ADVERTISEMENT

ಮತ್ತೊಂದು ಚಿನ್ನ ಗೆದ್ದ ವಿದಿತ್‌

ರಾಷ್ಟ್ರೀಯ ಸಬ್‌ ಜೂನಿಯರ್ ಈಜು ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 22:30 IST
Last Updated 30 ಜೂನ್ 2016, 22:30 IST
ಬಾಲಕಿಯರ 100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ ಚಿನ್ನ ಜಯಿಸಿದ ಮಹಾರಾಷ್ಟ್ರದ ವೇದಿಕ ಅಮಿನ್‌ ಖುಷಿಯ ಕ್ಷಣ
ಬಾಲಕಿಯರ 100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ ಚಿನ್ನ ಜಯಿಸಿದ ಮಹಾರಾಷ್ಟ್ರದ ವೇದಿಕ ಅಮಿನ್‌ ಖುಷಿಯ ಕ್ಷಣ   

ಬೆಂಗಳೂರು: ಉತ್ತಮ ಪ್ರದರ್ಶನ ಮುಂದುವರಿಸಿರುವ ಕರ್ನಾಟಕದ ವಿದಿತ್‌ ಎಸ್‌. ಶಂಕರ್ ಇಲ್ಲಿ ನಡೆಯು ತ್ತಿರುವ ರಾಷ್ಟ್ರೀಯ ಸಬ್‌ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಚಿನ್ನದ ಪದಕ ಜಯಿಸಿದ್ದಾರೆ.

ಬಸವನಗುಡಿ ಈಜು ಕೇಂದ್ರದಲ್ಲಿ ಗುರುವಾರ ನಡೆದ ಸ್ಪರ್ಧೆಯಲ್ಲಿ ವಿದಿತ್‌ ಗುಂಪು–4ರ 50 ಮೀಟರ್ಸ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದರು.ವಿ ವಿದಿತ್‌ 33.21 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಬಂಗಾಳದ ಪ್ರಾಂಜಲ ಪಾತ್ರಾ 33.40 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರೆ, ದೆಹಲಿಯ ರಾಬಿನ್‌ ಸೇನ್‌ ಕಂಚಿಗೆ ಮುತ್ತಿಕ್ಕಿದರು. ರಾಬಿನ್‌ 33.54ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಬಾಲಕರ 4X50 ಮೀಟರ್ಸ್‌ ಮೆಡ್ಲೆ ರಿಲೇಯಲ್ಲಿ ರಾಜ್ಯದ ತಂಡದವರು ಪ್ರಾಬಲ್ಯ ಮೆರೆದರು. ಕರ್ನಾಟಕ ಗುರಿ ಯನ್ನು ಎರಡು ನಿಮಿಷ 25.96 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಬಂಗಾಳ (ಕಾಲ: 2:28.51ಸೆ) ಬೆಳ್ಳಿ ಜಯಿಸಿದರೆ, ಅಸ್ಸಾಂ (ಕಾಲ: 2:29.99ಸೆ.) ಕಂಚು ಪಡೆದರು.

ಬಾಲಕರ 100 ಮೀಟರ್ಸ್‌ ಬ್ರೆಸ್ಟ್‌ ಸ್ಟ್ರೋಕ್‌ ಸ್ಪರ್ಧೆಯಲ್ಲಿ ರಾಜ್ಯದ ಕಲ್ಪಾ ಎಸ್‌. ಬೊಹ್ರಾ ಬೆಳ್ಳಿ ಜಯಿಸಿದರು. ಬಂಗಾಳದ ಸ್ವದೇಶ ಮಂಡಲ್ ಒಂದು ನಿಮಿಷ 16.24 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದರು. ಕಲ್ಪಾ  ಒಂದು ನಿಮಿಷ 19.89 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ತಮ್ಮದಾಗಿಸಿಕೊಂಡರು. ಈ ವಿಭಾಗದ ಕಂಚು ದೆಹಲಿಯ ಕೆ.ಎನ್‌. ಮೇಟಿ (ಕಾಲ: 1:20.74ಸೆ.) ಪಾಲಾಯಿತು.

200 ಮೀಟರ್ಸ್ ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಬಂಗಾಳದ ಸ್ವದೇಶಿ ಮಂಡಲ್‌ ಎರಡು ನಿಮಿಷ 26.73 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಇದರ ಮೂಲಕ ಮಂಡಲ್ 2014ರಲ್ಲಿ ದೆಹಲಿಯ ಟೋಕಸ್‌ ನಿರ್ಮಿ ಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಗುಜರಾತ್‌ನ ಆರ್ಯನ್‌ ನೆಹ್ರಾ (ಕಾಲ: 2:30.97ಸೆ.) ಬೆಳ್ಳಿ ಜಯಿಸಿದರೆ, ಈ ವಿಭಾಗದ ಕಂಚು ಕರ್ನಾಟಕದ ಸೋಹನ್ ಗಂಗೂಲಿ ಪಾಲಾಯಿತು. ಸೋಹನ್‌ ಎರಡು ನಿಮಿಷ 32.62 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಕಪೂರ್ ದಾಖಲೆ ಪತನ: ಬಾಲಕಿಯರ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ ಮಹಾರಾಷ್ಟ್ರದ ವೇದಿಕಾ ಅಮಿನ್‌ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ವೇದಿಕಾ ಒಂದು ನಿಮಿಷ 21.03 ಸೆಕೆಂಡುಗಳಲ್ಲಿ ಗುರಿ ತಲುಪಿ 2013ರಲ್ಲಿ ಕರ್ನಾಟಕದ ವಾನಿಯಾ ಕಪೂರ್ ಅಚ್ಯುತನ್‌ (ಕಾಲ: 1:21. 96ಸೆ.) ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಈ ವಿಭಾಗದ ಕಂಚು ರಾಜ್ಯದ ಅರುಷಿ ಮಂಜುನಾಥ್‌ ಪಾಲಾಯಿತು. ಒಂದು ನಿಮಿಷ 24.12 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.