ADVERTISEMENT

ಮಹಿಳೆಯರ ಹಾಕಿ: ಭಾರತದ ಮುಡಿಗೆ ಏಷ್ಯಾ ಕಪ್

ಏಜೆನ್ಸೀಸ್
Published 5 ನವೆಂಬರ್ 2017, 19:30 IST
Last Updated 5 ನವೆಂಬರ್ 2017, 19:30 IST
ಪ್ರಶಸ್ತಿ ಗೆದ್ದ ಭಾರತ ಮಹಿಳಾ ತಂಡದವರು ಸಂಭ್ರಮಿಸಿದರು
ಪ್ರಶಸ್ತಿ ಗೆದ್ದ ಭಾರತ ಮಹಿಳಾ ತಂಡದವರು ಸಂಭ್ರಮಿಸಿದರು   

ಕಕಮಿಗಹರ, ಜಪಾನ್‌ (ಪಿಟಿಐ): ಭಾರತ ಮಹಿಳಾ ಹಾಕಿ ತಂಡದ ಬಹುಕಾಲದ ಕನಸು ನನಸಾಯಿತು. ರಾಣಿ ರಾಂಪಾಲ್ ನಾಯಕತ್ವದ ತಂಡವು ಏಷ್ಯಾ ಕಪ್ ಗೆದ್ದು ಸಂಭ್ರಮಿಸಿತು.

ಈ ಸಾಧನೆಯ ಬಲದಿಂದ ತಂಡವು ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಿತು. ಮುಂದಿನ ವರ್ಷ ವಿಶ್ವಕಪ್ ಟೂರ್ನಿ ನಡೆಯಲಿದೆ. ಏಳು ವರ್ಷಗಳ ನಂತರ ತಂಡ ವಿಶ್ವಕಪ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ. ಒಟ್ಟಾರೆ ಆರನೇ ಬಾರಿ ಈ ಸಾಧನೆ ಮಾಡಿದೆ.

ಭಾನುವಾರ ಇಲ್ಲಿ ನಡೆದ ಚೀನಾ ವಿರುದ್ಧದ ರೋಚಕ ಫೈನಲ್‌ ಹಣಾಹಣಿಯಲ್ಲಿ ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ 5–4ರಿಂದ ಗೆಲುವು ದಾಖಲಿಸಿತು. ಪೂರ್ಣಾವಧಿ ಮುಕ್ತಾಯಗೊಂಡಾಗ ಉಭಯ ತಂಡಗಳು 1–1ರಿಂದ ಸಮಬಲ ಸಾಧಿಸಿದ್ದವು. ಹೀಗಾಗಿ ಫಲಿತಾಂಶ ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ಗೆ ಮೊರೆ ಹೋಗಲಾಯಿತು.

ADVERTISEMENT

ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ ಈ ಹಂತದಲ್ಲಿ ಎರಡೂ ತಂಡಗಳು 4–4ರ ಸಮಬಲ ಸಾಧಿಸಿದ್ದವು. ಅಂತಿಮ ಅವಕಾಶದಲ್ಲಿ ರಾಣಿ ರಾಂಪಾಲ್‌ ಮತ್ತು ಗೋಲ್‌ಕೀಪರ್‌ ಸವಿತಾ ಅವರ ಅತ್ಯಮೋಘ ಸಾಮರ್ಥ್ಯದ ಬಲದಿಂದ ಗೆಲುವು ಭಾರತಕ್ಕೆ ಒಲಿಯಿತು.

ಪಂದ್ಯದ ಆರಂಭದಿಂದಲೇ ಉಭಯ ತಂಡಗಳಿಂದ ಅಪೂರ್ವ ಆಟ ಕಂಡುಬಂತು. ರಕ್ಷಣೆ ಮತ್ತು ಆಕ್ರಮಣಕ್ಕೆ ಒಂದೇ ರೀತಿ ಒತ್ತು ಕೊಟ್ಟ ಕಾರಣ ಗೋಲು ಗಳಿಸಲು ಎರಡೂ ತಂಡಗಳು ಭಾರಿ ಪ್ರಯತ್ನ ನಡೆಸಬೇಕಾಗಿ ಬಂತು. 25ನೇ ನಿಮಿಷದಲ್ಲಿ ನವಜ್ಯೋತ್ ಕೌರ್‌ ಭಾರತಕ್ಕೆ ಮೊದಲ ಗೋಲು ಗಳಿಸಿಕೊಟ್ಟರು. ಆದರೆ 47ನೇ ನಿಮಿಷದಲ್ಲಿ ತಿಯಾಂತ್ಯನ್ ಲಿಯೊ ಅವರು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸುವುದರೊಂದಿಗೆ ಚೀನಾಗೆ ಸಮಬಲ ತಂದುಕೊಟ್ಟರು.

ಅಲ್ಲಿಂದ ಪಂದ್ಯ ಇನ್ನಷ್ಟು ರೋಚಕ ಘಟ್ಟದತ್ತ ಸಾಗಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಮೋನಿಕಾ, ಲೀಲಿಮಾ ಮಿನ್ಜ್‌ ಮತ್ತು ನವಜೋತ್‌ ಒಂದೊಂದು ಬಾರಿ ಯಶಸ್ಸು ಕಂಡರು. ರಾಣಿ ರಾಂಪಾಲ್ ತಮ್ಮ ಪಾಲಿನ ಎರಡೂ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಚೆಂಡನ್ನು ಗುರಿ ಮುಟ್ಟಿಸಿದರು.

ಪಂದ್ಯದ ಎರಡನೇ ನಿಮಿಷದಲ್ಲೇ ಭಾರತ ಅಪಾಯಕ್ಕೆ ಸಿಲುಕಿತ್ತು. ಚೀನಾಗೆ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತ್ತು. ಆದರೆ ಸವಿತಾ ಮತ್ತು ದೀಪ್‌ ಗ್ರೇಸ್‌ ಅವರು ಎದುರಾಳಿಗಳ ಪ್ರಯತ್ನ ವಿಫಲಗೊಳಿಸಿದರು. ಇದರ ನಂತರ ಭಾರತದ ಫಾರ್ವರ್ಡ್ ಆಟಗಾರ್ತಿಯರು ಚುರುಕಾದರು. ನಿರಂತರ ದಾಳಿ ನಡೆಸಿದ ನವನೀತ್ ಕೌರ್‌ ಮತ್ತು ವಂದನಾ ಚೀನಾದ ಆಟಗಾರ್ತಿಯರಲ್ಲಿ ನಡುಕ ಹುಟ್ಟಿಸಿದರು. ಈ ಹಂತದಲ್ಲಿ ಚೀನಾ ಎರಡನೇ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ಮಿಯು ಲಿಯಾಂಗ್‌ ಅವರ ಫ್ಲಿಕ್‌ ಅನ್ನು ಸವಿತಾ ತಡೆದರು.

ಮರು ಹೋರಾಟ ನಡೆಸಿದ ಚೀನಾ

17ನೇ ನಿಮಿಷದಲ್ಲಿ ಭಾರತದ ನವಜ್ಯೋತ್ ಮತ್ತು ರಾಣಿ ರಾಂಪಾಲ್ ಅವರು ಪ್ರಬಲ ದಾಳಿ ನಡೆಸಿ ಗೋಲು ಗಳಿಸಲು ಪ್ರಯತ್ನಿಸಿದರು. ಆದರೆ ಫಲ ಸಿಗಲಿಲ್ಲ. 25ನೇ ನಿಮಿಷದಲ್ಲಿ ನವನೀತ್ ಮತ್ತು ರಾಣಿ  ಚುರುಕಾದ ಪಾಸ್‌ಗಳ ಮೂಲಕ ಚೆಂಡನ್ನು ಗುರಿಯತ್ತ ಸಾಗಿಸಿದರು. ಇದರ ಲಾಭ ಪಡೆದ ನವಜ್ಯೋತ್‌ ಗೋಲು ಗಳಿಸಿದರು. ಅಷ್ಟಕ್ಕೆ ಚೀನಾ ಬೆದರಲಿಲ್ಲ. ಎದುರೇಟು ನೀಡುವ ಪ್ರಯತ್ನ ಮಾಡಿತು. ಭಾರತವೂ ಇದಕ್ಕೆ ಪ್ರತಿತಂತ್ರ ಹೂಡಿತು. ಚೆಂಡನ್ನು ನಿಖರವಾಗಿ ಪಾಸ್ ಮಾಡುತ್ತ ತಮ್ಮಲ್ಲೇ ಇರಿಸುವ ಚಾಕಚಕ್ಯತೆ ಮೆರೆದ ರಾಣಿ ರಾಂಪಾಲ್ ಬಳಗದವರು ಚೀನಾದ ತಾಳ್ಮೆ ಪರೀಕ್ಷಿಸಿದರು. ಅಂತಿಮ ಕ್ವಾರ್ಟರ್‌ ವರೆಗೂ ಮುನ್ನಡೆ ಸಾಧಿಸಿದ್ದ ಭಾರತ ಕೊನೆಯಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಿಟ್ಟುಕೊಟ್ಟಿತು. ಕೊನೆಯ ಮೂರು ನಿಮಿಷ ಬಾಕಿ ಇದ್ದಾಗ ಚೀನಾಗೆ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಭಾರತ ಬಿಡಲಿಲ್ಲ.

ಟೂರ್ನಿಯ ಶ್ರೇಷ್ಠ ಗೋಲ್ ಕೀಪರ್ ಗೌರವಕ್ಕೆ ಸವಿತಾ ಪಾತ್ರರಾದರು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾ 1–0 ಅಂತರದಿಂದ ಜಪಾನ್ ಎದುರು ಜಯಿಸಿತು.

13 ವರ್ಷಗಳ ನಂತರ: 2004ರಲ್ಲಿ ಭಾರತ ಕೊನೆಯದಾಗಿ ಏಷ್ಯಾ ಕಪ್ ಹಾಕಿ ಚಾಂಪಿಯನ್‌ಷಿಪ್ ಗೆದ್ದಿತ್ತು. ಅಕ್ಟೋಬರ್‌ನಲ್ಲಿ ನಡೆದ ಪುರುಷರ ವಿಭಾಗದ ಚಾಂಪಿಯನ್‌ಷಿಪ್‌ನಲ್ಲೂ ಭಾರತ ತಂಡದವರು ಪ್ರಶಸ್ತಿ ಎತ್ತಿ ಹಿಡಿದಿದ್ದರು. ಹತ್ತು ವರ್ಷಗಳ ನಂತರ ಈ ಸಾಧನೆ ಆಗಿತ್ತು.

ಇದು ಅತ್ಯುತ್ತಮ ಹಣಾಹಣಿ ಆಗಿತ್ತು
‘ಏಷ್ಯಾಕಪ್‌ ಪ್ರಶಸ್ತಿ ಗೆದ್ದಿರುವುದು ಮತ್ತು ಮುಂದಿನ ವರ್ಷದ ವಿಶ್ವಕಪ್‌ಗೆ ಅರ್ಹತೆ ಗಳಿಸಿರುವುದು ಅತ್ಯಂತ ಸಂತಸದ ವಿಷಯ’ ಎಂದು ಭಾರತ ತಂಡದ ನಾಯಕಿ ರಾಣಿ ರಾಂಪಾಲ್ ಹೇಳಿದ್ದಾರೆ.

’ತಂಡದಲ್ಲಿ ಅಪ್ರತಿಮ ಆಟಗಾರ್ತಿಯರು ಇದ್ದಾರೆ. ಯುವ ಆಟಗಾರ್ತಿಯರಂತೂ ಅಮೋಘ ಸಾಧನೆ ಮಾಡುತ್ತಿದ್ದಾರೆ. ಫೈನಲ್ ಪಂದ್ಯದಲ್ಲಿ ನಾವು ಚೆನ್ನಾಗಿ ಆಡಿದ್ದೇವೆ. ಚೀನಾದವರು ಕೂಡ ಉತ್ತಮ ಪೈಪೋಟಿ ನೀಡಿದ್ದಾರೆ. ಆದ್ದರಿಂದ ಇದು ಅತ್ಯುತ್ತಮ ಹಣಾಹಣಿ ಆಗಿತ್ತು. ಇಂಥ ಮಹತ್ವದ ಪಂದ್ಯದಲ್ಲಿ ಶ್ರೇಷ್ಠ ಮಟ್ಟದ ಸಾಮರ್ಥ್ಯ ತೋರಲು ಸಾಧ್ಯವಾದದ್ದು ಖುಷಿ ತಂದಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಕೋಚ್‌, ಸಹಾಯಕ ಸಿಬ್ಬಂದಿ, ಹಾಕಿ ಇಂಡಿಯಾ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದವರಿಗೆ ಅಭಿನಂದನೆ ಸಲ್ಲಿಸಲು ಅವರು ಮರೆಯಲಿಲ್ಲ.

ನಾಯ್ಡು, ಮೋದಿ ಅಭಿನಂದನೆ
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಹಿಳಾ ತಂಡವನ್ನು ಅಭಿನಂದಿಸಿದ್ದಾರೆ. ‘13 ವರ್ಷಗಳ ನಂತರ ಏಷ್ಯಾ ಕಪ್ ಗೆದ್ದಿರುವ ಭಾರತ ತಂಡದ ಸಾಧನೆ ಶ್ಲಾಘನೀಯ. ಚೀನಾವನ್ನು ಮಣಿಸಿ ಪ್ರಶಸ್ತಿ ಗೆದ್ದಿರುವುದಕ್ಕೆ ಅಭಿನಂದನೆಗಳು’ ಎಂದು ವೆಂಕಯ್ಯ ನಾಯ್ಡು ಟ್ವೀಟ್‌ ಮಾಡಿದ್ದಾರೆ. ‘ಭಾರತ ತಂಡದವರು ಅಮೋಘ ಆಟದ ಮೂಲಕ ಮಿಂಚು ಹರಿಸಿದ್ದಾರೆ’ ಎಂದು ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.