ADVERTISEMENT

ಭಾರತದ ಆಟಗಾರರಿಗಿಲ್ಲ ಸ್ಥಾನ

ವಿಶ್ವಕಪ್‌ ಇಲೆವೆನ್‌ ತಂಡಕ್ಕೆ ನ್ಯೂಜಿಲೆಂಡ್‌ನ ಮೆಕ್ಲಮ್‌ ನಾಯಕ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST

ದುಬೈ (ಪಿಟಿಐ/ಐಎಎನ್‌ಎಸ್‌): ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದ್ದ ನ್ಯೂಜಿ ಲೆಂಡ್ ತಂಡದ ನಾಯಕ ಬ್ರೆಂಡನ್‌ ಮೆಕ್ಲಮ್‌ ಐಸಿಸಿ ಪ್ರಕಟಿಸಿರುವ ವಿಶ್ವ ಇಲೆವೆನ್‌ ತಂಡಕ್ಕೆ ನಾಯಕರಾಗಿದ್ದಾರೆ. ಆದರೆ, ಭಾರತದ ಯಾವ ಆಟಗಾರ ನಿಗೂ ತಂಡದಲ್ಲಿ ಸ್ಥಾನ ಲಭಿಸಿಲ್ಲ.

ವಿಶ್ವಕಪ್‌ ಚಾಂಪಿಯನ್‌ ಆಸ್ಟ್ರೇಲಿಯಾ ಮತ್ತು ರನ್ನರ್ಸ್‌ ಅಪ್‌ ನ್ಯೂಜಿಲೆಂಡ್‌ ಆಟಗಾರರೇ ವಿಶ್ವ ಇಲೆವೆನ್‌ ತಂಡದಲ್ಲಿ ಸಿಂಹಪಾಲು ಪಡೆದಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ, ದಕ್ಷಿಣ ಆಫ್ರಿಕಾದ ಮಾರ್ನ್‌ ಮಾರ್ಕೆಲ್‌ ಸ್ಥಾನ ಗಳಿಸಿದ್ದಾರೆ. ಜಿಂಬಾಬ್ವೆಯ ಬ್ರೆಂಡನ್‌ ಟೇಲರ್ ಹನ್ನೆರೆಡನೇ ಸ್ಥಾನದಲ್ಲಿದ್ದಾರೆ.

‘ಆಕ್ರಮಣಕಾರಿಯಾಗಿ, ಚುರುಕಾಗಿ ಮತ್ತು ಎಲ್ಲ ಆಟಗಾರರಲ್ಲಿ ಸ್ಫೂರ್ತಿ ತುಂಬುವ ಸಾಮರ್ಥ್ಯ ಹೊಂದಿರುವ ಮೆಕ್ಲಮ್‌ ಅವರನ್ನು ವಿಶ್ವ ತಂಡಕ್ಕೆ ನಾಯಕರನ್ನಾಗಿ ಆರಿಸಲಾಗಿದೆ. 44 ದಿನ ನಡೆದ ಟೂರ್ನಿಯ ಪ್ರತಿ ಪಂದ್ಯ ದಲ್ಲಿಯೂ ಅವರು ತೋರಿದ ಚಾಣಾಕ್ಷತನ ಮೆಚ್ಚುವಂಥದ್ದು. ತಮ್ಮ ತಂಡವನ್ನು ಫೈನಲ್‌ವರೆಗೆ ಕೊಂಡೊಯ್ದ ಅವರ ಬುದ್ದಿವಂತಿಕೆ ಶ್ಲಾಘನಾರ್ಹ’ ಎಂದು ಐಸಿಸಿ ತಿಳಿಸಿದೆ. ಮೆಕ್ಲಮ್‌ ವಿಶ್ವಕಪ್‌ನಲ್ಲಿ ಒಂಬತ್ತು ಪಂದ್ಯಗಳ ನ್ನಾಡಿದ್ದು ಒಟ್ಟು 328 ರನ್‌ ಗಳಿಸಿದ್ದಾರೆ.

ವಿಶ್ವಕಪ್‌ನಲ್ಲಿ ಶ್ರೇಷ್ಠ ಆಟವಾಡಿದ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗದ ಸಾಧನೆಗಳನ್ನು ಗಮನಿಸಿ ಅವಕಾಶ ನೀಡಲಾಗಿದೆ. ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಸಂಗಕ್ಕಾರ ಟೂರ್ನಿಯಲ್ಲಿ ಸತತ ನಾಲ್ಕು ಶತಕಗಳನ್ನು ಬಾರಿಸಿದ್ದರು. ಜಿಂಬಾಬ್ವೆಯ ಬ್ರೆಂಡನ್‌ ಟೇಲರ್‌ ಆರು ಪಂದ್ಯಗಳಿಂದ 433 ರನ್‌ ಗಳಿಸಿ ಮಿಂಚಿದ್ದರು. ಆದ್ದರಿಂದ ಅವರಿಗೂ ತಂಡದಲ್ಲಿ ಸ್ಥಾನ ಲಭಿಸಿದೆ.

ಉಮೇಶ್‌ ಯಾದವ್‌, ಮೊಹಮ್ಮದ್ ಶಮಿ ಮತ್ತು ಆಫ್‌ ಸ್ಪಿನ್ನರ್‌ ಆರ್‌. ಅಶ್ವಿನ್‌ ಅವರು ತಂಡಕ್ಕೆ ಆಯ್ಕೆ ಮಾಡಬೇಕಾದ ಪಟ್ಟಿಯ ಸ್ಪರ್ಧೆಯಲ್ಲಿದ್ದರು. ಆದರೆ, ಅಂತಿಮ ತಂಡದಲ್ಲಿ ಸ್ಥಾನ ಸಿಗಲಿಲ್ಲ.

‘ಹನ್ನೆರಡು ಆಟಗಾರರ ತಂಡವನ್ನು ಆಯ್ಕೆ ಮಾಡುವುದು ಸವಾಲಿನಿಂದ ಕೂಡಿತ್ತು. ಬಾಂಗ್ಲಾದೇಶದ ಮಹಮು ದುಲ್ಲಾ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಶೈಮನ್‌ ಅನ್ವರ್‌, ಉಮೇಶ್‌ ಯಾದವ್‌, ಶಮಿ, ಪಾಕಿಸ್ತಾನದ ವಹಾಬ್‌ ರಿಯಾಜ್‌, ದಕ್ಷಿಣ ಆಫ್ರಿಕಾದ ಇಮ್ರಾನ್‌ ತಾಹೀರ್‌ ಅವರ ಹೆಸರು ಸ್ಪರ್ಧೆಯಲ್ಲಿತ್ತು’ ಎಂದು ಐಸಿಸಿ ತಿಳಿಸಿದ್ದಾರೆ.

ತಂಡ ಇಂತಿದೆ
ಬ್ರೆಂಡನ್‌ ಮೆಕ್ಲಮ್‌ (ನಾಯಕ, ನ್ಯೂಜಿಲೆಂಡ್‌), ಕುಮಾರ ಸಂಗಕ್ಕಾರ (ವಿಕೆಟ್‌ ಕೀಪರ್‌, ಶ್ರೀಲಂಕಾ), ಮಾರ್ಟಿನ್‌ ಗುಪ್ಟಿಲ್‌ (ನ್ಯೂಜಿಲೆಂಡ್), ಸ್ಟೀವನ್‌ ಸ್ಮಿತ್‌ (ಆಸ್ಟ್ರೇಲಿಯಾ), ಎಬಿ ಡಿವಿಲಿಯರ್ಸ್‌ (ದಕ್ಷಿಣ ಆಫ್ರಿಕಾ), ಗ್ಲೆನ್‌ ಮ್ಯಾಕ್ಸ್‌ವೆಲ್‌ (ಆಸ್ಟ್ರೇಲಿಯಾ), ಕೋರಿ ಆ್ಯಂಡರ್‌ಸನ್‌ (ನ್ಯೂಜಿಲೆಂಡ್‌), ಡೇನಿಯಲ್‌ ವೆಟೋರಿ (ನ್ಯೂಜಿಲೆಂಡ್‌), ಮಿಷೆಲ್‌ ಸ್ಟಾರ್ಕ್‌ (ಆಸ್ಟ್ರೇಲಿಯಾ), ಟ್ರೆಂಟ್ ಬೌಲ್ಟ್‌ (ನ್ಯೂಜಿಲೆಂಡ್), ಮಾರ್ನ್‌ ಮಾರ್ಕೆಲ್‌ (ದಕ್ಷಿಣ ಆಫ್ರಿಕಾ) ಮತ್ತು ಬ್ರೆಂಡನ್‌ ಟೇಲರ್‌ (ಜಿಂಬಾಬ್ವೆ, 12ನೇ ಆಟಗಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.