ADVERTISEMENT

ಭಾರತ ರಿಲೇ ತಂಡಕ್ಕೆ ಬಂಗಾರದ ಪದಕ

ಪೂವಮ್ಮ, ಪ್ರಿಯಾಂಕಾ, ಟಿಂಟು, ಮನ್‌ದೀಪ್‌ ಅವರಿಂದ ಸಾಧನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 19:38 IST
Last Updated 2 ಅಕ್ಟೋಬರ್ 2014, 19:38 IST

ಇಂಚೆನ್‌: ಕರ್ನಾಟಕದ ಎಂ. ಆರ್‌. ಪೂವಮ್ಮ,  ಪ್ರಿಯಾಂಕಾ ಪನ್ವಾರ್‌, ಟಿಂಟು ಲೂಕಾ ಮತ್ತು ಮನ್‌ದೀಪ್‌  ಕೌರ್‌ ಅವರನ್ನೊಳಗೊಂಡ ಭಾರತ ಮಹಿಳಾ ರಿಲೇ ತಂಡ 4X400ಮೀ. ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದುಕೊಂಡಿತು.

ಇಂಚೆನ್‌ ಏಷ್ಯನ್‌ ಮುಖ್ಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪೈಪೋಟಿಯಲ್ಲಿ ಭಾರತ ತಂಡ ಮೂರು ನಿಮಿಷ 28.68 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಏಷ್ಯನ್‌ ಕೂಟದ ದಾಖಲೆಯನ್ನು ಉತ್ತಮ ಪಡಿಸಿಕೊಂಡಿತು. ಮೂರು ನಿಮಿಷ 29.02 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದು ಭಾರತ ತಂಡದ ಮೊದಲಿನ ಉತ್ತಮ ಸಾಧನೆ ಎನಿಸಿತ್ತು. ಈ ಸ್ಪರ್ಧೆಯಲ್ಲಿ ಭಾರತ ಚಿನ್ನ ಜಯಿಸಿದ್ದು ಇದು ನಾಲ್ಕನೇ ಬಾರಿ. 2002ರಲ್ಲಿ ಬೂಸಾನ್‌ನಲ್ಲಿ ಏಷ್ಯನ್‌ ಕೂಟದಿಂದಲೂ ಭಾರತ ಬಂಗಾರ ಜಯಿಸುತ್ತಾ ಬಂದಿದೆ.

ಮೂರು ನಿಮಿಷ 30.80ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಜಪಾನ್‌ ಅಥ್ಲೀಟ್‌ಗಳು ಬೆಳ್ಳಿ ಬಾಚಿಕೊಂಡರೆ, ಚೀನಾ (ಕಾಲ: 3:32.02ಸೆ.) ಕಂಚು ಜಯಿಸಿತು.

ಮೊದಲು ಬ್ಯಾಟನ್‌ ಹಿಡಿದು ಓಡಿದ  ಪ್ರಿಯಾಂಕಾ ಉತ್ತಮ ವೇಗ ಕಂಡುಕೊಂಡರು. ಇದಕ್ಕೆ ಜಪಾನ್‌ ಅಥ್ಲೀಟ್‌ಗಳು  ಪ್ರಬಲ ಸವಾಲು ಒಡ್ಡಿದರು. 800ಮೀ. ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿರುವ ಟಿಂಟೂ ಲೂಕಾ ವೇಗವಾಗಿ ಓಡಿ ಮುನ್ನಡೆ ತಂದುಕೊಟ್ಟರು.

ಇಂದರ್‌ಜಿತ್‌ಗೆ ಕಂಚು: ಭಾರತದ ಇಂದರ್‌ಜಿತ್‌ ಸಿಂಗ್ ಶಾಟ್‌ಪಟ್‌ ಎಸೆತ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ಗುರುವಾರ ನಡೆದ ಫೈನಲ್‌ನಲ್ಲಿ ಇಂದರ್‌ಜಿತ್‌ ಐದನೇ ಅವಕಾಶದಲ್ಲಿ 19.63ಮೀ. ದೂರ ಎಸೆದು ಕಂಚು ಗೆದ್ದರು.

ಪೂವಮ್ಮಗೆ ಎರಡನೇ ಪದಕ
ಕರ್ನಾಟಕದ ಅಥ್ಲೀಟ್ ಪೂವಮ್ಮ ಈ ಸಲದ ಏಷ್ಯನ್‌ ಕೂಟದಲ್ಲಿ ಗೆದ್ದ ಎರಡನೇ ಪದಕವಿದು.

ಹೋದ ವರ್ಷ ಪುಣೆಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನ ರಿಲೇಯಲ್ಲಿ ಬಂಗಾರ ಜಯಿಸಿದ್ದ ಪೂವಮ್ಮ ಇಲ್ಲಿ 400ಮೀ. ಓಟದ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದಾರೆ.

‘ಏಷ್ಯನ್‌ ಕೂಟದಲ್ಲಿ ಚಿನ್ನದ ಪದಕ ಗೆಲ್ಲುತ್ತೇವೆ ಎಂದು ಖಂಡಿತವಾಗಿಯೂ ವಿಶ್ವಾಸವಿತ್ತು. ನನ್ನ ನಂಬಿಕೆ ನಿಜವಾಗಿದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿತಿದ್ದೇನೆ. ಪಟಿಯಾಲದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ ವೇಳೆ ಹಿಂದಿನ ತಪ್ಪು ಮತ್ತೆ ಮತ್ತೆ ಮಾಡದಂತೆ ಎಚ್ಚರಿಕೆ ವಹಿಸಿದ್ದರಿಂದ ಬಂಗಾರದ ಸಾಮರ್ಥ್ಯ ತೋರಲು ಸಾಧ್ಯವಾಯಿತು’ ಎಂದು ಪೂವಮ್ಮ ಸಂತೋಷ ಹಂಚಿಕೊಂಡರು.

24 ವರ್ಷದ ಯುವ ಅಥ್ಲೀಟ್‌ ಪೂವಮ್ಮ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಜಯಿಸಿದ ಆರನೇ ಬಂಗಾರದ ಪದಕವಿದು. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು, ಯೂತ್ ಕಾಮನ್‌ವೆಲ್ತ್‌ ಕೂಟದಲ್ಲಿ ಎರಡು ಪದಕಗಳನ್ನು ಜಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT