ADVERTISEMENT

ಭಾರತ ಅಥ್ಲೀಟ್‌ಗಳ ಐತಿಹಾಸಿಕ ಸಾಧನೆ

ರಿಲೇಯಲ್ಲಿ ಮಿಂಚಿನ ಓಟ ಓಡಿದ ಭಾರತದ ಪುರುಷ, ಮಹಿಳಾ ತಂಡ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 18:57 IST
Last Updated 9 ಜುಲೈ 2017, 18:57 IST
ಪುರುಷರ 10,000 ಮೀಟರ್ಸ್ ಓಟದ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಜಿ. ಲಕ್ಷ್ಮಣನ್ (ಬಲ) ಮತ್ತು ಬೆಳ್ಳಿ ಜಯಿಸಿದ ಟಿ. ಗೋಪಿ ಅವರ ಸಂಭ್ರಮ
ಪುರುಷರ 10,000 ಮೀಟರ್ಸ್ ಓಟದ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಜಿ. ಲಕ್ಷ್ಮಣನ್ (ಬಲ) ಮತ್ತು ಬೆಳ್ಳಿ ಜಯಿಸಿದ ಟಿ. ಗೋಪಿ ಅವರ ಸಂಭ್ರಮ   

ಭುವನೇಶ್ವರ್‌: ಆರಂಭದಿಂದಲೇ ಅಮೋಘ ಸಾಮರ್ಥ್ಯ ತೋರಿದ ಭಾರತದ ಅಥ್ಲೀಟ್‌ಗಳು 22ನೇ ಏಷ್ಯನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಂತಿಮ ದಿನ ದಿನ ಗಳಿಸಿದ ಐದು ಚಿನ್ನದ ಪದಕಗಳೊಂದಿಗೆ ಒಟ್ಟು 12 ಬಂಗಾರ ಗೆದ್ದ  ಭಾರತ ಇದೇ ಮೊದಲ ಬಾರಿ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಸ್ಥಾನ ಗಳಿಸಿದೆ. ಆತಿಥೇಯರು ಒಟ್ಟು 29 ಪದಕಗಳನ್ನು ಕೊರಳಿಗೆ ಏರಿಸಿಕೊಂಡು ಚಾಂಪಿಯನ್‌ಷಿಪ್‌ನಲ್ಲಿ ಚೀನಾದ ಆಧಿಪತ್ಯವನ್ನು ಕೊನೆಗೊಳಿಸಿದರು. ಭಾರತದ ಈ ಹಿಂದಿನ ಅತ್ಯುತ್ತಮ ಸಾಧನೆ 1985ರಲ್ಲಿ ದಾಖಲಾಗಿತ್ತು. ಆ ವರ್ಷ 10 ಚಿನ್ನ, ಐದು ಬೆಳ್ಳಿ ಮತ್ತು ಏಳು ಕಂಚು ಬಗಲಿಗೆ ಹಾಕಿಕೊಂಡಿತ್ತು.

ಕೊನೆಯ ದಿನ ಗಳಿಸಿದ ಮೂರು ಚಿನ್ನದೊಂದಿಗೆ ಚೀನಾ (ಎಂಟು ಚಿನ್ನ, ಏಳು ಬೆಳ್ಳಿ. ಐದು ಕಂಚು) ಎರಡನೇ ಸ್ಥಾನ ಗಳಿಸಿತು.

ಅಂತಿಮ ದಿನ ಮಿಂಚಿನ ಸಾಧನೆ

ADVERTISEMENT

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ಸೇರಿದ್ದ ಸಾವಿರಾರು ಕ್ರೀಡಾಪ್ರೇಮಿಗಳ ಮುಂದೆ ಭಾರತದ ಸ್ಪರ್ಧಿಗಳು ಮಿಂಚಿನ ಸಾಧನೆ ತೋರಿದರು. ದಿನದ ಮೊದಲ ಚಿನ್ನವನ್ನು ತಂದುಕೊಟ್ಟವರು ಹೆಪ್ಟಾಥ್ಲಾನ್ ಸ್ಪರ್ಧಿ ಪಶ್ಚಿಮ ಬಂಗಾಳದ ಸ್ವಪ್ನಾ ಬರ್ಮನ್‌. ಅಂತಿಮ ಸ್ಪರ್ಧೆಯಲ್ಲಿ ಬಳಲಿ ಕುಸಿದು ಬಿದ್ದರೂ ಅಪೂರ್ವ ಸಾಮರ್ಥ್ಯ ತೋರಿದ 20 ವರ್ಷದ ಬರ್ಮನ್‌ 5942 ಪಾಯಿಂಟ್ಸ್ ಕಲೆ ಹಾಕಿದರು. ಜಪಾನ್‌ನ ಮೆಗ್ ಹಂಫಿಲ್‌ 5883 ಪಾಯಿಂಟ್‌ಗಳೊಂದಿಗೆ ಬೆಳ್ಳಿ ಗೆದ್ದರೆ ಭಾರತದ ಪೂರ್ಣಿಮಾ ಹೆಂಬ್ರಾಮ್‌ 5798 ಪಾಯಿಂಟ್‌ ಗಳಿಸಿ ಕಂಚು ಗೆದ್ದರು. ಆರಂಭದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ ಅವರು ಏಳನೇ ಮತ್ತು ಕೊನೆಯ ಸ್ಪರ್ಧೆಯಾದ 800 ಮೀಟರ್ಸ್ ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. 800 ಮೀಟರ್ಸ್ ಓಟದ ಮುಕ್ತಾಯದ ಗೆರೆ ಬಳಿ ಕುಸಿದು ಬಿದ್ದ ಬರ್ಮನ್‌ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಯಿತು.

(ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ನೀರಜ್‌ ಚೋಪ್ರಾ ಖುಷಿ)

ಇದರ ಬೆನ್ನಲ್ಲೇ ಲಕ್ಷ್ಮಣನ್ ಗೋವಿಂದ ಅವರು 10 ಸಾವಿರ ಮಿಟರ್ಸ್ ಓಟದಲ್ಲಿ ಚಿನ್ನ ಗೆದ್ದು ವೈಯಕ್ತಿಕ ಎರಡನೇ ಬಂಗಾರವನ್ನು ಬಗಲಿಗೆ ಹಾಕಿಕೊಂಡರು. 29 ನಿಮಿಷ 55.87 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿದ ಗೋವಿಂದ ಅವರು ಭಾರತದವರೇ ಆದ ಗೋಪಿ ತೊಂಕಾನಲ್‌ (29:58.89) ಅವರನ್ನು ಹಿಂದಿಕ್ಕಿದರು.

ಜೂನಿಯರ್‌ ವಿಭಾಗದಲ್ಲಿ ವಿಶ್ವ ದಾಖಲೆ ಹೊಂದಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಕೂಡ ಚಿನ್ನ ಗೆದ್ದರು. ಮೊದಲ ಪ್ರಯತ್ನಗಳಲ್ಲಿ ಹಿನ್ನಡೆ ಅನುಭವಿಸಿದ ಅವರು ಅಂತಿಮ ಎಸೆತದಲ್ಲಿ 85.23 ಮೀಟರ್ಸ್‌ ಸಾಧನೆ ಮಾಡಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. 83.29 ಮೀಟರ್ಸ ದೂರ ಎಸೆದ ಮರಿಜುವಾನ ಕಂಚಿನ ಪದಕ ಗೆದ್ದುಕೊಂಡರು.

ರಾತ್ರಿ ನಡೆದ ಪುರುಷರ 4x400 ಮೀಟರ್ಸ್‌ ರಿಲೇಯಲ್ಲಿ ಭಾರತ ತಂಡದವರು ಮಿಂಚು ಹರಿಸಿದರು. ಕುಂಞು ಮಹಮ್ಮದ್‌, ಮಹಮ್ಮದ್ ಅನಾಸ್‌, ರಾಜೀವ ಆರೋಕ್ಯ ಮತ್ತು ಅಮೋಜ್ ಜೇಕಬ್ ಅವರನ್ನು ಒಳಗೊಂಡ ಭಾರತ ತಂಡ ಓಟದ ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿ ಚಿನ್ನ ಗೆದ್ದುಕೊಂಡಿತು. 3:2.92 ಸೆಕೆಂಡುಗಳಲ್ಲಿ ಭಾರತದ ಅಥ್ಲೀಟ್‌ಗಳು ಗುರಿ ತಲುಪಿದರು. ಕರ್ನಾಟಕದ ಎಂ.ಆರ್‌.ಪೂವಮ್ಮ ಅವರನ್ನು ಒಳಗೊಂಡ ಮಹಿಳೆಯರ ತಂಡ ಕೂಡ ಭಾರತಕ್ಕೆ ಚಿನ್ನದ ಕಾಣಿಕೆ ನೀಡಿದರು. ನಿರ್ಮಲಾ ಶೆರಾನ್‌, ಪೂವಮ್ಮ, ಜಿಶ್ನಾ ಮ್ಯಾಥ್ಯೂ ಮತ್ತು ದೇಬಶ್ರೀ ಮಜುಂದಾರ್‌ 3:31.34 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಜಿನ್ಸನ್ ಜಾನ್ಸನ್‌ ಪುರುಷರ 800 ಮೀಟರ್ಸ್ ಓಟದಲ್ಲಿ ಕಂಚು ಗೆದ್ದರು.

ಅರ್ಚನಾಗೆ ಆಘಾತ

ಮಹಿಳೆಯರ 800 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದಿದ್ದ ಪುಣೆಯ ಅರ್ಚನಾ ಅಧವ್‌ ಕೆಲವೇ ಸಮಯದ ನಂತರ ಆಘಾತ ಅನುಭವಿಸಿದರು. ಓಟದ ನಡುವೆ ಎದುರಾಳಿಯನ್ನು ತಳ್ಳಿದ ಆರೋಪಕ್ಕೆ ಗುರಿಯಾದ ಅವರಿಂದ ಚಿನ್ನವನ್ನು ವಾಪಸ್ ಪಡೆಯಲಾಯಿತು. ಹೀಗಾಗಿ ಈ ಸ್ಪರ್ಧೆಯ ಚಿನ್ನದ ಪದಕ ಶ್ರೀಲಂಕಾದ ನಿಮಾಲಿ ವಾಲಿವರ್ಷ ಕೊಂಡ ಅವರ ಕೊರಳನ್ನು ಅಲಂಕರಿಸಿತು.

(ಪುರುಷರ 800 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಥ್ಲೀಟ್‌ಗಳು ಗುರಿಯತ್ತ ಮುನ್ನುಗ್ಗಿದ ಕ್ಷಣ ಎಎಫ್‌ಪಿ ಚಿತ್ರ)

ಸ್ಪರ್ಧೆ ಮುಗಿದ ನಂತರ ನಿಮಾಲಿ ಅವರು ಅರ್ಚನಾ ವಿರುದ್ಧ ದೂರು ನೀಡಿದ್ದರು. ಅವರ ಆರೋಪ ಸಾಬೀತಾದ ಕಾರಣ ಅರ್ಚನಾ ಅವರನ್ನು ಅನರ್ಹಗೊಳಿಸಲಾಯಿತು. ತೀರ್ಪು ಮರುಪರಿಶೀಲಿಸುವಂತೆ ಭಾರತ ಮನವಿ ಸಲ್ಲಿಸಿದರೂ ತಾಂತ್ರಿಕ ಸಮಿತಿಯ ಜೂರಿ ಇದನ್ನು ಮಾನ್ಯ ಮಾಡಲಿಲ್ಲ.

ನಿಮಾಲಿ ವಾಲಿವರ್ಷ ಕೊಂಡ 2:05.23 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರೆ ಇದೇ ದೇಶದ ಗಯಂತಿಕಾ ತುಷಾರಿ (2:05.27) ಬೆಳ್ಳಿ ಗೆದ್ದರು. ಜಪಾನ್‌ನ ಫೂಮಿಕಾ ಒಮೋರಿ ಕಂಚು ತಮ್ಮದಾಗಿಸಿಕೊಂಡರು.

ಸ್ಪರ್ಧೆ ಪೂರ್ಣಗೊಳಿಸದ ಟಿಂಟು
800 ಮೀಟರ್ಸ್ ಓಟದ ಕಳೆದ ಬಾರಿಯ ಚಾಂಪಿಯನ್‌ ಮತ್ತು ರಾಷ್ಟ್ರೀಯ ದಾಖಲೆ ಹೊಂದಿರುವ ಟಿಂಟು ಲೂಕಾ ಭಾನುವಾರ ಸ್ಪರ್ಧೆ ಪೂರ್ಣಗೊಳಿಸದೆ ಮರಳಿದರು. ಟಿಂಟು ಎರಡನೇ ಲ್ಯಾಪ್‌ ನಂತರ ಸ್ಪರ್ಧೆಯಿಂದ ಹೊರನಡೆದರು. ಸ್ಪರ್ಧೆಯ ನಂತರ ಮಾತನಾಡಿದ ಕೋಚ್‌ ಪಿ.ಟಿ. ಉಷಾ ಅವರು ‘ಟಿಂಟು ಲೂಕಾ ಜ್ವರ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದರು. ಆದರೂ ಟ್ರ್ಯಾಕ್‌ಗೆ ಇಳಿದಿದ್ದರು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.