ADVERTISEMENT

ಭಾರತ ತಂಡಕ್ಕೆ ಸೋಲಿನ ಆಘಾತ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಗೋಲು ಗಳಿಸಿದ ವೇಳೆ ಭಾರತ ತಂಡದ ಆಟಗಾರರ ಸಂಭ್ರಮ  –ಪಿಟಿಐ ಚಿತ್ರ
ಗೋಲು ಗಳಿಸಿದ ವೇಳೆ ಭಾರತ ತಂಡದ ಆಟಗಾರರ ಸಂಭ್ರಮ –ಪಿಟಿಐ ಚಿತ್ರ   

ಲಂಡನ್:  ಭಾರತ ಹಾಕಿ ತಂಡವು ಗುರುವಾರ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿನ ಆಘಾತ ಅನುಭವಿಸಿತು.
ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ ಭಾರತ ತಂಡವು 2–3 ಗೋಲುಗಳಿಂದ ಮಲೇಷ್ಯಾ ಎದುರು ಪರಾಭವಗೊಂಡಿತು.  ಈ ಗೆಲುವಿನ ಬಲದಿಂದ ಮಲೇಷ್ಯಾ ತಂಡವು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವ ಕಪ್ ಹಾಕಿ ಟೂರ್ನಿಗೆ ಅರ್ಹತೆ ಗಿಟ್ಟಿಸಿತು.

ರೋಚಕ ಹಣಾಹಣಿ ಕಂಡುಬಂದ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿಯಿಂದ ಹೋರಾಡಿದವು.

ಎಫ್‌ಐಎಚ್‌ ರ್‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಭಾರತವು ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ 14ನೇ ಸ್ಥಾನದಲ್ಲಿರುವ ಮಲೇಷ್ಯಾ ತಂಡದ ಕೆಚ್ಚೆದೆಯ ಆಟಕ್ಕೆ ಗೆಲುವು ಒಲಿಯಿತು.

ADVERTISEMENT

ಭಾರತ ತಂಡವು ಎಸಗಿದ ಲೋಪಗಳಿಂದಾಗಿ ಮಲೇಷ್ಯಾ ಏಳು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆಯಿತು. ಅದರಲ್ಲಿ ಎರಡು ಗೋಲುಗಳಾಗಿ ಪರಿವರ್ತನೆಗೊಂಡವು. 19ನೇ ನಿಮಿಷದಲ್ಲಿ ಡ್ರ್ಯಾಗ್‌ಫ್ಲಿಕರ್ ರಾಜೀ ರಹೀಮ್  ಮತ್ತು 48ನೇ ನಿಮಿಷದಲ್ಲಿ ತೆಂಗ್ಕು ತಾಜುದ್ದೀನ್ ಅವರು ತಲಾ ಒಂದು ಗೋಲು ಹೊಡೆದು ಮಿಂಚಿದರು.

ಭಾರತ ತಂಡವು ಮೊದಲ 20 ನಿಮಿಷಗಳಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಕಷ್ಟಪಟ್ಟಿತು. ಆಕ್ರಮಣಕಾರಿ ಆಟವಾಡಿದ ಮಲೇಷ್ಯಾ ತಂಡವು 19ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿತು. ಅದಕ್ಕೂ ಮುನ್ನ ಲಭಿಸಿದ್ದ ಎರಡು ಪೆನಾಲ್ಟಿ ಕಾರ್ನರ್‌ಗಳಲ್ಲಿ ಮಲೇಷ್ಯಾ ವಿಫಲವಾಗಿತ್ತು. 17ನೇ ನಿಮಿಷದಲ್ಲಿ ಭಾರತದ ಗೋಲ್‌ಕೀಪರ್ ವಿಕಾಸ್ ದಹಿಯಾ ಅವರು ತಮ್ಮ  ಚುರುಕಿನ ಆಟದಿಂದ ಆಪಾಯ ತಪ್ಪಿಸಿದ್ದರು.

ತಿರುಗೇಟು ನೀಡುವ ಪ್ರಯತ್ನದಲ್ಲಿದ್ದ ಭಾರತ ತಂಡಕ್ಕೆ ರಮಣದೀಪ್ ಸಿಂಗ್ ಅವರು 24 ಮತ್ತು 26ನೇ ನಿಮಿಷದಲ್ಲಿ ಎರಡು  ಫೀಲ್ಡ್ ಗೋಲುಗಳ ಕಾಣಿಕೆ ನೀಡಿದರು.  ನಂತರದ ಅವಧಿಯಲ್ಲಿಯೂ ರಮಣದೀಪ್ ಮತ್ತು ಆಕಾಶದೀಪ್ ಸಿಂಗ್ ಅವರು ಗೋಲು ಹೊಡೆಯುವ ಪ್ರಯತ್ನ ಮಾಡಿದರು. ಆದರೆ, ಮಲೇಷ್ಯಾದ  ರಕ್ಷಣಾ ಆಟಗಾರರು ದಿಟ್ಟತನದಿಂದ ದಾಳಿಯನ್ನು ತಡೆದರು. ಪಂದ್ಯದ ಕೊನೆಯ ಹತ್ತು ನಿಮಿಷಗಳಲ್ಲಿ ಆಕಾಶದೀಪ್ ಅವರ ಗೋಲು ಹೊಡೆಯುವ ಪ್ರಯತ್ನವನ್ನು ಮಲೇಷ್ಯಾ ಗೋಲ್‌ಕೀಪರ್ ಕುಮಾರ್ ಸುಬ್ರಮಣಿಯಮ್ ಅವರು ತಡೆದರು. ಇದರಿಂದಾಗಿ ಎರಡು ಬಾರಿ ಆಕಾಶದೀಪ್ ಸಿಂಗ್  ಅವರು ನಿರಾಸೆ ಅನುಭವಿಸುವಂತಾಯಿತು. 

ಬಿ ಗುಂಪಿನ ಪಂದ್ಯಗಳಲ್ಲಿ ಭಾರತವು ಸ್ಕಾಟ್ಲೆಂಡ್, ಕೆನಡಾ ಮತ್ತು ಪಾಕಿಸ್ತಾನ ತಂಡಗಳ ಎದುರು ಜಯಿಸಿತು. ನೆದರ್ಲೆಂಡ್ ವಿರುದ್ಧ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.