ADVERTISEMENT

ಮೂರನೇ ಸುತ್ತಿಗೆ ಸೈನಾ ನೆಹ್ವಾಲ್‌

ವಿಶ್ವ ಬ್ಯಾಡ್ಮಿಂಟನ್‌: ಮುಗ್ಗರಿಸಿದ ಕಶ್ಯಪ್‌

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ಕೋಪನ್‌ಹೆಗನ್‌ (ಪಿಟಿಐ): ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ತೋರಿರುವ ಸೈನಾ ನೆಹ್ವಾಲ್‌ ಇಲ್ಲಿ ನಡೆಯುತ್ತಿರುವ  ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಆದರೆ  ಪರುಪಳ್ಳಿ ಕಶ್ಯಪ್‌ ಆರಂಭಿಕ ಸುತ್ತಿನಲ್ಲಿ ಮುಗ್ಗರಿಸಿದ್ದಾರೆ.

ಮಂಗಳವಾರ ನಡೆದ  ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ  ಸೈನಾ  21–11, 21–9ರ ನೇರ ಸೆಟ್‌ಗಳಿಂದ  ರಷ್ಯಾದ ನತಾಲಿಯಾ ಪರ್ಮಿನೋವಾ ಎದುರು ಜಯಭೇರಿ ಮೊಳಗಿಸಿದರು.

ಗಾಯದ ಸಮಸ್ಯೆಯ ಕಾರಣ ಕಾಮನ್‌ವೆಲ್ತ್‌ ಕೂಟದಿಂದ ಹಿಂದೆ ಸರಿದಿದ್ದ ಭಾರತದ ಆಟಗಾರ್ತಿ ಪಂದ್ಯದುದ್ದಕ್ಕೂ ವಿಶ್ವಾಸ ಪೂರ್ಣ ಆಟ ಪ್ರದರ್ಶಿಸಿದರು.

31 ನಿಮಿಷಗಳ ಹೋರಾಟದ ಎರಡೂ ಸೆಟ್‌ಗಳಲ್ಲೂ ಸೈನಾ ಸೊಗಸಾದ ಪ್ರದರ್ಶನ ತೋರಿದರು.  ವೇಗ ಹಾಗೂ ಚುರುಕುತನದಿಂದ ಸಮ್ಮಿಳಿತವಾಗಿದ್ದ ಸೈನಾರ ಆಟದ ಮುಂದೆ ಎದುರಾಳಿ ಆಟಗಾರ್ತಿ ಸುಲಭವಾಗಿ ಸೋಲೊಪ್ಪಿಕೊಂಡರು.

ಮೊದಲ ಸುತ್ತಿನ ಪಂದ್ಯದಲ್ಲಿ ಹೈದರಾಬಾದ್‌ನ ಆಟಗಾರ್ತಿ ‘ಬೈ’ ಪಡೆದಿದ್ದರು.

ಮುಗ್ಗರಿಸಿದ ಕಶ್ಯಪ್‌:  ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲುವಿನ ಭರವಸೆ ಮೂಡಿಸಿದ್ದ ಪರುಪಳ್ಳಿ ಕಶ್ಯಪ್‌ ಆರಂಭಿಕ ಸುತ್ತಿನಲ್ಲೇ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅಪೂರ್ವ ಪ್ರದರ್ಶನ ನೀಡಿದ್ದ ಕಶ್ಯಪ್‌ ಬಂಗಾರ ಗೆದ್ದಿದ್ದರು.  ಆದರೆ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತದ ಆಟಗಾರ 24–26, 21–13, 18–21ರಲ್ಲಿ ಜರ್ಮನಿಯ  ಡಿಯೇಟರ್‌ ಡೊಮ್ಕೆ ಎದುರು ಸೋತರು.

ಮೊದಲ ಸೆಟ್‌ನಲ್ಲಿ ತೀವ್ರ ಪೈಪೋಟಿಯ ಹೊರತಾಗಿಯೂ ನಿರಾಸೆ ಅನುಭವಿಸಿದ ಕಶ್ಯಪ್‌ ಎರಡನೇ ಸೆಟ್‌ನಲ್ಲಿ ಅಮೋಘ ಪ್ರದರ್ಶನ ತೋರಿ ಸಮಬಲ ಸಾಧಿಸಿದ್ದರು.  ಆದರೆ ನಿರ್ಣಾಯಕ ಸೆಟ್‌ನಲ್ಲಿ ದಿಟ್ಟ ಹೋರಾಟ ತೋರಿದ ಡೊಮ್ಕೆ ಗೆಲುವಿನ ನಗೆ ಚೆಲ್ಲಿದರು.

ಎರಡನೇ ಸುತ್ತಿಗೆ ಜಯರಾಮ್‌: ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಭಾರತದ ಅಜಯ್‌ ಜಯರಾಮ್‌ ವಾಕ್‌ ಓವರ್‌ ಪಡೆದು ಎರಡನೇ ಸುತ್ತು ತಲುಪಿದರು.

ಮೊದಲ ಸುತ್ತಿನ ಪಂದ್ಯದಲ್ಲಿ ಜಯರಾಮ್‌ ಜಪಾನ್‌ನ ಕೆನಿಚಿ ತ್ಯಾಗೊ ಎದುರು ಆಡಬೇಕಿತ್ತು. ಆದರೆ ತ್ಯಾಗೊ ಪಂದ್ಯದಿಂದ ಹಿಂದೆ ಸರಿದ  ಕಾರಣ  ಭಾರತದ ಆಟಗಾರನಿಗೆ ವಾಕ್‌ ಓವರ್‌ ಲಭಿಸಿತು.

ಎರಡನೇ ಸುತ್ತಿನ ಪಂದ್ಯದಲ್ಲಿ ಜಯರಾಮ್‌  ಥಾಯ್ಲೆಂಡ್‌ನ ತನೊಂಗ್‌ಸಾಕ್‌ ಸಯೆನ್ಸೊಮ್‌ ಬೂನ್ಸುಕ್‌  ಅವರ ಸವಾಲು ಎದುರಿಸಲಿದ್ದಾರೆ.

ಅರುಣ್‌–ಅಪರ್ಣಾಗೆ ಸೋಲು: ಮಿಶ್ರ ಡಬಲ್ಸ್‌ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ಭಾರತದ ಅರುಣ್‌ ವಿಷ್ಣು ಮತ್ತು  ಅಪರ್ಣಾ ಬಾಲನ್‌  14–21, 11–21ರಲ್ಲಿ ಜರ್ಮನಿಯ ಮೈಕೆಲ್‌ ಫಕ್ಸ್‌ ಮತ್ತು ಬರ್ಗಿಟ್‌ ಮೈಕಲ್ಸ್‌ ಎದುರು ಪರಾಭವಗೊಂಡರು.

ಮೊದಲ ಸುತ್ತಿನ ಪೈಪೋಟಿಯಲ್ಲಿ ಭಾರತದ ಜೋಡಿ 21–12, 21–14 ರಲ್ಲಿ ಬ್ರೆಜಿಲ್‌ನ ಹ್ಯೂಗೊ ಅರ್ಥುಸೊ ಮತ್ತು ಫ್ಯಾಬಿಯಾನ ಸಿಲ್ವ  ಎದುರು ಜಯ ಸಾಧಿಸಿದ್ದರು.

ಪ್ರಣವ್‌ ಜೋಡಿಗೆ ಜಯ: ಪುರುಷರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಪ್ರಣವ್‌ ಜೆರ್ರಿ ಚೋಪ್ರಾ ಮತ್ತು ಅಕ್ಷಯ್‌ ದೇವಾಲ್ಕರ್‌ 21–19, 16–21, 22–20ರಲ್ಲಿ ಹಾಂಕಾಂಗ್‌ನ ಯುನ್‌ ಲಂಗ್‌ ಚಾನ್‌ ಮತ್ತು  ಚುನ್‌ ಹೀ ಲೀ ಎದುರು ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.