ADVERTISEMENT

ರಂಗನಾ ಹೆರಾತ್‌ ಸ್ಪಿನ್‌ ಮೋಡಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 19:43 IST
Last Updated 11 ಮಾರ್ಚ್ 2017, 19:43 IST
ಗಾಲ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಗೆಲುವು ಪಡೆದ ಬಳಿಕ ಶ್ರೀಲಂಕಾ ತಂಡದ ನಾಯಕ ರಂಗನಾ ಹೆರಾತ್‌ (ಎಡ) ಸಹ ಆಟಗಾರರ ಜೊತೆ ಸಂಭ್ರಮಿಸಿದ ಕ್ಷಣ –ಎಎಫ್‌ಪಿ ಚಿತ್ರ
ಗಾಲ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಗೆಲುವು ಪಡೆದ ಬಳಿಕ ಶ್ರೀಲಂಕಾ ತಂಡದ ನಾಯಕ ರಂಗನಾ ಹೆರಾತ್‌ (ಎಡ) ಸಹ ಆಟಗಾರರ ಜೊತೆ ಸಂಭ್ರಮಿಸಿದ ಕ್ಷಣ –ಎಎಫ್‌ಪಿ ಚಿತ್ರ   

ಗಾಲ್‌ : ಗಾಲ್‌ ಅಂತರ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ಎಡಗೈ ಸ್ಪಿನ್ನರ್‌ ರಂಗನಾ ಹೆರಾತ್‌ (59ಕ್ಕೆ6) ಬೀಸಿದ ಸ್ಪಿನ್‌ ಬಲೆಯಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ ಗಳು ಬಂದಿಯಾದರು.

ರಂಗನಾ ಅವರ ಅಮೋಘ ಬೌಲಿಂಗ್‌ ಬಲದಿಂದ ಶ್ರೀಲಂಕಾ ತಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ  259ರನ್‌ಗಳ ಜಯಭೇರಿ ಮೊಳಗಿಸಿದೆ.  ಇದರೊಂದಿಗೆ ಸಿಂಹಳೀಯ ನಾಡಿನ ತಂಡ 2 ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಮುನ್ನಡೆ ಗಳಿಸಿದೆ.

ಗೆಲುವಿಗೆ 457ರನ್‌ಗಳ ಕಠಿಣ ಗುರಿ ಪಡೆದಿದ್ದ ಬಾಂಗ್ಲಾ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 60.2 ಓವರ್‌ಗಳಲ್ಲಿ 197ರನ್‌ಗಳಿಗೆ ಆಲೌಟ್‌ ಆಯಿತು.
ಪಂದ್ಯದ ನಾಲ್ಕನೇ ದಿನವಾದ ಶುಕ್ರವಾರದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 67ರನ್‌ ಗಳಿಸಿದ್ದ ಬಾಂಗ್ಲಾ ತಂಡ  ಡ್ರಾ ಮಾಡಿಕೊಳ್ಳಲು ಅಂತಿಮ ದಿನವಾದ ಶನಿವಾರ ಪೂರ್ಣ 90 ಓವರ್‌ಗಳನ್ನು ಆಡಬೇಕಿತ್ತು. 10 ವಿಕೆಟ್‌ ಗಳು ಇದ್ದಿದ್ದ ರಿಂದ ಪ್ರವಾಸಿ ಪಾಳಯ ದಲ್ಲಿ ಡ್ರಾ ಕನಸು ಚಿಗುರೊಡೆದಿತ್ತು.
ಆದರೆ ಹೆರಾತ್‌ ಚುರುಕಿನ ದಾಳಿ ನಡೆಸಿ ಮುಷ್ಫಿಕುರ್‌ ರಹೀಮ್‌ ಬಳಗದ ಕನಸನ್ನು ಚಿವುಟಿ ಹಾಕಿದರು.

ADVERTISEMENT

ದಿನದ ಮೊದಲ ಓವರ್‌ ಬೌಲ್‌ ಮಾಡಿದ ಅಸೆಲಾ ಗುಣರತ್ನೆ ಎರಡನೇ ಎಸೆತದಲ್ಲಿ ಸೌಮ್ಯ ಸರ್ಕಾರ್‌ ಅವರನ್ನು ಬೌಲ್ಡ್‌ ಮಾಡಿ ವಿಕೆಟ್‌ ಬೇಟೆಗೆ ಮುನ್ನುಡಿ ಬರೆದರು. ಆ ಬಳಿಕ ಬಂದ ಮೊಮಿನಲ್‌ ಹಕ್‌ ಅವರಿಗೆ (5) ದಿಲ್ರುವಾನ ಪೆರೇರಾ ರಟ್ಟೆ ಅರಳಿಸಲು ಅವಕಾಶ ನೀಡಲಿಲ್ಲ. 21ನೇ ಓವರ್‌ನ ಐದನೇ ಎಸೆತದಲ್ಲಿ ತಮಿಮ್‌ ಇಕ್ಬಾಲ್‌ಗೆ (19) ಪೆವಿಲಿಯನ್‌ ದಾರಿ ತೋರಿಸಿದ ಪೆರೇರಾ, ಲಂಕಾ ತಂಡದ ಗೆಲುವಿಗೆ ನಾಂದಿ ಹಾಡಿದರು.
ನಾಯಕ ಮುಷ್ಫಿಕುರ್‌ (34; 98ಎ, 2ಬೌಂ) ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್‌ ಲಿಟನ್‌ ದಾಸ್‌ (35; 62ಎ, 2ಬೌಂ) ನಡೆಸಿದ ಹೋರಾಟಕ್ಕೆ ಫಲ ಸಿಗಲಿಲ್ಲ.

ಪ್ರವಾಸಿ ಬಳಗದ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದ ಹೆರಾತ್‌ ಲಂಕಾ ತಂಡ ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದರು. ಅವರು ಶಕೀಬ್‌ ಅಲ್‌ ಹಸನ್‌ (8), ಮಹಮೂದುಲ್ಲಾ (0), ಲಿಟನ್‌ ದಾಸ್‌, ಮೆಹದಿ ಹಸನ್‌ ಮಿರಾಜ್‌ (28), ತಸ್ಕಿನ್‌ ಅಹ್ಮದ್‌ (5) ಮತ್ತು ಮುಸ್ತಾಫಿಜುರ್‌ ರಹಮಾನ್‌ (0) ಅವರ ವಿಕೆಟ್‌ ಕಬಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌:  ಶ್ರೀಲಂಕಾ: ಮೊದಲ ಇನಿಂಗ್ಸ್‌: 129.1 ಓವರ್‌ಗಳಲ್ಲಿ 494 ಮತ್ತು  69 ಓವರ್‌ಗಳಲ್ಲಿ 6 ವಿಕೆಟ್‌ಗೆ 274 ಡಿಕ್ಲೇರ್ಡ್‌.
ಬಾಂಗ್ಲಾದೇಶ: ಪ್ರಥಮ ಇನಿಂಗ್ಸ್‌: 97.2 ಓವರ್‌ಗಳಲ್ಲಿ 312 ಮತ್ತು 60.2 ಓವರ್‌ಗಳಲ್ಲಿ 197 (ತಮಿಮ್‌ ಇಕ್ಬಾಲ್‌ 19, ಸೌಮ್ಯ ಸರ್ಕಾರ್‌ 53, ಮುಷ್ಫಿಕುರ್‌ ರಹೀಮ್‌ 34, ಲಿಟನ್‌ ದಾಸ್‌ 35, ಮೆಹದಿ ಹಸನ್‌ ಮಿರಾಜ್‌ 28; ದಿಲ್ರುವಾನ ಪೆರೇರಾ 66ಕ್ಕೆ2, ರಂಗನಾ ಹೆರಾತ್‌ 59ಕ್ಕೆ6, ಅಸೆಲಾ ಗುಣರತ್ನೆ 16ಕ್ಕೆ1, ಲಕ್ಷನ್‌ ಸಂದಕನ್‌ 29ಕ್ಕೆ1).
ಫಲಿತಾಂಶ:  ಶ್ರೀಲಂಕಾ ತಂಡಕ್ಕೆ 259ರನ್‌ ಗೆಲುವು ಹಾಗೂ 2 ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಮುನ್ನಡೆ.
ಪಂದ್ಯಶ್ರೇಷ್ಠ:  ಕುಶಾಲ್‌ ಮೆಂಡಿಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.