ADVERTISEMENT

ರಿಯೊಗೆ ಬಂದಿಳಿದ ಭಾರತದ ಅಥ್ಲೀಟ್‌ಗಳು

ಕ್ರೀಡಾಗ್ರಾಮದಲ್ಲಿ ನಡೆಯುತ್ತಿದೆ ಕೊನೆಯ ಹಂತದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 23:30 IST
Last Updated 28 ಜುಲೈ 2016, 23:30 IST
ಒಲಿಂಪಿಕ್ಸ್‌ ಸ್ಪರ್ಧೆಗಳು ನಡೆಯುವ ರಿಯೊ ಡಿ ಜನೈರೊದ ಮರಕಾನಾ ಕ್ರೀಡಾಂಗಣದ ವಿಹಂಗಮ ನೋಟ...
ಒಲಿಂಪಿಕ್ಸ್‌ ಸ್ಪರ್ಧೆಗಳು ನಡೆಯುವ ರಿಯೊ ಡಿ ಜನೈರೊದ ಮರಕಾನಾ ಕ್ರೀಡಾಂಗಣದ ವಿಹಂಗಮ ನೋಟ...   

ರಿಯೊ ಡಿ ಜನೈರೊ/ಕೋಲ್ಕತ್ತ (ಪಿಟಿಐ):  ಮುಕ್ತಾಯ ಹಂತದ ಕಾಮಗಾರಿಗಳು ಇನ್ನೂ ನಡೆಯುತ್ತಿರುವ ರಿಯೊ ಡಿ ಜನೈರೊದ ಒಲಿಂಪಿಕ್ಸ್ ಕ್ರೀಡಾ ಗ್ರಾಮಕ್ಕೆ ಭಾರತದ ಶೂಟರ್‌ಗಳು ಮತ್ತು ಕೆಲವು ಅಥ್ಲೀಟ್‌ಗಳು ಗುರುವಾರ ಬಂದಿಳಿದರು.

ಶೂಟರ್‌ಗಳಾದ ಜಿತು ರೈ, ಪ್ರಕಾಶ್ ನಂಜಪ್ಪ, ಗುರುಪ್ರೀತ್ ಸಿಂಗ್, ಕೈನನ್ ಚೆನಾಯ್, ಮಾನವಜೀತ್ ಸಂಧು, ಅಪೂರ್ವಿ ಚಾಂಡೇಲಾ, ಅಯೋನಿಕಾ ಪಾಲ್, ನಡಿಗೆಯ ಅಥ್ಲೀಟ್ ಕುಶ್‌ಬೀರ್ ಕೌರ್, ಸಪ್ನಾ ಪುನಿಯಾ, ಸಂದೀಪ್ ಕುಮಾರ್, ಮನೀಶ್ ರಾವತ್, ಶಾಟ್‌ಪಟ್ ಅಥ್ಲೀಟ್ ಮನಪ್ರೀತ್ ಕೌರ್, ಬಾಕ್ಸರ್ ಶಿವ ಥಾಪಾ ಮತ್ತು ಮನೋಜಕುಮಾರ್ ರಿಯೊ ತಲುಪಿದ್ದಾರೆ.  ಅವರೊಂದಿಗೆ ವೈದ್ಯರು ಮತ್ತು ತರಬೇತುದಾರರೂ ಇದ್ದಾರೆ. 

ರಾಕೇಶ್ ಗುಪ್ತಾ–ಥಾಮಸ್ ಬಾಕ್  ಭೇಟಿ: ಗುರುವಾರ ಬೆಳಿಗ್ಗೆಯ ಉಪ ಹಾರದ ಸಂದರ್ಭದಲ್ಲಿ ಭಾರತ ತಂಡದ ಚೆಫ್ ಡಿ ಮಿಷನ್ ರಾಕೇಶ್ ಗುಪ್ತಾ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)  ಅಧ್ಯಕ್ಷ ಥಾಮಸ್ ಬಾಕ್ ಅವರು ಔಪಚಾರಿಕವಾಗಿ ಮಾತುಕತೆ ನಡೆಸಿದರು. ಭಾರತದ ಅಥ್ಲೀಟ್‌ಗಳ ಸಿದ್ಧತೆಯ ಕುರಿತು ಬಾಕ್ ಅವರು ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿ ಸಿದ ಅವರು, ‘ಭಾರತದ ಕ್ರೀಡಾಪಟು ಗಳಿಂದ  ಉತ್ತಮ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದೇನೆ. ಭಾರತದ ಅಥ್ಲೀಟ್‌ಗಳು ರಿಯೊಗೆ ಬರುತ್ತಿರುವುದು  ಸಂತಸ ತಂದಿದೆ’ ಎಂದರು.

ಕ್ರೀಡಾಗ್ರಾಮದಲ್ಲಿರುವ ಸೌಲಭ್ಯಗಳ ಕುರಿತು ಮಾತನಾಡಿದ ರಾಕೇಶ್ ಗುಪ್ತಾ, ‘ಭಾರತದ ಕ್ರೀಡಾಪಟುಗಳಿಗೆ ವ್ಯವಸ್ಥೆ ಮಾಡಲಾಗಿರುವ ಊಟದಲ್ಲಿ ಸಾಕಷ್ಟು ಸಸ್ಯಾಹಾರಿ ಖಾದ್ಯಗಳು ಇವೆ. ಇನ್ನೂ ಹೆಚ್ಚಿನ ಪದಾರ್ಥಗಳನ್ನು ಸೇರ್ಪಡೆ ಮಾಡಲಿದ್ದಾರೆ. ವಸತಿ ಕೋಣೆಗಳು ಪರವಾಗಿಲ್ಲ. ಕೊನೆಯ ಹಂತದ ಕಾಮಗಾರಿಗಳು ಇನ್ನೂ ನಡೆದಿವೆ’ ಎಂದರು.

‘ಭಾರತ ತಂಡದ ವಸತಿಯನ್ನು  ಆತಿಥೇಯ ಬ್ರೆಜಿಲ್ ತಂಡದ ವಸತಿ ಸಂಕೀರ್ಣದ ಪಕ್ಕದಲ್ಲಿಯೇ ನೀಡ ಲಾಗಿದೆ.   ಇನ್ನುಳಿದ ಸೌಲಭ್ಯಗಳು ಉತ್ತಮವಾಗಿವೆ. ಈಜುಕೊಳ ನಮ್ಮ ವಸತಿ ಕಟ್ಟಡದ ಪಕ್ಕದಲ್ಲಿಯೇ ಇರುವುದು ಅನುಕೂಲವಾಗಿದೆ.

ಜಿಮ್ನಾಷಿಯಂ ಮತ್ತು ಒಲಿಂಪಿಕ್ ಪ್ಲಾಜಾ ಕೂಡ ಸಮೀಪದಲ್ಲಿವೆ.  ಅಥ್ಲೀಟ್‌ಗಳು ಪ್ರತ್ಯೇಕ ತಂಡಗಳಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಈಗ ಕೆಲವರು ಬಂದಿದ್ದಾರೆ. ಇನ್ನೂ ಕೆಲವು ಅಥ್ಲೀಟ್‌ಗಳು ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಬರಲಿದ್ದಾರೆ’ ಎಂದು ಗುಪ್ತಾ ಮಾಹಿತಿ ನೀಡಿದರು. ಒಟ್ಟು 15 ಕ್ರೀಡೆಗಳಲ್ಲಿ 120 ಅಥ್ಲೀಟ್‌ಗಳು ಭಾಗವಹಿಸುತ್ತಿದ್ದಾರೆ. 

ಆರ್ಚರಿಯಲ್ಲಿ ದೀಪಿಕಾ ಪದಕ ಜಯಿಸುತ್ತಾರೆ: ಲಿಂಬಾರಾಮ್
ಭಾರತದ ಆರ್ಚರಿಪಟು ದೀಪಿಕಾ ಕುಮಾರಿ ಅವರಿಗೆ ಪದಕ ಗೆಲ್ಲುವ ಸಾಮರ್ಥ್ಯ ಇದೆ. ಅವರು ತಮ್ಮ ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮಾಜಿ ಆರ್ಚರಿಪಟು ಲಿಂಬಾರಾಮ್ ಹೇಳಿದ್ದಾರೆ.

ಗುರುವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ಮಹಿಳಾ ಆರ್ಚರಿಪಟುಗಳ ಸಾಧನೆಗಳ ಕುರಿತ ವರದಿಗಳನ್ನು ನಾನು ಪತ್ರಿಕೆಗಳಲ್ಲಿ ಓದುತ್ತಿದ್ದೇನೆ. ಅವರ ಮುನ್ನಡೆಯು ಸಂತಸ ತಂದಿದೆ.

ಧರ್ಮೇಂದ್ರ ತಿವಾರಿ ಅವರು ಉತ್ತಮ ಕೋಚ್ ಆಗಿದ್ದಾರೆ.  ಅವರ ಮಾರ್ಗದರ್ಶನವು ತಂಡಕ್ಕೆ ಉತ್ತಮ ಫಲ ನೀಡಲಿದೆ’ ಎಂದು ಲಿಂಬಾರಾಮ್ ಹೇಳಿದ್ದಾರೆ. ಲಿಂಬಾರಾಮ್ ಅವರು 1992 ರ ಒಲಿಂಪಿಕ್ಸ್‌ನಲ್ಲಿ ಅಲ್ಪ ಅಂತರದಿಂದ ಕಂಚಿನ ಪದಕ ಕಳೆದುಕೊಂಡಿದ್ದರು.    

‘ಅದೊಂದು ದುಃಖದ ದಿನವಾಗಿತ್ತು. ನಮ್ಮ ಕನಸುಗಳು ನುಚ್ಚುನೂರಾಗಿದ್ದವು.  ನಮ್ಮ ತಂಡದಲ್ಲಿ ಒಬ್ಬರ ನಂತರ ಇನ್ನೊಬ್ಬರು ಅಸ್ವಸ್ಥರಾದೆವು. ತಂಡಕ್ಕೆ ಪದಕ ಗೆಲ್ಲುವ ಸಾಮರ್ಥ್ಯವಿತ್ತು. ಆದರೆ ಅದೃಷ್ಟ ಜೊತೆಗೂಡಲಿಲ್ಲ’ ಎಂದು 44 ವರ್ಷದ ಲಿಂಬಾರಾಮ್ ನೆನಪಿಸಿಕೊಂಡರು.

‘ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡಕ್ಕೆ ಮೂರು ಪದಕಗಳನ್ನು ಗೆಲ್ಲುವ ಅವಕಾಶವಿತ್ತು. ಆದರೆ, ಕೊನೆಯ ಹಂತದಲ್ಲಿ ಎಡವಿತ್ತು. ಆದರೆ ಈ ಬಾರಿ ಉತ್ತಮ ತಂಡವಿದೆ. ವೈಯಕ್ತಿಕ ವಿಭಾಗದಲ್ಲಿ ದೀಪಿಕಾ ಕುಮಾರಿ ಮತ್ತು ಭಾರತ ತಂಡವು ಪದಕ ಗೆಲ್ಲುವ ನಿರೀಕ್ಷೆ ಇದೆ. ನಾನು ಆರ್ಚರಿ ನಡೆಯುವ ದಿನ ಇಡೀ ರಾತ್ರಿ ಟಿವಿ ಮುಂದೆ ಕುಳಿತಿರುತ್ತೇನೆ’ ಎಂದು ಹೇಳಿದ್ದಾರೆ.

ಲಿಂಬಾರಾಮ್ ಅವರು 1989ರ ಏಷ್ಯಾ ಕಪ್ ಆರ್ಚರಿಯಲ್ಲಿ  ಕಂಚು,  1992ರ ಏಷ್ಯನ್ ಆರ್ಚರಿ ಚಾಂಪಿಯನ್‌ ಷಿಪ್‌ನಲ್ಲಿ ವೈಯಕ್ತಿಕ ವಿಭಾಗದ ಚಿನ್ನದ ಪದಕ ಗೆದ್ದಿದ್ದರು.

ಒಲಿಂಪಿಕ್ಸ್‌ ನಂತರ ಬಾಕ್ಸಿಂಗ್ ಕೋಚ್ ಸ್ಥಾನಕ್ಕೆ ವಿದಾಯ: ಗುರುಭಕ್ಷ್
ಒಲಿಂಪಿಕ್ಸ್‌ ಬಳಿಕ ರಾಷ್ಟ್ರೀಯ ಬಾಕ್ಸಿಂಗ್ ತಂಡದ ಕೋಚ್‌ ಸ್ಥಾನದಿಂದ ನಿವೃತ್ತಿಯಾಗುವ ಬಗ್ಗೆ ಗುರುಬಕ್ಷ್‌ ಸಿಂಗ್ ಸಂಧು ಸುಳಿವು ನೀಡಿದ್ದಾರೆ.
ಗುರುವಾರ ತಮ್ಮ ನಿವೃತ್ತಿ ಇಂಗಿತ ವ್ಯಕ್ತಪಡಿಸಿರುವ ಅವರು ‘ರಿಯೊ ಒಲಿಂಪಿಕ್ಸ್‌ ಬಳಿಕ ನನಗೆ ವಿಶ್ರಾಂತಿ ಅಗತ್ಯವಿದೆ’ ಎಂದು  ಹೇಳಿದ್ದಾರೆ.

ಸಂಧು ಅವರು 1993ರಲ್ಲಿ ಕೋಚ್‌ ಆಗಿ ನೇಮಕವಾಗಿದ್ದರು. 2012ರ  ಒಲಿಂಪಿಕ್ಸ್ ನಂತರ ಅವರು ಹುದ್ದೆಯಿಂದ ನಿರ್ಗಮಿಸಲು ಯೋಜಿಸಿದ್ದರು. 2013ರಲ್ಲಿ ಸಾಯ್ ಅವರನ್ನು ಮರುನೇಮಕ ಮಾಡಿತ್ತು.

‘ಸುದೀರ್ಘ ಕಾಲದಿಂದ ತಂಡ ದೊಂದಿಗೆ ಇದ್ದೇನೆ. ಈ ಬಾರಿ ಒಲಿಂಪಿಕ್ಸ್‌ನಲ್ಲಿಯೂ ಭಾರತದ ಬಾಕ್ಸರ್‌ ಗಳು ಉತ್ತಮ ಸಾಧನೆ ಮಾಡಲಿದ್ದಾರೆ. ನನ್ನ ವಿಶ್ರಾಂತಿಯ ವಿಷಯವನ್ನು ಸಾಯ್ ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಸಿಂಗ್ ಹೇಳಿದ್ದಾರೆ.

‘ಈ ಬಾರಿ ತಂಡದಲ್ಲಿರುವ ಶಿವ ಥಾಪಾ (56 ಕೆ.ಜಿ. ವಿಭಾಗ), ಮನೋಜ್‌ ಕುಮಾರ್‌ (64 ಕೆ.ಜಿ.) ಮತ್ತು ವಿಕಾಸ್ ಕೃಷ್ಣನ್‌ (75 ಕೆ.ಜಿ.) ಅವರು ಪದಕ ಜಯಿಸುವ ಸಮರ್ಥ ರಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಭಾರತ ಬಾಕ್ಸಿಂಗ್ ಫೆಡರೇಷನ್‌ನಲ್ಲಿ ನಡೆಯುತ್ತಿರುವ ತಿಕ್ಕಾಟಗಳು ಮತ್ತು ಗೊಂದಲದ ವಾತಾವರಣದ ಕುರಿತು ಅವರು ಬೇಸರ ವ್ಯಕ್ತಪಡಿಸಿದರು.
‘ಈಗ ನಡೆಯುತ್ತಿರುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ತ

ADVERTISEMENT

ರಬೇತು ದಾರರಾಗಿ ಆಟಗಾರರಿಗೆ ಮಾರ್ಗದರ್ಶನ ನೀಡುವುದು ನಮ್ಮ ಕೆಲಸ. ಆ ಕರ್ತವ್ಯದ ಮೇಲೆ ಸಂಪೂರ್ಣ ನಿಗಾ ವಹಿಸಿದ್ದೇವೆ. ಬಾಕ್ಸರ್‌ಗಳು ಐತಿಹಾಸಿಕ ಸಾಧನೆ ಮಾಡುವ ನಿರೀಕ್ಷೆ ಇದೆ’ ಎಂದು ಗುರುಭಕ್ಷ್‌ ಸಿಂಗ್ ಹೇಳಿದರು. ಆಗಸ್ಟ್‌ ಆರರಿಂದ ಬಾಕ್ಸಿಂಗ್ ವಿಭಾಗದ ಸ್ಪರ್ಧೆಗಳು ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.