ADVERTISEMENT

ಶಾಸ್ತ್ರೀ ಟೀಕೆಗೆ ಗಂಗೂಲಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 23:30 IST
Last Updated 29 ಜೂನ್ 2016, 23:30 IST
ರವಿಶಾಸ್ತ್ರಿ,           ಸೌರವ್‌ ಗಂಗೂಲಿ
ರವಿಶಾಸ್ತ್ರಿ, ಸೌರವ್‌ ಗಂಗೂಲಿ   

ಕೋಲ್ಕತ್ತ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯ ಆಕಾಂಕ್ಷಿಯಾಗಿದ್ದ ರವಿ ಶಾಸ್ತ್ರಿ ಮಾಡಿದ್ದ ಟೀಕೆಗೆ ಬಿಸಿಸಿಐ ಸಲಹಾ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಸೌರವ್‌ ಗಂಗೂಲಿ ಅವರು ತಿರುಗೇಟು ನೀಡಿದ್ದಾರೆ.

‘ಬಿಸಿಸಿಐ ವಿವಿಧ ಸಮಿತಿಗಳಲ್ಲಿ ಹಲವು ವರ್ಷ ಕೆಲಸ ಮಾಡಿರುವ ರವಿ ಶಾಸ್ತ್ರಿ ಅವರಿಗೆ ಎಲ್ಲವೂ ಗೊತ್ತಿದೆ. ಆದರೆ ಅವರು ನನ್ನ ನಡವಳಿಕೆಯ  ಬಗ್ಗೆ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ. ಅವರು ಮೂರ್ಖರ ಲೋಕದಲ್ಲಿ ವಿಹರಿಸುತ್ತಿದ್ದಾರೆ’ ಎಂದು ಗಂಗೂಲಿ ಟೀಕಿಸಿದ್ದಾರೆ.

ಕೋಚ್‌ ಹುದ್ದೆಗೆ ನಡೆದ ಸಂದರ್ಶನದ ವೇಳೆ ಗಂಗೂಲಿ ಅವರು ಹಾಜರಿರಲಿಲ್ಲ. ಆದ್ದರಿಂದ ರವಿಶಾಸ್ತ್ರಿ ‘ಸಂದರ್ಶನ ನಡೆಸಬೇಕಾದ ವ್ಯಕ್ತಿಯ ಬಗ್ಗೆ  ಗಂಗೂಲಿಗೆ ಗೌರವ ಇದ್ದಂತಿಲ್ಲ. ಮುಂದೆ ಹೀಗಾಗದಂತೆ ಅವರು ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದ್ದರು. ಆದ್ದರಿಂದ ಗಂಗೂಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಭಾರತ ತಂಡದ ಇಬ್ಬರು ಹಿಂದಿನ ನಾಯಕರ ನಡುವಣ ಜಟಾಪಟಿ ಈಗ ಕಾವು ಪಡೆದುಕೊಂಡಿದೆ. ‘ಕೋಚ್‌ ಆಯ್ಕೆಗೆ ನಡೆದ ಸಂದರ್ಶನ ದಿನದಂದೇ ಬಂಗಾಳ ಕ್ರಿಕೆಟ್‌ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸಭೆ ಇತ್ತು. ಆದ್ದರಿಂದ ರವಿ ಸಂದರ್ಶನಕ್ಕೆ ಬರುವ ವೇಳೆಗೆ ನನಗೆ ಅಲ್ಲಿರಲು ಸಾಧ್ಯವಾಗಲಿಲ್ಲ. ಇದನ್ನು ಅರ್ಥಮಾಡಿಕೊಳ್ಳುವುದನ್ನು ಬಿಟ್ಟು ವೈಯಕ್ತಿಕ ಟೀಕೆಗೆ ಮುಂದಾಗಿದ್ದು ಸರಿಯೇ’ ಎಂದೂ ಗಂಗೂಲಿ ಪ್ರಶ್ನಿಸಿದ್ದಾರೆ.

‘ರವಿ ಶಾಸ್ತ್ರಿ  ಟೀಕೆಗಳನ್ನು ನೋಡಿದರೆ ಅವರು ಹತಾಶೆಗೊಂಡಂತೆ ಕಾಣುತ್ತದೆ. ಅದೇನೇ ಇರಲಿ, ಅನಿಲ್‌ ಕುಂಬ್ಳೆ ಅವರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದ್ದು ಸರಿಯಾದ ನಿರ್ಧಾರ. ಅವರು ಕಠಿಣ ಶ್ರಮ ಪಡುವ ವ್ಯಕ್ತಿ’ ಎಂದು ಭಾರತ ತಂಡದ ಕ್ರಿಕೆಟಿಗ ಗೌತಮ್‌ ಗಂಭೀರ್ ಹೇಳಿದ್ದಾರೆ.

ಬೆಂಗಳೂರು ವರದಿ: ‘ಕೋಚ್‌ ಯಾರು ಎಂಬುದು ಮುಖ್ಯವಲ್ಲ. ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಮೂರೂ ಮಾದರಿಗಳಲ್ಲಿ ನಮ್ಮ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯವುದು ಮುಖ್ಯ’ ಎಂದು ನೂತನ ಕೋಚ್‌ ಕುಂಬ್ಳೆ ಬುಧವಾರ  ಹೇಳಿದ್ದಾರೆ.
 

ರವಿ ಶಾಸ್ತ್ರಿ ಮೂರ್ಖರ ಲೋಕದಲ್ಲಿದ್ದಾರೆ
ಕೋಲ್ಕತ್ತ (ಪಿಟಿಐ):  ‘ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಯ್ಕೆ ವಿಷಯದಲ್ಲಿ ನನ್ನ ಜವಾಬ್ದಾರಿ ಬಗ್ಗೆ ರವಿ ಶಾಸ್ತ್ರಿ ಮಾತನಾಡಿದ್ದಾರೆ. ಅವರು ಮೂರ್ಖರ ಲೋಕದಲ್ಲಿ ವಿಹರಿಸುತ್ತಿ ದ್ದಾರೆ’ ಎಂದು ಬಿಸಿಸಿಐ ಸಲಹಾ ಸಮಿ ತಿಯ ಸದಸ್ಯರಲ್ಲಿ ಒಬ್ಬರಾದ ಸೌರವ್‌ ಗಂಗೂಲಿ ತಿರುಗೇಟು ನೀಡಿದ್ದಾರೆ.

‘ಬಿಸಿಸಿಐನ ಎಲ್ಲಾ ಸಭೆಗಳಿಗೂ ತಪ್ಪದೇ ಹಾಜರಾಗುತ್ತೇನೆ. ಅದು ನನ್ನ ಕರ್ತವ್ಯವೂ ಹೌದು. ಇದರ ಬಗ್ಗೆ ಅವರು ಮಾತನಾಡಿದ್ದು ಸರಿಯಲ್ಲ. ರವಿ ಭಾರತ ಕಂಡ ಶ್ರೇಷ್ಠ ಆಟಗಾರ. ಅದೆಷ್ಟೋ ಸಲ ಅವರ ಜೊತೆ ಗಂಟೆಗಟ್ಟಲೆ ಮಾತ ನಾಡಿದ್ದೇನೆ. ಅದರೆ ರವಿ  ನನ್ನನ್ನು ನಿಂದಿಸಿದ್ದು ಸರಿಯೇ’ ಎಂದೂ ಗಂಗೂಲಿ ಪ್ರಶ್ನಿಸಿದ್ದಾರೆ.

‘ಭಾರತ ತಂಡದ ಮುಖ್ಯ ಕೋಚ್‌ ಆಯ್ಕೆಗೆ ನಡೆದ ಸಂದರ್ಶನದ ವೇಳೆ ಗಂಗೂಲಿ ಇರಲಿಲ್ಲ. ಅವರು ನನ್ನ ಬಗ್ಗೆ ಅಗೌರವ ತೋರಿಸಿದ್ದಾರೆ. ಸಂದರ್ಶನ ನೀಡುವ ಅಭ್ಯರ್ಥಿಯ ಬಗ್ಗೆ ಗಂಗೂಲಿಗೆ ಗೌರವ ಇಲ್ಲದಿರುವುದು ಬೇಸರದ ಸಂಗತಿ ’ ಎಂದು ರವಿಶಾಸ್ತ್ರಿ ಮಂಗಳ ವಾರ ಅಸಮಾಧಾನ ವ್ಯಕ್ತಪಡಿಸಿದ್ದರು.  ಅಷ್ಟೇ ಅಲ್ಲ, ‘ಮುಂದಿನ ಬಾರಿ ಇಂಥ ಮಹತ್ವದ ಹುದ್ದೆಗೆ ಸಂದರ್ಶನ ನಡೆದಾಗ ಎದುರಿಗೆ ಇರಬೇಕು’ ಎಂದೂ ಸಲಹೆ ನೀಡಿದ್ದರು.

ಭಾರತ ತಂಡದ ಹಿಂದಿನ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದ್ದು ಗಂಗೂಲಿ ತಿರುಗೇಟು ನೀಡಿದ್ದಾರೆ.
ಭಾರತ ತಂಡದ ಮುಖ್ಯ ಕೋಚ್‌ ಆಯ್ಕೆ ಮಾಡುವ ಹೊಣೆ ವಿ.ವಿ.ಎಸ್‌ ಲಕ್ಷ್ಮಣ್‌, ಸಚಿನ್ ತೆಂಡೂಲ್ಕರ್‌ ಮತ್ತು ಗಂಗೂಲಿ ಅವರನ್ನು ಒಳಗೊಂಡ ಬಿಸಿಸಿಐ ಸಲಹಾ ಸಮಿತಿಯ ಮೇಲಿತ್ತು. ಆದರೆ ರವಿಶಾಸ್ತ್ರಿ ಸಂದರ್ಶನದ ವೇಳೆ ಗಂಗೂಲಿ ಹಾಜರಿರಲಿಲ್ಲ. ಸಚಿನ್‌ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪಾಲ್ಗೊಂಡಿದ್ದರು.

‘ರವಿಶಾಸ್ತ್ರಿ ಗಂಭೀರ ಆರೋಪ ಮಾಡಿದ್ದಾರೆ. ಅವರು ನನ್ನ ವಿರುದ್ಧ ಮಾಡಿರುವ ಟೀಕೆಗಳ ಬಗ್ಗೆ ಪತ್ರಿಕೆಗ ಳಿಂದ ತಿಳಿದುಕೊಂಡೆನಾದರೂ ಮೊದಲು ಗಂಭೀರವಾಗಿ ಪರಿಗಣಿಸ ಲಿಲ್ಲ. ಆದರೆ ವೈಯಕ್ತಿಕ ಟೀಕೆ ಮಾಡಿ ದ್ದರಿಂದ ಬೇಸರವಾಗಿದೆ’ ಎಂದು ಗಂಗೂಲಿ ಹೇಳಿದ್ದಾರೆ.

‘ರವಿಶಾಸ್ತ್ರಿ ಕೂಡ ಬಿಸಿಸಿಐನ ಕಾರ್ಯಚಟುವಟಿಕೆಗಳ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಕೋಚ್ ಹುದ್ದೆಗೆ ಆಯ್ಕೆ ಮಾಡಲು ಹತ್ತು ವರ್ಷಗಳ ಹಿಂದೆ ಅವರು ನನ್ನ ಸ್ಥಾನದಲ್ಲಿಯೇ ಇದ್ದರು. ಇನ್ನೊಂದು ಸಭೆಯಲ್ಲಿ ಪಾಲ್ಗೊಳ್ಳ ಬೇಕಿದ್ದ ಕಾರಣ ರವಿ ಸಂದರ್ಶನದ ವೇಳೆ ಇರಲು ಸಾಧ್ಯವಾಗಲಿಲ್ಲ. ಆದರೆ ಕ್ರಿಕೆಟ್‌ ಮಂಡಳಿಯ ಎಲ್ಲಾ ಚಟುವಟಿಕೆಗಳಲ್ಲಿ ಈ ಮೇಲ್‌ ಮೂಲಕ ಸಕ್ರಿಯನಾಗಿದ್ದೆ’ ಎಂದೂ ಗಂಗೂಲಿ ವಿವರಣೆ ನೀಡಿದ್ದಾರೆ.

‘ಕೋಚ್‌ ಹುದ್ದೆಯ ಬಗ್ಗೆ ರವಿ ಶಾಸ್ತ್ರಿ ಗಂಭೀರವಾಗಿದ್ದರೊ, ಇಲ್ಲವೊ ಗೊತ್ತಿಲ್ಲ.  ಆದರೆ ಅವರು ಗೌರವ ನೀಡುವ ಬಗ್ಗೆ ಮಾತನಾಡಿದ್ದಾರೆ. ಗೌರವ ಕೊಡುವುದನ್ನು ಮೊದಲು ರವಿ ಕಲಿಯಲಿ. ಅವರೇನು ಅಪ್ರಬುದ್ಧರಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದಿನ ಹತ್ತು ವರ್ಷಗಳಿಂದ ಅವರು ಬಿಸಿಸಿಐನ ವಿವಿಧ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರಲ್ಲವೇ’ ಎಂದೂ ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ)  ಮುಖ್ಯಸ್ಥರೂ ಆದ ಗಂಗೂಲಿ ಪ್ರಶ್ನಿಸಿದ್ದಾರೆ.

‘ಕೋಚ್‌ ಹುದ್ದೆಗೆ ಸಂದರ್ಶನ ನಡೆದ  ದಿನದಂದೇ ಸಿಎಬಿ ಕಾರ್ಯಕಾರಿ ಸಮಿತಿಯ ಸಭೆ ಇತ್ತು.  ಸಂಸ್ಥೆಯ ಅಧ್ಯಕ್ಷನಾಗಿ ನಾನು ಆ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಸಭೆ ಆಯೋಜನೆಯ ಬಗ್ಗೆ ಸಾಮಾನ್ಯವಾಗಿ 14 ದಿನ ಮೊದಲೇ  ಗೊತ್ತಾಗುತ್ತದೆ. ಆದರೆ, ಈ ಬಾರಿಯ ಸಭೆ ಇರುವುದು ಎರಡು ದಿನಗಳ ಮೊದಲಷ್ಟೇ ತಿಳಿಯಿತು. ಅಂದು ಸಂಜೆ 4.15ಕ್ಕೆ ರವಿ ಶಾಸ್ತ್ರಿಯ ಸಂದರ್ಶನಕ್ಕೆ ಸಮಯ ನಿಗದಿಯಾಗಿತ್ತು. ಆದ್ದರಿಂದ ಈ ವೇಳೆ ಹಾಜರಿರಲು ನನಗೆ ಸಾಧ್ಯವಾಗಿರಲಿಲ್ಲ’ ಎಂದು ಗಂಗೂಲಿ ವಿವರಣೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.