ADVERTISEMENT

ರಿಚರ್ಡ್‌ಗೆ ಆಘಾತ ನೀಡಿದ ಎಡ್ಮಂಡ್‌

`ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ; ಸಿಲಿಕ್‌, ಪೆಟ್ರಾ ಕ್ವಿಟೋವಾ ಶುಭಾರಂಭ

ಏಜೆನ್ಸೀಸ್
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ಗೆಲುವಿನ ಸಂಭ್ರಮದಲ್ಲಿ ಮರಿನ್ ಸಿಲಿಕ್
ಗೆಲುವಿನ ಸಂಭ್ರಮದಲ್ಲಿ ಮರಿನ್ ಸಿಲಿಕ್   

ನ್ಯೂಯಾರ್ಕ್‌ (ರಾಯಿಟರ್ಸ್‌/ ಎಎಫ್‌ಪಿ): ಈ ಋತುವಿನ ಕೊನೆಯ ಗ್ರ್ಯಾಂಡ್‌ಸ್ಲಾಮ್‌ ಟೆನಿಸ್‌್ ಟೂರ್ನಿ   ಅಮೆರಿಕ ಓಪನ್‌ನಲ್ಲಿ ಮೊದಲ ದಿನವೇ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

ಬ್ರಿಟನ್‌ನ ಆಟಗಾರ, ವಿಶ್ವ ಕ್ರಮಾಂಕಪಟ್ಟಿಯಲ್ಲಿ 84ನೇ ಸ್ಥಾನದಲ್ಲಿರುವ ಕೈಲ್‌ ಎಡ್ಮಂಡ್‌ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ 13ನೇ ಸ್ಥಾನ ಹೊಂದಿರುವ ಫ್ರಾನ್ಸ್‌ನ ರಿಚರ್ಡ್‌ ಗ್ಯಾಸ್ಕ್ವೆಟ್‌ಗೆ ಆಘಾತ ನೀಡಿದ್ದಾರೆ.

ಸೋಮವಾರ ನಡೆದ ಪುರುಷ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಎಡ್ಮಂಡ್‌ 6–2, 6–2, 6–3ರ ನೇರ ಸೆಟ್‌ಗಳಿಂದ ಗ್ಯಾಸ್ಕ್ವೆಟ್‌ ವಿರುದ್ಧ ಗೆದ್ದರು.
ಹೋದ ವರ್ಷ ನಡೆದ ಡೇವಿಸ್‌ ಕಪ್‌ನಲ್ಲಿ ಬ್ರಿಟನ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ 21 ವರ್ಷದ ಎಡ್ಮಂಡ್‌ ಅವರು ಗ್ಯಾಸ್ಕ್ವೆಟ್‌ ವಿರುದ್ಧ ಅಮೋಘ ಆಟ ಆಡಿದರು.

ಈ ಹಿಂದೆ ನಾಲ್ಕು ಬಾರಿ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಗ್ಯಾಸ್ಕ್ವೆಟ್‌  ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದರು. ಆದರೆ ಪಂದ್ಯದಲ್ಲಿ ಶ್ರೇಷ್ಠ ಆಟ ಆಡಿದ ಎಡ್ಮಂಡ್‌ ಈ ನಿರೀಕ್ಷೆಯನ್ನು ಹುಸಿ ಮಾಡಿದರು.

ಆರಂಭಿಕ ಸೆಟ್‌ನ ಶುರುವಿನಿಂದಲೇ ಎಡ್ಮಂಡ್‌ ಅಬ್ಬರದ ಆಟಕ್ಕೆ ಮುಂದಾದರು. ತಮ್ಮ ಸರ್ವ್‌ ಉಳಿಸಿಕೊಂಡ ಅವರು ಮರು ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು ಮುನ್ನಡೆ ಕಂಡುಕೊಂಡರು.

ಆ ಬಳಿಕ ಪುಟಿದೆದ್ದ ಗ್ಯಾಸ್ಕ್ವೆಟ್‌ ಸತತವಾಗಿ ಎರಡು ಗೇಮ್‌ ಜಯಿಸಿ 2–2ರಲ್ಲಿ ಸಮಬಲ ಮಾಡಿಕೊಂಡರು.

ಆ ನಂತರದ ಅವಧಿಯಲ್ಲಿ ಬ್ರಿಟನ್‌ನ ಆಟಗಾರ ಅಂಗಳದಲ್ಲಿ ಮಿಂಚಿದರು.  ಶರವೇಗದ ಸರ್ವ್‌ಗಳನ್ನು ಮಾಡಿದ ಅವರು ಚೆಂಡನ್ನು ಚಾಕಚಕ್ಯತೆಯಿಂದ ಹಿಂತಿರುಗಿಸಿ ಎದುರಾಳಿಯನ್ನು ಒತ್ತಡಕ್ಕೆ ಕೆಡವಿದರು. ಇದರೊಂದಿಗೆ ಲೀಲಾಜಾಲವಾಗಿ ನಾಲ್ಕು ಗೇಮ್‌ ಜಯಿಸಿ ಸೆಟ್‌ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ಗ್ಯಾಸ್ಕ್ವೆಟ್‌ ತಿರುಗೇಟು ನೀಡಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. ಆರಂಭಿಕ ಸೆಟ್‌ನಲ್ಲಿ ಗೆದ್ದು ವಿಶ್ವಾಸದ ಗಣಿ ಎನಿಸಿದ್ದ ಎಡ್ಮಂಡ್‌ ನಂತರವೂ ತುಂಬು ವಿಶ್ವಾಸದಿಂದ ಆಡಿದರು.

ಬ್ರಿಟನ್‌ನ ಆಟಗಾರನ ರ್‍ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಸರ್ವ್‌ಗಳಿಗೆ ನಿರುತ್ತರರಾದ ಗ್ಯಾಸ್ಕ್ವೆಟ್‌ ಸುಲಭವಾಗಿ ಗೇಮ್‌ ಕೈಚೆಲ್ಲಿದರು. ಮೊದಲ ನಾಲ್ಕು ಗೇಮ್‌ಗಳಲ್ಲಿ ಕೊಂಚ ಪ್ರತಿರೋಧ ಒಡ್ಡಿದ ಅವರು ಬಳಿಕ ಮತ್ತೆ ಮಂಕಾದರು.

ಎದುರಾಳಿ ಆಟಗಾರ ಒತ್ತಡಕ್ಕೆ ಒಳಗಾಗಿರುವುದನ್ನು ಮನಗಂಡ ಎಡ್ಮಂಡ್ ಚುರುಕಿನ ಡ್ರಾಪ್‌ ಮತ್ತು ಆಕರ್ಷಕ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಪೂರ್ಣ ಪ್ರಭುತ್ವ ಸಾಧಿಸಿ ಸೆಟ್‌ ಜಯಿಸಿದರು.

ಮೂರನೇ ಗೇಮ್‌ನಲ್ಲು ಗ್ಯಾಸ್ಕ್ವೆಟ್‌ ಮೇಲೆ ಅಧಿಪತ್ಯ ಸಾಧಿಸಿದ ಬ್ರಿಟನ್‌ನ ಆಟಗಾರ ಏಕಪಕ್ಷೀಯವಾಗಿ ಪಂದ್ಯ ಗೆದ್ದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಕ್ರೊವೇಷ್ಯಾದ ಮರಿನ್‌ ಸಿಲಿಕ್‌ 6–4, 7–5, 6–1ರಲ್ಲಿ ಬ್ರೆಜಿಲ್‌ನ ರೊಜೇರಿಯೊ ದುತ್ರಾ ಸಿಲ್ವ ಎದುರೂ, ಅರ್ಜೆಂಟೀನಾದ ಗ್ಯೂಯಿಡ್‌ ಪೆಲ್ಲಾ 6–3, 6–4, 6–4ರಲ್ಲಿ ಅಮೆರಿಕದ ಜೊರ್ನಾ ಫ್ರಾಟಾಂಜೆಲೊ ಮೇಲೂ, ರಷ್ಯಾದ ಮಿಖಾಯಿಲ್‌ ಯೂಜ್ನಿ  6–2, 6–1, 6–1ರಲ್ಲಿ ಸ್ಲೊವೇಕಿಯಾದ ಮಾರ್ಟಿನ್‌ ಕ್ಲಿಜಾನ್‌ ವಿರುದ್ಧವೂ ಗೆದ್ದರು.

ಕ್ವಿಟೋವಾ ಶುಭಾರಂಭ:
ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಇಲ್ಲಿ ‍ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಐಎನಿಸಿರುವ ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರು ಶುಭಾರಂಭ ಮಾಡಿದರು.
ಆರಂಭಿಕ ಸುತ್ತಿನಲ್ಲಿ ಕ್ವಿಟೋವಾ 7–5, 6–3ರ ನೇರ ಸೆಟ್‌ಗಳಿಂದ ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಅವರನ್ನು ಸೋಲಿಸಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಜರ್ಮನಿಯ ಕ್ಯಾರಿನಾ ವೆಟ್ಟೊಫೆಟ್‌ 6–4, 6–1 ರಲ್ಲಿ  ಜಪಾನ್‌ನ ಮಿಸಾಕಿ ಡೊಯಿ ವಿರುದ್ಧವೂ,  ಇಟಲಿಯ ರಾಬರ್ಟ ವಿನ್ಸಿ 6–2, 6–4ರಲ್ಲಿ ಜರ್ಮನಿಯ ಅನಾ ಲೆನಾ ಫ್ರೀಡ್ಸಮ್‌ ಮೇಲೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.