ಯಾ ಒಸೀನಿಯಾ ಗುಂಪು–1ರ ಟೂರ್ನಿಯ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ ಅವರು ನೀಡಿದ ಪ್ರದರ್ಶನದ ಬಗ್ಗೆ ಅಖಿಲ ಭಾರತ ಟೆನಿಸ್‌ ಸಂಸ್ಥೆ ಮುಖ್ಯಸ್ಥ ಅನಿಲ್‌ ಖನ್ನಾ ಮೆಚ್ಚುಗೆ ವ್ಯಕ್ತಪಡಿಸಿದ್ದು ‘ರಿಯೊ ಒಲಿಂಪಿಕ್ಸ್‌ನಲ್ಲಿ  ಭಾರತ ಪದಕ ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಗೆಲ್ಲುವ ವಿಶ್ವಾಸವಿದೆಯೇ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ‘ಪದಕ ಗೆದ್ದರೆ ಅದರಲ್ಲಿ ಅಚ್ಚರಿ ಪಡುವಂಥದ್ದು ಏನೂ ಇಲ್ಲ’ ಎಂದು ಖನ್ನಾ ನುಡಿದರು.

‘ಪುರುಷರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಪದಕ ಗೆಲ್ಲಲು ಭಾರತಕ್ಕೆ ಉತ್ತಮ ಅವಕಾಶವಿದೆ. ರೋಜರ್‌ ಫೆಡರರ್‌, ರಫೆಲ್‌ ನಡಾಲ್‌, ನೊವಾಕ್‌ ಜೊಕೊವಿಚ್‌, ಆ್ಯಂಡಿ ಮರ್ರೆ ಅವರಂಥ   ಆಟಗಾರರು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಆದ್ದರಿಂದ ಪೈಪೋಟಿಯೂ ಹೆಚ್ಚಾಗಿರುತ್ತದೆ’ ಎಂದೂ ಖನ್ನಾ ನುಡಿದರು. ಒಲಿಂಪಿಕ್ಸ್‌ಗಿಲ್ಲ ಟಿಯಾನ್‌: ಲಂಡನ್‌ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ ಸ್ಪರ್ಧೆಯ ಡಬಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಟಿಯಾನ್‌ ಕಿಂಗ್ ಮತ್ತು ಜಾಹೊ ಯುನ್ಲೆಯಿ ಅವರ ಹೆಸರುಗಳನ್ನು ಚೀನಾ ರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಹಿಂದೆ ಪಡೆದಿರುವ ಕಾರಣ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ.


29  ವರ್ಷದ ಜಾಹೊ ಲಂಡನ್‌ ಒಲಿಂಪಿಕ್ಸ್‌ನ ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಒಂದೇ ಒಲಿಂಪಿಕ್ಸ್‌ನ ಎರಡು ಬ್ಯಾಡ್ಮಿಂಟನ್‌ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದ ಚೀನಾದ ಮೊದಲ ಸ್ಪರ್ಧಿ ಎನ್ನುವ ಗೌರವ ಹೊಂದಿದ್ದಾರೆ. ಆಗಸ್ಟ್‌ 11ರಿಂದ 20ರ ವರೆಗೆ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.