ADVERTISEMENT

ರಿಯೊ ಒಲಿಂಪಿಕ್ಸ್‌ಗೆ ಏಳು ಸ್ಪರ್ಧಿಗಳು?

ಬ್ಯಾಡ್ಮಿಂಟನ್‌: ಸಾಮಾಜಿಕ ತಾಣದಲ್ಲಿ ಖುಷಿ ಹಂಚಿಕೊಂಡ ಜ್ವಾಲಾ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಬಿ. ಸುಮಿತ್‌ ರೆಡ್ಡಿ  (ಎಡ) ಮತ್ತು ಮನು ಅತ್ರಿ
ಬಿ. ಸುಮಿತ್‌ ರೆಡ್ಡಿ (ಎಡ) ಮತ್ತು ಮನು ಅತ್ರಿ   

ನವದೆಹಲಿ (ಪಿಟಿಐ): ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಭಾರತದ ಏಳು ಬ್ಯಾಡ್ಮಿಂಟನ್‌ ಸ್ಪರ್ಧಿಗಳು ಅರ್ಹತೆ ಪಡೆಯುವ ಹೊಸ್ತಿಲಲ್ಲಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬೇಕಾದರೆ ಮೇ ಐದರ ಒಳಗೆ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ ರ್‍ಯಾಂಕಿಂಗ್ ಪಟ್ಟಿಯ ಸಿಂಗಲ್ಸ್‌ ವಿಭಾಗದಲ್ಲಿ ಮೊದಲ 34 ಸ್ಥಾನಗಳನ್ನು ಹೊಂದಿರಬೇಕು.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಸೈನಾ ನೆಹ್ವಾಲ್‌ ಈಗ  ಏಳನೇ ಸ್ಥಾನದಲ್ಲಿದ್ದಾರೆ. ಪಿ.ವಿ. ಸಿಂಧು ಒಂಬತ್ತನೇ ಸ್ಥಾನ ಹೊಂದಿದ್ದಾರೆ. ಇವರಿಬ್ಬರೂ ಈ ಬಾರಿಯ ಒಲಿಂಪಿಕ್ಸ್‌ ನಲ್ಲಿ ಆಡುವುದು ಖಚಿತವಾಗಿದೆ. ಆದರೆ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.

2014ರ ಚೀನಾ ಓಪನ್‌ ಟೂರ್ನಿ ಯಲ್ಲಿ ಚಾಂಪಿಯನ್‌ ಆಗಿದ್ದ ಕೆ. ಶ್ರೀಕಾಂತ್‌ ವಿಶ್ವ ರ್‍ಯಾಂಕ್‌ನಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ. ಇತ್ತೀಚಿನ ಟೂರ್ನಿಗ ಳಲ್ಲಿ ಪುರುಷರ ಡಬಲ್ಸ್‌ ವಿಭಾಗದಲ್ಲಿ ಗಮನಾರ್ಹ ಸಾಧನೆ ತೋರಿರುವ ಮನು ಅತ್ರಿ ಮತ್ತು ಬಿ. ಸುಮಿತ್‌ ರೆಡ್ಡಿ ಅವರು ರ್‍ಯಾಂಕ್‌ನಲ್ಲಿ 19ನೇ ಸ್ಥಾನ ಹೊಂದಿದ್ದಾರೆ.

ಇವರು ಅರ್ಹತೆ ಪಡೆದರೆ ಮನು ಅತ್ರಿ ಮತ್ತು ಸುಮಿತ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ ಮೊದಲ ಡಬಲ್ಸ್‌ ಜೋಡಿ ಎನ್ನುವ ಖ್ಯಾತಿ ಪಡೆದು ಕೊಳ್ಳಲಿದೆ. ಇತ್ತೀಚಿಗೆ ನಡೆದ ಏಷ್ಯನ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಗಳು ತೋರಿದ ಪ್ರದರ್ಶನದ ಆಧಾ ರದ ಮೇಲೆ ಪಾಯಿಂಟ್ಸ್ ಸೇರ್ಪಡೆ ಯಾಗಲಿವೆ.

ಹಿಂದಿನ ಒಲಿಂಪಿಕ್ಸ್‌ನಲ್ಲಿ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಿದ್ದ ಜ್ವಾಲಾ ಗುಟ್ಟಾ ಮತ್ತು ಕರ್ನಾಟಕದ ಅಶ್ವಿನಿ ಪೊನ್ನಪ್ಪ ಅರ್ಹತೆ ಪಡೆಯುವ ಅವಕಾಶ ಹೆಚ್ಚಿದೆ. ಆದರೆ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಭಾರತದ ಯಾವ ಸ್ಪರ್ಧಿಗಳೂ ಇಲ್ಲ. 2012ರ ಒಲಿಂಪಿಕ್ಸ್‌ನಲ್ಲಿ ಭಾರತದ ಐವರು ಬ್ಯಾಡ್ಮಿಂಟನ್ ಸ್ಪರ್ಧಿಗಳು ಅರ್ಹತೆ ಗಳಿಸಿದ್ದರು.

ಅಧಿಕೃತವಾಗಿ ಇನ್ನು ರ್‍ಯಾಂಕಿಂಗ್ ಪಟ್ಟಿ ಪ್ರಕಟವಾಗಿಲ್ಲವಾದರೂ ಸಾಮಾಜಿಕ ತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
‘ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಸೈನಾ, ಸಿಂಧು, ಜ್ವಾಲಾ, ಅಶ್ವಿನಿ, ಮನು ಅತ್ರಿ, ಸುಮಿತ್‌ ಮತ್ತು  ಶ್ರೀಕಾಂತ್‌  ನಿಮಗೆ ಅಭಿನಂದನೆಗಳು’ ಎಂದು ಭಾರತ ಕ್ರೀಡಾ ಪ್ರಾಧಿಕಾರ  ಅಧಿಕೃತ ಟ್ವಿಟರ್ ಪುಟದಲ್ಲಿ ಬರೆದಿದೆ.

2010ರ ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಜ್ವಾಲಾ ಗುಟ್ಟಾ ‘ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದೇವೆ. ನಮ್ಮ ಮುಂದಿನ ಗುರಿ ಪದಕ ಗೆಲ್ಲುವುದು. ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ನನ್ನೆಲ್ಲಾ ಕೋಚ್‌ಗಳು, ಪೋಷ ಕರು, ಸಹಾಯಕ ಸಿಬ್ಬಂದಿ ಮತ್ತು ಸ್ನೇಹಿ ತರಿಗೆ ಧನ್ಯವಾದಗಳು. ನನಗೆ ಒಲಿಂ ಪಿಕ್ಸ್‌ಗೆ ಅರ್ಹತೆ ಲಭಿಸಿದೆ. ಪುರುಷರ ಡಬಲ್ಸ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಜೋಡಿ ಎನ್ನುವ ಕೀರ್ತಿ ಲಭಿಸಿ ದ್ದಕ್ಕೆ ಹೆಚ್ಚು ಖುಷಿಯಾಗಿದೆ’ ಎಂದು ಮನು ಅತ್ರಿ ಹೇಳಿದ್ದಾರೆ.

ಮನು ಮತ್ತು ಸುಮಿತ್ ಅಮೆರಿಕ ಓಪನ್ ಗ್ರ್ಯಾಂಡ್‌ ಪ್ರಿ ಗೋಲ್ಡ್ ಬ್ಯಾಡ್ಮಿಂ ಟನ್ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದರು. 2015ರಲ್ಲಿ ಮೆಕ್ಸಿಕೊ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.