ADVERTISEMENT

ಭಾರತ ತಂಡದಲ್ಲಿ ಸಂಜೀವ್‌, ಹೆನ್ರಿ

ಬೆಂಗಳೂರಿನ ಮರ್ಫಿ ಟೌನ್‌, ಆಶ್ಟಿನ್ ಟೌನ್‌ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಹೆನ್ರಿ ಆಂಥೋನಿ ಗೆದ್ದ ಟ್ರೋಫಿಗಳನ್ನು ಅವರ ಅಜ್ಜ ಕೃಷ್ಣಮೂರ್ತಿ, ಅಜ್ಜಿ ಧರ್ಮಾವತಿ ಮತ್ತು ಸಹೋದರ ಅಜಯ್‌ ಅಲೆಕ್ಸ್‌ ಅವರು ಖುಷಿಯಿಂದ ತೋರಿಸುತ್ತಿರುವುದು. –ಪ್ರಜಾವಾಣಿ ಚಿತ್ರಗಳು/ ಆರ್‌. ಶ್ರೀಕಂಠ ಶರ್ಮಾ
ಹೆನ್ರಿ ಆಂಥೋನಿ ಗೆದ್ದ ಟ್ರೋಫಿಗಳನ್ನು ಅವರ ಅಜ್ಜ ಕೃಷ್ಣಮೂರ್ತಿ, ಅಜ್ಜಿ ಧರ್ಮಾವತಿ ಮತ್ತು ಸಹೋದರ ಅಜಯ್‌ ಅಲೆಕ್ಸ್‌ ಅವರು ಖುಷಿಯಿಂದ ತೋರಿಸುತ್ತಿರುವುದು. –ಪ್ರಜಾವಾಣಿ ಚಿತ್ರಗಳು/ ಆರ್‌. ಶ್ರೀಕಂಠ ಶರ್ಮಾ   

ಬೆಂಗಳೂರು: ಆಟ ಆಡಲು ತಂದುಕೊಟ್ಟ ಪ್ಲಾಸ್ಟಿಕ್ ಚೆಂಡನ್ನು ಆತ ಸಾಮಾನ್ಯ ಮಕ್ಕಳಂತೆ ಅತಿತ್ತ ಎಸೆಯಲಿಲ್ಲ; ಕಾಲಲ್ಲಿ ಒದ್ದು ಖುಷಿಪಟ್ಟ. ಇದನ್ನು ಗಮನಿಸಿದ ತಂದೆ ಆತನಲ್ಲಿ ಒಬ್ಬ ಫುಟ್‌ಬಾಲ್ ಆಟಗಾರನನ್ನು ಕಂಡರು. ಅಂದಿನ ಆ ಹೊಳಹು ಫಲ ನೀಡಿತು. ಮಗ ಈಗ ಫುಟ್‌ಬಾಲ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಮಟ್ಟಕ್ಕೆ ಏರಿದ.

ಇದು ನಗರದ ಮರ್ಫಿ ಟೌನ್‌ ನಿವಾಸಿ ಸಂಜೀವ್ ಸ್ಟಾಲಿನ್ ಅವರ ಕಥೆ. ಮನೆಯ ಸಮೀಪದ ಮೈದಾನದಲ್ಲಿ ಫುಟ್‌ಬಾಲ್ ಆಡುತ್ತ ಬೆಳೆದ ಅವರು 17 ವರ್ಷದೊಳಗಿನವರ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ದೇಶದ ಪರವಾಗಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಅವರೊಂದಿಗೆ ಆಸ್ಟಿನ್ ಟೌನ್‌ ನಿವಾಸಿ ಹೆನ್ರಿ ಅಂಥೋನಿ ಅವರಿಗೂ ಈ ಭಾಗ್ಯ ಒಲಿದಿದೆ. ಇವರಿಬ್ಬರ ಕುಟುಂಬ ಮತ್ತು ಸ್ನೇಹಿತರ ಬಳಗದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.

ಮುಂದಿನ ತಿಂಗಳ ಆರರಂದು ಆರಂಭವಾಗಲಿರುವ ವಿಶ್ವಕಪ್‌ನಲ್ಲಿ ಇವರಿಬ್ಬರು ದೇಶದ ತಂಡವನ್ನು ಜಯದ ಹಾದಿಯಲ್ಲಿ ಮುನ್ನಡೆಸುವಂತಾಗಲಿ ಎಂದು ಪ್ರಾರ್ಥಿಸತೊಡಗಿದ್ದಾರೆ.

ADVERTISEMENT

‘ಮಗನ ಹವ್ಯಾಸಕ್ಕೆ ನಾವು ಎಂದೂ ಅಡ್ಡಿಪಡಿಸಲಿಲ್ಲ. ಆದರೆ ಆತ ಈ ಮಟ್ಟಕ್ಕೆ ಬೆಳೆಯುತ್ತಾನೆ ಎಂದು ಕನಸು ಕೂಡ ಕಂಡಿರಲಿಲ್ಲ. ಪ್ರಯತ್ನಕ್ಕೆ ತಕ್ಕ ಫಲ ಈಗ ಆತನಿಗೆ ಸಿಕ್ಕಿದೆ’ ಎಂದುಸ್ಟಾಲಿನ್ ಅವರ ತಂದೆ ಹೇಳಿದರು.

‘ನಾಲ್ಕನೇ ವಯಸ್ಸಿನಲ್ಲಿ ಆತನಿಗೆ ಪ್ಲಾಸ್ಟಿಕ್ ಚೆಂಡು ನೀಡಿದ್ದೆ. ಆತ ಅದನ್ನು ಕಾಲಿನಲ್ಲಿ ಒದೆಯತೊಡಗಿದ. ನಂತರ ದೊಡ್ಡ ಚೆಂಡು ತಂದುಕೊಟ್ಟೆ, ಕೋಲ್ಕತ್ತದಿಂದ ಶೂ ಕೂಡ ಖರೀದಿಸಿ ಕೊಟ್ಟೆ. ಮನೆಯ ಸಮೀಪದ ಮೈದಾನಕ್ಕೆ ಆಡಲು ಕರೆದುಕೊಂಡು ಹೋಗುತ್ತಿದ್ದೆ. ಚೆಂಡನ್ನು ಒಮ್ಮೆ ಎಡಗಾಲಿನಿಂದ, ಮತ್ತೊಮ್ಮೆ ಬಲಗಾಲಿನಿಂದ ಒದೆಯಲು ಹೇಳುತ್ತಿದ್ದೆ. ಆತ ಹಾಗೆಯೇ ಮಾಡುತ್ತ ಬೆಳೆದ’ ಎಂದು ಅವರು ತಿಳಿಸಿದರು.

ಸ್ಟಾಲಿನ್ ಸಣ್ಣ ವಯಸ್ಸಿನಲ್ಲೇ ಫುಟ್‌ಬಾಲ್ ಆಡಲು ಆರಂಭಿಸಿದ್ದರು. ಸ್ಥಳೀಯ ಲೀಗ್‌ನಲ್ಲಿ ಏರೋನಾಟಿಕಲ್ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ ತಂಡದಲ್ಲೂ ಆಡಿದ್ದರು. ಎಂಟನೇ ವಯಸ್ಸಿನಲ್ಲಿ ಸ್ಥಳೀಯ ಟೂರ್ನಿಯೊಂದರಲ್ಲಿ ಆಡುತ್ತಿದ್ದಾಗ ಈಸ್ಟ್ ಬೆಂಗಾಲ್ ತಂಡದ ಖ್ಯಾತ ಹಿರಿಯ ಆಟಗಾರ ಜಮ್ಶೆದ್‌ ನಾಸಿರಿ ಅವರ ಕಣ್ಣಿಗೆ ಬಿದ್ದ ನಂತರ ಸ್ಟಾಲಿನ್ ಅವರ ಬದುಕಿನ ದಿಕ್ಕು ಬದಲಾಯಿತು. ಜಮ್ಶೆದ್‌ ಅವರು ಚಂಡೀಗಡ ಫುಟ್‌ಬಾಲ್‌ ಅಕಾಡೆಮಿಗೆ ಸೇರಿಸಲು ನೆರವಾದರು.

ಫುಟ್‌ಬಾಲ್ ‌ಪ್ರೇಮಿ ಹೆನ್ರಿ
ಸಂಜೀವ್ ಅವರನ್ನು ತಂದೆ ಫುಟ್‌ಬಾಲ್‌ಗೆ ಕರೆ ತಂದರೆ, ಹೆನ್ರಿ ಈ ಕ್ರೀಡೆಯ ಮೇಲಿನ ಪ್ರೀತಿಯಿಂದ ಬೆಳೆದರು. ಫುಟ್‌ಬಾಲ್‌ ಅನ್ನೇ ಉಸಿರಾಗಿರಿಸಿಕೊಂಡಿರುವ ಪ್ರದೇಶದಲ್ಲಿ ಬೆಳೆದ ಅವರಿಗೆ ಸಹಜವಾಗಿ ಆಟ ಒಲಿಯಿತು.

‘ಆತ ಮೊದಲು ಆಡಿದ್ದೇ ಫುಟ್‌ಬಾಲ್‌. ಈಗಲೂ ಈ ಕ್ರೀಡೆ ಆತನ ಜೀವ; ಜೀವನ’ ಎಂದು ಹೆನ್ರಿ ಅವರ ತಂದೆ, ಸರಕು ಸಾಗಣೆ ವಾಹನದ ಚಾಲಕ ಅಜಯ್ ಅಲೆಕ್ಸ್ ಹೇಳಿದರು.

ಈ ಇಬ್ಬರು ಆಟಗಾರರ ತರಬೇತುದಾರ ಕೃಷ್ಣಪ್ಪ ಅವರು ಆನಂದತುಂದಿಲರಾಗಿದ್ದಾರೆ. ‘ಪ್ರತಿಯೊಬ್ಬ ಕೋಚ್ ತನ್ನ ಶಿಷ್ಯಂದಿರು ದೇಶಕ್ಕಾಗಿ ಆಡಬೇಕು ಎಂದು ಬಯಸುತ್ತಾರೆ. ನನ್ನ ಈ ಆಸೆ ಈಗ ಈಡೇರಿದೆ’ ಎಂದರು ಕೃಷ್ಣಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.